ಬಹು ನಿರೀಕ್ಷಿತ ಬಿಬಿಎಂಪಿ ಆಯವ್ಯಯ ಮಂಡನೆಗೆ ಕೊನೆಗೂ ಮುಹೂರ್ತ ಫಿಕ್ಸ್ ಆಗಿದೆ. ಇದೇ ತಿಂಗಳ 28ರಂದು ಪಾಲಿಕೆ ಬಜೆಟ್ ಗೆ ಮುಹೂರ್ತ ನಿಗದಿ ಮಾಡಲಾಗಿದೆ ಎಂದು ಪಾಲಿಕೆಯ ವಿಶ್ವಾಸಾರ್ಹ ಮೂಲಗಳಿಂದ ಮಾಹಿತಿ ಸಿಕ್ಕಿದೆ. ಬಿಬಿಎಂಪಿಯ ಹಣಕಾಸು ವಿಭಾಗದ ವಿಶೇಷ ಆಯುಕ್ತೆ ತುಳಸಿ ಮದ್ದಿನೇನಿಯಿಂದ ಬಜೆಟ್ ಮಂಡನೆಯಾಗಲಿದೆ. ಈ ಬಾರಿಯೂ ಕೂಡ ಬಜೆಟ್ ವೀಕ್ಷಣೆಗೆ ಸಾರ್ವಜನಿಕರಿಗೆ ಅವಕಾಶವಿಲ್ಲ. ಬದಲಿಗೆ ಕಳೆದ ಬಾರಿಯಂತೆ ಬಾರಿಯೂ ಕೂಡ ಆನ್ ಲೈನ್ ಮುಖಾಂತರವೇ ಆಯವ್ಯಯ ಮಂಡನೆಯಾಗಲಿದೆ. ಕೂಡಿ ಕಳೆದು ಬಜೆಟ್ ನ ಲೆಕ್ಕಾಚಾರ ಕಾರ್ಯವನ್ನು ಪಾಲಿಕೆ ಅಧಿಕಾರಿಗಳು ಮುಗಿಸಿದ್ದಾರೆ.
ಯಾವುದಕ್ಕೆ ಎಷ್ಟೆಷ್ಟು.. ಹೇಗಿರಲಿದೆ ಈ ಬಾರಿಯ ಬಿಬಿಎಂಪಿ ಬಜೆಟ್.!?
ಪ್ರಸಕ್ತ ಸಾಲಿನ ಬಜೆಟ್ ನಲ್ಲಿ ಬೆಂಗಳೂರಿಗೆ ಯಾವುದೇ ಹೊಸ ಯೋಜನೆ ಘೋಷಿಸದೇ ಇರಲು ಪಾಲಿಕೆ ನಿರ್ಧರಿಸಿದೆ. ಈ ಹಿಂದೆ ಜನ ಪ್ರತಿಪ್ರತಿನಿಧಿಗಳು ಜಾರಿ ಮಾಡಿದ್ದ ಕೆಲ ಯೋಜನೆಗಳಿಗೆ ಈ ಬಾರಿಯ ಬಜೆಟ್‌ನಲ್ಲಿ ಬ್ರೇಕ್ ಸಿಗಲಿದೆ. ಪಿಂಕ್ ಬೇಬಿ, ಮಹಾಲಕ್ಷ್ಮಿ ಯೋಜನೆಗೆ ಈ ಬಾರಿಯ ಬಜೆಟ್‌ಗೆ ಸೇರಿಸದೇ ಇರಲು ಪಾಲಿಕೆ ತೀರ್ಮಾನಿಸಿದೆ. ಇನ್ನು ಪಾಲಿಕೆ ಜಾರಿ ಮಾಡಿದ್ದ ಹಿಂದಿನ ಕೆಲ ಯೋಜನೆಗಳ ಪುನರಾವರ್ತನೆಗೆ ಬಿಬಿಎಂಪಿ ಚಿಂತಿಸಿದೆ. ಪಾಲಿಕೆಯಿಂದ ಹಲವು ಸಂಘ ಸಂಸ್ಥೆಗಳಿಗೆ ನೀಡಲಾಗುತ್ತಿದ್ದ ಅನುದಾನವನ್ನೂ ಈ ಬಾರಿ ಕೈ ಬಿಡಲಾಗಿದೆ. ಪ್ರಮುಖವಾಗಿ ರಾಜ್ಯ ಸರ್ಕಾರದಿಂದ ಯಾವುದೇ ಅನುದಾನ ದೊರಕೇ ಇದ್ದ ಕಾರಣ ಈ ಬಾರಿಯೂ ಕೂಡ ಬಜೆಟ್ ನಲ್ಲಿ ಪಾಲಿಕೆಯೇ ಇಂದಿರಾ ಕ್ಯಾಂಟೀನ್ ಹೊರೆ ಹೊರಬೇಕಿದೆ. ಇದರ ಜೊತೆಗೆ ಕಸ ವಿಲೇವಾರಿಗೆ ರಾಜ್ಯ ಸರ್ಕಾರದಿಂದ ಯಾವುದೇ ಅನುದಾನ ಬರದ ಹಿನ್ನೆಲೆ ಪ್ರಸಕ್ತ ಸಾಲಿನಲ್ಲಿ ಕಸ ವಿಲೇವಾರಿಯೂ ಕೂಡ ಸಂಪೂರ್ಣ ಜವಾಬ್ದಾರಿ ಪಾಲಿಕೆಯದ್ದಾಗಿರಲಿದೆ. ಹೀಗಾಗಿ ಈ ಬಜೆಟ್ ನಲ್ಲಿ ಅತಿ ಹೆಚ್ಚು ಅನುದಾನ ಕಸ ವಿಲೇವಾರಿಗೆ ಮೀಸಲಾಗುವ ಸಾಧ್ಯತೆ ಇದೆ. ಅಂದಹಾಗೆ, 2022-23ರ ಸಾಲಿನಲ್ಲಿ ಇಂದಿರಾ ಕ್ಯಾಂಟೀನ್ ಗೆ ಪಾಲಿಕೆ 50 ಕೋಟಿ ಅನುದಾನವಿಟ್ಟತ್ತು.
ಈ ಬಜೆಟ್ ನಲ್ಲಿ ರಸ್ತೆ ಅಭಿವೃದ್ಧಿ, ಶಿಕ್ಷಣ, ಆರೋಗ್ಯಕ್ಕೆ ಹೆಚ್ಚಿನ ಹೊತ್ತು !
ಪ್ರಮುಖವಾಗಿ ಈ ಸಾಲಿನ ಬಿಬಿಎಂಪಿ ಬಜೆಟ್‌ನಲ್ಲಿ ರಸ್ತೆ ಅಭಿವೃದ್ಧಿ, ಶಿಕ್ಷಣ, ಆರೋಗ್ಯಕ್ಕೆ ಹೆಚ್ಚಿನ ಹೊತ್ತು ನೀಡಲಾಗಿದೆ. ಜೊತೆಗೆ ಕೆರೆ, ರಾಜಕಾಲುವೆ, ಪಾರ್ಕ್ ಗಳ ಉನ್ನತ್ತೀಕರಣಕ್ಕೆ ಪಾಲಿಕೆ ಈ ಬಾರಿ ಗಮನ ಹರಿಸಲಿದೆ. ತಜ್ಞರ ಪ್ರಕಾರ ಕೋವಿಡ್ ನಾಲ್ಕನೇ ಅಲೆ ಏಪ್ರಿಲ್ ಮೂರನೇ ವಾರದಲ್ಲಿ ಸೂಚನೆ ಇದ್ದರೂ, ಬಿಡಿಗಾಸನ್ನು ಈ ಬಾರಿಯ ಬಜೆಟ್ ನಲ್ಲಿ ಪಾಲಿಕೆ ಮೀಸಲಿಟ್ಟಿಲ್ಲ.
ಬಿಬಿಯಿಂದ ಈ ಬಾರಿ 10,500 ಕೋಟಿ ಗಾತ್ರದ ಬಜೆಟ್ ಮಂಡನೆಯ ನಿರೀಕ್ಷೆ !
ಪಾಲಿಕೆ ಚುನಾವಣೆ ನಡೆದರೆ ಕೇಂದ್ರ ಕಚೇರಿ ದುರಸ್ತಿ ಮಾಡಲು 17 ಕೋಟಿ ಮೀಸಲಿಡಲಾಗಿದೆ. ಕೆಂಪೇಗೌಡ ಜಯಂತಿ, ಕರಗ ಮಹೋತ್ಸವ, ಅಂಬೇಡ್ಕರ್ ಜಯಂತಿಗೂ ಕೋಟಿ ಕೋಟಿ ಈ ಬಾರಿ ಅನುದಾನ ಸಿಗಲಿದೆ. ಪ್ರತಿ ಬಾರಿಯಂತೆ ಈ ಬಾರಿಯ ಬಜೆಟ್ ನಲ್ಲೂ ಪಾಲಿಕೆಯಿಂದ ಕುಡಿಯುವ ನೀರಿಗೆ ಹೆಚ್ಚಿನ ಆಧ್ಯತೆ ನೀಡಲಾಗಿದೆ. ಪಾಲಿಕೆ ವ್ಯಾಪ್ತಿಯ ಹೊಸ 110 ಹಳ್ಳಿಗಳಿಗೆ ಕಾವೇರಿ ನೀರು ಸರಬರಾಜಿಗೆ ಹೆಚ್ಚಿನ ಒತ್ತು ಕೊಡಲಾಗಿದೆ. ಆರ್ಥಿಕ ಸಂಕಷ್ಟದಲ್ಲಿರುವ ಪಾಲಿಕೆಗೆ ಹೊಸ ಯೋಜನೆ ಘೋಷಣೆಗೆ ಹಿಂದೇಟು ಹಾಕಲಾಗಿದೆ. 4,000 ಕೋಟಿ ಆಸ್ತಿ ತೆರಿಗೆಯಿಂದ ಆದಾಯ ಉಳಿದಂತೆ ಜಾಹೀರಾತು, ಖಾತಾ ವರ್ಗಾವಣೆ ಶುಲ್ಕ ಸೇರಿದಂತೆ ಇತರೆ ಮೂಲಗಳಿಂದ 2,000 ಕೋಟಿ ಆದಾಯ ಸೇರಿದಂತೆ ಒಟ್ಟು ಪಾಲಿಕೆಯಿಂದ ಪ್ರಸಕ್ತ ಸಾಲಿನಲ್ಲಿ 6,000 ಕೋಟಿ ಆದಾಯ ಸಂಗ್ರಹ ಮಾಡಲಾಗಿದೆ. ಉಳಿದಂತೆ ರಾಜ್ಯ ಸರ್ಕಾರದಿಂದ 4,000 – 4,500 ಕೋಟಿ ಅನುದಾನದ ನಿರೀಕ್ಷೆಯಲ್ಲಿದೆ ಬಿಬಿಎಂಪಿ. ಒಟ್ಟು ಈ ಬಾರಿ 10,500 ಕೋಟಿ ಗಾತ್ರದ ಬಜೆಟ್ ಮಂಡನೆಯ ನಿರೀಕ್ಷೆ ಇಡಲಾಗಿದೆ.
ಈ ಬಾರಿಯ ಬಜೆಟ್ ನಲ್ಲಿ ಸಿಲಿಕಾನ್ ಸಿಟಿ ಜನರಿಗೆ ಆಸ್ತಿ ತೆರಿಗೆ ಹೊರೆ ಇಲ್ಲ !
ಇನ್ನು ಈ ಬಾರಿಯೂ ಕೂಡ ಆಸ್ತಿ ತೆರಿಗೆ ಹೆಚ್ಚಿಸದೇ ಇರಲು ಪಾಲಿಕೆ ನಿರ್ಧರಿಸಿದೆ. ಪಾಲಿಕೆ ಚುನಾವಣೆ ದೃಷ್ಟಿಯಿಂದ ಆಸ್ತಿ ತೆರಿಗೆ ಏರಿಕೆ ಮಾಡದಂತೆ ಈ ಹಿಂದೆ ಸಿಎಂ ಸೂಚನೆ ನೀಡಿದ್ದರು. ಮಾರ್ಚ್ 28ರಂದು ಬಜೆಟ್ ಮಂಡನೆಗೆ ಅನುಮತಿ ಕೋರಿ ಸಿಎಂಗೆ ಪ್ರಸ್ತಾವನೆ ಕೊಡಲಾಗಿದೆ. ಸಿಎಂ ಬೊಮ್ಮಾಯಿ ಒಪ್ಪಿಗೆ ಬೆನ್ನಲ್ಲೇ ಪಾಲಿಕೆ ಬಜೆಟ್ ಮಂಡನೆಯ ದಿನಾಂಕವನ್ನು ಅಧಿಕೃತವಾಗಿ ಪ್ರಕಟಿಸಲಿದೆ.