ಇತ್ತೀಚಿನ ದಿನಗಳಲ್ಲಿ ಚರಿತ್ರೆಯನ್ನು ನೈತಿಕ ವಿಜ್ಞಾನದ ಮಾದರಿಯಲ್ಲಿ ಪುನರ್ ವ್ಯಾಖ್ಯಾನಿಸುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಈ ಪ್ರವೃತ್ತಿಯ ಹಿಂದೆ ಕಾಣಬಹುದಾದ ಮೂಲ ಉದ್ದೇಶ ಎಂದರೆ, ಇತಿಹಾಸ ಕಾಲಘಟ್ಟದ ನಾಯಕರನ್ನು ಮತ್ತು ಖಳನಾಯಕರನ್ನು ಗುರುತಿಸುವುದು, ತನ್ಮೂಲಕ ಇಂದಿನ ಸಮಾಜದ ಬಹುಸಂಖ್ಯೆಯ ಜನಸಮೂಹವನ್ನು ಗುರುತಿಸಿ ಅವರನ್ನು ಅಪಮಾನಿಸುವುದು. ಇಂತಹ ವಿಷಮ ಕಾಲಘಟ್ಟದಲ್ಲಿ ಸೂಕ್ಷ್ಮ ಅಭಿಪ್ರಾಯ ಬೇಧಗಳನ್ನೊಳಗೊಂಡ ಸಾಮಾಜಿಕ ಹಾಗೂ ಸಾಂಸ್ಕೃತಿಕ ಇತಿಹಾಸದ ಪುಟಗಳನ್ನು ಶೋಧಿಸಿ ಬೌದ್ಧಿಕ ಚಿಂತನೆಯ ಕೇಂದ್ರ ಬಿಂದುವನ್ನಾಗಿ ಮಾಡುವ ಅವಶ್ಯಕತೆ ಇದೆ. ಹಿಂದೆಂದಿಗಿಂತಲೂ ಇಂದು ಮಕ್ಕಳ ಚಿಂತನಾ ಕ್ರಮದಲ್ಲಿ ಚಾರಿತ್ರಿಕ ದೃಷ್ಟಿಕೋನವನ್ನು ಬೆಳೆಸಬೇಕಿದೆ. ಹೀಗೆ ಯೋಚಿಸುವ ಮೂಲಕವೇ ಮಕ್ಕಳು ಚರಿತ್ರೆಯನ್ನು ಸಮರ್ಪಕವಾಗಿ ಗ್ರಹಿಸಿ, ಸಹಿಷ್ಣುತೆಯನ್ನು ಬೆಳೆಸಿಕೊಳ್ಳುವುದರ ಮೂಲಕ ಹೊಸ ಮಾದರಿಯ ನಾಗರಿಕತೆಯನ್ನು ರೂಢಿಸಿಕೊಳ್ಳಲು ಸಾಧ್ಯ. ಪ್ರಸ್ತುತ ಸಂದರ್ಭದಲ್ಲಿ ಇದರ ತುರ್ತು ಅವಶ್ಯಕತೆಯೂ ಇರುವುದನ್ನು ನಾವು ಮನಗಾಣಬೇಕಿದೆ.
ಶಾಲಾ ಕೊಠಡಿಯಲ್ಲಿ, ವಿದ್ಯಾರ್ಜನೆಯ ವೇಳೆಯಲ್ಲಿ ಮುಸ್ಲಿಂ ಮಹಿಳೆಯರು ಧರಿಸುವ ಒಂದು ತುಂಡು ವಸ್ತ್ರ ಹಿಜಾಬ್ ನಿರ್ಣಾಯಕವಾಗಿ ಪರಿಣಮಿಸುವುದೇ ಎಂಬ ಪ್ರಶ್ನೆಯೊಂದಿಗೇ ಈ ವಿವಾದದ ಸುತ್ತ ಗಂಭೀರ ಸಾರ್ವಜನಿಕ ಚರ್ಚೆಗಳು ನಡೆಯುತ್ತಿದ್ದು, ಹರೆಯದ ಹೆಣ್ಣುಮಕ್ಕಳನ್ನು ಶಿಕ್ಷಣ ವಂಚಿತರನ್ನಾಗಿ ಮಾಡಲಾಗುತ್ತಿರುವ ಸಂದರ್ಭದಲ್ಲಿ ವಸ್ತ್ರಧಾರಣೆಯ ಇತಿಹಾಸವನ್ನು ಶೋಧಿಸುವುದು ಉಪಯುಕ್ತವಾದೀತೇ ? ಯಾವುದೇ ಶೈಕ್ಷಣಿಕ ಪ್ರಯತ್ನಗಳು ಫಲದಾಯಕವಾಗಲು ದೀರ್ಘಕಾಲವೇ ಬೇಕಾಗುವುದರಿಂದ ಈ ಪ್ರಯತ್ನವೇ ಕ್ಷುಲ್ಲಕ ಎನಿಸಬಹುದು. ಆದರೂ 2005-06ರಲ್ಲಿ ಎನ್‌ಸಿಇಆರ್‌ಟಿ ಸಿದ್ಧಪಡಿಸಿದ ಒಂಬತ್ತನೆ ತರಗತಿಯ ಪಠ್ಯಗಳಲ್ಲಿ ಕಳೆದ ಎರಡು ಶತಮಾನಗಳ ವಸ್ತ್ರಧಾರಣೆಯ ಇತಿಹಾಸವನ್ನು ಸೇರ್ಪಡಿಸಲಾಗಿತ್ತು. ಆದರೆ 2019ರಲ್ಲಿ ಈ ಪಠ್ಯವನ್ನು ಹಿಂಪಡೆಯಲಾಯಿತು.
ಅಧಿಕಾರ ವ್ಯವಸ್ಥೆಯ ಮಹತ್ವ
ವಸ್ತ್ರಧಾರಣೆಯ ಇತಿಹಾಸವನ್ನು ಬೋಧಿಸುವುದರಿಂದ ಹಲವು ಪರಿಣಾಮಗಳಾಗಬಹುದು. ಇತಿಹಾಸದಲ್ಲಿ ವಸ್ತ್ರ ಸಂಹಿತೆಗಳು ಹೇಗಿದ್ದವು, ಯಾವ ರೀತಿಯ ಪ್ರತಿರೋಧ ವ್ಯಕ್ತವಾಗಿದ್ದವು, ಇದರಿಂದ ಉಂಟಾದ ಪರಿಣಾಮಗಳೇನು ಈ ವಿದ್ಯಮಾನಗಳ ಮಹತ್ವವೇನು ಇವೇ ಮುಂತಾದ ಆಲೋಚನೆಗಳು ವಿದ್ಯಾರ್ಥಿಗಳಲ್ಲಿ ಮೂಡಬಹುದು. ಇಲ್ಲಿ ಮುಖ್ಯವಾದ ಅಂಶವೆಂದರೆ, ವಸ್ತ್ರ ಸಂಹಿತೆ ಎನ್ನುವುದೇ ಅಧಿಕಾರ ವ್ಯವಸ್ಥೆಯನ್ನು ಪ್ರತಿನಿಧಿಸುವ ಮತ್ತು ಸಮರ್ಥಿಸುವ ಒಂದು ಪ್ರಕ್ರಿಯೆಯಾಗಿರುತ್ತದೆ. ಈ ಅಧಿಕಾರ ವ್ಯವಸ್ಥೆ ವಸಾಹತುಶಾಹಿಯೋ, ಮೇಲ್ಜಾತಿಗಳದೋ, ಧಾರ್ಮಿಕವೋ ಅಥವಾ ಪಿತೃಪ್ರಧಾನ ವ್ಯವಸ್ಥೆಯನ್ನು ಪ್ರತಿನಿಧಿಸುವುದೋ ಎನ್ನುವುದನ್ನು ವಸ್ತ್ರ ಸಂಹಿತೆಗಳು ಬಿಂಬಿಸುತ್ತವೆ. ತಮ್ಮ ಅಧಿಕಾರ ಕೇಂದ್ರಗಳನ್ನು ಬಳಸುವ ಮೂಲಕ ಈ ವ್ಯವಸ್ಥೆಯ ಪ್ರತಿಪಾದಕರು ಪ್ರಭುತ್ವ, ಧಾರ್ಮಿಕ ಸಂಸ್ಥೆಗಳು, ಮೇಲ್ಜಾತಿಯ ಪಾರಮ್ಯ, ಹಿಂಸಾತ್ಮಕ ಮಾರ್ಗಗಳ ಮೂಲಕ ಈ ವ್ಯವಸ್ಥೆಯನ್ನು ಕಾಪಾಡುತ್ತಾರೆ. ಹಲವಾರು ಸಂದರ್ಭಗಳಲ್ಲಿ ಕುಟುಂಬಗಳಲ್ಲಿ ಮುಖ್ಯಸ್ಥರಾಗಿ ಪುರುಷರೇ ನಿರ್ದಿಷ್ಟ್ರ ವಸ್ತ್ರಧಾರಣೆಯನ್ನು ಹೇರುತ್ತಾರೆ. ಈ ಮಾರ್ಗಗಳ ಮುಖಾಂತರವೇ ಸಾಮಾಜಿಕ ಶ್ರೇಣಿಗಳನ್ನು ಕಾಪಿಟ್ಟುಕೊಂಡು, ಶಾಶ್ವತಗೊಳಿಸಲಾಗುತ್ತದೆ.
Also Read : ಹಿಂದೂ ರಾಷ್ಟ್ರದ ಯೋಜನೆಗೆ ಮುಂದಡಿಯೇ ಹಿಜಾಬ್ ತೀರ್ಪು? – ಭಾಗ : 1
ಆದರೆ ಈ ವಿಚಾರದಲ್ಲೇ ಕಳೆದ 200 ವರ್ಷಗಳ ಚರಿತ್ರೆ ನಿರ್ಣಾಯಕವಾಗಿ ಕಾಣುತ್ತದೆ. ಚರಿತ್ರೆಯ ಈ ಅವಧಿಯಲ್ಲೇ ಇಂತಹ ಶ್ರೇಣೀಕರಣವನ್ನು ವಿರೋಧಿಸಿ, ಸವಾಲೆಸೆದು ಹೊಸ ವಸ್ತ್ರಧಾರಣೆಯ ಮಾದರಿಗಳನ್ನು ಅನುಸರಿಸುವಲ್ಲಿ ಯಶಸ್ವಿಯಾದ ಹಲವು ಪ್ರಯತ್ನಗಳನ್ನು ಗುರುತಿಸಬಹುದು. ಒಂದು ನಿರ್ದಿಷ್ಟ ಸಮುದಾಯವನ್ನು ದಿಗ್ಬಂಧನಕ್ಕೊಳಪಡಿಸಿ, ಬಹುಸಂಖ್ಯಾತರ ಆಯ್ಕೆಗಳನ್ನೇ ಸ್ವಾಭಾವಿಕೀಕರಣಗೊಳಿಸಿ, ಸಾರ್ವತ್ರೀಕರಿಸಲು ಏಕರೂಪತೆಯ ಪರಿಭಾಷೆಯನ್ನು ಬಳಸಿ ಬಹುಸಂಖ್ಯಾತರ ಆಯ್ಕೆಗಳನ್ನು ಅಲ್ಪಸಂಖ್ಯಾತರ ಮೇಲೆ ಹೇರುವ ಪ್ರಯತ್ನಗಳ ನಡುವೆಯೇ ಈ ಪರಿಹರಿಸಲಾಗದ ಬಿಕ್ಕಟ್ಟನ್ನು ಅರ್ಥಮಾಡಿಕೊಳ್ಳಲು ಈ ಚರಿತ್ರೆಯ ಅವಲೋಕನ ಅವಶ್ಯವಾಗುತ್ತದೆ. ಹಿಜಾಬ್ ನಿಷೇಧಿಸುವುದೆಂದರೆ ಅದು ಅಲ್ಪಸಂಖ್ಯಾತ ಸಮುದಾಯದ ಮೇಲೆ ಬಹುಸಂಖ್ಯಾತರು ಹೇರುವ ವಸ್ತ್ರ ಸಂಹಿತೆಯೇ ಆಗಿರುತ್ತದೆ. 20ನೆಯ ಶತಮಾನದ ಇತಿಹಾಸವನ್ನೇ ಗಮನಿಸಿದಾಗ, ಬಹುಸಂಖ್ಯೆಯ ಮುಸ್ಲಿಂ ಮಹಿಳೆಯರು ಪಿತೃಪ್ರಧಾನ ವ್ಯವಸ್ಥೆಯ ಪಾರಮ್ಯವನ್ನು ಧಿಕ್ಕರಿಸಿ, ಹಿಜಾಬ್ ತೊಡುವುದನ್ನು ತಿರಸ್ಕರಿಸುವುದನ್ನು ಕಾಣಬಹುದು.
ಮಹಿಳಾ ಸಮೂಹ ಹಿಜಾಬ್ ಧರಿಸುವ ಅಥವಾ ಧಿಕ್ಕರಿಸುವ ತಮ್ಮ ನಿರ್ಧಾರವನ್ನು ಚರಿತ್ರೆಯ ಯಾವ ಸಂದರ್ಭದಲ್ಲಿ ಕೈಗೊಂಡಿರುತ್ತಾರೆ ಮತ್ತು ತಮ್ಮ ಆಯ್ಕೆಯನ್ನು ಯಾವ ಸಂದರ್ಭದಲ್ಲಿ ಬಳಸಿರುತ್ತಾರೆ ಮತ್ತು ಅದು ಹೇಗೆ ವ್ಯವಸ್ಥೆಯ ಪಲ್ಲಟಗಳಿಗೆ ಕಾರಣವಾಗಿರುತ್ತದೆ ಎನ್ನುವುದನ್ನು ಅರ್ಥಮಾಡಿಕೊಳ್ಳಲು ಚಾರಿತ್ರಿಕ ಆಲೋಚನೆ ಮುಖ್ಯವಾಗುತ್ತದೆ. ಸಂಸ್ಕೃತಿ, ಪರಂಪರೆ ಮತ್ತು ಘನತೆಯನ್ನು ಸಂರಕ್ಷಿಸುವ ಹೊಣೆ ಸದಾ ಮಹಿಳೆಯರದ್ದೇ ಆಗಿರುತ್ತದೆ ಎಂದು ಭಾವಿಸಲಾಗುವ ಸಮಾಜದಲ್ಲಿ, ಘನತೆ ಎನ್ನುವುದು ಪುರುಷ ಸಮಾಜದ ಸ್ವತ್ತು ಎಂದು ಪರಿಭಾವಿಸಲಾಗುವ ಸಮಾಜದಲ್ಲಿ, ಈ ಸಂಸ್ಕೃತಿ, ಪರಂಪರೆ ಮತ್ತು ಘನತೆಯನ್ನು ರಕ್ಷಿಸಲು ಅಥವಾ ಕಾಪಾಡಲು ಅಪೇಕ್ಷಿಸುವ ಪುರುಷ ಸಮಾಜವನ್ನು ಧಿಕ್ಕರಿಸಿ ಮಹಿಳೆಯರು ವಸ್ತ್ರಧಾರಣೆಯನ್ನು ಧರಿಸಲು ಅಥವಾ ತಿರಸ್ಕರಿಸಲು ಮುಂದಾದಾಗ ಯಾವ ರೀತಿಯ ಪ್ರಕ್ಷುಬ್ಧತೆ ಉಂಟಾಗುತ್ತದೆ ? ಇದನ್ನು ಅರ್ಥಮಾಡಿಕೊಳ್ಳಲು ಚಾರಿತ್ರಿಕ ಆಲೋಚನೆ ಬೇಕಾಗುತ್ತದೆ.
ವಸ್ತ್ರಧಾರಣೆಯ ಇತಿಹಾಸವನ್ನು ತಿಳಿದುಕೊಳ್ಳುವುದರಿಂದ ವಿದ್ಯಾರ್ಥಿಗಳಿಗೆ ಚರಿತ್ರೆಯಲ್ಲಿ ಇಂತಹ ಚರ್ಚೆಗಳು ಹೇಗೆ ಉದ್ಭವಿಸಿದವು, ಹೇಗೆ ನಿವಾರಿಸಲ್ಪಟ್ಟವು ಎಂದು ಗ್ರಹಿಸುವುದು ಸಾಧ್ಯವಾಗುತ್ತದೆ. ಉದಾಹರಣೆಗೆ 19ನೆಯ ಶತಮಾನದಲ್ಲಿ ಉದ್ಭವಿಸಿದ ರುಮಾಲು ಮತ್ತು ಪಾದರಕ್ಷೆಯ ವಿವಾದವನ್ನೇ ಪರಿಗಣಿಸಬಹುದು. 19ನೆಯ ಶತಮಾನದ ಆರಂಭದಲ್ಲಿ ಆಳುವ ದೊರೆ ಅಥವಾ ಸಂಸ್ಥಾನದ ಒಡೆಯರ ಆಸ್ಥಾನವನ್ನು ಪ್ರವೇಶಿಸುವ ಮುನ್ನ ಬ್ರಿಟೀಷ್ ಅಧಿಕಾರಿಗಳಿಗೆ ಭಾರತೀಯ ಶಿಷ್ಟಾಚಾರದಂತೆ ಪಾದರಕ್ಷೆಗಳನ್ನು ಕಳಚಿ ಪ್ರವೇಶಿಸುವುದು ಕಡ್ಡಾಯವಾಗಿತ್ತು. ಕೆಲವು ಬ್ರಿಟೀಷ್ ಅಧಿಕಾರಿಗಳು ಈ ಭಾರತೀಯ ಸಂಪ್ರದಾಯಕ್ಕೆ ಹೊಂದಿಕೊಂಡಿದ್ದರು. ಆದರೆ 1830ರಲ್ಲಿ ಅಧಿಕೃತ ಸಮಾರಂಭಗಳಲ್ಲಿ ಭಾರತೀಯ ವಸ್ತ್ರಗಳನ್ನು ಧರಿಸುವುದನ್ನು ಯೂರೋಪಿನವರಿಗೆ ನಿಷಿದ್ಧಗೊಳಿಸಲಾಯಿತು.
Also Read : ಹಿಂದೂ ರಾಷ್ಟ್ರದ ಯೋಜನೆಗೆ ಮುಂದಡಿಯೇ ಹಿಜಾಬ್ ತೀರ್ಪು? – ಭಾಗ : 2
ಇದೇ ವೇಳೆ ಭಾರತೀಯರು ತಮ್ಮ ಸಂಪ್ರದಾಯಗಳಿಗೆ ಮನ್ನಣೆ ನೀಡಿ ಸರ್ಕಾರಿ ಕಚೇರಿಗಳನ್ನು ಪ್ರವೇಶಿಸುವ ಮುನ್ನ ತಮ್ಮ ಪಾದರಕ್ಷೆಗಳನ್ನು ಕಳಚಿಯೇ ಹೋಗಬೇಕಿತ್ತು. ವಸಾಹತೀಕರಣಕ್ಕೊಳಗಾದ ಮೇಲ್ಪದರದ ಗಣ್ಯರಿಗೆ ಇದು ಅಪಮಾನಕರ ಎನಿಸತೊಡಗಿತ್ತು. ಇದರ ವಿರುದ್ಧ ಧ್ವನಿ ಎತ್ತಿದ ಮನೋಕ್‌ಜೀ, ಕೋವಾಸ್‌ಜೀ ಎಂಟೀ ಎಂಬ ಪಾರ್ಸಿ ಸಮುದಾಯದ ವ್ಯಕ್ತಿ ನ್ಯಾಯಾಲಯದಲ್ಲಿ ತಮ್ಮ ಪಾದರಕ್ಷೆಯನ್ನು ಕಳಚಿಡಲು ನಿರಾಕರಿಸಿದರು. “ ಯಾವುದೇ ಪಾರ್ಸಿ ಸಮುದಾಯದ ವ್ಯಕ್ತಿ ಇದ್ದರೂ, ಎಷ್ಟೇ ಉನ್ನತ ವ್ಯಕ್ತಿಯಾಗಿದ್ದರೂ, ಅವರನ್ನು ಭೇಟಿಯಾಗುವಾಗ ನಮ್ಮ ಪಾದರಕ್ಷೆಗಳನ್ನು ಕಳಚಿಡುವ ಪದ್ಧತಿ ನಮ್ಮ ಸಾಮಾಜಿಕ ಒಡನಾಟದಲ್ಲಿ ಇಲ್ಲ ,,,” ಎಂದು ದಾವೆ ಹೂಡಿದ್ದರು. ಪಾದರಕ್ಷೆ ಕೇಂದ್ರಿತ ಗೌರವ ಸಲ್ಲಿಕೆಯ ಈ ನಿಯಮ ಬದಲಾಗಲು 20 ವರ್ಷಗಳೇ ಬೇಕಾದವು.
ಭಾರತದಲ್ಲಿ ಚರ್ಚೆಗಳು
ಬ್ರಿಟೀಷರ ಆಳ್ವಿಕೆಯಲ್ಲಿ ಅನೇಕ ಸಂದರ್ಭಗಳಲ್ಲಿ ಭಾರತದ ಗಣ್ಯವರ್ಗಗಳು ವಸಾಹತುಶಾಹಿಯ ಆದೇಶಗಳನ್ನು ಅಪಮಾನಕರ ಎಂದು ಭಾವಿಸಿ ಧಿಕ್ಕರಿಸಿದ್ದವು. ಏತನ್ಮಧ್ಯೆ ಕೇರಳದ ತಿರುವಂಕೂರು ದೇವಾಲಯದಲ್ಲಿ ಭಾರತೀಯರ ನಡುವೆಯೇ ವಸ್ತ್ರಧಾರಣೆಯ ಸುಧಾರಣೆಗಳ ಬಗ್ಗೆ ಕೂಗು ಎದ್ದಿತ್ತು. ಈ ಸಂಸ್ಥಾನದಲ್ಲಿ ಮಹಿಳೆಯರು ಮತ್ತು ಪುರುಷರೂ ಸಹ ದೇವರ ಸನ್ನಿಧಿಯಲ್ಲಿ ಅಥವಾ ಮೇಲ್ಜಾತಿಯವರ ಎದುರಿನಲ್ಲಿ ತಮ್ಮ ದೇಹದ ಮೇಲ್ಭಾಗವನ್ನು ಮುಚ್ಚಿಕೊಳ್ಳುವಂತಿರಲಿಲ್ಲ. ಇದು ಒಂದು ಸಂಪ್ರದಾಯವಾಗಿ ಬೆಳೆದುಬಂದಿತ್ತು. ಕ್ರೈಸ್ತ ಮಿಷನರಿಗಳ ಕಾರ್ಯಾಚರಣೆಯ ಪರಿಣಾಮವಾಗಿ 1822ರಲ್ಲಿ ವಸ್ತ್ರಧಾರಣೆಯ ಸುಧಾರಣೆಗಳಿಗಾಗಿ ಆಗ್ರಹ ಕೇಳಿಬರತೊಡಗಿತ್ತು. ಶಾನರ್ (ನಂತರ ನಾಡರ್ ಎಂದು ಕರೆಯಲಾಯಿತು) ಸಮುದಾಯದ ಮಹಿಳೆಯರು ತಮ್ಮ ಎದೆ ಮುಚ್ಚಿಕೊಳ್ಳುವಂತೆ ಉಡುಪು ಧರಿಸಿದ್ದಕ್ಕಾಗಿ ಮೇಲ್ಜಾತಿಯ ನಾಯರ್ ಸಮುದಾಯದ ಪುರುಷರಿಂದ ಸಾರ್ವಜನಿಕ ಸ್ಥಳಗಳಲ್ಲೇ ಆಕ್ರಮಣಕ್ಕೊಳಗಾಗಬೇಕಾಯಿತು.
ಈ ಘಟನೆಗಳನ್ನು ಇತಿಹಾಸಕಾರರು ಸ್ತನ ವಸ್ತ್ರ ಗಲಭೆಗಳು ಎಂದೇ ವ್ಯಾಖ್ಯಾನಿಸುತ್ತಾರೆ. 1859ರಲ್ಲಿ ತಿರುವಂಕೂರು ಸರ್ಕಾರವು, ನಾಡರ್ ಸಮುದಾಯದ ಮಹಿಳೆಯರು ತಮ್ಮ ಎದೆ ಮುಚ್ಚಿಕೊಳ್ಳುವಂತೆ ಉಡುಪು ಧರಿಸಬಹುದು ಎಂಬ ಆದೇಶವನ್ನು ಹೊರಡಿಸುವುದರೊಂದಿಗೆ ಈ ವಿವಾದವೂ ಅಂತ್ಯವಾಗಿತ್ತು. ಶತಮಾನಗಳ ಕಾಲ ತಮ್ಮ ಘನತೆಯಿಂದ ವಂಚಿತರಾಗಿದ್ದ ಮಹಿಳೆಯರು ತಮ್ಮ ಘನತೆಯನ್ನು ಮರಳಿ ಪಡೆಯುವಂತಾಗಿತ್ತು. ಆದರೆ 19ನೆಯ ಶತಮಾನದ ಅಂತ್ಯದವರೆಗೂ ಈ ವಸ್ತ್ರಧಾರಣೆಯ ಸುಧಾರಣಾ ಕ್ರಮಗಳು ಏಕರೂಪವಾಗಿರಲಿಲ್ಲ. ಈ ಸಂದರ್ಭದಲ್ಲೂ ಸಹ ಮಹಿಳೆಯರು, ಮೇಲ್ಜಾತಿಯವರನ್ನೂ ಒಳಗೊಂಡಂತೆ, ತಮ್ಮ ಎದೆ ಭಾಗವನ್ನು ತೆರೆದಿಟ್ಟಟುಕೊಳ್ಳುವುದೇ ಸಂಪ್ರದಾಯವಾಗಿತ್ತು.
ವಿವಾಹಿತ ಮಹಿಳೆಯೊಬ್ಬಳು ಕುಪ್ಪಸವನ್ನು ಧರಿಸಲು ಮುಂದಾದಾಗ, ಆಕೆಯ ಪತಿ ಆಕೆಯನ್ನು ನಿಂದಿಸಿದ್ದೇ ಅಲ್ಲದೆ, ಆಕೆಯ ತಾಯಿಯೂ ಸಹ ಮುಸ್ಲಿಂ ಮಹಿಳೆಯಂತೆ ಕಾಣ ಬಯಸುವ ಮಗಳ ಮೇಲೆ ದೈಹಿಕ ಹಲ್ಲೆ ನಡೆಸಿದ ಒಂದು ಪ್ರಸಂಗವೂ ದಾಖಲಾಗಿದೆ. ಇದಕ್ಕೆ ತದ್ವಿರುದ್ಧವಾಗಿ ಬಂಗಾಲದಲ್ಲಿ 1872ರಿಂದಲೇ ವಸ್ತ್ರಧಾರಣೆಯ ಸುಧಾರಣೆಗಾಗಿ ಕೂಗು ಕೇಳಿಬರುತ್ತದೆ. ಈ ಪ್ರದೇಶದ ಮಹಿಳೆಯರು ಒಳ ಉಡುಪುಗಳನ್ನೂ ಧರಿಸದೆ, ಪಾರದರ್ಶಕವಾದ ತೆಳು ಸೀರೆಯನ್ನೇ ಧರಿಸಬೇಕಾದ ಒಂದು ಸಂಪ್ರದಾಯವನ್ನು ಅನುಸರಿಸಬೇಕಾಗಿದ್ದು, ಈ ಪದ್ಧತಿಯ ವಿರುದ್ಧ ಬಂಗಾಲದಲ್ಲಿ ತೀವ್ರವಾದ ಪ್ರತಿರೋಧ ವ್ಯಕ್ತವಾಗಿತ್ತು. ಮಹಿಳೆಯರು ಘನತೆಯನ್ನು ಉಳಿಸಿಕೊಳ್ಳುವಂತಹ ಉಡುಪು ಧರಿಸಬೇಕು ಎಂಬ ಆಗ್ರಹವೂ ಕೇಳಿಬಂದಿತ್ತು. ಈ ನಿಟ್ಟಿನಲ್ಲಿ ಜ್ಞಾನದಾನಂದಿನಿ ದೇವಿ ಟಾಗೂರ್ ಎಂಬ ಮಹಿಳೆ ಪ್ರಪ್ರಥಮ ಬಾರಿಗೆ ಪಾರ್ಸಿಗಳ ಶೈಲಿಯಲ್ಲಿ ಸೀರೆ ಉಡುವ ಪದ್ಧತಿಯನ್ನು ಜಾರಿಗೊಳಿಸಿ , ಸೆರಗು ಹೊದ್ದುಕೊಳ್ಳುವ, ಕುಪ್ಪಸ ಧರಿಸುವ, ಸ್ಕರ್ಟ್ ಧರಿಸುವ ಮತ್ತು ಮಹಿಳೆಯರು ಕಾಲುಚೀಲ ಹಾಗೂ ಬೂಟು ಧರಿಸುವ ಒಂದು ಪದ್ಧತಿಗೆ ಚಾಲ್ತಿಇ ನೀಡಿದ್ದರು.
Also Read : ಹಿಜಾಬ್ ಮೇಲಿನ ನಿಷೇಧ ಭಾರತೀಯ ವೈವಿಧ್ಯ ಸಂಸ್ಕೃತಿಗಳಿಗೆ ಮಾರಕ
ಹಾಗಾಗಿ ಕಳೆದ ಎರಡು ಶತಮಾನಗಳ ಇತಿಹಾಸವನ್ನೇ ಇಣುಕಿ ನೋಡಿದರೆ, ವಸ್ತ್ರಧಾರಣೆಯ ಶೈಲಿ, ವಿನ್ಯಾಸ ಮತ್ತು ಇದರ ವಿರುದ್ಧ ವ್ಯಕ್ತವಾದ ಪ್ರತಿರೋಧಗಳನ್ನು ಅರ್ಥಮಾಡಿಕೊಳ್ಳುವುದು ಸುಲಭವಾಗುತ್ತದೆ. ಮಹಾತ್ಮ ಗಾಂಧಿ ವಿಧಿಸಿದ ಮತ್ತು ಅನುಸರಿಸಿದ ವಸ್ತ್ರಧಾರಣೆಯ ಪ್ರಯೋಗಗಳನ್ನು ನಮ್ಮ ವಿದ್ಯಾರ್ಥಿ ಸಮುದಾಯ ಅರಿತು ಅರ್ಥಮಾಡಿಕೊಳ್ಳಬೇಡವೇ ? 20 ವರ್ಷಗಳ ಕಾಲ ವಸಾಹತುಶಾಹಿ ಶೈಲಿಯ ಉಡುಪು ಧರಿಸಿ ನಂತರ ತಮ್ಮ ಸಾಂಪ್ರದಾಯಿಕ ಉಡುಪನ್ನು ಧರಿಸಲಾರಂಭಿಸಿದ ಗಾಂಧಿಯ ವಸ್ತ್ರಸಂಹಿತೆಯ ಸಾಂಕೇತಿಕ ಮಹತ್ವವನ್ನು ಅರ್ಥಮಾಡಿಕೊಳ್ಳಬೇಡವೇ ? ತಮ್ಮ ವ್ಯಕ್ತಿತ್ವವನ್ನು ಬಿಂಬಿಸಿಕೊಳ್ಳಲು ಹಾಗು ಭಾರತದ ಅಧ್ಯಾತ್ಮಿಕತೆ, ಭಾರತೀಯತೆಯನ್ನು ಬಿಂಬಿಸಲು ತಮ್ಮದೇ ಆದ ವಿಶಿಷ್ಟ ವಸ್ತ್ರಧಾರಣೆಯ ಶೈಲಿಗಳನ್ನು ಅನುಸರಿಸಿದ ರಾಮಕೃಷ್ಣ ಪರಮಹಂಸ (ಇವರು ಇಸ್ಲಾಂ ಧರ್ಮವನ್ನು ಅರ್ಥಮಾಡಿಕೊಳ್ಳುವ ಸಲುವಾಗಿ ಇಸ್ಲಾಮಿಕ್ ಉಡುಪು ಧರಿಸಿದ್ದರು), ವಿವೇಕಾನಂದ, ಅರಬಿಂದೋಘೋಷ್, ರವೀಂದ್ರನಾಥ ಟಾಗೂರ್ ಈ ಮಹನೀಯರು ಕ್ರಮಿಸಿದ ಹಾದಿಯನ್ನೇ ಮಹಾತ್ಮ ಗಾಂಧಿ ಸಹ ಅನುಸರಿಸಿದ್ದರು. ಡಾ ಬಿ ಆರ್ ಅಂಬೇಡ್ಕರ್ ಅವರೂ ಸಹ ಸಾಮಾಜಿಕ ಮುಂಚಲನೆ, ಆಧುನಿಕತೆಯನ್ನು ಬಿಂಬಿಸುವ ರೀತಿಯಲ್ಲಿ ಪಾಶ್ಚಿಮಾತ್ಯ ಬ್ರಿಟೀಷ್ ಮಾದರಿಯ ವಸ್ತ್ರಧಾರಣೆಯನ್ನು ಅನುಸರಿಸುವ ಮೂಲಕ, ಕೆಳಜಾತಿಯವರಿಗೆ ಮೇಲ್ಜಾತಿಯವರು ವಿಧಿಸಿದ್ದ ನಿಯಮಗಳನ್ನು ಉಲ್ಲಂಘಿಸಿದ್ದರು. 1920ರ ಆರಂಭದ ದಿನಗಳಲ್ಲಿ ಕೋಲಾರ ಚಿನ್ನದ ಗಣಿಯ ಹಲವು ಗಣಿ ಕಾರ್ಮಿಕರೂ ಇದೇ ರೀತಿಯ ಪ್ರತಿರೋಧ ವ್ಯಕ್ತಪಡಿಸಿದ್ದರು. ಈ ಇತಿಹಾಸವನ್ನು ನಮ್ಮ ವಿದ್ಯಾರ್ಥಿಗಳು ತಿಳಿದುಕೊಳ್ಳುವುದು ಬೇಡವೇ ?
ಈ ವೈವಿಧ್ಯಮಯ ಪರಸ್ಪರ ವಿರೋಧಾಭಾಸಗಳನ್ನೊಳಗೊಂಡ ಹಿನ್ನೆಲೆಯೇ ನಮ್ಮ ಪರಂಪರೆಯೂ ಆಗಿದೆ. ಈ ಪರಂಪರೆಯನ್ನು ಇಂದು ಶಾಲಾ ಕೊಠಡಿಗಳೊಳಗೆ, ಚರ್ಚೆಗೊಳಪಡಿಸಬೇಕಿದೆ. ವಾದ ಪ್ರತಿವಾದಗಳನ್ನು ಮಂಡಿಸಬೇಕಿದೆ. ಇನ್ನೂ ಹೆಚ್ಚಿನ ನಾಗರಿಕತೆ ಮತ್ತು ಘನತೆಯನ್ನು ಸಾಧಿಸಲು ಈ ಹೆಜ್ಜೆ ಅನಿವಾರ್ಯವೂ ಆಗಿದೆ.
ಮೂಲ : ಜಾನಕಿ ನಾಯರ್ ( ದ ಹಿಂದೂ ಮಾರ್ಚ್ 2 2022)
ಅನುವಾದ : ನಾ ದಿವಾಕರ