• Home
  • About Us
  • ಕರ್ನಾಟಕ
Thursday, July 10, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಅಂಕಣ ಅಭಿಮತ

ಅಖಂಡ ಭಾರತದ ಮೂರು ಆಯಾಮಗಳೂ ಮೂರು ದಿಕ್ಕುಗಳೂ

ನಾ ದಿವಾಕರ by ನಾ ದಿವಾಕರ
March 8, 2022
in ಅಭಿಮತ
0
ಅಖಂಡ ಭಾರತದ ಮೂರು ಆಯಾಮಗಳೂ ಮೂರು ದಿಕ್ಕುಗಳೂ
Share on WhatsAppShare on FacebookShare on Telegram

ಭಾರತ ಭೌಗೋಳಿಕವಾಗಿ ಒಂದು ಅಖಂಡ ರಾಷ್ಟ್ರವಾಗಿ ತನ್ನ ಏಕತೆ ಮತ್ತು ಅಖಂಡತೆಯನ್ನು ಕಾಪಾಡಿಕೊಂಡು ಬಂದಿದ್ದರೂ, ವಸಾಹತು ಆಳ್ವಿಕೆಯಿಂದ ವಿಮೋಚನೆ ಪಡೆದು 75 ಸಂವತ್ಸರಗಳನ್ನು ಪೂರೈಸುತ್ತಿರುವ ಹೊತ್ತಿನಲ್ಲೂ ಈ ದೇಶದಲ್ಲಿ ಎರಡು ಭಾರತಗಳನ್ನು ಕಾಣಬಹುದು. ಗ್ರಾಮೀಣ-ನಗರ, ಕಡುಬಡವ-ಅತಿಶ್ರೀಮಂತ, ಸುಶಿಕ್ಷಿತ-ಅನಕ್ಷರಸ್ಥ, ಶೋಷಿತ-ಶೋಷಕ, ವಂಚಿತ-ಅಧಿಕಾರಸ್ಥ ಹೀಗೆ ವಿಂಗಡಿಸುತ್ತಾ ಹೋದರೆ ಅಮೃತ ಕಾಲದತ್ತ ಸಾಗುತ್ತಿರುವ ಭಾರತದಲ್ಲಿ ಹಲವು ಭಾರತಗಳು ಕಾಣುತ್ತವೆ. ನಮ್ಮ ಕಣ್ಣೋಟ ಮತ್ತು ಮುನ್ನೋಟದ ಮಸೂರಗಳು ನಮ್ಮ ಅಭಿಪ್ರಾಯವನ್ನೂ ರೂಪಿಸುತ್ತವೆ. ದೇಶವನ್ನು ಪ್ರೀತಿಸುವುದು ಅಥವಾ ದೇಶಭಕ್ತಿಯನ್ನು ಪ್ರದರ್ಶಿಸುವುದು ಒಂದು ಫ್ಯಾಷನ್ ಆಗಿರುವ ಸಮಕಾಲೀನ ಸಂದರ್ಭದಲ್ಲಿ ಆಡಳಿತಾರೂಢ ಪಕ್ಷವನ್ನು ಅಥವಾ ಪ್ರಧಾನಮಂತ್ರಿಯನ್ನು ದೇಶ ಎಂಬ ಪರಿಕಲ್ಪನೆಗೆ ಸಮೀಕರಿಸುವ ವಿಕೃತ ಧೋರಣೆಗೆ ನಾವು ತೊಟ್ಟ ಮಸೂರಗಳೇ ಕಾರಣವಾಗುತ್ತವೆ.

ADVERTISEMENT

ಸಮಷ್ಟಿ ಪ್ರಜ್ಞೆ ಇಲ್ಲದ ದೇಶಪ್ರೇಮ ಆಡಂಭರ ಎನಿಸಿಕೊಳ್ಳುತ್ತದೆ. ಭೌಗೋಳಿಕವಾಗಿ ರೂಪಿಸಲ್ಪಟ್ಟ ಗಡಿರೇಖೆಗಳೊಳಗೆ ಬಂಧಿಸಲ್ಪಟ್ಟ ಒಂದು ಭೂ ವಲಯ ದೇಶ ಎನಿಸಿಕೊಳ್ಳಬೇಕಾದರೆ, ಆ ಭೂಮಿಯಲ್ಲಿ ತಮ್ಮ ಬದುಕು ಸವೆಸುವ ಕೋಟ್ಯಂತರ ಜನರ ಬದುಕಿನಲ್ಲಿ ಸಮನ್ವಯ, ಸಮಾನತೆ, ಸೌಹಾರ್ದತೆ ಮತ್ತು ಭ್ರಾತೃತ್ವ ಜೀವಂತಿಕೆಯಿಂದಿರಬೇಕು. ದುರಂತ ಎಂದರೆ, ಒಂದು ಸಂಸ್ಥಾನ ಅಥವಾ ಸಾಮ್ರಾಜ್ಯವನ್ನು ರಾಜನೊಡನೆ ಸಮೀಕರಿಸುವ ಊಳಿಗಮಾನ್ಯ ಧೋರಣೆ ಭಾರತೀಯ ಸಮಾಜದಲ್ಲಿ ಇಂದಿಗೂ ಜೀವಂತಿಕೆಯಿಂದಿದೆ. ಹಾಗಾಗಿಯೇ ಸರ್ಕಾರದ ಅಥವಾ ಪ್ರಭುತ್ವದ ವಿರುದ್ಧ ದನಿ ಎತ್ತಿದರೆ ಅದನ್ನು ದೇಶದ್ರೋಹ ಎಂದು ಭಾವಿಸಲಾಗುತ್ತದೆ. ತನ್ನ ಹಿತವಲಯದಿಂದಾಚೆಗಿನ ಪ್ರಪಂಚವನ್ನು ಕಣ್ಣೆತ್ತಿಯೂ ನೋಡದ ಈ ದೇಶದ ಪ್ರಬಲ ಸುಶಿಕ್ಷಿತ ಹಿತವಲಯದ ಮಧ್ಯಮ ವರ್ಗ ಈ ಧೋರಣೆಯ ಪ್ರವರ್ತಕ ಶಕ್ತಿಯಾಗಿ ರೂಪುಗೊಳ್ಳುತ್ತಿದೆ.

ಹಾಗಾಗಿಯೇ ಇಲ್ಲಿ ಎರಡು ಭಾರತ ಇದೆ ಎಂದ ಕೂಡಲೇ ದೇಶಪ್ರೇಮಿಗಳ ಆಕ್ರೋಶ ಹೆಚ್ಚಾಗುತ್ತದೆ. ಭೌತಿಕ ಭರತಖಂಡದಲ್ಲಿ ಲೌಕಿಕವಾಗಿ ಎರಡು ಭಾರತಗಳಿರುವುದನ್ನು ಡಾ ಬಿ ಆರ್ ಅಂಬೇಡ್ಕರ್, ರಾಮಮನೋಹರ ಲೋಹಿಯಾ ಸಹ ಗುರುತಿಸಿದ್ದರು, ಭಾರತ ಎಂಬ ಪರಿಕಲ್ಪನೆಯನ್ನು ಭೌಗೋಳಿಕ ರೇಖೆಗಳಲ್ಲಿ ಬಂಧಿಸಿಡುವ ಉನ್ಮತ್ತ ರಾಷ್ಟ್ರೀಯವಾದಿಗಳಿಗೆ ಈ ವ್ಯತ್ಯಾಸ ಕಂಡುಬರುವುದು ಸಾಧ್ಯವೇ ಇಲ್ಲ. ಏಕೆಂದರೆ ಇಂದಿಗೂ ಸಹ ಹಿಂದೂ ರಾಷ್ಟ್ರೀಯತೆ ಅಥವಾ ಹಿಂದೂರಾಷ್ಟ್ರದ ಪ್ರವರ್ತಕರ ದೃಷ್ಟಿಯಲ್ಲಿ ಭಾರತದ ಸಾಂಸ್ಕೃತಿಕ ವೈವಿಧ್ಯತೆ ಮತ್ತು ಬಹುತ್ವದ ಪರಿಕಲ್ಪನೆಗಳು ಮಾರ್ಕ್ಸ್ ವಾದಿ ಎಂದೋ ಅಥವಾ ವಿದೇಶಿ ಚಿಂತನೆ ಎಂದೋ ಪರಿಭಾವಿಸಲ್ಪಡುತ್ತದೆ. ಸಮಷ್ಟಿ ಪ್ರಜ್ಞೆಯನ್ನು ನಿರಂತರವಾಗಿ ಸಂಕುಚಿತಗೊಳಿಸುತ್ತಾ ಹಿಂದೂ ಮತದ ಅನುಯಾಯಿಗಳನ್ನು ಮಾತ್ರವೇ ಒಳಗೊಳ್ಳುವ ಹಿಂದುತ್ವ ರಾಜಕಾರಣದಲ್ಲಿ ಇದು ಸಹಜವೇ ಆಗಿದೆ.

21ನೆಯ ಶತಮಾನದ ಭಾರತವನ್ನು “ ಯುವಪೀಳಿಗೆಯ ಭಾರತ ” ಎಂದೇ ಭಾವಿಸಲಾಗುತ್ತದೆ. ವಿಶ್ವ ಸಂಸ್ಥೆಯ ಒಂದು ವರದಿಯ ಅನುಸಾರ ಭಾರತದಲ್ಲಿ 10 ರಿಂದ 24 ವಯಸ್ಸಿನವರ ಸಂಖ್ಯೆ 35 ಕೋಟಿ 60 ಲಕ್ಷದಷ್ಟಿದೆ. ಕೆಲವು ಸಮೀಕ್ಷೆಗಳ ಪೈಕಿ 2011ರಲ್ಲಿ 24 ವಯಸ್ಸಿನೊಳಗಿನ ಪೀಳಿಗೆಯ ಸಂಖ್ಯೆ ಶೇ 51ರಷ್ಟಿದ್ದು, 2036ರ ವೇಳೆಗೆ ಈ ಪ್ರಮಾಣ ಶೇ 34.6ಕ್ಕೆ ಕುಸಿಯಲಿದೆ. ಈ ಯುವ ಪೀಳಿಗೆಗೆ ಕಲ್ಪಿಸಬೇಕಾದ ಭವಿಷ್ಯದ ಹಾದಿಗಳನ್ನು ಗಮನಿಸುವಾಗ ಆತಂಕಕಾರಿ ವಿಚಾರಗಳು ಎದುರಾಗುತ್ತವೆ.  ಯೂನಿಸೆಫ್ ಸಂಸ್ಥೆಯ ಒಂದು ವರದಿಯ ಪ್ರಕಾರ ಭಾರತದ ಶೇ 47ರಷ್ಟು ಯುವ ಪೀಳಿಗೆ 2030ರ ವೇಳೆಗೆ ಸ್ವಂತ ಉದ್ಯೋಗ ಪಡೆಯುವ ಶಿಕ್ಷಣ, ಕೌಶಲ್ಯ, ಸಾಮರ್ಥ್ಯವನ್ನು ಹೊಂದಿರುವುದಿಲ್ಲ. ಇದಕ್ಕೆ ಕಾರಣ ಈ ಬೃಹತ್ ಜನಸಂಖ್ಯೆಗೆ ಅಗತ್ಯವಾದ ಮೂಲ ಸೌಕರ್ಯಗಳ ಕೊರತೆ ಇಂದಿಗೂ ಭಾರತವನ್ನು ಕಾಡುತ್ತಿದೆ. ಈ ಶೇ 47ರ ಪೈಕಿ ಹೆಚ್ಚಿನ ಸಂಖ್ಯೆ ಗ್ರಾಮೀಣ ಪ್ರದೇಶದಿಂದಲೇ ಬಂದಿರುತ್ತಾರೆ, ಸಾಮಾಜಿಕವಾಗಿ ಅವಕಾಶವಂಚಿತರಾಗಿರುತ್ತಾರೆ, ಜಾತಿ ತಾರತಮ್ಯಗಳಿಗೊಳಗಾಗಿರುತ್ತಾರೆ ಎನ್ನುವುದು ಕಟುವಾಸ್ತವ.

ಶಿವಮೊಗ್ಗದಲ್ಲಿ ಹತ್ಯೆಯಾದ ಯುವಕ ಹರ್ಷ

ಸಮಕಾಲೀನ ರಾಜಕೀಯ ಬೆಳವಣಿಗೆಗಳು ಮತ್ತು ದೇಶದಲ್ಲಿ ಬೇರೂರುತ್ತಿರುವ ಮತಾಂಧತೆ, ಜಾತಿ ತಾರತಮ್ಯಗಳು , ದ್ವೇಷ ರಾಜಕಾರಣ ಮತ್ತು ಶೋಷಣೆಯ ಹೊಸ ಸ್ವರೂಪಗಳನ್ನು ಗಮನಿಸಿದಾಗ, ಈ ಬೃಹತ್ ಪ್ರಮಾಣದ ಯುವ ಪೀಳಿಗೆಗೆ ನವ ಭಾರತ ಯಾವ ಮಾರ್ಗಗಳನ್ನು ಸೃಷ್ಟಿಸುತ್ತಿದೆ ಎನ್ನುವುದು ಸ್ಪಷ್ಟವಾಗುತ್ತದೆ. ಇತ್ತೀಚಿನ ಬೆಳವಣಿಗೆಗಳನ್ನೇ ಗಮನಿಸಿದಾಗ ನಮ್ಮ ಮುಂದೆ ಹಲವು ದೃಷ್ಟಾಂತಗಳು ಢಾಳಾಗಿ ಕಾಣುತ್ತವೆ. ರಷ್ಯಾದಿಂದ ಆಕ್ರಮಣಕ್ಕೊಳಗಾಗಿರುವ ಉಕ್ರೇನ್‍ನಲ್ಲಿ ಬಾಂಬ್ ದಾಳಿಯಲ್ಲಿ ನವೀನ್ ಎಂಬ ಯುವಕನ ಸಾವು ಭಾರತದ ಆಡಳಿತ ವ್ಯವಸ್ಥೆಯನ್ನು ಜಾಗೃತಗೊಳಿಸಿದೆ. “ ವೈದ್ಯಕೀಯ ವ್ಯಾಸಂಗಕ್ಕೆ ವಿದೇಶಗಳಿಗೆ ಏಕೆ ಹೋಗುತ್ತೀರಿ ಭಾರತದಲ್ಲೇ ಓದಿ ” ಎಂದು ಹೇಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ, ಸರ್ಕಾರಕ್ಕೆ ವಸ್ತುಸ್ಥಿತಿಯ ಅರಿವು ಇಲ್ಲದಿರುವುದನ್ನು ಪ್ರದರ್ಶಿಸಿದ್ದಾರೆ. ಭಾರತದ 18 ಸಾವಿರ ವಿದ್ಯಾರ್ಥಿಗಳು ಉಕ್ರೇನ್‍ನಲ್ಲಿ ವೈದ್ಯಕೀಯ ವ್ಯಾಸಂಗ ಮಾಡುತ್ತಿರುವುದಾಗಿ ಸರ್ಕಾರದ ಅಧಿಕೃತ ದಾಖಲೆಗಳೇ ಹೇಳುತ್ತವೆ. ಇನ್ನೂ ಹಲವು ಪುಟ್ಟ ದೇಶಗಳಲ್ಲಿ ಭಾರತದ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.

ಈ ಬೃಹತ್ ಪ್ರಮಾಣದ ಯುವ ಪೀಳಿಗೆ ತಾವು ಬಯಸುವ ಜ್ಞಾನಶಿಸ್ತಿನ ಅಧ್ಯಯನಕ್ಕಾಗಿ ವಿದೇಶಕ್ಕೆ ಹೋಗುವುದು, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಹೇಳಿದಂತೆ “ಪರೀಕ್ಷೆಗಳಲ್ಲಿ ಫೇಲ್” ಆಗಿ ಅಲ್ಲ. ಈ ವಿದ್ಯಾರ್ಥಿಗಳಿಗೆ ಇಲ್ಲಿ ಕೈಗೆಟುಕುವಂತಹ ಶಿಕ್ಷಣ ಲಭ್ಯವಿಲ್ಲ. ಭಾರತದಲ್ಲಿ ವೈದ್ಯಕೀಯ ಶಿಕ್ಷಣ ಎನ್ನುವುದು ಸಾಮಾನ್ಯ ಮಧ್ಯಮ ವರ್ಗಗಳಿಗೂ ಗಗನಕುಸುಮವಾಗಿದೆ. ಭಾರತದಲ್ಲಿ 562 ವೈದ್ಯಕೀಯ ಕಾಲೇಜುಗಳಿದ್ದು, ಇವುಗಳ ಪೈಕಿ 286  ಸರ್ಕಾರಿ ಸ್ವಾಮ್ಯದಲ್ಲಿವೆ. 276 ಕಾಲೇಜುಗಳು ಖಾಸಗಿ ಒಡೆತನದಲ್ಲಿವೆ. 2021ರಲ್ಲಿ ಈ ಕಾಲೇಜುಗಳಲ್ಲಿ ಲಭ್ಯವಿರುವ 84869 ವೈದ್ಯಕೀಯ ಸೀಟುಗಳಿಗೆ ಅರ್ಹತೆ ಪಡೆಯಲು 15.4 ಲಕ್ಷ ವಿದ್ಯಾರ್ಥಿಗಳು ನೀಟ್ ಪರೀಕ್ಷೆ ಬರೆದು, 8.7 ಲಕ್ಷ ವಿದ್ಯಾರ್ಥಿಗಳು ಅರ್ಹತೆ ಪಡೆದಿದ್ದಾರೆ. ಅಂದರೆ ವೈದ್ಯಕೀಯ ಶಿಕ್ಷಣ ಬಯಸುವ ವಿದ್ಯಾರ್ಥಿಗಳ ಪೈಕಿ ಶೇ 6ರಷ್ಟು ಮಾತ್ರ ಭಾರತದಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡಲು ಸಾಧ್ಯ. ಇನ್ನುಳಿದ ಶೇ 94ರಷ್ಟು ವಿದ್ಯಾರ್ಥಿಗಳು ಅನ್ಯ ಕೋರ್ಸ್‍ಗಳನ್ನು ಮೊರೆಹೋಗುತ್ತಾರೆ.

ನೀಟ್ ಪರೀಕ್ಷೆಯಲ್ಲಿ ತೇರ್ಗಡೆಯಾಗದಿದ್ದರೆ ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ವೈದ್ಯಕೀಯ ಕೋರ್ಸ್ ಮುಗಿಸಲು ಕನಿಷ್ಠ ಒಂದು ಕೋಟಿ ರೂಗಳಿಗೂ ಹೆಚ್ಚು ಬೇಕಾಗುತ್ತದೆ. ನೀಟ್ ಪರೀಕ್ಷೆಯ ಮೂಲಕ ಪ್ರವೇಶ ಪಡೆದವರಿಗೆ ಸರ್ಕಾರಿ ಕಾಲೇಜುಗಳಲ್ಲಿ ಕನಿಷ್ಠ 25 ಸಾವಿರ, ಖಾಸಗಿ ಕಾಲೇಜುಗಳಲ್ಲಿ ಒಂದು ಲಕ್ಷ ರೂ ವೆಚ್ಚ ತಗಲುತ್ತದೆ. ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ವೈದ್ಯಕೀಯ ವ್ಯಾಸಂಗ ಬಯಸಲು ಕಾರಣ ಎಂದರೆ ಅದರಿಂದ ಸಮಾಜದಲ್ಲಿ ದೊರೆಯುವ ಸ್ಥಾನಮಾನ ಮತ್ತು ಧನಾರ್ಜನೆಯ ಮಾರ್ಗ. ಹಾಗಾಗಿ ವೈದ್ಯಕೀಯ ಶಿಕ್ಷಣ ಎನ್ನುವುದು ಬಂಡವಾಳ ಹೂಡಿಕೆ ಮತ್ತು ಪ್ರತಿಯಾಗಿ ಲಾಭಗಳಿಕೆಯ ಒಂದು ಉದ್ಯಮವಾಗಿದ್ದು, ಈ ಜ್ಞಾನಶಿಸ್ತನ್ನು ಅನುಸರಿಸುವ ಯುವ ಪೀಳಿಗೆಯೂ ಸಹ ಮಾರುಕಟ್ಟೆಯ ಜಗುಲಿಯಲ್ಲಿ ತಮ್ಮದೊಂದು ಅಂಗಡಿಯನ್ನು ಸ್ಥಾಪಿಸಲು ಹಪಹಪಿಸುತ್ತದೆ. ಪ್ರತಿವರ್ಷ ಲಕ್ಷಾಂತರ ವೈದ್ಯರು ಸೃಷ್ಟಿಯಾಗುತ್ತಿದ್ದರೂ ಗ್ರಾಮೀಣ ಭಾರತ ವೈದ್ಯಕೀಯ ಸೇವೆಯಿಂದ ವಂಚಿತವಾಗಿರುವುದು ಇದನ್ನೇ ಸೂಚಿಸುತ್ತದೆ.

ಉಕ್ರೇನ್‌ ರಷ್ಯಾ ಯುದ್ದದಲ್ಲಿ ಸಾವಿಗೀಡಾದ ಭಾರತೀಯ ವಿದ್ಯಾರ್ಥಿ ನವೀನ್‌ ಬಲಗಡೆ,

ಇಂದು ಭಾರತ ಅನುಸರಿಸುತ್ತಿರುವ ನವ ಉದಾರವಾದಿ ಆರ್ಥಿಕ ನೀತಿ ಈ ಮೇಲ್ವರ್ಗದ ಹಿತಾಸಕ್ತಿಯನ್ನು ಕಾಪಾಡಲೆಂದೇ ರೂಪಿಸಲಾಗುತ್ತಿದ್ದು , ಸರ್ಕಾರಗಳು ಎಲ್ಲ ರೀತಿಯ ಮೂಲ ಸೌಕರ್ಯಗಳನ್ನೂ ಖಾಸಗಿ ವಲಯದ ಮೂಲಕ ನಿರ್ವಹಿಸುತ್ತಿವೆ.  ಹಣ ಪಾವತಿಸಿ ಸೇವೆ ಪಡೆಯುವ ಈ ಪ್ರಕ್ರಿಯೆ ಸಾರ್ವಜನಿಕ ಮೂತ್ರಾಲಯದಿಂದ ಹಿಡಿದು ಅತ್ಯುನ್ನತ ವೈದ್ಯಕೀಯ ಸೇವೆಯವರೆಗೂ ವಿಸ್ತರಿಸುತ್ತದೆ. ಈ ಪ್ರಕ್ರಿಯೆಯಲ್ಲಿ ನಲುಗಿಹೋಗುತ್ತಿರುವ ಅವಕಾಶವಂಚಿತ ಯುವ ಸಮುದಾಯ ಮತ್ತು ವೈದ್ಯಕೀಯ ಸೌಲಭ್ಯಗಳಿಂದ ವಂಚಿತವಾಗುತ್ತಿರುವ ಗ್ರಾಮೀಣ ಭಾರತ ನವ ಭಾರತದ ಒಂದು ಮುಖವನ್ನಷ್ಟೇ ಪರಿಚಯಿಸಲು ಸಾಧ್ಯ. ಉಕ್ರೇನ್‍ನಲ್ಲಿ ಬಲಿಪಶುವಾದ ನವೀನ್ ಎಂಬ ಯುವಕ ಈ ಹಿತವಲಯವನ್ನು ಪ್ರತಿನಿಧಿಸುವ ನತದೃಷ್ಟ. ಈ ಯುವಕನ ಸಾವಿನಲ್ಲಿ ನಾವು ಗಮನಿಸಬೇಕಾದ ಅಂಶವೆಂದರೆ, ಈ ದೇಶದ ಯುವಪೀಳಿಗೆಯ ಮಹದಾಕಾಂಕ್ಷೆಗಳನ್ನು ಪೂರೈಸುವ ನಿಟ್ಟಿನಲ್ಲಿ ನಮ್ಮ ಆಡಳಿತ ವ್ಯವಸ್ಥೆ ಮತ್ತು ಸರ್ಕಾರ ವಿಫಲವಾಗಿದೆ. ಈ ಘಟನೆಯ ನಂತರ ಭಾರತ ಸರ್ಕಾರ ಎಚ್ಚೆತ್ತುಕೊಂಡಂತೆ ಕಂಡರೂ, ವೈದ್ಯಕೀಯ ಶಿಕ್ಷಣದ ಅವಕಾಶಗಳನ್ನು ಹೆಚ್ಚಾಗಿ ಕಲ್ಪಿಸಲು ಖಾಸಗಿ, ಕಾರ್ಪೋರೇಟ್ ಉದ್ಯಮಿಗಳನ್ನು ಕೋರುವ ಮೂಲಕ, ಪ್ರಧಾನಿ ಮೋದಿ ತಮ್ಮ ಕಾರ್ಪೋರೇಟ್ ಮಾರುಕಟ್ಟೆ ತಂತ್ರವನ್ನು ಹೊರಗೆಡಹಿದ್ದಾರೆ.

ನವೀನ್ ಎಂಬ ಯುವಕನ ಸಾವು ಭಾರತದ ಈ ಹಿತವಲಯದ ಮುಖವನ್ನು ಪರಿಚಯಿಸಿದರೆ, ಇತ್ತೀಚೆಗೆ ಗುಂಡ್ಲುಪೇಟೆಯಲ್ಲಿ ಸಂಭವಿಸಿದ ಕಲ್ಲು ಗಣಿ ದುರಂತದಲ್ಲಿ ಮಡಿದ ಕಾರ್ಮಿಕರು ಭಾರತದ ಮತ್ತೊಂದು ಆಯಾಮವನ್ನು ಪ್ರತಿನಿಧಿಸುತ್ತಾರೆ. ಗುಂಡ್ಲುಪೇಟೆ ತಾಲ್ಲೂಕಿನ ಮಡಹಳ್ಳಿ ಗುಡ್ಡದಲ್ಲಿ ಕ್ವಾರಿ ಕುಸಿತದಿಂದ ಮೂವರು ಕಾರ್ಮಿಕರು ಮೃತಪಟ್ಟಿದ್ದು ಇನ್ನೂ ಕೆಲವರು ಮಣ್ಣಿನ ರಾಶಿಯಡಿ ಸಿಲುಕಿರುವ ಸಾಧ್ಯತೆಗಳಿವೆ. ಈ ಮೃತ ಕಾರ್ಮಿಕರೂ ಭಾರತದ “ ಶತಮಾನದ ಯುವ ಪೀಳಿಗೆ ”ಯ ಒಂದು ಭಾಗವೇ ಆಗಿದ್ದಾರೆ. ಯಾವುದೋ ರಾಜ್ಯದಿಂದ ಜೀವನೋಪಾಯವನ್ನರಸಿ ಬರುವ ಈ ಶ್ರಮಜೀವಿಗಳ ಬದುಕು ಸದಾ ತೂಗುಯ್ಯಾಲೆಯಲ್ಲೇ ಇರುವುದನ್ನು 2020ರ ಅವೈಜ್ಞಾನಿಕ ಲಾಕ್‍ಡೌನ್ ಸಂದರ್ಭದಲ್ಲಿ ಕಂಡಿದ್ದೇವೆ. ಈ ರೀತಿ ಬದುಕನ್ನು ಬೆನ್ನಟ್ಟಿ ಹೋಗುವ ಶ್ರಮಜೀವಿಗಳ ಸಂಖ್ಯೆ ಎಷ್ಟಿದೆ ಎಂದು ನಿಖರವಾಗಿ ಹೇಳುವ ಮಾಹಿತಿಕೋಶ ಸರ್ಕಾರದ ಬಳಿ ಇಲ್ಲ ಎನ್ನುವುದೇ ಶತಮಾನದ ದುರಂತ ಅಲ್ಲವೇ ?

ಭಾರತದ ಕಲ್ಲಿದ್ದಲು ಗಣಿಗಳಲ್ಲಿ ಪ್ರತಿವರ್ಷ ಸರಾಸರಿ ವಾರಕ್ಕೊಂದರಂತೆ 50 ಸಾವುಗಳು ಸಂಭವಿಸುತ್ತವೆ. 2009 ರಿಂದ 2013ರ ಅವಧಿಯಲ್ಲಿ 752 ಗಣಿ ಕಾರ್ಮಿಕರು ಪ್ರಾಣ ನೀಗಿದ್ದಾರೆ. 2019ರ ಜನವರಿಯಿಂದ 2020ರ ನವಂಬರ್ ಅವಧಿಯಲ್ಲಿ 193 ಕಾರ್ಮಿಕರು ಬಲಿಯಾಗಿದ್ದಾರೆ. ವಿಶ್ವಸಂಸ್ಥೆಯ ಒಂದು ವರದಿಯ ಅನುಸಾರ ಕಲ್ಲಿದ್ದಲು ಗಣಿಗಳಲ್ಲಿ ಸಂಭವಿಸುವ ಅವಘಡಗಳು, ಅಪಘಾತಗಳು, ಭೂ ಕುಸಿತ ಮತ್ತಿತರ ನೈಸರ್ಗಿಕ ಅಪಾಯಗಳಿಂದ, ಅನೈರ್ಮಲ್ಯ ಮತ್ತು ಮೂಲ ವೈದ್ಯಕೀಯ ಸೌಕರ್ಯಗಳ ಕೊರತೆಯಿಂದ ಭಾರತದಲ್ಲಿ ವರ್ಷಕ್ಕೆ ಸರಾಸರಿ ಒಂದು ಲಕ್ಷ ಜನರು ಸಾವಿಗೀಡಾಗುತ್ತಾರೆ. ಎಲ್ಲರೂ ಶ್ರಮಜೀವಿಗಳೇ ಎಂದು ಹೇಳಬೇಕಿಲ್ಲ. ಅಕ್ರಮವಾಗಿ, ಸಕ್ರಮವಾಗಿ ನಡೆಸಲಾಗುವ ಕಲ್ಲು ಮತ್ತು ಮಣ್ಣು ಗಣಿಗಾರಿಕೆಯಲ್ಲಿ, ಕ್ವಾರಿಗಳಲ್ಲಿ ನಿರಂತರವಾಗಿ ಕಾರ್ಮಿಕರ ಸಾವು ಸಂಭವಿಸುತ್ತಲೇ ಇದೆ. ಈ ಗಣಿ ಕಾರ್ಮಿಕರನ್ನೂ ಸೇರಿದಂತೆ ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಸಾವಿರಾರು ರೈತರು, ಕೃಷಿ ಕಾರ್ಮಿಕರು, ಮಲಗುಂಡಿಗಳಲ್ಲಿ ಬಿದ್ದು ಸಾವನ್ನಪ್ಪುವ ನೂರಾರು ಸ್ವಚ್ಚತಾ ಕಾರ್ಮಿಕರು ಭಾರತದ ಆಳುವ ವರ್ಗಗಳಿಗೆ ಗೋಚರಿಸುವುದೇ ಇಲ್ಲ. ಈ ಕಾರ್ಮಿಕರ ಬದುಕನ್ನು ಪರಿಹಾರದ ಮೊತ್ತದಲ್ಲಿ ಅಳೆಯುವ ಮೂಲಕ ನವ ಭಾರತ ತನ್ನ ಹೊರೆಯನ್ನು ಇಳಿಸಿಕೊಳ್ಳುತ್ತದೆ. ಇದು ಭಾರತದ ಮತ್ತೊಂದು ಮುಖ.

ಈ ಸಾವಿನ ಲೋಕದಲ್ಲೇ ನಾವು ಗಂಭೀರವಾಗಿ ಗಮನಿಸಬೇಕಾದ್ದು ಕರ್ನಾಟಕದ ಯುವ ಪೀಳಿಗೆಯಲ್ಲಿ ಹರಡುತ್ತಿರುವ ಪಾತಕೀಕರಣದ ಧೋರಣೆ. ತಮ್ಮ ರಾಜಕೀಯ ಉದ್ದೇಶಗಳಿಗಾಗಿಯೇ ಪಾತಕಿ ಪಡೆಗಳನ್ನು ಸೃಷ್ಟಿಸುವ ಒಂದು ವಿಕೃತ ಪರಂಪರೆಯನ್ನು ರಾಜಕೀಯ ಪಕ್ಷಗಳು, ಮತೀಯ ಸಂಘಟನೆಗಳು ರೂಢಿಸಿಕೊಂಡಿವೆ. ಇತ್ತೀಚೆಗೆ ಬೆಳ್ತಂಗಡಿಯಲ್ಲಿ ದಿನೇಶ್ ಎಂಬ ದಲಿತ ಯುವಕ ಭಜರಂಗದಳದ ಕಾರ್ಯಕರ್ತನೊಬ್ಬನಿಂದ ಹತ್ಯೆಗೀಡಾಗಿದ್ದಾನೆ. ನರಗುಂದದಲ್ಲಿ ಇಬ್ಬರು ಮುಸ್ಲಿಂ ಯುವಕರು ಭೀಕರ ಹತ್ಯೆಗೊಳಗಾಗಿದ್ದು, ಈ ಪ್ರಕರಣದಲ್ಲೂ ಭಜರಂಗದಳದ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ. ಇತ್ತ ಶಿವಮೊಗ್ಗದಲ್ಲಿ ಭಜರಂಗದಳದ ಹರ್ಷ ಎಂಬ ಯುವ ಕಾರ್ಯಕರ್ತನನ್ನು ಕೆಲವು ಮುಸ್ಲಿಂ ಯುವಕರು ಹತ್ಯೆ ಮಾಡಿದ್ದಾರೆ. ಈ ಮೂರೂ ಪ್ರಕರಣಗಳು ತನಿಖೆಯ ಹಂತದಲ್ಲಿದ್ದು ಅಂತಿಮ ಸತ್ಯಾಸತ್ಯತೆಗಳು ಹೊರಬರಬೇಕಿದೆ.

ಆದರೆ ಈ ಮೂರೂ ಪ್ರಕರಣಗಳಲ್ಲಿರುವ ಸಾಮ್ಯತೆ ಎಂದರೆ ಯುವಕರು ಹತ್ಯೆಗೀಡಾಗುತ್ತಿದ್ದಾರೆ, ಯುವಕರೇ ಹಂತಕರೂ ಆಗುತ್ತಿದ್ದಾರೆ. ವ್ಯತ್ಯಾಸ ಏನೆಂದರೆ, ಹರ್ಷ ರಾಜಕೀಯ ಕಾರಣಗಳಿಗಾಗಿ ಹುತಾತ್ಮ ಪಟ್ಟ ಪಡೆಯುತ್ತಾನೆ. ಹರ್ಷನ ಕುಟುಂಬದವರಿಗೆ ಹರಿದು ಬಂದ ಸಾಂತ್ವನ ಮತ್ತು ಕೋಟ್ಯಂತರ ರೂಗಳ ನೆರವು ಬೆಳ್ತಂಗಡಿಯ ಹೊಸ್ತಿಲನ್ನೂ ತಲುಪಲಿಲ್ಲ. ನರಗುಂದದ ಪ್ರಕರಣದಲ್ಲಿ ಪರಿಹಾರ ಅಥವಾ ನೆರವಿನ ಪ್ರಶ್ನೆಯೇ ಉದ್ಭವಿಸಲಿಲ್ಲ. ಈ ಪ್ರಕರಣಗಳಲ್ಲಿ ನಾವು  ಗಮನಿಸಬೇಕಾದ್ದು, ಯುವ ಪೀಳಿಗೆ ನಡೆಯುತ್ತಿರುವ ಹಾದಿ ಮತ್ತು ಈ ದೇಶದ ಅಧಿಕಾರ ರಾಜಕಾರಣದ ವಾರಸುದಾರರು ಯುವ ಪೀಳಿಗೆಗೆ ತೋರುತ್ತಿರುವ ಮಾರ್ಗ. ಹಿಜಾಬ್ ಧರಿಸಿದ ಕಾರಣಕ್ಕೆ ನೂರಾರು ಮುಸ್ಲಿಂ ಯುವತಿಯರ ಶಿಕ್ಷಣದ ಹಕ್ಕನ್ನೇ ಕಸಿದುಕೊಳ್ಳುತ್ತಿರುವ ಸಂದರ್ಭದಲ್ಲೇ, ಮತೀಯ ಕಾಲಾಳುಗಳಂತೆ ಮತಾಂಧ ಸಂಘಟನೆಗಳ ವಿಧ್ವಂಸಕ ಕಾರ್ಯಾಚರಣೆಗಳಲ್ಲಿ ಭಾಗಿಯಾಗುತ್ತಿರುವ ಒಂದು ಬೃಹತ್ ಯುವ ಸಮುದಾಯ ಇಂದು ನಮ್ಮೆದುರು ನಿಲ್ಲುತ್ತಿದೆ. ಈ ಯುವಕರು ಏಕೆ ಶಿಕ್ಷಣವನ್ನು ಅಲಕ್ಷಿಸಿ ಖಡ್ಗ, ತಲವಾರ್, ಲಾಂಗು, ಮಚ್ಚುಗಳನ್ನು ಹಿಡಿಯುತ್ತಿದ್ದಾರೆ ? ಈ ಯುವ ಪೀಳಿಗೆಯ ಕೈಗೆ ಶಸ್ತ್ರಾಸ್ತ್ರಗಳನ್ನು ನೀಡುತ್ತಿರುವ ಸಾಂಸ್ಕೃತಿಕ ರಾಜಕಾರಣದ ವಾರಸುದಾರರು, ಮತಾಂಧ ಸಂಘಟನೆಗಳು ಏಕೆ ಕಾನೂನಿನ ಕಣ್ಣಿಗೆ ಗೋಚರಿಸುತ್ತಿಲ್ಲ ? ಈ ಪ್ರಶ್ನೆಗಳು ಸಾರ್ವಜನಿಕರನ್ನು ಕಾಡಬೇಕಲ್ಲವೇ ?

ಚಾಮರಾಜನಗರ ಕಲ್ಲು ಕ್ವಾರಿ ದುರಂತ

ಹಿಂದುತ್ವ ರಾಜಕಾರಣ ಮತ್ತು ಹಿಂದೂ ಮತಾಂಧತೆಯನ್ನು ಎದುರಿಸಲು ಸಜ್ಜಾಗುತ್ತಿರುವ ಮುಸ್ಲಿಂ ಮತಾಂಧ ಸಂಘಟನೆಗಳೂ ಸಹ ಯುವ ಪೀಳಿಗೆಯನ್ನು ಇದೇ ರೀತಿಯ ಹಿಂಸಾತ್ಮಕ ಮಾರ್ಗದಲ್ಲಿ ಕರೆದೊಯ್ಯುತ್ತಿರುವುದನ್ನು ಕೇರಳದಲ್ಲಿ ಸಂಭವಿಸುತ್ತಿರುವ ಹತ್ಯೆಗಳಲ್ಲಿ ಗಮನಿಸಬಹುದು. ದುರಂತ ಎಂದರೆ ನಮ್ಮ ಪ್ರಜ್ಞಾವಂತ ಸಮಾಜಕ್ಕೆ ಮುಸ್ಲಿಂ ಹೆಣ್ಣು ಮಕ್ಕಳು ಧರಿಸುವ ಒಂದು ತುಂಡು ವಸ್ತ್ರ “ ಹಿಜಾಬ್ ” ಶಿಕ್ಷಣಕ್ಕೆ ಅಡ್ಡಿಯಾಗಿ ಕಂಡಿತೇ ಹೊರತು, ಈ ಹಿಂದೂ-ಮುಸ್ಲಿಂ ಯುವ ಪೀಳಿಗೆಯ ಕೈಯ್ಯಲ್ಲಿರುವ ಮಚ್ಚು, ಲಾಂಗು, ತಲವಾರುಗಳು ಅಡ್ಡಿಯಾಗಿ ಕಾಣಲಿಲ್ಲ. ಮತ್ತೊಂದೆಡೆ ಶಿಕ್ಷಣದ ಹಕ್ಕು ನೇಪಥ್ಯಕ್ಕೆ ಸರಿದು ಧಾರ್ಮಿಕ ಅಸ್ಮಿತೆಯೇ ಮುನ್ನೆಲೆಗೆ ಬರುತ್ತಿದೆ. ಈ ಸಂದರ್ಭದಲ್ಲೇ ಇಂದು ಕರ್ನಾಟಕದ ಕರಾವಳಿಯಲ್ಲಿ ಒಂದು ಇಡೀ ಯುವ ಪೀಳಿಗೆ ಅಲ್ಪಸಂಖ್ಯಾತರ ವಿರುದ್ಧ ತಲವಾರು ಝಳಪಿಸುತ್ತಿದೆ. ಈ ಪೀಳಿಗೆಗೆ ಉತ್ತೇಜನ, ಪ್ರಚೋದನೆ ನೀಡಲು ರಾಜಕೀಯ ನಾಯಕರು ತುದಿಗಾಲಲ್ಲಿ ನಿಂತಿದ್ದಾರೆ. ಸಾಮಾಜಿಕ ಪ್ರಜ್ಞೆಯನ್ನೇ ಕಳೆದುಕೊಂಡಿರುವ ಜನಪ್ರತಿನಿಧಿಗಳಿಗೆ ಹಿಜಾಬ್‍ನಲ್ಲಿ ಕಾಣುವ ಭೂತ, ತಮ್ಮ ಹಿಂಬಾಲಕರ ಕೈಗಳಲ್ಲೇ ಇರುವ ತಲವಾರುಗಳಲ್ಲಿ ಕಾಣುತ್ತಿಲ್ಲ.  ಇದು ನವ ಭಾರತದ, ಯುವ ಭಾರತದ ಮತ್ತೊಂದು ಮುಖ.

ಈ ಮೂರೂ ದೃಷ್ಟಾಂತಗಳಲ್ಲಿ ಗಮನಿಸಬಹುದಾದ ಸಾಮ್ಯತೆ ಎಂದರೆ ಹತ್ಯೆಗೀಡಾದವರು, ಹಂತಕರು ಮತ್ತು ಅವಘಡಗಳಲ್ಲಿ ಸಾವಿಗೀಡಾದವರು ಎಲ್ಲರೂ ಯುವ ಪೀಳಿಗೆಯನ್ನು ಪ್ರತಿನಿಧಿಸುವವರೇ ಆಗಿದ್ದಾರೆ. ಎಲ್ಲ ಪ್ರಕರಣಗಳಲ್ಲೂ ಬಾಧೆಗೊಳಗಾದವರು ಅವಕಾಶವಂಚಿತರೇ ಆಗಿದ್ದಾರೆ. ಆದರೆ ಹಿತವಲಯದ ನವೀನ, ಹಿಂದುತ್ವದ ಕಾಲಾಳು ಮತ್ತು ಶೋಷಿತ ಗಣಿ ಕಾರ್ಮಿಕರು ಮೂರು ವಿಭಿನ್ನ ಭಾರತಗಳನ್ನು ಪ್ರತಿನಿಧಿಸುತ್ತಾರೆ. ನವೀನನ ಕುಟುಂಬ ಸರ್ಕಾರದ ಕೃಪಾಪೋಷಣೆಗೆ ಅರ್ಹತೆ ಪಡೆಯುತ್ತದೆ. ಹರ್ಷ ಈಗಾಗಲೇ ಹುತಾತ್ಮನಾಗಿದ್ದಾನೆ. ದಿನೇಶ್ ಮತ್ತು ಬೆಳ್ತಂಗಡಿಯ ಯುವಕರ ಶವಗಳು ಅನಾಥವಾಗುತ್ತವೆ. “ಯುವಪೀಳಿಗೆಯ ಶತಮಾನ”ದಲ್ಲಿ ಈ ಶತಮಾನದ ಕೂಸುಗಳೇ ಆಳುವ ವರ್ಗಗಳ ಕುತಂತ್ರಗಳಿಗೆ, ಶೋಷಣೆಗೆ, ದಬ್ಬಾಳಿಕೆಗೆ ಬಲಿಯಾಗಿ ಹಾದಿ ತಪ್ಪುತ್ತಿವೆ.  ಆದರೂ ನಾವು “ಆತ್ಮನಿರ್ಭರ ಭಾರತ ಯುವಪೀಳಿಗೆಯ ಭಾರತ ” ಎಂದು ಬೆನ್ನುತಟ್ಟಿಕೊಳ್ಳುತ್ತಿದ್ದೇವೆ. ನವೀನ, ಹರ್ಷ, ದಿನೇಶ, ನರಗುಂದದ ಮುಸ್ಲಿಂ ಯುವಕರು ಮತ್ತು ಹಿಜಾಬ್ ಧರಿಸಲು ಬಯಸುವ ಅಸಂಖ್ಯಾತ ಮುಸ್ಲಿಂ ಹೆಣ್ಣುಮಕ್ಕಳಿಗೆ ಈ “ ಯುವಭಾರತ ” ತಾತ್ವಿಕ ನೆಲೆಯಲ್ಲಿ ಅಖಂಡ ಭಾರತವಾಗಿ ಕಾಣಲು ಸಾಧ್ಯವೇ ?

Tags: BJPCongress PartyCovid 19ಎಚ್ ಡಿ ಕುಮಾರಸ್ವಾಮಿಕರೋನಾಕೋವಿಡ್-19ಕ್ವಾರಿನರೇಂದ್ರ ಮೋದಿನವೀನಬಸವರಾಜ ಬೊಮ್ಮಾಯಿಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯಹರ್ಷ ಕೊಲೆ ಪ್ರಕರಣ
Previous Post

ಕಚ್ಚಾ ತೈಲ ದರ ಜಿಗಿತ, ರುಪಾಯಿ ಮೌಲ್ಯ ಪಾತಾಳಕ್ಕೆ ಕುಸಿತ

Next Post

ಭಾರತ ಸರ್ಕಾರದ ವಿರುದ್ಧ ಸಿಂಧಿಯಾಗೆ ಕ್ಲಾಸ್ ತಗೊಂಡಿದ್ದ ರೊಮೇನಿಯಾ ಮೇಯರ್ ಗೆ ಬೆದರಿಕೆ : ಆರೋಪ

Related Posts

Top Story

ಸಿಬಿಎಸ್‌ಇ 2025: 10ನೇ ಮತ್ತು 12ನೇ ತರಗತಿ ಪರೀಕ್ಷಾ ವೇಳಾಪಟ್ಟಿ ಪ್ರಕಟ

by ಪ್ರತಿಧ್ವನಿ
January 12, 2025
0

ಕೇಂದ್ರ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಮಂಡಳಿ (ಸಿಬಿಎಸ್‌ಇ) 2025ನೇ ಸಾಲಿನ 10ನೇ ಮತ್ತು 12ನೇ ತರಗತಿಯ ಪರೀಕ್ಷೆಗಳ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಈ ಪ್ರಕಾರ, ಪರೀಕ್ಷೆಗಳು ಫೆಬ್ರವರಿ 15,...

Read moreDetails

ಹಿರಿಯ ಸಾಹಿತಿ ನಾಡೋಜಾ ನಾ. ಡಿಸೋಜಾ ನಿಧನ..

January 6, 2025

ಅಭಿಮಾನಿಗಳ ಹಾಗೂ ಚಿತ್ರತಂಡದವರ ಗೆಲುವಿನ ನಗುವನ್ನು ನೋಡಿ ನಾನು ಸಂಭ್ರಮಿಸುತ್ತಿದ್ದೇನೆ .

December 31, 2024

Central Govt: ಕೇಂದ್ರ ಸರ್ಕಾರದಿಂದ ರೈತರಿಗೆ ಸಂತಸದ ಸುದ್ದಿ.. ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಘೋಷಣೆ..!!

December 6, 2024

ಉಪೇಂದ್ರ ನಿರ್ದೇಶಿಸಿ, ನಟಿಸಿರುವ “UI” ಚಿತ್ರ ಡಿಸೆಂಬರ್ 20 ರಂದು ಬಿಡುಗಡೆ..

December 3, 2024
Next Post
ಭಾರತ ಸರ್ಕಾರದ ವಿರುದ್ಧ ಸಿಂಧಿಯಾಗೆ ಕ್ಲಾಸ್ ತಗೊಂಡಿದ್ದ ರೊಮೇನಿಯಾ ಮೇಯರ್ ಗೆ ಬೆದರಿಕೆ : ಆರೋಪ

ಭಾರತ ಸರ್ಕಾರದ ವಿರುದ್ಧ ಸಿಂಧಿಯಾಗೆ ಕ್ಲಾಸ್ ತಗೊಂಡಿದ್ದ ರೊಮೇನಿಯಾ ಮೇಯರ್ ಗೆ ಬೆದರಿಕೆ : ಆರೋಪ

Please login to join discussion

Recent News

Top Story

ಹಾಸನದಲ್ಲಿ ಹಾರ್ಟ್‌ ಅಟ್ಯಾಕ್‌ ಹೆಚ್ಚಾಗಲು ಇದೇ ಕಾರಣನಾ ಡಾಕ್ಟರ್‌ ಏನಂದ್ರು..!

by ಪ್ರತಿಧ್ವನಿ
July 10, 2025
Top Story

5ವರ್ಷ ನಾನೇ ಸಿಎಂರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ..!

by ಪ್ರತಿಧ್ವನಿ
July 10, 2025
Top Story

ಗೃಹ ಸಚಿವರು ಏನೇ ಕೇಳಿದ್ರೂ I Dont No ಅಂತಾರೇ..!

by ಪ್ರತಿಧ್ವನಿ
July 10, 2025
5 ವರ್ಷವೂ ನಾನೇ ಮುಖ್ಯಮಂತ್ರಿ..!! ದೆಹಲಿಯಲ್ಲೇ ಕುಳಿತು ಸಿಎಂ ಸಿದ್ದು ಮಾಸ್ಟರ್ ಸ್ಟ್ರೋಕ್ ! 
Top Story

5 ವರ್ಷವೂ ನಾನೇ ಮುಖ್ಯಮಂತ್ರಿ..!! ದೆಹಲಿಯಲ್ಲೇ ಕುಳಿತು ಸಿಎಂ ಸಿದ್ದು ಮಾಸ್ಟರ್ ಸ್ಟ್ರೋಕ್ ! 

by Chetan
July 10, 2025
ದೆಹಲಿಯಲ್ಲಿ ಸಿಎಂ & ಡಿಸಿಎಂ ರಾಜಕೀಯ ದಾಳ..? – ವರಿಷ್ಠರಿಗೆ ಇಂದೇ ವರದಿ ನೀಡಲಿದ್ದಾರೆ ಸುರ್ಜೇವಾಲಾ! 
Top Story

ದೆಹಲಿಯಲ್ಲಿ ಸಿಎಂ & ಡಿಸಿಎಂ ರಾಜಕೀಯ ದಾಳ..? – ವರಿಷ್ಠರಿಗೆ ಇಂದೇ ವರದಿ ನೀಡಲಿದ್ದಾರೆ ಸುರ್ಜೇವಾಲಾ! 

by Chetan
July 10, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಹಾಸನದಲ್ಲಿ ಹಾರ್ಟ್‌ ಅಟ್ಯಾಕ್‌ ಹೆಚ್ಚಾಗಲು ಇದೇ ಕಾರಣನಾ ಡಾಕ್ಟರ್‌ ಏನಂದ್ರು..!

July 10, 2025

5ವರ್ಷ ನಾನೇ ಸಿಎಂರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ..!

July 10, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada