ನ್ಯಾಯಾಲಯದಲ್ಲಿ ಈಗಾಗಲೇ 11 ದಿನಗಳ ಕಾಲ ಹಿಜಾಬ್ ಅರ್ಜಿಯ ಕುರಿತು ವಾದ ವಿವಾದ ಆಲಿಸಿದ ಪೂರ್ಣ ಪೀಠ ನ್ಯಾಯಾಲಯ ಇಂದು ಅಂತಿಮ ತೀರ್ಪು ನೀಡಿದ್ದು, ಹಿಜಾಬ್ ಇಸ್ಲಾಂ ಧರ್ಮದ ಅತ್ಯಗತ್ಯ ಭಾಗವಲ್ಲ, ಸರ್ಕಾರದ ಆದೇಶ ಕಾನೂನು ಬದ್ಧವಾಗಿದೆ, ಸರ್ಕಾರದ ವಸ್ತ್ರ ಸಂಹಿತೆ ಪಾಲಿಸಬೇಕು ಎಂದು ರಾಜ್ಯ ಹೈಕೋರ್ಟ್ ತೀರ್ಪು ನೀಡಿದೆ.
ಕಾಲೇಜುಗಳಲ್ಲಿ ಹಿಜಾಬ್ ನಿರ್ಬಂಧಿಸಿರುವ ಕ್ರಮ ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ವಸ್ತ್ರಸಂಹಿತೆ ಜಾರಿ ಸಂಬಂಧ ಕಳೆದ ಫೆ.5ರಂದು ಸರ್ಕಾರ ಹೊರಡಿಸಿದ್ದ ಆದೇಶ ಪ್ರಶ್ನಿಸಿ 10ಕ್ಕೂ ಅಧಿಕ ಅರ್ಜಿಗಳು ಹಾಗೂ ಮಧ್ಯಂತರ ಅರ್ಜಿಗಳು ಸಲ್ಲಿಕೆಯಾಗಿದ್ದವು.
ಹಿಜಾಬ್ ವಿವಾದ ಕರ್ನಾಟಕದಲ್ಲಿ ಕಳೆದ ತಿಂಗಳಿಂದ ಭುಗಿಲೆದ್ದು, ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಪರ ವಿರೋಧ ನಿಲುವಿನಿಂದ ಪ್ರತಿಭಟನೆಗಳು ನಡೆದು ಹಲವಡೆ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿತ್ತು.
ಹಿಜಾಬ್ ವಿವಾದ ಹೈಕೋರ್ಟ್ ಮೆಟ್ಟಿಲೇರಿರುವದರಿಂದ ತಾತ್ಕಾಲಿಕ ಆದೇಶ ನೀಡುವ ಜೊತೆಗೆ ಶಾಲಾ ಕಾಲೇಜು ಆರಂಭಿಸಲು ಅನುಮತಿ ನೀಡಿತ್ತು. ಆದಾಗ್ಯು ದಿನ ನಿತ್ಯ ವಿವಾದ ಮುಂದುವರೆಯುತ್ತಲೇ ಸಾಗಿತ್ತು. ಈಗ ಈ ವಾದ ವಿವಾದಕ್ಕೆಲ್ಲ ಹೈಕೋರ್ಟ್ ತೀರ್ಪು ನೀಡುವ ಮೂಕಲ ಬ್ರೇಕ್ ಹಾಕಿದ್ದು, ಸರ್ಕಾರದ ವಸ್ತ್ರ ಸಂಹಿತೆ ಆದೇಶ ಸರಿಯಾಗಿದೆ ಎಂದು ಹಿಜಾಬ್ ಪರ ರಿಟ್ ಅರ್ಜಿಯನ್ನು ವಜಾಗೊಳಿಸಿದೆ.
ಸತತ 11 ದಿನ ವಾದ-ಪ್ರತಿವಾದ ಆಲಿಸಿದ್ದ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಹಾಗೂ ನ್ಯಾಯಮೂರ್ತಿಗಳಾದ ಕೃಷ್ಣ ಎಸ್. ದೀಕ್ಷಿತ್ ಮತ್ತು ಖಾಜಿ ಜೈಬುನ್ನಿಸಾ ಮೊಹಿದ್ದೀನ್ ಅವರಿದ್ದ ಪೂರ್ಣಪೀಠ ಫೆ.25ರಂದು ವಿಚಾರಣೆ ಪೂರ್ಣಗೊಳಿಸಿ ತೀರ್ಪು ಕಾಯ್ದಿರಿಸಿತ್ತು. ಇಂದು ತೀರ್ಪು ಪ್ರಕಟಿಸುವ ಮೂಲಕ ಹಿಜಾಬ್ ವಿವಾದಕ್ಕೆ ತಾರ್ಕಿಕ ಅಂತ್ಯ ಹಾಡಿದೆ.