ಕಳೆದ ನಾಲ್ಕು ದಿನದಿಂದ ಸುರಿಯುತ್ತಿರುವ ಮೆಳೆಗೆ ಬೆಂಗಳೂರು ಅಕ್ಷರಶಃ ನಲುಗಿ ಹೋಗಿದೆ. ಮರಗಳು ಧರೆಗುರುಳುತ್ತಿದೆ. ಮನೆಗಳಿಗೆ ನೀರು ನುಗ್ಗಿ ಅವಾಂತರಗಳು ಸೃಷ್ಟಿಯಾಗುತ್ತಿವೆ. ಇದರ ನಡುವೆ ನಗರದ 169 ಪ್ರದೇಶಗಳು ಅಪಾಯಕಾರಿ ಸ್ಥಿತಿಯಲ್ಲಿದೆ ಎಂದು ಪೊಲೀಸ್ ಹಾಗೂ ಪಾಲಿಕೆ ಕಲೆಹಾಕಿದ ಮಾಹಿತಿಯಲ್ಲಿ ಗೊತ್ತಾಗಿದೆ.
ಬೆಂಗಳೂರಿನ ಅಪಾಯದ ಸ್ಥಿತಿಗೆ ಸಾಗುವ ಸ್ಥಳಗಳನ್ನು ಗುರುತಿಸಿರುವ ಬಿಬಿಎಂಪಿ !
ನಾಲ್ಕು ದಿನಗಳ ಹಿಂದೆಯಷ್ಟೇ ಸುರಿಯಲು ಶುರುವಿಟ್ಟುಕೊಂಡಿರುವ ಮಳೆಗೆ ಇಡೀ ರಾಜಧಾನಿ ಬೆಂಗಳೂರು ತತ್ತರಿಸಿ ಹೋಗಿದೆ. ಹೀಗೆಯೇ ಮುಂದುವರೆದರೆ ಅಪಾಯ ಕಟ್ಟಿಟ್ಟಬುತ್ತಿ. ಅದರಲ್ಲಿ ಯಾವುದೇ ಅನುಮಾನವಿಲ್ಲ. ಸಂಜೆ ಹೊತ್ತಿಗೆ ಸುರಿಯುತ್ತಿರುವ ಮಳೆಗೆ ಈಗಾಗಲೇ ಸಾಲು ಸಾಲು ಅವಾಂತರಗಳು ಸೃಷ್ಟಿಯಾಗಿವೆ. ಮರಗಳು ಧರೆಗೆ ಉರುಳುವುದು, ಮನೆಗಳಿಗೆ ನೀರು ನುಗ್ಗುವುದು ಹೀಗೆ ಅವಾಂತರಗಳ ಪಟ್ಟಿ ಸಾಗುತ್ತಿವೆ. ನಗರದ ಕಾಮಾಕ್ಯ ಥಿಯೇಟರ್ ಬಳಿ ಮಳೆ ನೀರು ನುಗ್ಗಿ ಜನ ಜೀವನ ಬೀದಿಗೆ ಬಿದ್ದಿತ್ತು. ಉತ್ತರಹಳ್ಳಿಯ ಹೇಮಾವತಿ ವಾಟರ್ ಸಪ್ಲೈ ರಸ್ತೆಯಲ್ಲೂ ಕೂಡ ಮಳೆ ನೀರು ಜನರ ನೆಮ್ಮದಿ ಕೆಡವಿತ್ತು. ಹೀಗಾಗಿ ಪಾಲಿಕೆ ಹಾಗೂ ಪೊಲೀಸ್ ಇಲಾಖೆ ಜಂಟಿಯಾಗಿ ನಗರದ ಸೂಕ್ಷ್ಮ ಪ್ರದೇಶಗಳ ಪಟ್ಟಿ ಮಾಡಿಕೊಂಡಿದೆ.
ನೀರು ನಿಂತು ಅವಾಂತರ ಸೃಷ್ಟಿಸುವ 169 ಸ್ಥಳಗಳನ್ನು ಗುರುತಿಸಿದ ಬಿಬಿಎಂಪಿ !
ಪ್ರತಿ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ನೀರು ನಿಲ್ಲುವ ರಸ್ತೆಗಳನ್ನು ಪಾಲಿಕೆ ಗುರುತಿಸಿದೆ. 44 ಸಂಚಾರಿ ಠಾಣಾ ವ್ಯಾಪ್ತಿಯ ಅನ್ವಯ ನೀರು ನಿಲ್ಲುವ ರಸ್ತೆಯನ್ನು ಬಿಬಿಎಂಪಿ ಗೊತ್ತು ಮಾಡಿಕೊಂಡಿದೆ. ಬಾಣಸವಾಡಿ ಸಂಚಾರಿ ಠಾಣೆ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಸೋಕ್ಷ್ಮ ಪ್ರದೇಶಗಳು ಇದೆ. ಬಾಣಸವಾಡಿ ಸಂಚಾರಿ ಠಾಣೆ ವ್ಯಾಪ್ತಿಯಲ್ಲಿವೆ 22 ಸೂಕ್ಷ್ಮ ಪ್ರದೇಶಗಳಿವೆ. ಅಶೋಕನಗರ, ಆರ್.ಟಿ ನಗರ, ಹೆಬ್ಬಾಳ, ಜಿ.ಬಿ ನಗರಗಳಲ್ಲಿ ಮಳೆ ಅಂದರೆ ಭಯದ ವಾತಾವರಣ ಸೃಷ್ಟಿಯಾಗಿದೆ. ಅಶೋಕ ನಗರದಲ್ಲಿ, ಹೆಬ್ಬಾಳ, ಜೆಬಿ ನಗರಗಳಲ್ಲಿವೆ ತಲಾ 11 ಸೂಕ್ಷ್ಮ ಪ್ರದೇಶಗಳನ್ನು ಪಾಲಿಕೆ ಗುರುತಿಸಿದೆ. ಕೆಆರ್ ಪುರಂ, ಕೆಂಗೇರಿ, ವ್ಯಾಪ್ತಿಯಲ್ಲಿ 4, ಹಲಸೂರು ವ್ಯಾಪ್ತಿಯಲ್ಲಿ 8 ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿರುವ ಬಿಬಿಎಂಪಿ ಬೇಸಿಗೆ ಮಳೆಯ ಹಾವಳಿಯಿಂದ್ಲೇ ಮುಂಗಾರಿಗೂ ಸಜ್ಜಾಗಲು ಪಾಲಿಕೆ ಈಗಿಂದೀಗಲೇ ಮುಂದಾಗಿದೆ.
ಮಳೆಯಿಂದ ಹಾನಿಗೊಳಗಾದವರಿಗೆ ಪರಿಹಾರ ನೀಡಲು ಮುಂದಾದ ಪಾಲಿಕೆ !
ನಾಲ್ಕು ದಿನದಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ನಗರದ ಹಲವು ಕಡೆಗಳಲ್ಲಿ ಅನಾಹುತ ಸಂಭವಿಸಿದೆ. ಇದಕ್ಕೆ ಸರ್ಕಾರದ ನಿಯಮದಂತೆ ಪರಿಹಾರ ನೀಡಲು ಪಾಲಿಕೆ ನಿರ್ಧರಿಸಿದೆ. ಈ ಹಿಂದೆ ನೀಡಲಾಗುತ್ತಿದ್ದಂತೆ 10 ಸಾವಿರ ಪರಿಹಾರವನ್ನು ಆಯಾ ವಲಯ ಅಧಿಕಾರಿಗಳು ವಿತರಣೆ ಮಾಡಲಿದ್ದಾರೆ. ನಾಲ್ಕೇ ದಿನದಲ್ಲಿ ಒಟ್ಟು 200ಕ್ಕೂ ಮನೆಗಳಿಗೆ ಹಾನಿಯಾಗಿದೆ. ಹೀಗಾಗಿ ಇವರಿಗೆ ಪರಿಹಾರವನ್ನು ಕೇಂದ್ರ ಕಚೇರಿಯಿಂದ ನೀಡಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಹೇಳಿದರು. ಒಟ್ಟಾರೆ ನಾಲ್ಕೇ ದಿನದ ಮಳೆಗೆ ಇಡೀ ಬೆಂಗಳೂರೇ ಹೌಹಾರಿ ಹೋಗಿದೆ. ಇನ್ನೂ ಕೆಲವು ದಿನಗಳ ಕಾಲ ಹೀಗೆ ಮಳೆಯಾಗುವ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ. ಹೀಗೆ ಆದರೆ ಬೆಂಗಳೂರು ಮತ್ತೊಂದು ಗಂಡಾಂತರಕ್ಕೆ ಸಾಕ್ಷಿಯಾಗಲಿದೆ.