ನಾಯಕತ್ವದಿಂದ ಕೆಳಗಿಳಿದ ನಂತರ ವಿರಾಟ್ ಕೊಹ್ಲಿ ರನ್ ಬರ ಎದುರಿಸುತ್ತಿದ್ದು, ಲಕ್ನೋ ಸೂಪರ್ ಗೈಂಟ್ಸ್ ವಿರುದ್ಧ ಎದುರಿಸಿದ ಮೊದಲ ಎಸೆತದಲ್ಲಿ ಶೂನ್ಯಕ್ಕೆ ಔಟಾಗಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಅಹಮದಾಬಾದ್ ನಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ದುಷ್ಯಂತ ಚಾಮರಾ ಓವರ್ ನಲ್ಲಿ ಎದುರಿಸಿದ ಮೊದಲ ಎಸೆತದಲ್ಲೇ ಔಟಾಗಿ ನಿರಾಸೆ ಮೂಡಿಸಿದರು.
ವಿರಾಟ್ ಕೊಹ್ಲಿ ನಾಲ್ಕನೇ ಬಾರಿ ಐಪಿಎಲ್ ನಲ್ಲಿ ಶೂನ್ಯಕ್ಕೆ ಔಟಾದರು. ಈ ಬಾರಿ ಒಟ್ಟಾರೆ ಅವರು 119 ರನ್ ಗಳಿಸಿದ್ದಾರೆ. ಒಂದೂ ಅರ್ಧಶತಕ ಅಥವಾ ಶತಕ ಬಾರದೇ ಇರುವುದು ತಂಡಕ್ಕೆ ಮಾತ್ರವಲ್ಲ, ಆಟಗಾರರನ್ನು ಚಿಂತೆಗೀಡು ಮಾಡಿದೆ.
2008ರಲ್ಲಿ ಕೊಹ್ಲಿ ಮೊದಲ ಬಾರಿ ಮುಂಬೈ ಇಂಡಿಯನ್ಸ್ ವಿರುದ್ಧ ಶೂನ್ಯಕ್ಕೆ ಔಟಾಗಿದ್ದರು. 2014ಲ್ಲಿ ಪಂಜಾಬ್ ವಿರುದ್ಧ, 2017ರಲ್ಲಿ ಕೆಕೆಆರ್ ವಿರುದ್ಧದ ಪಂದ್ಯಗಳಲ್ಲಿ ಸೊನ್ನೆ ಸುತ್ತಿದ್ದರು.
ವಿರಾಟ್ ಕೊಹ್ಲಿ ಪ್ರಸ್ತುತ ಐಪಿಎಲ್ ನಲ್ಲಿ ಅತೀ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದಾರೆ. 6000ಕ್ಕೂ ಹೆಚ್ಚು ರನ್ ಗಳಿಸಿರುವ ಕೊಹ್ಲಿ ಎರಡು ಬಾರಿ 900ಕ್ಕಿಂತ ಹೆಚ್ಚು ರನ್ ಗಳಿಸಿದ ದಾಖಲೆ ಹೊಂದಿದ್ದಾರೆ. ಆದರೆ ಈ ಬಾರಿ ನಿರಾಸೆ ಮೂಡಿಸಿದ್ದಾರೆ.