ಅತ್ತ ರಷ್ಯಾ ಉಕ್ರೇನ್ ಮೇಲೆ ಯುದ್ಧ ಮಾಡುತ್ತಿದ್ದರೆ, ಇತ್ತ ವಿದೇಶಿ ಹೂಡಿಕೆದಾರರು ತಮ್ಮ ಬಂಡವಾಳ ಸಹಿತ ಭಾರತದಿಂದ ಕಾಲ್ಕಿಲುತ್ತಿದ್ದಾರೆ. ವಿದೇಶಿ ಹೂಡಿಕೆದಾರರು ಎಷ್ಟು ಬೃಹತ್ ಪ್ರಮಾಣದಲ್ಲಿ ಹೂಡಿಕೆ ಹಿಂಪಡೆದಿದ್ದಾರೆ ಎಂದರೆ ಪ್ರಸಕ್ತ ವರ್ಷದಲ್ಲಿ 1.14 ಲಕ್ಷ ಕೋಟಿ ರೂಪಾಯಿಗಳನ್ನು ಹಿಂಪಡೆದಿದ್ದಾರೆ. ಪಿಟಿಐ ವರದಿ ಪ್ರಕಾರ ಮಾರ್ಚ್ ತಿಂಗಳೊಂದರಲ್ಲೇ
ವಿದೇಶಿ ಬಂಡವಾಳ ಹೂಡಿಕೆದಾರರು 48,261.65 ಕೋಟಿ ಮೌಲ್ಯದ ದೇಶೀಯ ಷೇರುಗಳನ್ನು ಮಾರಾಟ ಮಾಡಿದ್ದಾರೆ. ಅಂಕಿಅಂಶಗಳ ಪ್ರಕಾರ, ಜನವರಿಯಲ್ಲಿ 28,526.30 ಕೋಟಿ ರೂ., ಫೆಬ್ರವರಿಯಲ್ಲಿ 38,068.02 ಕೋಟಿ ರೂ. ಮೌಲ್ಯದ ಷೇರುಗಳನ್ನು ಮಾರಾಟ ಮಾಡಿ ತಮ್ಮ ಹೂಡಿಕೆಯನ್ನು ಹಿಂಪಡೆದಿದ್ದಾರೆ. ಅಂದರೆ ಮೂರೇ ತಿಂಗಳಲ್ಲಿ 1,14,855.97 ಕೋಟಿ ರೂಪಾಯಿಗಳಷ್ಟು ಬಂಡವಾಳ ಹಿಂಪಡೆದಿದ್ದಾರೆ.
ಇದು ಐತಿಹಾಸಿಕ ದಾಖಲೆ. ಸಾಮಾನ್ಯವಾಗಿ ಷೇರುಪೇಟೆಗಳಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ದೊಡ್ಡ ಪ್ರಮಾಣದಲ್ಲಿ ಹೂಡಿಕೆ ಮಾಡುತ್ತಾರೆ. ಅದಕ್ಕೆ ಕಾರಣ ಭಾರತದ ಆರ್ಥಿಕತೆ ಈಗಿನ್ನೂ ಪ್ರವರ್ಧಮಾನಕ್ಕೆ ಬರುತ್ತಿದೆ. ಮುಂದಿನ ಎರಡು ದಶಕಗಳಲ್ಲಿ ಭಾರತದ ಆರ್ಥಿಕತೆ ಬೃಹತ್ತಾಗಿ ಬೆಳೆಯುತ್ತದೆ. ಉದಯಿಸುತ್ತಿರುವ ಆರ್ಥಿಕತೆಯ ರಾಷ್ಟ್ರಗಳ ಪೈಕಿ ಭಾರತ ಮುಂಚೂಣಿಯಲ್ಲಿದೆ. ಈ ಕಾರಣಕ್ಕಾಗಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಹೆಚ್ಚಿನ ಬಂಡವಾಳ ಹೂಡುತ್ತಾರೆ.
ಪ್ರಸ್ತುತ ತೀವ್ರ ಪ್ರಮಾಣದಲ್ಲಿ ಬಂಡವಾಳ ಹಿಂಪಡೆಯಲು ಮುಖ್ಯ ಕಾರಣ ಭೌಗೋಳಿಕ ರಾಜಕೀಯ ಉದ್ವಿಗ್ನತೆ ಮತ್ತು ಹಣದುಬ್ಬರದ ತೀವ್ರ ಏರಿಕೆಯಿಂದ ಉದ್ಭವಿಸಲಿರುವ ವ್ಯತಿರಿಕ್ತ ಪರಿಣಾಮಗಳು.
ಇಲ್ಲಿ ಗಮನಿಸಬೇಕಾದ ಪ್ರಮುಖ ಅಂಶ ಎಂದರೆ ರಷ್ಯಾ ಉಕ್ರೇನ್ ಮೇಲೆ ಆಕ್ರಮಣ ಮಾಡುವ ಮುನ್ನವೇ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ತಮ್ಮ ಬಂಡವಾಳವನ್ನು ಹಿಂಪಡೆಯಲು ಆರಂಭಿಸಿದ್ದರು. ಜನವರಿಯಲ್ಲಿ 28,526.30 ಕೋಟಿ ರೂ., ಫೆಬ್ರವರಿಯಲ್ಲಿ 38,068.02 ಕೋಟಿ ರೂಪಾಯಿಗಳಷ್ಟು ಹಿಂಪಡೆದಿದ್ದರು. ರಷ್ಯಾ ಉಕ್ರೇನ್ ಯುದ್ಧ ಆರಂಭವಾದ ನಂತರ ಮಾರ್ಚ್ ತಿಂಗಳಲ್ಲಿ 48,261.65 ಕೋಟಿ ರೂಪಾಯಿ ಮೌಲ್ಯದಷ್ಟು ಬಂಡವಾಳ ಹಿಂಪಡೆದಿದ್ದಾರೆ.

ಬರುವ ದಿನಗಳಲ್ಲಿ ಬಂಡವಾಳ ಹಿಂಪಡೆಯುವ ಪ್ರಕ್ರಿಯೆ ಮುಂದುವರೆಯಲಿದೆ.
ಯುದ್ದವಲ್ಲದೇ, ಭಾರತದ ಆರ್ಥಿಕತೆಯನ್ನು ತೀವ್ರವಾಗಿ ಕಾಡುತ್ತಿರುವ ಹಣದುಬ್ಬರವೂ ವಿದೇಶಿ ಸಾಂಸ್ಥಿಕ ಹೂಡಿಕೆದಾರರಲ್ಲಿ ಆತಂಕ ಮೂಡಿಸಿದೆ. ಯುದ್ಧ ಆರಂಭಕ್ಕೂ ಮುನ್ನವೇ ಕಚ್ಚಾ ತೈಲದರ ಪ್ರತಿ ಬ್ಯಾರೆಲ್ಲಿಗೆ 85-90 ಡಾಲರ್ ಆಜುಬಾಜಿನಲ್ಲಿತ್ತು. ಯುದ್ಧ ಆರಂಭವಾದ ನಂತರ 140 ಡಾಲರ್ ಗಳಿಗೆ ಜಿಗಿದು ಈಗ ಏರಿಳಿತಗಳ ನಡುವೆ 110 ಡಾಲರ್ ಆಜುಬಾಜಿನಲ್ಲಿ ವಹಿವಾಟಾಗುತ್ತಿದೆ. ಆದರೆ, ತೈಲ ದರ ಯಾವಾಗ ಜಿಗಿಯುತ್ತದೋ ಹೇಳಲಾಗದು.
ಈ ನಡುವೆ ವಿಧಾನಸಭಾ ಚುನಾವಣೆಗಳು ಮುಗಿದ ಹಿನ್ನೆಲೆಯಲ್ಲಿ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ನಿತ್ಯವೂ ಏರಿಕೆ ಮಾಡುತ್ತಿರುವುದರಿಂದಾಗಿ ಹಣದುಬ್ಬರ ತೀವ್ರಗತಿಯಲ್ಲಿ ಏರಿಕೆಯಾಗುತ್ತಿದೆ.
ಈಗಾಗಲೇ ಭಾರತೀಯ ರಿಸರ್ವ್ ಬ್ಯಾಂಕ್ ನಿಗದಿ ಪಡಿಸಿರುವ ಗರಿಷ್ಠ 6ರ ಮಿತಿ ದಾಟಿರುವ ಹಣದುಬ್ಬರವು ಏಪ್ರಿಲ್ ಅಂತ್ಯದ ವೇಳೆಗೆ ಶೇ.7ರ ಗಡಿದಾಟುವ ಸಾಧ್ಯತೆ ಇದೆ.
ಕಚ್ಚಾ ತೈಲ ದರ ಏರಿಕೆ ಮತ್ತು ಹಣದುಬ್ಬರದಿಂದಾಗಿ ದೇಶೀಯ ಕರೆನ್ಸಿ ರುಪಾಯಿ ಮೌಲ್ಯ ಕುಸಿಯುವ ಸಾಧ್ಯತೆ ಇದೆ. ಈ ಪರಿಸ್ಥಿತಿಯಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ಅಸ್ಥಿರತೆ ಮುಂದುವರೆಯುವ ಕಾರಣ ಹೂಡಿಕೆ ಹೆಚ್ಚು ಸುರಕ್ಷಿತವಲ್ಲ ಎಂಬುದು ವಿದೇಶಿ ಸಾಂಸ್ಥಿಕ ಹೂಡಿಕೆದಾರರ ನಿಲುವಾಗಿದೆ.
ಭಾರತ ಶೇ.85ರಷ್ಟು ಕಚ್ಚಾ ತೈಲ ಆಮದು ಮಾಡಿಕೊಳ್ಳುತ್ತದೆ. ಕಚ್ಚಾ ತೈಲದ ಬೆಲೆಯಲ್ಲಿನ ಪ್ರತಿ ಶೇಕಡಾ 10 ರಷ್ಟು ಹೆಚ್ಚಳವು ಚಾಲ್ತಿ ಖಾತೆ ಕೊರತೆಯನ್ನು ಸುಮಾರು 30 (ಶೇ.0.30) ಮೂಲ ಅಂಶದಷ್ಟು ಮತ್ತು ಚಿಲ್ಲರೆ ದರ ಹಣದುಬ್ಬರ(ಸಿಪಿಐ) ಸುಮಾರು 40(ಶೇ.0.40) ಮೂಲ ಅಂಶದಷ್ಟು ಹೆಚ್ಚಳಕ್ಕೆ ಕಾರಣವಾಗುತ್ತದೆ ಮತ್ತು ಜಿಡಿಪಿ ಸುಮಾರು 20 ಮೂಲ ಅಂಶದಷ್ಟು ಕುಸಿತಕ್ಕೆ ಕಾರಣವಾಗಿತ್ತದೆ.
ಅದೇನೇ ಇರಲಿ, ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಇಷ್ಟು ಬೃಹತ್ ಪ್ರಮಾಣದಲ್ಲಿ ಹೂಡಿಕೆ ಹಿಂಪಡೆದಿದ್ದರೂ ಷೇರು ಪೇಟೆಯಲ್ಲಿ ಹಿಂದಿನಂತೆ ತೀವ್ರ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿಲ್ಲ. ಅದಕ್ಕೆ ಮುಖ್ಯ ಕಾರಣ, ಷೇರು ಪೇಟೆಯಿಂದ ವಿದೇಶಿ ಹೂಡಿಕೆ ಹೋರ ಹೋಗುತ್ತಿರುವ ಪ್ರಮಾಣಕ್ಕಿಂತಲೂ ಹೆಚ್ಚಾಗಿ ದೇಶೀಯ ಹೂಡಿಕೆದಾರರಿಂದ ಹೂಡಿಕೆ ಒಳ ಹರಿವು ಹೆಚ್ಚಿದೆ.
ಮ್ಯೂಚುವಲ್ ಫಂಡ್ ಗಳಲ್ಲಿ ದೇಶಿಯ ಹೂಡಿಕೆ ಮಾಸಿಕ 1 ಲಕ್ಷ ಕೋಟಿ ರೂಪಾಯಿಗಷ್ಟು ದಾಟಿದೆ. ಮ್ಯೂಚುವಲ್ ಫಂಡ್ ಗಳಿಗೆ ಬರುವ ಹೂಡಿಕೆ ಪೈಕಿ ಶೇ.60ರಷ್ಟು ಮೊತ್ತವು ಷೇರುಪೇಟೆಗೆ ಹರಿಯುತ್ತಿರುವುದರಿಂದ ದೇಶೀಯ ಷೇರುಪೇಟೆ ಬಹುತೇಕ ಸ್ಥಿರತೆ ಕಾಯ್ದುಕೊಂಡಿದೆ.