ಶ್ರೀಲಂಕಾದಲ್ಲಿ ನಡೆಯುತ್ತಿರುವ ಸರ್ಕಾರ ವಿರೋಧಿ ಪ್ರತಿಭಟನೆಗಳು ಹಿಂಸಾತ್ಮಕ ಸ್ವರೂಪ ಪಡೆಯುತ್ತಿರುವ ಬೆನ್ನಲ್ಲೇ, ಪೊಲೀಸರು ಕರ್ಫ್ಯೂ ಘೋಷಣೆ ಮಾಡಿದ್ದಾರೆ. ಪ್ರಸ್ತುತ ಶ್ರೀಲಂಕಾ ರಾಷ್ಟ್ರದ ಇತಿಹಾಸದಲ್ಲಿಯೇ ಈ ರೀತಿಯ ಆರ್ಥಿಕ ಬಿಕ್ಕಟ್ಟು ಎದುರಾಗಿರಲಿಲ್ಲ.
ಈಗಿನ ಆರ್ಥಿಕ ಬಿಕ್ಕಟ್ಟನ್ನು ಸರ್ಕಾರ ನಿಭಾಯಿಸಲು ಅಸರ್ಥವಾಗಿರುವ ಕಾರಣ, ಶ್ರೀಲಂಕಾ ರಾಷ್ಟ್ರಾಧ್ಯಕ್ಷ ಗೋತಬಯ ರಾಜಪಕ್ಸೆಯ ಕೊಲಂಬೋದ ಖಾಸಗಿ ನಿವಾಸದ ಮುಂದೆ ಜಮಾಯಿಸಿದ ಲಂಕನ್ನರು, ಪ್ರತಿಭಟನೆ ನಡೆಸಿದರು. ಈ ಪ್ರತಿಭಟನೆಯು ತೀವ್ರವಾಗುತ್ತಿದ್ದಂತೆಯೇ, ಜನರ ಮೇಲೆ ಅಶ್ರುವಾಯು ಮತ್ತು ಜಲಫಿರಂಗಿ ಪ್ರಯೋಗವನ್ನೂ ನಡೆಸಲಾಯಿತು.
ಈ ಕುರಿತಾಗಿ ಅಧಿಕೃತ ಮಾಹಿತಿ ನೀಡಿರುವ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಅಮಲ್ ಎದಿರಿಮನ್ನೆ, ದೇಶದ ವಾಣಿಜ್ಯ ರಾಜಧಾನಿಯಾಗಿರುವ ಕೊಲಂಬೋವಿನ ನಾಲ್ಕು ವಲಯಗಳಲ್ಲಿ ಕರ್ಫ್ಯೂ ವಿಧಿಸಲಾಗಿದೆ, ಎಂದು ಹೇಳಿದ್ದಾರೆ.
ಕೆಲವು ಹೆಲ್ಮೆಟ್’ಧಾರಿ ಪ್ರತಿಭಟನಾಕಾರರು ಆವರಣ ಗೋಡೆಯನ್ನು ಧ್ವಂಸಗೊಳಿಸಿ ಇಟ್ಟಿಗೆಗಳಿಂದ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾರೆ. ಅಧ್ಯಕ್ಷ ಗೋತಬಯ ಅವರ ನಿವಾಸಕ್ಕೆ ತೆರಳುವ ರಸ್ತೆಯಲ್ಲಿ ಬಸ್ ಒಂದನ್ನು ಸುಟ್ಟುಹಾಕಲಾಗಿದೆ.
ದೇಶದ ಆರ್ಥಿಕ ಪರಿಸ್ಥಿತಿ ಯಾವ ಮಟ್ಟಕ್ಕೆ ಕುಸಿದಿದೆ ಎಂದರೆ, ವಿದೇಶಗಳಿಂದ ಇಂಧನ ಆಮದು ಮಾಡಿಕೊಳ್ಳಲು ವಿದೇಶಿ ವಿನಿಮಯದ ಕೊರತೆ ಎದುರಿಸುತ್ತಿದೆ. ವಿದ್ಯುಚ್ಚಕ್ತಿ ಉಳಿತಾಯ ಮಾಡಲು ಬೀದಿ ದೀಪಗಳ ಸಂಪರ್ಕವನ್ನು ಕಡಿತಗೊಳಿಸಲಾಗಿದೆ. ಪೆಟ್ರೋಲ್ ಡೀಸೆಲ್ ಖರೀದಿಸಲು ಜನರು ಕಿಲೋಮೀಟರ್’ಗಟ್ಟಲೆ ಸರತಿಸಾಲಿನಲ್ಲಿ ನಿಲ್ಲಬೇಕಾದ ಪರಿಸ್ಥಿತಿ ಎದುರಾಗಿದೆ. ಈ ರೀತಿ ಸರತಿ ಸಾಲಿನಲ್ಲಿ ನಿಂತ ಇಬ್ಬರು ಸಾವನ್ನಪ್ಪಿರುವುದಾಗಿ ಪೊಲೀಸರು ದೃಢಪಡಿಸಿದ್ದಾರೆ.
ದೇಶದ ಚಿಲ್ಲರೆ ಮಾರುಕಟ್ಟೆಯ ಹಣದುಬ್ಬರ ಪ್ರಮಾಣ 18.7%ಕ್ಕೆ ಏರಿಕೆ ಕಂಡಿದೆ. ಆಹಾರೋತ್ಪನ್ನಗಳ ಹಣದುಬ್ಬರ ಪ್ರಮಾಣ 30.2%ದಷ್ಟು ಏರಿಕೆಯಾಗಿದೆ. ಅಗತ್ಯವಸ್ತುಗಳ ಬೆಲೆ ಏರಿಕೆಯಿಂದಾಗಿ ಜನರು ಒಂದು ಹೊತ್ತಿನ ಊಟಕ್ಕೂ ಪರದಾಡುವಂತಹ ಪರಿಸ್ಥಿತಿ ಎದುರಾಗಿದೆ.
ಪೇಪರ್ ಕೊರತೆ ಕಾಡುತ್ತಿರುವುದರಿಂದ ದೇಶದೆಲ್ಲೆಡೆ ಪರೀಕ್ಷೆಗಳನ್ನು ಮುಮದೂಡಲಾಗಿದೆ. ದಿನಪತ್ರಿಕೆಗಳ ಮುದ್ರಣ ವೆಚ್ಚ ದುಬಾರಿಯಾದ್ದರಿಂದ ಹಲವು ಪತ್ರಿಕೆಗಳು ಮುದ್ರಣವನ್ನೇ ಸ್ಥಗಿತಗೊಳಿಸಿವೆ. ಮೇಲಾಗಿ, ವಿದ್ಯುತ್ ಸಮಸ್ಯೆಯಿಂದ ಸಂಪೂರ್ಣ ರಾಷ್ಟ್ರವೇ ಹೈರಾಣಾಗಿ ಹೋಗಿದೆ.
ಹೊಸತಾಗಿ ವಿದ್ಯುತ್ ಉತ್ಪಾದನೆ ಮಾಡಲು ಡೀಸೆಲ್ ಕೊರತೆ ಇರುವುದರಿಂದ ಸತತ 13 ಗಂಟೆಗಳ ಕಾಲ ಲೋಡ್ ಶೆಡ್ಡಿಂಗ್ ಮಾಡಲಾಗುತ್ತಿದೆ. ಶನಿವಾರದ ವೇಳೆಗೆ ಸುಮಾರು 500 ಮಿಲಿಯನ್ ಡಾಲರ್ ಮೊತ್ತದ ಡೀಸೆಲ್ ಕಂಟೇನರ್ ಹಡಗು ಭಾರತದಿಂದ ಶ್ರೀಲಂಕಾ ತಲುಪಲಿದೆ.
“ಇದರಿಂದಾಗಿ ಸಂಪೂರ್ಣ ವಿದ್ಯುತ್ ಸಮಸ್ಯೆಯನ್ನು ಪರಿಹರಿಸಲು ಸಾಧ್ಯವಿಲ್ಲ. ಆದರೆ, ಅಲ್ಪಮಟ್ಟಿನ ಲೋಡ್ ಶೆಡ್ಡಿಂಗ್ ಸಮಯವನ್ನು ಕಡಿತಗೊಳಿಸಬಹುದು. ಮೇ ತಿಂಗಳ ಅಂತ್ಯದಲ್ಲಿ ಮಳೆ ಬರುವವರೆಗೂ ವಿದ್ಯುತ್ ಪೂರೈಕೆಗೆ ಸಮಸ್ಯೆ ಎದುರಾಗಲಿದೆ. ನಾವು ಏನು ಮಾಡಲೂ ಸಾಧ್ಯವಿಲ್ಲ,” ಎಂದು ವನಿಯರಾಚ್ಚಿ ಎಂಬ ಅಧಿಕಾರಿ ಹೇಳಿದ್ದಾರೆ.
ಕಠಿಣ ಬಿಸಿಲಿನ ಕಾರಣದಿಂದಾಗಿ ಜಲವಿದ್ಯುತ್ ಸ್ಥಾವರಗಳಿಗೆ ನೀರು ಪೂರೈಸುವ ಜಲಾಶಯಗಳಲ್ಲಿ ನೀರಿನ ಪ್ರಮಾಣ ಗಣನೀಯವಾಗಿ ಕುಸಿದಿರುವುದು ಶ್ರೀಲಂಕಾಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಸಾಮಾನ್ಯವಾಗಿ ದಿನದ ನಾಲ್ಕೂವರೆ ಗಂಟೆಗಳ ಕಾಲ ಕಾರ್ಯನಿರ್ವಹಿಸುತ್ತಿದ್ದ ಕೊಲಂಬೋ ಸ್ಟಾಕ್ ಎಕ್ಸ್ಚೇಂಜ್ ತನ್ನ ಕಾರ್ಯಾವಧಿಯನ್ನು ವಿದ್ಯುತ್ ಕೊರತೆಯ ಕಾರಣ ಎರಡು ಗಂಟೆ ಮೊಟಕುಗೊಳಿಸಿದೆ. ದೇಶದ ಕಂಪೆನಿಗಳ ಶೇರು ಮೌಲ್ಯ ಸತತ ಮೂರನೇ ದಿನವೂ ಶೇ. 5ರಷ್ಟು ಕುಸಿದಿದೆ.
ಕೋವಿಡ್ ಸಂಕಷ್ಟದ ಜೊತೆಗೆ, ತಪ್ಪಾದ ಸಂದರ್ಭದಲ್ಲಿ ತೆರಿಗೆ ಕಡಿತಗೊಳಿಸಿದ್ದು ದೇಶದಲ್ಲಿ ಆರ್ಥಿಕ ಕುಸಿತ ಉಂಟಾಗಲು ಕಾರಣವೆಂದು ವಿಶ್ಲೇಷಿಸಲಾಗುತ್ತಿದೆ. ಕಳೆದೆರಡು ವರ್ಷಗಳಲ್ಲಿ ಶ್ರೀಲಂಕಾದ ವಿದೇಶಿ ವಿನಿಮಯವು ಶೇ,70ರಷ್ಟು ಕುಸಿದಿದ್ದು, ಇದರಿಂದಾಗಿ ಜನಸಾಮಾನ್ಯರ ಬದುಕು ದುಸ್ತರವಾಗಿದೆ.
ಮುಂಬರುವ ದಿನಗಳಲ್ಲಿ International Monetary Fund (IMF) ವತಿಯಿಂದ ಸಾಲ ಪಡೆಯುವ ಕುರಿತು ಮಾತುಕತೆಗಳನ್ನು ನಡೆಸಲಾಗುವುದು ಎಂದು ಸರ್ಕಾರದ ಪ್ರತಿನಿಧಿಯೊಬ್ಬರು ಹೇಳಿದ್ದಾರೆ.