ನಾಯಕತ್ವ ಬದಲಾವಣೆಯೇ ಬಿಜೆಪಿಗೆ ಶಕ್ತಿ ಎಂದ ಸಂತೋಷ್, ಪಂಜಾಬ್, ಗುಜರಾರ್ನಲ್ಲಿ ಯಶಸ್ವಿ ಪ್ರಯೋಗವಾಗಿದೆ ಎಂಬ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ರ ಈ ಮಾತುಗಳಿಗೆ ಹಲವು ರೆಕ್ಕೆಪುಕ್ಕಗಳು ಹುಟ್ಟಿಕೊಳ್ಳುತ್ತಿವೆ.
ರಾಜ್ಯ ಸಚಿವ ಸಂಪುಟ ವಿಸ್ತರಣೆ, ನಾಯಕತ್ವ ಬದಲಾವಣೆಯ ಚರ್ಚೆಯ ಬೆನ್ನಲ್ಲೇ ಬಿಎಲ್ ಸಂತೋಷ್ ಅವರ ಈ ಹೇಳಿಕೆ ಮಹತ್ತರ ಬದಲಾವಣೆಯಾಗುತ್ತದೆಯೇ ಎಂಬ ಸಂದೇಹ ಉಟ್ಟಾಕಿದೆ.
ದಕ್ಷಿಣ ಪದವೀಧರರ ಕ್ಷೇತ್ರ ಚುನಾವಣೆ ಸಂಬಂಧ ನಗರದ ಖಾಸಗಿ ಹೋಟೆಲ್ನಲ್ಲಿ ನಿನ್ನೆ ಶನಿವಾರ ರಾತ್ರಿ ನಡೆದ ಪ್ರಮುಖರ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿಯಲ್ಲಿ ಹಾಲಿ ಶಾಸಕರು, ಕುಟುಂಬಸ್ಥರನ್ನು ಹೊರಗಿಟ್ಟು ಚುನಾವಣೆ ನಡೆಸುತ್ತೇವೆ. ಹೊಸ ಮುಖಗಳ ಪರಿಚಯವೇ ಬಿಜೆಪಿ ಅಧಿಕಾರಕ್ಕೇರಲು ಕಾರಣ ಎಂದಿದ್ದಾರೆ.

ಕಾಲ ಕಾಲಕ್ಕೆ ತಕ್ಕಂತೆ ಸಮಾಜದ ಬದಲಾವಣೆಗೆ ಸ್ಪಂದಿಸಿ ಪರಿಷ್ಕರಣೆಯಾಗದಿದ್ದಲ್ಲಿ ಅಂತಹ ಪಕ್ಷ ನಾಶವಾಗಲಿದೆ. ‘ಬದಲಾವಣೆಗೆ ತಕ್ಕಂತೆ ಬಿಜೆಪಿ ಬದಲಾಗುತ್ತದೆ. ಇದು ಕಾಂಗ್ರೆಸ್ನಲ್ಲಿ ಇಲ್ಲದ ಕಾರಣ ಅನೇಕ ನಾಯಕರು ಬಿಜೆಪಿಗೆ ಬರ್ತಿದ್ದಾರೆ. ಕಾಂಗ್ರೆಸ್ನಲ್ಲಿ ಯುವ ನಾಯಕರು ಅಂದ್ರೆ ಸಿದ್ದರಾಮಯ್ಯನ ಮಗ, ಹ್ಯಾರಿಸ್ ಮಗ ಹೀಗೆ ಮನೆಯೊಳಗಿನ ಮಂದಿಯೇ ಯುವನಾಯಕರಾಗಿದ್ದಾರೆ. ಆದರೆ, ಬಿಜೆಪಿಯಲ್ಲಿ ಸಮಾವೇಶದಿಂದ ಬರುವ ಯುವ ಕಾರ್ಯಕರ್ತರೇ ಯುವನಾಯಕರು. ಪ್ರಜಾಪ್ರಭುತ್ವದಲ್ಲಿ ಹೊಸ ವ್ಯವಸ್ಥೆ ಬರಬೇಕು ಅಂದ್ರೆ ಯುವನಾಯಕತ್ವ ಬೇಕು ಎಂದರು.
ಬಿಜೆಪಿ ಪ್ರಮುಖರ ಸಭೆಯಲ್ಲಿ ಸಂತೋಷ್ ಅವರ ಮಾರ್ಮಿಕ ನುಡಿ ಬಿಜೆಪಿಯ ಹಾಲಿ ಶಾಸಕರು ಮತ್ತು ಸಚಿವರಲ್ಲಿ ಆತಂಕ ಶುರು ಮಾಡಿರುವುದಂತು ಸತ್ಯ.












