ಜಮ್ಮು ಮತ್ತು ಕಾಶ್ಮೀರ ಪೊಲೀಸರು ಶ್ರೀನಗರ ಮೂಲದ ಪತ್ರಕರ್ತ ಮತ್ತು ಸಂಪಾದಕ ಫಹಾದ್ ಶಾ ವಿರುದ್ಧ ಒಂದು ತಿಂಗಳ ಅವಧಿಯಲ್ಲಿ ಎರಡನೇ ಬಾರಿಗೆ ಕಠಿಣ ಭಯೋತ್ಪಾದನಾ ವಿರೋಧಿ ಕಾನೂನಿನಡಿ ಕಾನೂನುಬಾಹಿರ ಚಟುವಟಿಕೆಗಳ ತಡೆಗಟ್ಟುವಿಕೆ (UAPA) ಕಾಯ್ದೆಯನ್ನು ಜಾರಿಗೊಳಿಸಿದ್ದು ಜಗತ್ತಿನಾದ್ಯಂತ ಖಂಡನೆ ವ್ಯಕ್ತವಾಗಿದೆ.
ಶ್ರೀನಗರ ಮೂಲದ ದಿ ಕಾಶ್ಮೀರ್ ವಾಲಾ ನ್ಯೂಸ್ ಪೋರ್ಟಲ್‌ನ ಮುಖ್ಯ ಸಂಪಾದಕರಾದ ಫಹಾದ್ ಅವರನ್ನು ಈ ತಿಂಗಳ ಆರಂಭದಲ್ಲಿ ಮೂರನೇ ಬಾರಿಗೆ ಅರೆಸ್ಟ್ ಮಾಡುವ ಮೊದಲು ಎರಡು ಬಾರಿ ಬಂಧಿಸಲಾಗಿತ್ತು ಮತ್ತು ಅವರು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಹೋರಾಟಗಾರರನ್ನು ಮತ್ತು ಸರ್ಕಾರದ ಟೀಕಾಕಾರನ್ನು ಮೌನವಾಗಿಸಲು ಸರ್ಕಾರ ಇತ್ತೀಚೆಗೆ ಪ್ರಯೋಗಿಸುತ್ತಿರುವ ಕಠಿಣ ಭಯೋತ್ಪಾದನಾ ವಿರೋಧಿ ಕಾನೂನಿನಡಿಯಲ್ಲಿ ಪತ್ರಕರ್ತ ಫಹಾದ್ ಅವರನ್ನು ಬಂಧಿಸಿರುವುದು ಜಾಗತಿಕ ಮಟ್ಟದಲ್ಲಿ ಕೋಲಾಹಲವನ್ಬು ಎಬ್ಬಿಸಿದ್ದು ಪ್ರಮುಖ ಪತ್ರಕರ್ತರು ಮತ್ತು ವಕೀಲರ ಗುಂಪು ಅವರನ್ನು ತಕ್ಷಣ ಬಿಡುಗಡೆಗೊಳಿಸಬೇಕೆಂದು ಒತ್ತಾಯಿಸಿದ್ದಾರೆ.
ಮೇ 2020ರಲ್ಲಿ ಫಹಾದ್ ವಿರುದ್ಧ ಮೊದಲ ಕೇಸ್ ದಾಖಲಿಸಲಾಗಿತ್ತು. ಮತ್ತು 2021ರ ಜೂನ್‌ನಲ್ಲಿ ಶೋಪಿಯಾನ್ ಜಿಲ್ಲೆಯ ಇಮಾಮ್ ಸಾಹೇಬ್ ಪೊಲೀಸ್ ಠಾಣೆಯಲ್ಲಿ ‘ ಕಾಶ್ಮೀರ ವಾಲಾ’ ವಿರುದ್ಧ ಎರಡನೇ ಕೇಸ್ ದಾಖಲಿಸಲಾಗಿತ್ತು. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153 (ಗಲಭೆ ಉಂಟುಮಾಡಲು ಪ್ರಚೋದನೆ) ಮತ್ತು 505 (ಸಾರ್ವಜನಿಕ ಕಿಡಿಗೇಡಿತನ) ಅಡಿಯಲ್ಲಿ ದಾಖಲಿಸಲಾಗಿದ್ದ ಎರಡನೇ ಪ್ರಕರಣಕ್ಕೆ ಸಂಬಂಧಿಸಿದಂತೆ ದಕ್ಷಿಣ ಕಾಶ್ಮೀರದ ನ್ಯಾಯಾಲಯವು ಮಾರ್ಚ್ 5 ರಂದು ಫಹಾದ್‌ಗೆ ಜಾಮೀನು ನೀಡಿತ್ತು.
ಇದಾಗಿ ಕೆಲವೇ ಗಂಟೆಗಳ ನಂತರ, ಶ್ರೀನಗರ ಜಿಲ್ಲೆಯ ಪೊಲೀಸರು ಕಾಶ್ಮೀರ ವಾಲಾ ವಿರುದ್ಧದ ಮೊದಲ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಕಸ್ಟಡಿಗೆ ಕೋರಿದರು ಮತ್ತು ಮಂಜೂರು ಮಾಡಿಸಿಕೊಂಡರರು. ಈ ಪ್ರಕರಣದಲ್ಲಿ ಫಹಾದ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 109 (ಪ್ರಚೋದನೆ), 147 (ಗಲಭೆ), 307 (ಕೊಲೆ ಯತ್ನ), 501 (ಮಾನಹಾನಿಕರ ವಿಷಯವನ್ನು ಮುದ್ರಿಸುವುದು) ಮತ್ತು 505 (ಸಾರ್ವಜನಿಕ ಕಿಡಿಗೇಡಿತನ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಆದರೆ ಪೊಲೀಸರು ಶುಕ್ರವಾರ ಸಲ್ಲಿಸಿದ ವರದಿಯಲ್ಲಿ ಮೂರು ಐಪಿಸಿ ಸೆಕ್ಷನ್‌ಗಳಾದ 109, 147 ಮತ್ತು 307ನ್ನು ಕೈಬಿಡಲಾಗಿದ್ದು ಯುಎಪಿಎ ಯ ಸೆಕ್ಷನ್ 13 ಅನ್ನು ಪ್ರಕರಣಕ್ಕೆ ಸೇರಿಸಲಾಗಿದೆ ಎಂದು ಫಹಾದ್ ವಕೀಲರಾದ ಉಮರ್ ರೊಂಗಾ ಹೇಳಿದ್ದಾರೆ. “ತನಿಖೆ ಪೂರ್ಣಗೊಂಡಂತೆ ತೋರುತ್ತಿರುವುದರಿಂದ ಫಹಾದ್ ಇನ್ನು ಮುಂದೆ ಕಸ್ಟಡಿಯಲ್ಲಿರುವ ಅಗತ್ಯವಿಲ್ಲ. ಕಳೆದ ಎರಡು ವರ್ಷಗಳಿಂದ ಪ್ರಕರಣದ ಪರಿಸ್ಥಿತಿಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಪ್ರಕರಣದಲ್ಲಿ ಫಹಾದ್ ಬಂಧನ ಅನಗತ್ಯ” ಎಂದೂ ಅವರು ಹೇಳಿದ್ದಾರೆ.
ಮೇ 19, 2020 ರಂದು ಶ್ರೀನಗರದ ನವ ಕಡಲ್ ಪ್ರದೇಶದಲ್ಲಿ ನಡೆದ ಎನ್‌ಕೌಂಟರ್‌ನ ಕುರಿತಾಗಿ ಕಾಶ್ಮೀರ ವಾಲಾ ಮಾಡಿದ್ದ ವರದಿಯ ಕುರಿತು ಶ್ರೀನಗರ ಪೊಲೀಸರು ಫಹಾದ್ ವಿರುದ್ಧ ಪ್ರಕರಣ ದಾಖಲಿಸಿದ್ದರು. ಈ ಎನ್‌ಕೌಂಟರ್‌ನಲ್ಲಿ ಡಜನ್‌ಗೂ ಹೆಚ್ಚು ಮನೆಗಳನ್ನು ನೆಲಸಮಗೊಳಿಸಲಾಗಿತ್ತು. ಮನೆಗಳಿಗೆ ಬೆಂಕಿ ಹಚ್ಚುವ ಮುನ್ನ ಭದ್ರತಾ ಪಡೆಗಳು ನಗದು ಮತ್ತು ಚಿನ್ನಾಭರಣಗಳನ್ನು ಲೂಟಿ ಮಾಡಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದರು ಮತ್ತು ಅಧಿಕಾರಿಗಳು ಈ ಆರೋಪವನ್ನು ನಿರಾಕರಿಸಿದ್ದರು. ಆರೋಪಗಳು ಮತ್ತು ಅಧಿಕೃತ ನಿರಾಕರಣೆ ‘ಕಾಶ್ಮೀರ ವಾಲಾ’ ಸೇರಿದಂತೆ ಸ್ಥಳೀಯ ಮತ್ತು ರಾಷ್ಟ್ರೀಯ ಮಾಧ್ಯಮಗಳಿಂದ ವ್ಯಾಪಕವಾಗಿ ವರದಿಯಾಗಿತ್ತು.
ಕಳೆದ ಎರಡು ವರ್ಷಗಳಲ್ಲಿ ಈ ಪ್ರಕರಣದಲ್ಲಿ ಫಹಾದ್‌ಗೆ ಮೂರು ಬಾರಿ ಸಮನ್ಸ್ ನೀಡಲಾಗಿದೆ ಎಂದು ಫಹಾದ್‌ನ ಸಹೋದ್ಯೋಗಿಗಳು ದಿ ವೈರ್‌ಗೆ ತಿಳಿಸಿದ್ದಾರೆ. “ಅವರು ತನಿಖಾಧಿಕಾರಿಗಳೊಂದಿಗೆ ಸಹಕರಿಸಿದ್ದಾರೆ ಮತ್ತು ಕಾನೂನನ್ನು ಎದುರಿಸುವುದರಿಂದ ಎಂದಿಗೂ ಓಡಿಹೋಗಿಲ್ಲ” ಎಂದು ಫಹಾದ್ ಅವರ ಸಹೋದ್ಯೋಗಿಯೊಬ್ಬರು ‘ದಿ ವೈರ್’ ಜೊತೆ ಮಾತಾಡುತ್ತಾ ಹೇಳಿದ್ದಾರೆ.

ಶೋಪಿಯಾನ್‌ನಲ್ಲಿರುವ ಖಾಸಗಿ ಶಾಲೆಯ ಆಡಳಿತದ ಮೇಲೆ ಸೇನೆಯು ಗಣರಾಜ್ಯೋತ್ಸವವನ್ನು ಆಚರಿಸಲು ಒತ್ತಡ ಹೇರುತ್ತಿದೆ ಎಂದು ಕಾಶ್ಮೀರ ವಾಲಾ ಜನವರಿ 30ರಂದು ವರದಿ ಮಾಡಿತ್ತು. ಸೇನೆಯು ಆರೋಪವನ್ನು ನಿರಾಕರಿಸಿ ಎಫ್‌ಐಆರ್ ದಾಖಲಿಸುವಂತೆ ಪೊಲೀಸರಿಗೆ ದೂರು ನೀಡಿತು.
ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಮೂವರು ಶಂಕಿತ ಉಗ್ರರೊಂದಿಗೆ ಹದಿಹರೆಯದ ಬಾಲಕನನ್ನು ಹತ್ಯೆಗೈದ ವಿವಾದಾತ್ಮಕ ಎನ್‌ಕೌಂಟರ್‌ನ್ನು ಕಾಶ್ಮೀರ ವಾಲಾ ವರದಿ ಮಾಡಿದ ನಂತರ ಫಹಾದ್‌ರನ್ನು ಫೆಬ್ರವರಿ 4 ರಂದು ಭಯೋತ್ಪಾದನಾ ವಿರೋಧಿ ಮತ್ತು ದೇಶದ್ರೋಹದ ಆರೋಪದಡಿ ಮತ್ತೆ ಬಂಧಿಸಲಾಯಿತು. .
ಸುಮಾರು ಒಂದು ತಿಂಗಳಲ್ಲಿ ಮೂರನೇ ಬಾರಿಗೆ ಫಹಾದ್‌ರ ಬಂಧನವಾದ ನಂತರ, ಪತ್ರಕರ್ತರ ಹಕ್ಕುಗಳನ್ನು ರಕ್ಷಿಸಲಿರುವ US ಮಾಧ್ಯಮ ವಕೀಲರ ಗುಂಪು ‘ರಾಷ್ಟ್ರೀಯ ಭದ್ರತೆಯ ಹೆಸರಿನಲ್ಲಿ ಪತ್ರಿಕೋದ್ಯಮವನ್ನು ಕ್ರಮಿನಲೈಸ್ ಮಾಡುವುದನ್ನು ನಿಲ್ಲಿಸುವಂತೆ’ ಭಾರತೀಯ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
ವಕೀಲರು, ನಾಗರಿಕ ಸಮಾಜದ ಹೋರಾಟಗಾರರು ಮತ್ತು ಪತ್ರಕರ್ತರ ಹಕ್ಕುಗಳ ವಕೀಲರ ಸಂಘಟನಾಕಾರರಾದ ಮತ್ತು ‘ಫ್ರೀ ಸ್ಪೀಚ್ ಕಲೆಕ್ಟಿವ್’ ನ ಸ್ಥಾಪಕರಾದ ಗೀತಾ ಶೇಷು, , ಫಹಾದ್‌ರ ಪುನರಾವರ್ತಿತ ಬಂಧನವು “ತನ್ನ ಪತ್ರಿಕೋದ್ಯಮ ಕರ್ತವ್ಯಗಳನ್ನು ನಿರ್ವಹಿಸದಂತೆ ಮಾಡಲು ಅವರನ್ನು ಮೌನವಾಗಿ ಮತ್ತು ಕಂಬಿಯ ಹಿಂದೆ ಇರಿಸುವ ಪ್ರಯತ್ನವಾಗಿದೆ ಇದು” ಎಂದು ಹೇಳಿದ್ದಾರೆ. “ನಾವು ಪೋಲೀಸರ ಆರೋಪಗಳನ್ನು ನಂಬುವುದಾದರೂ, ಕಳೆದ ವರ್ಷ ಪ್ರಕರಣಗಳು ದಾಖಲಾಗಿದ್ದರೆ ಅವರು ಆಗಲೇ ಆತನನ್ನು ಯಾಕೆ ಬಂಧಿಸಲಿಲ್ಲ? ಕಳೆದ ಎರಡು ವರ್ಷಗಳಲ್ಲಿ ಅವರು ಏನು ಮಾಡುತ್ತಿದ್ದರು? ಅವರು ಪತ್ರಕರ್ತರಾಗಿ ಕಾರ್ಯನಿರ್ವಹಿಸುವುದನ್ನು ಅವರು ಬಯಸುವುದಿಲ್ಲ ಎಂಬುದು ಅವರ ನಡವಳಿಕೆಯಿಂದ ಸ್ಪಷ್ಟವಾಗುತ್ತದೆ ” ಎಂದಿದ್ದಾರೆ.
ಸ್ವೀಡನ್ ಮೂಲದ ಪ್ರಮುಖ ಶಿಕ್ಷಣತಜ್ಞ ಅಶೋಕ್ ಸ್ವೈನ್, ಫಹಾದ್ ಬಂಧನವು ಸರ್ಕಾರವು ‘ಅಂತರರಾಷ್ಟ್ರೀಯ ಕಾರ್ಯಸೂಚಿಯಿಂದ ಕಾಶ್ಮೀರವನ್ನು ಹೊರಗಿಡಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತಿದೆ ಎಂಬುವುದನ್ನು ವಿವರಿಸುತ್ತದೆ ಎಂದು ಹೇಳಿದರು. ಸರ್ಕಾರವು ಕಾಶ್ಮೀರದ ಯಾವುದೇ ಸ್ವತಂತ್ರ ವರದಿಯನ್ನು ನಿಗ್ರಹಿಸಲು ಬಯಸುತ್ತದೆ ಎಂದಿದ್ದಾರೆ. “ಕಾಶ್ಮೀರದಲ್ಲಿ ಪತ್ರಕರ್ತರು ಮತ್ತು ಅವರ ಕುಟುಂಬದ ಸದಸ್ಯರ ಪುನರಾವರ್ತಿತ ಬಂಧನ ಮತ್ತು ಕಿರುಕುಳವು ಭಯದ ವಾತಾವರಣವನ್ನು ಸೃಷ್ಟಿಸುವ ಗುರಿಯನ್ನು ಹೊಂದಿದೆ.ಇದರಿಂದಾಗಿ ಸ್ಥಳೀಯ ಸ್ವತಂತ್ರ ಪತ್ರಿಕೋದ್ಯಮವು ಸಾಯುತ್ತದೆ. ಇದು ಕಾಶ್ಮೀರವನ್ನು ಹೆಚ್ಚು ಪಕ್ಷಪಾತ ಮತ್ತು ರಾಷ್ಟ್ರೀಯತೆಯ ಪ್ರಿಸ್ಮ್ ಮೂಲಕ ವರದಿ ಮಾಡಲು ಸಹಾಯ ಮಾಡುತ್ತದೆ ಮತ್ತು ಕಾಶ್ಮೀರದಲ್ಲಿ ‘ಎಲ್ಲವೂ ಚೆನ್ನಾಗಿದೆ’ ಎಂದು ಜಗತ್ತನ್ನು ಮೂರ್ಖರನ್ನಾಗಿಸಲು ಸಹಾಯ ಮಾಡುತ್ತದೆ ಎಂದು ಅವರು ಭಾವಿಸುತ್ತಾರೆ” ಎಂದು ಉಪ್ಸಲಾ ವಿಶ್ವವಿದ್ಯಾಲಯದ ಶಾಂತಿ ಮತ್ತು ಸಂಘರ್ಷದ ಅಧ್ಯಯನಗಳ ಪ್ರಾಧ್ಯಾಪಕ ಅಶೋಕ್ ‘ದಿ ವೈರ್’ಗೆ ಹೇಳಿದ್ದಾರೆ.
“ಶೀಘ್ರವಾಗಿ ಹೆಚ್ಚುತ್ತಿರುವ ಪತ್ರಕರ್ತರ ಬಂಧನಗಳು ಪತ್ರಿಕಾ ಸ್ವಾತಂತ್ರ್ಯ ಮತ್ತು ಸರ್ಕಾರದ ಶಾಂತಿಯುತ ಟೀಕೆಗಾಗಿ ಭಾರತದ ಸಂಪೂರ್ಣ ಅಸಹಿಷ್ಣುತೆಯನ್ನು ಪ್ರತಿಬಿಂಬಿಸುತ್ತದೆ” ಎಂದು ಪತ್ರಕರ್ತರನ್ನು ರಕ್ಷಿಸುವ ಸಮಿತಿಯು (CPJ)ಯ ಕಾರ್ಯಕ್ರಮ ನಿರ್ದೇಶಕ ಕಾರ್ಲೋಸ್ ಮಾರ್ಟಿನೆಜ್ ಡೆ ಲಾ ಸೆರ್ನಾ ತಮ್ಮ ನ್ಯೂಯಾರ್ಕ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. “ಅಧಿಕಾರಿಗಳು ತಕ್ಷಣ ಫಹಾದ್ ಷಾ ಅವರನ್ನು ಬಿಡುಗಡೆ ಮಾಡಬೇಕು, ಅವರ ಪತ್ರಿಕೋದ್ಯಮದ ಕೆಲಸದ ಮೇಲಿನ ತನಿಖೆಗಳನ್ನು ಕೈಬಿಡಬೇಕು ಮತ್ತು ಪತ್ರಿಕೋದ್ಯಮದ ಹೆಚ್ಚುತ್ತಿರುವ ಅಪರಾಧೀಕರಣವನ್ನು ಹಿಮ್ಮೆಟ್ಟಿಸಲು ಕ್ರಮಗಳನ್ನು ತೆಗೆದುಕೊಳ್ಳಬೇಕು” ಎಂದು ಹೇಳಿಕೆ ನೀಡಲಾಗಿದೆ.
ಫಹಾದ್ ಬಂಧನದ ನಂತರದ ಸಂಪಾದಕೀಯದಲ್ಲಿ, ಇಂಡಿಯನ್ ಎಕ್ಸ್‌ಪ್ರೆಸ್, ನವದೆಹಲಿಯಿಂದ ನಡೆಸಲ್ಪಡುವ J&K ಆಡಳಿತವು “ಪತ್ರಕರ್ತರಿಗೆ ಸಮನ್ಸ್ ನೀಡುವ ಮೂಲಕ ಬೆದರಿಕೆ ಹಾಕುತ್ತಿದೆ, ಅವರ ವರದಿಗಳ ಬಗ್ಗೆ ಪ್ರಶ್ನಿಸುತ್ತಿದೆ, UAPA, PSA ಮತ್ತು ದೇಶದ್ರೋಹದ ಬೆದರಿಕೆಯನ್ನು ಅವರ ತಲೆಯ ಮೇಲೆ ಹಾಕಲಾಗುತ್ತಿದೆ” ಎಂದು ಆರೋಪಿಸಿದೆ. “ಇಂಹ ಸಂದರ್ಭಗಳಲ್ಲಿ ನ್ಯಾಯಾಲಯಗಳು ಮಧ್ಯಪ್ರವೇಶಿಸಬೇಕು ಮತ್ತು ಪತ್ರಕರ್ತರು ಮತ್ತು ಪತ್ರಿಕೋದ್ಯಮದ ಮೇಲಿನ ದಾಳಿಯು ಪ್ರಜಾಪ್ರಭುತ್ವದ ಮೇಲಿನ ದಾಳಿಯಾಗಿದೆ ಎಂಬ ಬಲವಾದ ಸಂದೇಶವನ್ನು ಕಳುಹಿಸಬೇಕು” ಎಂದು ಅದು ಮಾರ್ಚ್ 10 ರಂದು ಹೇಳಿದೆ.
“ಪ್ರಕರಣದ ಇತ್ತೀಚಿನ ಬೆಳವಣಿಗೆಗಳಿಂದ ಫಹಾದ್ ಅವರ ಕುಟುಂಬ ಮತ್ತು ಕಾಶ್ಮೀರ ವಾಲಾ ತಂಡವು ಆಘಾತಕ್ಕೊಳಗಾಗಿದೆ” ಎಂದು ಜೆ & ಕೆ ಪೊಲೀಸರು ಎರಡನೇ ಬಾರಿಗೆ ಫಹಾದ್ ವಿರುದ್ಧ ಭಯೋತ್ಪಾದನಾ ವಿರೋಧಿ ಕಾನೂನನ್ನು ಜಾರಿಗೊಳಿಸಿದ ನಂತರ ಅವರ ನ್ಯೂಸ್ ಪೋರ್ಟಲ್ ಬರೆದಿದೆ. “ಆದರೆ ನಾವು ನ್ಯಾಯಾಂಗದಲ್ಲಿ ನಂಬಿಕೆಯನ್ನು ಕಳೆದುಕೊಳ್ಳುವುದಿಲ್ಲ. ತಂಡವು ಫಹಾದ್ ಮತ್ತು ಅವರ ಕುಟುಂಬದ ಪರವಾಗಿ ನಿಂತಿರುವುದರಿಂದ, ಮನೋಜ್ ಸಿನ್ಹಾ ನೇತೃತ್ವದ ಜಮ್ಮು ಮತ್ತು ಕಾಶ್ಮೀರ ಆಡಳಿತಕ್ಕೆ ಫಹಾದ್ ಅವರನ್ನು ತಕ್ಷಣ ಬಿಡುಗಡೆ ಮಾಡುವಂತೆ ನಾವು ನಮ್ಮ ಮನವಿಯನ್ನು ಪುನರ್ಸಲ್ಲಿಸುತ್ತೇವೆ. ಮತ್ತು ಅವರು ಶೀಘ್ರದಲ್ಲೇ ಸುದ್ದಿಮನೆಗೆ ಮರಳುತ್ತಾರೆ ಎಂದು ನಾವು ನಿಜವಾಗಿಯೂ ಭಾವಿಸುತ್ತೇವೆ” ಎಂದು ಬರೆದುಕೊಂಡಿದೆ.
ಅನೇಕ ಹೋರಾಟಗಾರರು ಮತ್ತು ಪತ್ರಕರ್ತರು ಕೂಡ ಫಹಾದ್ ಬೆಂಬಲಕ್ಕೆ ನಿಂತಿದ್ದಾರೆ ಮತ್ತು ಬಿಡುಗಡೆಗೆ ಒತ್ತಾಯಿಸಿದ್ದಾರೆ. “ಸತ್ತ ಪತ್ರಕರ್ತರು ಹೆಚ್ಚು ಮೌಲ್ಯಯುತರು, ಅಲ್ಲವೇ? ಏಕೆಂದರೆ ಅವರು ಬದುಕಿರುವಾಗ ನಾವು ಕಾಳಜಿ ತೋರುವುದಿಲ್ಲ. ಸಿದ್ದಿಕ್ ಕಪ್ಪನ್, ಫಹಾದ್ ಶಾ ಇಬ್ಬರೂ ತಮ್ಮ ಕೆಲಸವನ್ನು ಮಾಡಿದ್ದಕ್ಕಾಗಿ ಬಂಧಿತರಾಗಿದ್ದಾರೆ ಮತ್ತು ನಮ್ಮ ಸಾಮೂಹಿಕ ಖಂಡನೆ ಸಾಕಷ್ಟು ಜೋರಾಗಿಲ್ಲ. ಆದ್ದರಿಂದ ಈ ಅನ್ಯಾಯ ಅವರಿಬ್ಬರಿಗೇ ಸೀಮಿತವಾಗುವುದಿಲ್ಲ” ಎಂದು ಹಿರಿಯ ಪತ್ರಕರ್ತೆ ರಾಣಾ ಅಯೂಬ್ ಟ್ವೀಟ್ ಮಾಡಿದ್ದಾರೆ.













