ತುಮಕೂರಿನಲ್ಲಿ ನಡೆದ ದಲಿತ ಯುವಕರ ಹತ್ಯೆಯ ವಿರುದ್ಧ ಕಾಂಗ್ರೆಸ್ ನಾಯಕ, ಮಾಜಿ ಸಚಿವ ಹೆಚ್ ಸಿ ಮಹದೇವಪ್ಪ ಅವರು ಆಕ್ರೋಶ ಹೊರಹಾಕಿದ್ದಾರೆ. ದಲಿತರ ಹತ್ಯೆಯಾದಾಗ ಯಾವ ಹಿಂದುತ್ವ ಸಂಘಟನೆಗಳೂ ದನಿಯೆತ್ತಿಲ್ಲ ಎಂದು ಟೀಕಿಸಿರುವ ಅವರು, “ದಲಿತರು ಸತ್ತಾಗ ಯಾವ ಪ್ರಾಣಿ ದಯಾ ಸಂಘದವರೂ ಬರಲಿಲ್ಲ” ಎಂದು ಹಿರಿಯ ಸಾಹಿತಿ ದೇವನೂರು ಮಹಾದೇವ ಹೇಳಿಕೆಯನ್ನು ಉಲ್ಲೇಖಿಸಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿದ ಮಹದೇವಪ್ಪ ಅವರು, “ತುಮಕೂರಿನಲ್ಲಿ ಮೊನ್ನೆ ಇಬ್ಬರು ದಲಿತ ಯುವಕರಿಗೆ ಕಿರುಕುಳ ನೀಡಿ ಹತ್ಯೆ ಭೀಕರವಾಗಿ ಮಾಡಲಾಗಿದೆ. ತುಮಕೂರಿನ ಗಿರೀಶ್ ಮೂಡಲ ಗಿರಿಯಪ್ಪ ಮತ್ತು ಮಂಚಲದೊರೆ ನಿವಾಸಿ ಗಿರೀಶ್ ಎಂಬುವರು ಹತ್ಯೆಯಾಗಿದ್ದು ಈ ಪೈಕಿ ಮೂಡಲಗಿರಿಯಪ್ಪನ ಮೃತದೇಹ ಹೊಲದಲ್ಲಿ ಪತ್ತೆಯಾಗಿದ್ದರೆ, ಮತ್ತೊಬ್ಬರ ದೇಹವನ್ನು ಕೆರೆಯಲ್ಲಿ ಬಿಸಾಡಿ ಹೋಗಿದ್ದಾರೆ.”
“ಇಷ್ಟಾದರೂ ಇಲ್ಲಿಯವರೆಗೂ ಯಾವೊಬ್ಬ ಹಿಂದುತ್ವ ಸಂಘಟನೆಯವನೂ ಕೂಡಾ ಈ ಬಗ್ಗೆ ಬಾಯಿ ಬಿಟ್ಟಿಲ್ಲ. ಅವರು ಯಾರದ್ದೋ ಮನೆಯ ಮೇಲೆ ಬುಲ್ಡೋಜರ್ ಹತ್ತಿಸುವ ಸಿದ್ಧತೆಯಲ್ಲಿದ್ದಾರೆ ಈ ಹಿಂದೆ ನಮ್ಮ ದೇವನೂರು ಮಹಾದೇವ ಅವರು ಹೇಳಿದಂತೆ “ದಲಿತರು ಸತ್ತಾಗ ಯಾವ ಪ್ರಾಣಿ ದಯಾ ಸಂಘದವರೂ ಬರಲಿಲ್ಲ” ಎನ್ನುವ ಮಾತು ಈ ಪ್ರಕರಣಕ್ಕೆ ಹೊಂದುತ್ತಿದೆ.”
“ಆದರೂ ಯಾರಿಗೂ ಲೆಕ್ಕಕ್ಕೆ ಇಲ್ಲದ ತುಮಕೂರಿನ ದಲಿತರ ಸಾವುಗಳು ನನ್ನಲ್ಲಿ ತೀವ್ರ ಬೇಸರ ಮತ್ತು ಅಸಹಾಯಕತೆಯನ್ನು ಮೂಡಿಸಿವೆ. ಹಿಂದೂ ಹಿಂದೂ ನಾವೆಲ್ಲಾ ಮುನ್ನೂರಾ ಒಂದು ಎಂದು ಅಷ್ಟಿಲ್ಲದೇ ನನಗೆ ಅನಿಸುವುದೇ?” ಎಂದು ಬರೆದಿದ್ದಾರೆ.






