ಫೆಬ್ರವರಿ ತಿಂಗಳಲ್ಲಿ ಕರ್ನಾಟಕದ ಕಾಲೇಜುಗಳಲ್ಲಿ ಹಿಜಾಬ್ ವಿವಾದ ಭುಗಿಲೆದ್ದ ಬೆನ್ನಲ್ಲೇ ಹಿಂದುತ್ವವಾದಿ ಸಂಘಟನೆಗಳು ಹಿಜಾಬ್ ಧರಿಸಿದ ಹೆಣ್ಣುಮಕ್ಕಳು ಕಾಲೇಜ್ ಪ್ರವೇಶಿಸಬಾರದು ಎಂದು ಕೇಸರಿ ಶಾಲು ಧರಿಸಿ ಪ್ರತಿಭಟನೆ ನಡೆಸಿದ್ದರು. ಕೆಲವು ವಿದ್ಯಾರ್ಥಿಗಳು ಧ್ವಜ ಸ್ಥಂಭವೇರಿ ಕೇಸರಿ ಧ್ವಜ ನೆಟ್ಟ ಪ್ರಕರಣವೂ ನಡೆದಿತ್ತು. ಈ ಘಟನೆಗಳು ಅಂತರರಾಷ್ಟ್ರೀಯವಾಗಿ ಗಮನ ಸೆಳೆದಿದ್ದು ಯುಎಇಯ ರಾಜಕುಮಾರಿಯೂ ಈ ಬಗ್ಗೆ ಟ್ವೀಟ್ ಮಾಡಿ ಖಂಡಿಸಿದ್ದರು. ಮುಸ್ಲಿಂ ವಿದ್ಯಾರ್ಥಿನಿಯರು ಈ ಬಗ್ಗೆ ಹೈಕೋರ್ಟ್ ನಲ್ಲೂ ದಾವೆ ಸಲ್ಲಿಸಿದ್ದು ಅಲ್ಲೂ ಧಾರ್ಮಿಕ ಚಿಹ್ನೆಗಳನ್ನು ಕಾಲೇಜುಗಳಲ್ಲಿ ಧರಿಸಬಾರದು ಎಂಬ ತೀರ್ಪೇ ಬಂದಿದೆ. ಈಗ ಅದೇ ವಿದ್ಯಾರ್ಥಿನಿಯರು ಸುಪ್ರೀಂ ಕೋರ್ಟ್ ಕದವನ್ನೂ ತಟ್ಟಿದ್ದು ತೀರ್ಪಿಗಾಗಿ ಕಾಯುತ್ತಿದ್ದಾರೆ. ಹಿಜಾಬ್ ಧರಿಸಿ ಪರೀಕ್ಷೆ ಬರೆಯಲೂ ಸರ್ಕಾರ ಅನುಮತಿ ನಿರಾಕರಿಸಿದ್ದು ಹಲವು ವಿದ್ಯಾರ್ಥಿಗಳು ಪರೀಕ್ಷೆ ಬರೆಯದೇ ವಾಪಾಸಾಗುತ್ತಿರುವ ಸುದ್ದಿಗಳು ಕರ್ನಾಟಕದಾದ್ಯಂತ ವರದಿಯಾಗುತ್ತಿವೆ.
ಈ ನಡುವೆ ಹಿಜಾಬ್ ಧರಿಸಿದ ಮಹಿಳೆಗೆ ಪ್ರವೇಶವನ್ನು ನಿರಾಕರಿಸಿದ ಆರೋಪದ ಮೇಲೆ ಬಹ್ರೇನ್‌ನ ಅಧಿಕಾರಿಗಳು ಭಾರತೀಯ ರೆಸ್ಟೋರೆಂಟ್ ಅನ್ನು ಮುಚ್ಚಿದ್ದಾರೆ ಎಂದು ಆನ್‌ಲೈನ್ ಸುದ್ದಿ ವೆಬ್‌ಸೈಟ್ ಜಿಡಿಎನ್ ವರದಿ ಮಾಡಿದೆ. ಬಹ್ರೇನ್ ಪ್ರವಾಸೋದ್ಯಮ ಮತ್ತು ವಸ್ತುಪ್ರದರ್ಶನ ಪ್ರಾಧಿಕಾರವು ಈ ಬಗ್ಗೆ ತನಿಖೆಯನ್ನು ಪ್ರಾರಂಭಿಸಿದೆ. ಬಹ್ರೇನ್‌ನ ರಾಜಧಾನಿ ಮನಾಮಾದ ಅದ್ಲಿಯಾ ಪ್ರದೇಶದಲ್ಲಿರುವ ಲ್ಯಾಂಟರ್ನ್ಸ್ ರೆಸ್ಟೋರೆಂಟ್‌ನಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ.
ದಿ ಡೈಲಿ ಟ್ರಿಬ್ಯೂನ್ ಪ್ರಕಾರ, ದೇಶದ ಕಾನೂನುಗಳನ್ನು ಉಲ್ಲಂಘಿಸುವ ನೀತಿಗಳನ್ನು ಜಾರಿಗೊಳಿಸುವುದನ್ನು ರೆಸ್ಟೋರೆಂಟ್‌ಗಳು ತಪ್ಪಿಸಬೇಕು ಎಂದು BTEA (Bahrain Tourism and Exhibition Authority) ಹೇಳಿದೆ. “ಜನರ ವಿರುದ್ಧ ತಾರತಮ್ಯ ಮಾಡುವ ಎಲ್ಲಾ ಕ್ರಮಗಳನ್ನು ನಾವು ತಿರಸ್ಕರಿಸುತ್ತೇವೆ, ವಿಶೇಷವಾಗಿ ಅವರ ರಾಷ್ಟ್ರೀಯ ಗುರುತಿನ ಬಗ್ಗೆ” ಎಂದು ಅದು ಹೇಳಿದೆ.
ಪ್ರವಾಸೋದ್ಯಮ ಸಂಬಂಧಿತ ಸಂಸ್ಥೆಗಳಿಗೆ ಸಂಬಂಧಿಸಿದ 1986 ರ ಡಿಕ್ರಿ ಕಾನೂನು ಸಂಖ್ಯೆ 15 ರ ಪ್ರಕಾರ ರೆಸ್ಟೋರೆಂಟ್ ಅನ್ನು ಮುಚ್ಚಲಾಗಿದೆ ಎಂದು ಪ್ರಾಧಿಕಾರವು ಹೇಳಿದೆ. ಅಲ್ಲದೆ ಅಂತಹ ಘಟನೆಗಳು ನಡೆದರೆ ರಾಷ್ಟ್ರೀಯ ದೂರು ಮತ್ತು ಸಲಹೆ ವ್ಯವಸ್ಥೆ ತವಸ್ಸುಲ್ (Tawassul) ಮೂಲಕ ಅಥವಾ ಗ್ರಾಹಕ ಸಂರಕ್ಷಣಾ ಕೇಂದ್ರಕ್ಕೆ 17007003 ಗೆ ಕರೆ ಮಾಡುವ ಮೂಲಕ ಪ್ರಾಧಿಕಾರಕ್ಕೆ ವರದಿ ಮಾಡಲು ಸಾರ್ವಜನಿಕರಿಗೆ ಕರೆ ನೀಡಲಾಗಿದೆ.
ಈ ಬಗ್ಗೆ ಗುರುವಾರ ಲ್ಯಾಂಟರ್ನ್ಸ್ ರೆಸ್ಟೋರೆಂಟ್ ಅಧಿಕೃತ ಮಾಹಿತಿ ಪ್ರಕಟಿಸಿದ್ದು ಮಹಿಳೆಯನ್ನು ತನ್ನ ಆವರಣಕ್ಕೆ ಪ್ರವೇಶಿಸುವುದನ್ನು ನಿರ್ಬಂಧಿಸಿದ ಮ್ಯಾನೇಜರ್‌ರನ್ನು ಅಮಾನತುಗೊಳಿಸಲಾಗಿದೆ ಎಂದು ಹೇಳಿದ್ದು “ಮ್ಯಾನೇಜರ್ ಕ್ರಮವು ನಾವು ಯಾರು ಎಂಬುವುದನ್ನು ಪ್ರತಿನಿಧಿಸುವುದಿಲ್ಲ” ಎಂದು ಹೇಳಿದೆ.
“ಸುಂದರವಾದ ಬಹ್ರೇನ್‌ನಲ್ಲಿ 35 ವರ್ಷಗಳಿಂದ ನಾವು ಎಲ್ಲಾ ರಾಷ್ಟ್ರೀಯತೆಗಳಿಗೆ ಸೇವೆ ಸಲ್ಲಿಸುತ್ತಿದ್ದೇವೆ ಮತ್ತು ಲ್ಯಾಂಟರ್ನ್ಸ್‌ಗೆ ಎಲ್ಲರಿಗೂ ಸ್ವಾಗತವಿದೆ” ಎಂದು ರೆಸ್ಟೋರೆಂಟ್ ತನ್ನ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ತಿಳಿಸಿದೆ. ಅಲ್ಲದೆ ಮಾರ್ಚ್ 29 ರಂದು “ಸದ್ಭಾವನೆಯ ಸೂಚಕವಾಗಿ” ರೆಸ್ಟೋರೆಂಟ್‌ನಲ್ಲಿ ಕಾಂಪ್ಲಿಮೆಂಟರಿ ಫುಡ್ ಸ್ವೀಕರಿಸಲು ರೆಸ್ಟೋರೆಂಟ್ ಬಹ್ರೇನ್ ನಾಗರಿಕರನ್ನು ಆಹ್ವಾನಿಸಿದೆ.