ಮಾರ್ಚ್ 12ರ ಶನಿವಾರ ಮುಂಜಾನೆ ಈಶಾನ್ಯ ದೆಹಲಿಯ ಗುಡಿಸಲೊಂದರಲ್ಲಿ ಬೃಹತ್ ಬೆಂಕಿ ಕಾಣಿಸಿಕೊಂಡು ಮೂವರು ಮಕ್ಕಳು ಮತ್ತು ಗರ್ಭಿಣಿ ಮಹಿಳೆ ಸೇರಿದಂತೆ ಏಳು ಮಂದಿ ಸಾವನಪ್ಪಿದ್ದಾರೆ ಎಂದು ದಿ ವೈರ್ ವರದಿ ಮಾಡಿದೆ. ಪ್ರಾಥಮಿಕ ತನಿಖೆಯ ಪ್ರಕಾರ, ಸಿಗರೇಟ್ ಕಿಡಿ ಅಥವಾ ಬೀಡಿಯ ಕಿಡಿಯಿಂದಾಗಿ ಬೆಂಕಿ ಕಾಣಿಸಿಕೊಂಡಿರಬಹುದು ಎಂದು ಸೂಚಿಸುತ್ತದೆ.
ಗುಡಿಸಲ ಹಿಂದೆ ಕೆಲವು ರಟ್ಟಿನ ಹಲಗೆಗಳಿದ್ದು, ಯಾರೋ ಸಿಗರೇಟ್ ಅಥವಾ ಬೀಡಿಯನ್ನು ಸೇದಿ ಎಸೆದರಿಂದ ಬೆಂಕಿ ಹೊತ್ತಿರಬಹುದು ಎಂದು ಶಂಕಿಸಲಾಗಿದೆ ಎಂದು ವಿಧಿವಿಜ್ಞಾನ ಅಧಿಕಾರಿಗಳು ತಿಳಿಸಿದ್ದಾರೆ.
ರೋಷನ್ (13) ಮತ್ತು ಅವರ ಸಹೋದರಿ ದೀಪಿಕಾ (9) ಮತ್ತು ಒಂದೇ ಕುಟುಂಬದ ಐವರು – ಬಬ್ಲೂ (32), ರಂಜಿತ್ (25), ರೇಷ್ಮಾ (18), ಪ್ರಿಯಾಂಕಾ (20) ಮತ್ತು ಶಹನ್ಶಾ (10) ಎಂಬುವವರ ಸಾವನಪ್ಪಿದ್ದರೆ ಎಂದು ತಿಳಿದುಬಂದಿದೆ. ಗೋಕುಲ್‌ಪುರಿ ಗ್ರಾಮದಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಸುಮಾರು 1:03 ಕ್ಕೆ ಈ ಬಗ್ಗೆ ಮಾಹಿತಿ ಬಂತು ಎಂದು ದೆಹಲಿ ಅಗ್ನಿಶಾಮಕ ಸೇವೆಗಳ (DFS) ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪ್ರಿಯಾಂಕಾ ಐದು ತಿಂಗಳ ಗರ್ಭಿಣಿ ಎಂದು ಸಂಬಂಧಿಕರು ಹೇಳಿದ್ದಾರೆ. ಘಟನೆಯಲ್ಲಿ ಗಾಯಗೊಂಡವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಘಟನೆಯ ಕುರಿತು, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಸಂತಾಪ ಸೂಚಿಸಿದ್ದಾರೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಘಟನೆಯಲ್ಲಿ ಮೃತಪಟ್ಟ ವಯಸ್ಕರ ಕುಟುಂಬಕ್ಕೆ 10 ಲಕ್ಷ ರೂಪಾಯಿ ಮತ್ತು ಮಕ್ಕಳ ಸಾವಿನಪ್ಪಿದಕ್ಕೆ ತಲಾ 5 ಲಕ್ಷ ರೂಪಾಯಿ ಪರಿಹಾರವನ್ನು ಘೋಷಿಸಿದ್ದಾರೆ. ಗುಡಿಸಲುಗಳು ನಾಶವಾದವರಿಗೆ ದೆಹಲಿ ಸರ್ಕಾರ 25,000 ರೂಪಾಯಿ ಆರ್ಥಿಕ ನೆರವು ನೀಡಲಿದೆ.
ಹದಿಮೂರು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿದ್ದು, ಬೆಳಗಿನ ಜಾವ 4 ಗಂಟೆ ಸುಮಾರಿಗೆ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಯಿತು ಎಂದು ಡಿಎಫ್‌ಎಸ್ ಅಧಿಕಾರಿ ತಿಳಿಸಿದ್ದಾರೆ.
“ನಾವು ನಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡಿದ್ದೇವೆ ಎಂಬ ಮಾತೇ ನಮ್ಮನ್ನು ಕುಸಿದು ಬೀಳುವಂತೆ ಮಾಡಿತು. ಮಾತ್ರವಲ್ಲದೆ ನಾವು ಉಳಿಸಿದ್ದ ಹಣ ಮತ್ತು ಆಭರಣಗಳನ್ನು ಸಹ ಕಳೆದುಕೊಂಡಿದ್ದೇವೆ, ”ಎಂದು ಮೃತರ ಕುಟುಂಬದ ಸದಸ್ಯರಲ್ಲಿ ಒಬ್ಬರು ಹೇಳಿದರು.
ರೋಷನ್ ಮತ್ತು ದೀಪಿಕಾ ಅವರ ಅಜ್ಜ ಸಂತು ಮಾತನಾಡಿ, “ನಾವು ರಾತ್ರಿ 10.30 ರ ಸುಮಾರಿಗೆ ಮಲಗಲು ಹೋದೆವು ಮತ್ತು ಶನಿವಾರ ಮಧ್ಯರಾತ್ರಿ 12.30 ರ ಸುಮಾರಿಗೆ ಈ ಘಟನೆ ನಡೆದಿದೆ. ಬೆಂಕಿ ಹೇಗೆ ಮತ್ತು ಎಲ್ಲಿಂದ ಬಂತು ಎಂದು ನಮಗೆ ತಿಳಿದಿಲ್ಲ ಎಂದು ಹೇಳಿದ್ಧಾರೆ.