ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಪ್ರಮಾಣ ವಚನ ಸ್ವೀಕರಿಸಿದ ಪಾಕಿಸ್ತಾನದ ನೂತನ ಪ್ರಧಾನಿ ಶಹಬಾಜ್ ಷರೀಫ್ ಅವರನ್ನು ಅಭಿನಂದಿಸಿದ್ದಾರೆ. ಭಾರತವು ಭಯೋತ್ಪಾದನೆ ಮುಕ್ತ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಬಯಸುತ್ತದೆ ಎಂದು ಅವರು ಹೇಳಿದ್ದಾರೆ.
ಈ ಬಗ್ಗೆ ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದು, “ಪಾಕಿಸ್ತಾನದ ಪ್ರಧಾನಿಯಾಗಿ ಆಯ್ಕೆಯಾದ ಹೆಚ್ ಇ ಮಿಯಾನ್ ಮುಹಮ್ಮದ್ ಶೆಹಬಾಜ್ ಷರೀಫ್ ಅವರಿಗೆ ಅಭಿನಂದನೆಗಳು. ಭಾರತವು ಭಯೋತ್ಪಾದನೆ ಮುಕ್ತ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಬಯಸುತ್ತದೆ, ಇದರಿಂದ ನಾವು ನಮ್ಮ ಅಭಿವೃದ್ಧಿ ಸವಾಲುಗಳ ಮೇಲೆ ಕೇಂದ್ರೀಕರಿಸಬಹುದು ಮತ್ತು ನಮ್ಮ ಜನರ ಯೋಗಕ್ಷೇಮ ಮತ್ತು ಸಮೃದ್ಧಿಯನ್ನು ಖಚಿತಪಡಿಸಿಕೊಳ್ಳಬಹುದು” ಎಂದು ಬರೆದಿದ್ದಾರೆ.
ಮಾರ್ಚ್ 8 ರಂದು ಹಿಂದಿನ ಇಮ್ರಾನ್ ಖಾನ್ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದಾಗಿನಿಂದ ಪಾಕಿಸ್ತಾನದಲ್ಲಿ ಆವರಿಸಿದ್ದ ರಾಜಕೀಯ ಅನಿಶ್ಚಿತತೆಗೆ ಕೊನೆಗೂ ತೆರೆ ಬಿದ್ದಿದ್ದು, ಪಾಕಿಸ್ತಾನದ ಸಂಸತ್ತು ಸೋಮವಾರ ದೇಶದ 23 ನೇ ಪ್ರಧಾನಿಯಾಗಿ ಶೆಹಬಾಜ್ ಷರೀಫ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಿದೆ.
ಮಾಜಿ ವಿದೇಶಾಂಗ ಸಚಿವ ಶಾ ಮಹಮೂದ್ ಖುರೇಷಿ ಅವರ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ ಪಕ್ಷವು ಮತದಾನವನ್ನು ಬಹಿಷ್ಕರಿಸುವುದಾಗಿ ಘೋಷಿಸಿದ ನಂತರ ಮತ್ತು ಸಂಸತ್ತಿನಿಂದ ಹೊರ ನಡೆದ ಬಳಿಕ ಶೆಹಬಾಜ್ ಮಾತ್ರ ಪ್ರಧಾನಿ ಹುದ್ದೆಯ ರೇಸ್ನಲ್ಲಿದ್ದರು.
“ಶರೀಫ್ ಅವರು 174 ಮತಗಳನ್ನು ಗಳಿಸಿದ್ದಾರೆ ಮತ್ತು ಇಸ್ಲಾಮಿಕ್ ರಿಪಬ್ಲಿಕ್ ಆಫ್ ಪಾಕಿಸ್ತಾನದ ಪ್ರಧಾನಿ ಎಂದು ಘೋಷಿಸಲಾಗಿದೆ” ಎಂದು ಅಧಿವೇಶನದ ಅಧ್ಯಕ್ಷತೆ ವಹಿಸಿದ್ದ ಉಪ ಸ್ಪೀಕರ್ ಖಾಸಿಂ ಸೂರಿ ಅವರು ಅಧಿಕೃತ ಫಲಿತಾಂಶವನ್ನು ಪ್ರಕಟಿಸಿದರು.
342ರ ಸದನದಲ್ಲಿ ಗೆಲ್ಲುವ ಅಭ್ಯರ್ಥಿ ಕನಿಷ್ಠ 172 ಶಾಸಕರ ಬೆಂಬಲ ಪಡೆಯಬೇಕಿತ್ತು.
ಮೂರು ಬಾರಿ ಪ್ರಧಾನಿಯಾಗಿದ್ದ ನವಾಜ್ ಷರೀಫ್ ಅವರ ಕಿರಿಯ ಸಹೋದರ ಶೆಹಬಾಜ್ ಅವರು ಪ್ರಧಾನ ಮಂತ್ರಿಯಾಗಿ ಸದನವನ್ನುದ್ದೇಶಿಸಿ ಮಾಡಿದ ಚೊಚ್ಚಲ ಭಾಷಣದಲ್ಲಿ, “ನಾವು ಭಾರತದೊಂದಿಗೆ ಉತ್ತಮ ಬಾಂಧವ್ಯವನ್ನು ಬಯಸುತ್ತೇವೆ ಆದರೆ ಕಾಶ್ಮೀರ ವಿವಾದವನ್ನು ಪರಿಹರಿಸುವವರೆಗೆ ಬಾಳಿಕೆ ಬರುವ ಶಾಂತಿ ಸಾಧ್ಯವಿಲ್ಲ.” ಎಂದು ಹೇಳಿದ್ದಾರೆ.