ಇಮ್ರಾನ್ ಖಾನ್ ಪಾಕಿಸ್ತಾನದ ಪ್ರಧಾನಿ ಆದಾಗ ಎಲ್ಲರೂ ಹಾರೈಸಿದ್ದು ಮತ್ತು ಬಯಸಿದ್ದು ಒಂದೇ ಸಂಗತಿ. ಇಮ್ರಾನ್ ಖಾನ್ ಅವರಾದರೂ ಐದು ವರ್ಷಗಳ ಕಾಲ ಪ್ರಧಾನಿಯಾಗಿ ಆಡಳಿತ ಪೂರೈಸಲಿ ಎಂಬುದು ಅ ಹಾಕೈಯೆಯಾಗಿತ್ತು. ಅದಕ್ಕೆ ಮುಖ್ಯ ಕಾರಣ ಸ್ವಾತಂತ್ರ್ಯೋತ್ತರ ಪಾಕಿಸ್ತಾನದಲ್ಲಿ ಇದುವರೆಗೆ ಯಾವ ಪ್ರಧಾನಿಯೂ ಪೂರ್ಣ ಅವಧಿಗೆ ಅಧಿಕಾರ ನಡೆಸಲು ಸಾಧ್ಯವಾಗಿಲ್ಲ.
ಸ್ವಾತಂತ್ರ್ಯಾನಂತರ ಪಾಕಿಸ್ತಾನದಲ್ಲಿ ಇದುವರೆಗೆ 22 ಬಾರಿ ಅಧಿಕಾರ ಕೈ ಬದಲಾಗಿದೆ. 19 ಪ್ರಧಾನಿಗಳು ಅಧಿಕಾರ ನಡೆಸಿದ್ದು, ಯಾರೂ ಪೂರ್ಣ ಐದು ವರ್ಷ ಆಡಳಿತ ಪೂರ್ಣಗೊಳಿಸಲಾಗಿಲ್ಲ. ಬೆನಜಿರ್ ಭುಟ್ಟೋ ಎರಡು ಬಾರಿ, ನವಾಜ್ ಷರೀಪ್ ಮೂರು ಬಾರಿ ಪ್ರಧಾನಿಯಾದಾಗಲೂ ಐದು ವರ್ಷ ಪೂರ್ಣಗೊಳಿಸಲಾಗಿಲ್ಲ. ಮೊದಲ ಪ್ರಧಾನಿ ಲಿಯಾಖತ್ ಅಲಿ ಖಾನ್, 18ನೇ ಪ್ರಧಾನಿ ಯೂಸುಫ್ ರಾಜಾ ಗಿಲಾನಿ ಮತ್ತು ನವಾಜ್ ಷರೀಪ್ ಮೂರನೇ ಅವಧಿಯಲ್ಲಿ ಮಾತ್ರ ನಾಲ್ಕು ವರ್ಷ ಅಧಿಕಾರ ಪೂರೈಸಿದ್ದಾರೆ. ಉಳಿದವರು ಕನಿಷ್ಠ ನಾಲ್ಕು ವರ್ಷವನ್ನೂ ಪೂರೈಸಲಾಗಿಲ್ಲ.
ತೆಹ್ರೀಕ್ ಎ ಇನ್ಸಾಫ್ ಪಕ್ಷ ಕಟ್ಟಿ ತ್ವರಿತವಾಗಿ ಬೆಳೆದ ಇಮ್ರಾನ್ ಖಾನ್ ಅಷ್ಟೇ ತ್ವರಿತವಾಗಿ ಪ್ರಧಾನಿ ಹುದ್ದೆ ಅಲಂಕರಿಸಿದ್ದರು. ಇದೀಗ ಇಮ್ರಾನ್ ಖಾನ್ ಪದತ್ಯಾಗ ಮಾಡಲೇಬೇಕಾದ ಅನಿವಾರ್ಯ ಪರಿಸ್ಥಿತಿಯಲ್ಲಿದ್ದು, ಪದತ್ಯಾಗಕ್ಕೆ ಕ್ಷಣಗಣನೆ ಪ್ರಾರಂಭವಾಗಿದೆ.
ಮಾರ್ಚ್ 9ರಂದು ಶನಿವಾರ ಸಂಜೆಯ ಹೊತ್ತಿಗೆ ಅವರೇ ಪದತ್ಯಾಗ ಮಾಡುವರೇ ಅಥವಾ ಅವರನ್ನು ವಜಾ ಮಾಡಲಾಗುತ್ತದೋ ಎಂಬುದು ಸ್ಪಷ್ಟವಾಗಲಿದೆ. ಏಪ್ರಿಲ್ 3 ರಂದು ಇಮ್ರಾನ್ ಖಾನ್ ವಿರುದ್ಧ ಮಂಡಿಸಲಾಗಿದ್ದ ಅವಿಶ್ವಾಸ ಗೊತ್ತುವಳಿಯನ್ನೇ ರದ್ದು ಮಾಡಿ, ಸಂಸತ್ತನ್ನು ವಿಸರ್ಜಿಸಿ, ತ್ವರಿತವಾಗಿ ಚುನಾವಣೆ ನಡೆಸುವಂತೆ ಅಧ್ಯಕ್ಷರಿಗೆ ಶಿಫಾರಸು ಮಾಡುವ ಕ್ಷಿಪ್ರ ಬೆಳವಣಿಗೆಗಳು ವಿರೋಧ ಪಕ್ಷದ ನಾಯಕರನ್ನು ಕೆರಳಿಸಿತ್ತು. ಸುಪ್ರೀಂ ಕೋರ್ಟ್ ಮೊರೆ ಹೋದ ವಿರೋಧ ಪಕ್ಷದ ನಾಯಕರಿಗೆ ನ್ಯಾಯ ದಕ್ಕಿದೆ. ಸಂಸತ್ ವಿಸರ್ಜಿಸುವುದು ಸಂವಿಧಾನ ವಿರೋಧಿ ಕ್ರಮ ಎಂದಿರುವ ಸುಪ್ರೀಂ ಕೋರ್ಟ್, ಸದನದಲ್ಲಿ ಬಹುಮತ ಸಾಬೀತು ಮಾಡುವಂತೆ ತಾಕೀತು ಮಾಡಿದೆ. ಪ್ರಜಾಪ್ರಭುತ್ವವಾದಿಗಳು ಸಮಾಧಾನ ಪಡುವ ಅಂಶವೇನೆಂದರೆ ಪಾಕಿಸ್ತಾನ ಸುಪ್ರೀಂಕೋರ್ಟ್ ತ್ವರಿತವಾಗಿ ವಿಚಾರಣೆ ನಡೆಸಿ, ಸಂವಿಧಾನಕ್ಕೆ ನಿಷ್ಠವಾಗಿ ತೀರ್ಪು ನೀಡಿದೆ.
ಪಾಕಿಸ್ತಾನ ವಿಚಿತ್ರ ಪ್ರಜಾಪ್ರಭುತ್ವ ದೇಶ. ಪಾಕಿಸ್ತಾನದಲ್ಲಿ ಅಧಿಕಾರದಲ್ಲಿ ಯಾರೇ ಇದ್ದರೂ ಅಧಿಕಾರ ಸೂತ್ರ ಸೈನ್ಯದ ಬಳಿಯೇ ಇರುತ್ತದೆ. ಸೈನ್ಯದ ತಾಳಕ್ಕೆ ತಕ್ಕಂತೆ ಕುಣಿದರೆ ಸರ್ಕಾರಕ್ಕೆ ರಕ್ಷಣೆ ಸಿಗುತ್ತದೆ. ಆದರೆ, ಸೈನ್ಯದೊಂದಿಗೆ ಆರಂಭದಲ್ಲಿದ್ದ ಸೌಹಾರ್ದತೆಯನ್ನು ಇಮ್ರಾನ್ ಕಳೆದುಕೊಂಡಿದ್ದರು. ಕಳೆದ ಅಕ್ಟೋಬರ್ನಲ್ಲಿ ಪಾಕಿಸ್ತಾನದ ಗುಪ್ತಚರ ಸಂಸ್ಥೆಗಳ ಹೊಸ ಮುಖ್ಯಸ್ಥರ ನೇಮಕಾತಿಗೆ ಸಹಿ ಹಾಕಲು ಇಮ್ರಾನ್ ಖಾನ್ ನಿರಾಕರಿಸಿರಿಸಿದ್ದ ಸಂಬಂಧವನ್ನು ಮತ್ತಷ್ಟು ಹದಗೆಡೆಸಿತ್ತು. ಅವರ ರಾಜಕೀಯ ವಿರೋಧಿಗಳು ಇಮ್ರಾನ್ ಖಾನ್ ಅವರ ಈ ದೌರ್ಬಲ್ಯವನ್ನು ಗ್ರಹಿಸಿಯೇ ಹೆಜ್ಜೆ ಇಟ್ಟಿದ್ದಾರೆ. ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷಗಳ ಮುಖಂಡರೂ ವಿರೋಧಿ ಪಾಳೆಯಕ್ಕೆ ಜಿಗಿದಿದ್ದಾರೆ. ಹೀಗಾಗಿ ಇಮ್ರಾನ್ ಬಹುಮತ ಸಾಬೀತು ಮಾಡುವುದು ಕನಸಿನ ಮಾತು ಎನ್ನಲಾಗುತ್ತಿದೆ.
ಅದೇ ಕಾರಣಕ್ಕೆ ಏಪ್ರಿಲ್ 3 ರಂದು ಅವಿಶ್ವಾಸ ಗೊತ್ತುವಳಿ ಮಂಡಿಸಲು ನಿರ್ಧರಿಸಲಾಗಿತ್ತು. ನಾಟಕೀಯ ತಿರುವು ಪಡೆದ ಅವಿಸ್ವಾಸ ಗೊತ್ತುವಳಿಯು ರಾಜಕೀಯ ಮೇಲಾಟಕ್ಕೆ ಕಾರಣವಾಗಿತ್ತು. ರಾಷ್ಟ್ರೀಯ ಅಸೆಂಬ್ಲಿ ಸ್ಪೀಕರ್ ಖಾಸಿಮ್ ಸೂರಿ ಅವರು ಸರ್ಕಾರವನ್ನು ಬದಲಾಯಿಸಲು ವಿದೇಶಿ ಶಕ್ತಿಗಳೊಂದಿಗೆ ಪಿತೂರಿ ನಡೆಸಲಾಗಿದೆ ಎಂದು ಹೇಳಿ, ಗೊತ್ತುವಳಿಯನ್ನೇ ರದ್ದು ಮಾಡಿದರು. ಇಮ್ರಾನ್ ಖಾನ್ ಸಂಸತ್ ವಿಸರ್ಜಿಸುವಂತೆ ರಾಷ್ಟ್ರಪತಿಗಳಿಗೆ ಶಿಫಾರಸು ಮಾಡಿ ಇನ್ನು ಮೂರು ತಿಂಗಳಲ್ಲಿ ಚುನಾವಣೆ ನಡೆಸುವಂತೆ ಕೋರಿದ್ದರು. ಇದು ವಿರೋಧಪಕ್ಷಗಳ ನಾಯಕರನ್ನು ಕೆರಳಿಸಿತ್ತು.
ಅಂತಾರಾಷ್ಟ್ರೀಯ ಸಂಬಂಧಗಳನ್ನು ತಳುಕು ಹಾಕಿ ತಾವು ಬಚಾವಾಗಲು ಇಮ್ರಾನ್ ಖಾನ್ ಹತಾಶ ಪ್ರಯತ್ನ ಪಟ್ಟರು. ಅದರ ಪರಿಣಾಮವಾಗಿ ಚೀನಾ ಮತ್ತ್ತು ರಷ್ಯಾ ಜತೆ ಉತ್ತಮ ಸಂಬಂಧ ಹೊಂದಿರುವ ಕಾರಣಕ್ಕೆ ತನ್ನನ್ನು ಅಧಿಕಾರದಿಂದ ಕೆಳಕ್ಕಿಳಿಸಲು ಪಿತೂರಿ ನಡೆಯುತ್ತಿದೆ ಎಂದು ಪರೋಕ್ಷವಾಗಿ ಅಮೆರಿಕ ಮೇಲೆ ಆರೋಪ ಮಾಡಿದ್ದರು. ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಸುದ್ಧಿಯಾಗಿತ್ತು. ಎಷ್ಟು ದೊಡ್ಡದೆಂದರೆ, ಕೊನೆಗೆ ಅಮೆರಿಕವೇ ಈ ಬಗ್ಗೆ ಸ್ಪಷ್ಟನೆ ನೀಡಿ ಈ ಆರೋಪಗಳಲ್ಲಿ ಯಾವುದೇ ಸತ್ಯವಿಲ್ಲ ಎಂದು ಹೇಳಿತ್ತು.
ಸ್ಪೀಕರ್ ಖಾಸೀಮ್ ಸೂರಿ ಅವರು ಇಮ್ರಾನ್ ಖಾನ್ ಅಪ್ತರಾಗಿದ್ದವರು. ಇಮ್ರಾನ್ ಖಾನ್ ಹಿತಾಸಕ್ತಿ ಕಾಯಲು ಶತಾಯಗತಾಯ ಯತ್ನಿಸಿದರು. ಅವಿಶ್ವಾಸ ನಿರ್ಣಯವು ದೇಶದ ಸಂವಿಧಾನದ 5ನೇ ವಿಧಿಯನ್ನು ಉಲ್ಲಂಘಿಸಿದೆ ಎಂದು ಸ್ಪೀಕರ್ ಖಾಸೀಮ್ ಸೂರಿ ತಿಳಿಸಿ, ಅವಿಶ್ವಾಸ ಗೊತ್ತುವಳಿಯನ್ನೇ ರದ್ದು ಮಾಡಿದ್ದರು. ಈ ಹಂತದಲ್ಲೇ ವಿರೋಧಪಕ್ಷಗಳು ತ್ವರಿತವಾಗಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದವು.
ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಂದಿಯಾಲ್ ನೇತೃತ್ವದ ಪಂಚ ಸದಸ್ಯರ ಪೀಠವು ಖಾಸೀಮ್ ಸೂರಿ ನೀಡಿದ್ದ ಆದೇಶವನ್ನು ರದ್ದು ಮಾಡಿ, ಸಂಸತ್ ಅನ್ನು ಮರುಸ್ಥಾಪಿಸುಂತೆ ತೀರ್ಪು ನೀಡಿತ್ತಲ್ಲದೇ, ಏಪ್ರಿಲ್ 9ರಂದು ಬಹುಮತ ಸಾಬೀತು ಮಾಡುವಂತೆ ಆದೇಶಿಸಿದೆ.
ಮುಂದೇನಾಗಲಿದೆ ಎಂದರೆ- ಅವಿಶ್ವಾಸ ಗೊತ್ತುವಳಿ ಮತದಾನ ತಡೆಯುವುದು ಅಸಾಂವಿಧಾನಿಕ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಹೀಗಾಗಿ ಅನಿವಾರ್ಯವಾಗಿ ಇಮ್ರಾನ್ ಖಾನ್ ವಿಶ್ವಾಸ ಮತ ಯಾಚಿಸುವುದು ಅನಿವಾರ್ಯ. ಈಗ ಇರುವ ಸಂಖ್ಯಾಬಲದ ಪ್ರಕಾರ, ಇಮ್ರಾನ್ ವಿಶ್ವಾಸ ಮತ ಪಡೆಯುವುದು ಸಾಧ್ಯವೇ ಇಲ್ಲ. ಏಕೆಂದರೆ ಮಿತ್ರಿ ಪಕ್ಷಗಳ ಸದಸ್ಯರೇ ಅವಿಸ್ವಾಸ ನಿರ್ಣಯ ಮಂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಹೀಗಾಗಿ ಇಮ್ರಾನ್ ಖಾನ್ ಪದತ್ಯಾಗ ಅನಿವಾರ್ಯ. ಮುಂದಿನ ಆರು ತಿಂಗಳಿಗೆ ಹೊಸ ಪ್ರಧಾನಿ ಆಯ್ಕೆಯಾಗುತ್ತದೆಯೋ ಅಥವಾ ಸೈನ್ಯವೇ ಆಡಳಿತವನ್ನು ತನ್ನ ವಶಕ್ಕೆ ತೆಗೆದುಕೊಳ್ಳುತ್ತದೆಯೋ ಗೊತ್ತಿಲ್ಲ.
ಸದಾ ರಾಜಕೀಯ ಅಸ್ಥಿರತೆಯನ್ನೇ ಹಾಸಿ ಹೊದ್ದು ಮಲಗುವ ಪಾಕಿಸ್ತಾನಕ್ಕೆ 2018ರಲ್ಲಿ ಸ್ಥಿರತೆಯ ಆಶಾಕಿರಣವಾಗಿ ಕಂಡವರು ಇಮ್ರಾನ್ ಖಾನ್. ದೇಶವನ್ನು ಕಾಡುತ್ತಿರುವ ಕಡು ಭ್ರಷ್ಟಾಚಾರ ಮತ್ತು ದಿಕ್ಕೆಟ್ಟ ಆರ್ಥಿಕತೆಯನ್ನು ಸರಿದಾರಿಗೆ ತರುವ ಭರವಸೆಯೊಂದಿಗೆ 2018ರಲ್ಲಿ ಪ್ರಧಾನಿ ಹುದ್ದೆಗೇರಿದರು. ಇಮ್ರಾನ್ ಖಾನ್ ಪಾಕಿಸ್ತಾನದಲ್ಲಿ ಅತ್ಯಂತ ಜನಪ್ರಿಯ ವ್ಯಕ್ತಿ. ಅದಕ್ಕೆ ಅವರ ಕ್ರಿಕೆಟ್ ಹಿನ್ನೆಲೆ ಕಾರಣ. ಆದರೆ, ಬರೀ ಜನಪ್ರಿಯತೆಯೊಂದರಿಂದಲೇ ದೇಶವನ್ನು ಉದ್ಧಾರ ಮಾಡಲು ಸಾಧ್ಯವಿಲ್ಲ ಎಂಬುದು ಜನರಿಗೆ ಅರಿವಾಗಲು ಹೆಚ್ಚು ದಿನ ಬೇಕಾಗಲಿಲ್ಲ. ಪಾಕಿಸ್ತಾನದ ವಿದೇಶಿ ಸಾಲ ಗಣನೀಯವಾಗಿ ಏರಿದ್ದಲ್ಲದೇ, ಹಣದುಬ್ಬರ ಜಿಗಿದು, ಜನರ ಜೀವನ ಸಂಕಷ್ಟಗಳು ಉಲ್ಬಣಿಸಿದ್ದವು. ಜನರು ಸಂಕಷ್ಟಗಳನ್ನು ಸಹಿಸುವಷ್ಟೂ ಸಹಿಸುತ್ತಾರೆ. ಹೆಚ್ಚಾದಾಗ ದಂಗೆ ಏಳುತ್ತಾರೆ. ಜನರೇ ದಂಗೆ ಏಳುವ ಮುನ್ನ ವಿರೋಧ ಪಕ್ಷಗಳ ಜತೆ ಸೇರಿ ಮಿತ್ರ ಪಕ್ಷಗಳೇ ದಂಗೆ ಎದ್ದಿವೆ. ಇಮ್ರಾನ್ ಖಾನ್ ವರ್ಣರಂಜಿತ ಅಧ್ಯಾಯವು ಕೊನೆಯಾಗಲು ಕ್ಷಣಗಣನೆ ಆರಂಭವಾಗಿದೆ.