ಸಂಘರ್ಷಮಯ ಉಕ್ರೇನ್ ನೆಲದಲ್ಲಿ ಜೀವ ಕೈಯಲ್ಲಿಟ್ಟು ಬದುಕಿದ, ತಮ್ಮ ಸ್ವಂತ ರಿಸ್ಕ್ ಮೇಲೆ ರೊಮಾನಿಯಾ ಗಡಿ ತಲುಪಿದ ಭಾರತೀಯ ವಿದ್ಯಾರ್ಥಿಗಳು ಎದುರಿಸಿದ್ದು ಅಂತಿಂಥ ಕಷ್ಟವೇನಲ್ಲ. ವಿಧ್ಯಾಭ್ಯಾಸಕ್ಕಾಗಿ ತಾಯ್ನಾಡು ಬಿಟ್ಟು ತೆರಳಿದ್ದ ವಿದ್ಯಾರ್ಥಿಗಳು ಅಕ್ಷರಶಃ ಪ್ರಾಣವನ್ನು ಕೈಯಲಿಟ್ಟು ಬದುಕಿದ್ದಾರೆ. ಅಷ್ಟೇ ಆಗಿದ್ದರೆ, ಯುದ್ಧಭೂಮಿಯಲ್ಲಿ ಇದು ಸಹಜ ಎನ್ನಬಹುದಿತ್ತು. ಅಲ್ಲಿ ಸಿಲುಕಿದವರ ಸುರಕ್ಷಿತ ಬರವಿಗಾಗಿ ಆಶಿಸುತ್ತಾ, ಬಂದು ತಲುಪಿದವರನ್ನು ಆದರದಿಂದ ಸ್ವಾಗತಿಸಬಹುದಿತ್ತು.
ಆದರೆ, ಒಂದು ಕಡೆ ಪ್ರಾಣ ಭಯ ಇನ್ನೊಂದೆಡೆ ಆತ್ಮ ಘನತೆಯ ಪ್ರಶ್ನೆಯನ್ನು ಈ ವಿದ್ಯಾರ್ಥಿಗಳು ಎದುರಿಸಿದ್ದರು. ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಇರುವ ಜನಾಂಗೀಯ ಧ್ವೇಷದ ಸಂತ್ರಸ್ತರೂ ಈ ವಿದ್ಯಾರ್ಥಿಗಳಾಗಿದ್ದರು ಎನ್ನುವುದು ನೋವಿನ ಸಂಗತಿ. ಯುದ್ಧದಿಂದ ಈಗಾಗಲೇ ಮಾನಸಿಕ ಆಘಾತಕ್ಕೊಳಗಾಗಿದ್ದ ಯುವ ಮನಸ್ಸು ಕಠೋರ ವರ್ಣಬೇಧ ನೀತಿಯನ್ನು ಎದುರಿಸಬೇಕಾಗಿ ಬಂದಿತು.
ಫೆಬ್ರವರಿ 26 ರಂದು ಕಠಿಣ ಹಾದಿ ಸವೆಸಿ ರೊಮೇನಿಯಾ ಗಡಿ ಸಮೀಪ ತಲುಪಿದ ವಿದ್ಯಾರ್ಥಿಗಳ ಗುಂಪು ಜನಾಂಗೀಯ ತಾರತಮ್ಯಕ್ಕೆ ಒಳಗಾದ ಅನುಭವವನ್ನು ಬಿಚ್ಚಿಟ್ಟಿದ್ದಾರೆ. ಸುಮಾರು 2000 ದಷ್ಟು ಇದ್ದ ವಿದ್ಯಾರ್ಥಿಗಳ ಗುಂಪಿನಲ್ಲಿ, 400 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾರತ ಮೂಲದವರಿದ್ದರು. ಆಫ್ರಿಕನ್ ಹಾಗೂ ಮಧ್ಯಪ್ರಾಚ್ಯದ ವಿದ್ಯಾರ್ಥಿಗಳೂ ಈ ಗುಂಪಿನ ಭಾಗವಾಗಿದ್ದರು.
ತಮಗಾದ ಘೋರ ಅಪಮಾನವನ್ನು ವಿವರಿಸಿದ ವಿನ್ನಿಟ್ಸಿಯಾ ನ್ಯಾಷನಲ್ ಮೆಡಿಕಲ್ ಯೂನಿವರ್ಸಿಟಿಯ ನಾಲ್ಕನೇ ವರ್ಷದ ವೈದ್ಯಕೀಯ ವಿದ್ಯಾರ್ಥಿ ಅನಿಮೇಶ್ ಕುಮಾರ್, ತಮ್ಮ ಸಂಕಟದ ಬಗ್ಗೆ ಮಾತನಾಡುತ್ತಾ, “ನಮ್ಮಲ್ಲಿ ಹೆಚ್ಚಿನವರು ಎರಡು ದಿನಗಳಿಂದ ಏನನ್ನೂ ತಿಂದಿರಲಿಲ್ಲ. ಆದರೆ, ನಾವು ಬಂದ ತಕ್ಷಣ ಸಿಬ್ಬಂದಿ ನಮ್ಮನ್ನು ಬಾಗಿಲಲ್ಲಿ ನಿಲ್ಲಿಸಿದರು. ಆ ವ್ಯಕ್ತಿ, ‘ಹೊರಗೆ ಹೋಗು, ನೀವೆಲ್ಲರೂ ಕೊಳಕು’ ಎಂದು ಹೇಳಿದರು. ಅದು ನಿಜವಾಗಿಯೂ ನನಗೆ ಆಶ್ಚರ್ಯವನ್ನುಂಟು ಮಾಡಿತು. ನಾನು ಅಂತಹ ಘೋರ ವರ್ಣಭೇದ ನೀತಿಯನ್ನು ಎಂದಿಗೂ ಎದುರಿಸಲಿಲ್ಲ” ಎಂದು ವಿವರಿಸಿದ್ದಾರೆ.
ರೆಸ್ಟಾರೆಂಟ್ ಬಾಗಿಲಲ್ಲೇ ತಮಗೆ ಆಹಾರಗಳನ್ನು ನೀಡುವಂತೆ ಸಿಬ್ಬಂದಿಯಲ್ಲಿ ಕೇಳಿಕೊಂಡರು ಯಾವುದೇ ಪ್ರಯೋಜನಾವಗಲಿಲ್ಲ. ಕೊನೆಗೆ ಅಲ್ಲೇ ಸಮೀಪದಲ್ಲಿದ್ದ ಟರ್ಕಿಷ್ ರೆಸ್ಟಾರೆಂಟ್ ಒಂದಕ್ಕೆ ಹೋದ ವಿದ್ಯಾರ್ಥಿಗಳು ಅಲ್ಲಿಯೂ ಇದೇ ಅನುಭವವನ್ನು ಎದುರಿಸಿದ್ದಾರೆ.

ಹುಡುಗಿಯರ ತಂಡಕ್ಕೆ ರೆಸ್ಟಾರೆಂಟ್ ಒಳಗಡೆ ಪ್ರವೇಶ ನೀಡಬಹುದು ಎಂಬ ನಂಬಿಕೆಯೊಂದಿಗೆ ಇನ್ನೊಂದು ರೆಸ್ಟಾರೆಂಟ್‌ಗೆ ವಿದ್ಯಾರ್ಥಿನಿಯರ ತಂಡ ಹೋಗಿದೆ. ಆದರೆ ಅಲ್ಲೂ ಇದೇ ಪರಿಸ್ಥಿತಿ ಎದುರಿಸಿದ್ದಾರೆ, ಕನಿಷ್ಟ ಹುಡುಗಿಯರಿಗೆ ವಾಶ್‌ರೂಮ್ ಬಳಸಲಾದರೂ ಅವಕಾಶ ಮಾಡುವಂತೆ ವಿನಂತಿಸಿಕೊಂಡರೆ ಅದಕ್ಕೂ ಅಲ್ಲಿನ ಸಿಬ್ಬಂದಿಗಳು ಬಿಡಲಿಲ್ಲ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
ಮೂರನೇ ವರ್ಷದ ವೈದ್ಯಕೀಯ ವಿದ್ಯಾರ್ಥಿನಿ, ಹಿಮಾಮಿ ಅರೋರಾ ತನಗಾದ ಅನುಭವಗಳನ್ನು ಹಂಚುತ್ತಾ, ʼನಾನು ವಾಶ್ ರೂಮ್ ಬಳಸಲು ಅನುಮತಿ ಕೇಳಿದೆ. ಮೊದಲಿಗೆ ಅವಕಾಶ ನಿರಾಕರಿಸಲಾಯಿತು, ಕೊನೆಗೆ ಮೂರು ಗಂಟೆಗಳ ಕಾಲ ಅದರ ಬಾಗಿಲಲ್ಲೇ ನಿಂತ ಬಳಿಕ ವಾಶ್‌ರೂಮ್ ಬಳಸಲು ಅನುಮತಿಸಿದರು. ವಾಶ್‌ರೂಮ್ ಬಳಸುವ ನೆಪದಲ್ಲಿ ನನ್ನ ಗೆಳೆಯರಿಗೆ ಆಹಾರ, ನೀರಿನ ಪೊಟ್ಟಣಗಳನ್ನು ಖರೀದಿಸಿದೆ ಎಂದು ಹೇಳಿದ್ದಾರೆ.
ಅದಾಗ್ಯೂ, ಆ ಪ್ರದೇಶದಲ್ಲಿ ಸಾರ್ವಜನಿಕ ವಾಶ್‌ರೂಮ್‌ಗಳಿಗೆ ಬೀಗ ಹಾಕಿದ್ದರಿಂದ ಹಾಗೂ ರೆಸ್ಟಾರೆಂಟ್‌ಗಳು ಅನುಮತಿ ನೀಡದೆ ಇರುವುದರಿಂದ ಬಯಲಲ್ಲಿ ಬಹಿರ್ದೆಸೆಗೆ ಹೋಗಲು ಸಾಧ್ಯವಾಗದ ಕಾರಣ ವಿದ್ಯಾರ್ಥಿನಿಯರು ಆಹಾರ, ನೀರನ್ನು ತ್ಯಜಿಸಿ ಕೂತಿದ್ದಾರೆ ಎಂದು ಹಿಮಾನಿ ತಿಳಿಸಿದ್ದಾರೆ. ಹಸಿವು ಮತ್ತು ಬಳಲಿಕೆಯಿಂದ ನಾನು ಮೂರ್ಛೆ ತಪ್ಪಿ ಬಿದ್ದೆ, ಭಾರತೀಯ ವಿದ್ಯಾರ್ಥಿಗಳು ಮಾತ್ರ ಅಲ್ಲಿ ಪರಸ್ಪರ ಸಹಾಯಕ್ಕಿದ್ದರು ಎಂದು ಹಿಮಾನಿ ತಾವು ದಾಟಿ ಬಂದ ಕಠೋರ ಕ್ಷಣಗಳನ್ನು ದಿ. ಕ್ವಿಂಟ್ ಮಾಧ್ಯಮದೊಂದಿಗೆ ಹಂಚಿಕೊಂಡಿದ್ದಾರೆ.
ಅಷ್ಟು ಮಾತ್ರವಲ್ಲ. ಕೆಲವು ವಿದ್ಯಾರ್ಥಿಗಳು ಭದ್ರತಾ ಪಡೆ ಹಾಗೂ ಪೊಲೀಸ್ ಸಿಬ್ಬಂದಿಗಳ ದೌರ್ಜನ್ಯಕ್ಕೂ ತುತ್ತಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ವಿದ್ಯಾರ್ಥಿಗಳಿಗೆ ಭದ್ರತಾ ಸಿಬ್ಬಂದಿಗಳು ಒದೆಯುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಉಕ್ರೇನಿಯನ್ ಪೊಲೀಸರ ದುರುಳತನವನ್ನು ಇನ್ನೋರ್ವ ವೈದ್ಯಕೀಯ ವಿದ್ಯಾರ್ಥಿ ಪರಾಸ್ ಬಿಚ್ಚಿಟ್ಟಿದ್ದಾರೆ.
ನೂರಾರು ಯುರೋಪ್ ಮೂಲದ ವಿದ್ಯಾರ್ಥಿಗಳನ್ನು ಗಡಿ ದಾಟಿಸುವಾಗ ಭಾರತ ಮೂಲದ 5 ವಿದ್ಯಾರ್ಥಿಗಳನ್ನು ಮಾತ್ರ ಅವರು ಹೊರಗೆ ಬಿಡುತ್ತಿದ್ದಾರೆ, ಅಲ್ಲದೆ, ಭಾರತೀಯ ವಿದ್ಯಾರ್ಥಿಗಳನ್ನು ಕೈಯಿಂದ ದೂರ ತಳ್ಳಿ ಹಾಕುತ್ತಾರೆ ಎಂದು ಪರಾಸ್ ಆರೋಪಿಸಿದ್ದಾರೆ.
ಪರಾಸ್ ಮತ್ತು ಇತರರ ಮೇಲೆ ನಡೆದ ಹಿಂಸಾಚಾರವನ್ನು ಕಣ್ಣಾರೆ ಕಂಡ ವಿದ್ಯಾರ್ಥಿ ಶಿವಂ ಕುಮಾರ್ ಯಾದವ್, “ನಾವು ಗಾಬರಿಯಿಂದ ನೋಡುತ್ತಿದ್ದೆವು. ಅವರು ಹುಡುಗಿಯರನ್ನು ಸಹ ಬಿಡಲಿಲ್ಲ. ಅವರು ಒದೆಯುತ್ತಿದ್ದರು ಮತ್ತು ನಮ್ಮನ್ನು ಹಿಂದಕ್ಕೆ ತಳ್ಳಲು ಅವರು ನಮ್ಮ ಕುತ್ತಿಗೆಯನ್ನು ಹಿಡಿದರು. ನಾಲ್ಕು ದಿನಗಳಿಂದ ಗಡಿಯಲ್ಲಿ ನಿಂತಿದ್ದೆ. ಆದರೆ, ಮಧ್ಯಪ್ರಾಚ್ಯ, ಅಮೇರಿಕಾ, ನೈಜೀರಿಯಾದ ವಿದ್ಯಾರ್ಥಿಗಳನ್ನು ಅವರು ಹೊರಕ್ಕೆ ಕಳುಹಿಸುತ್ತಿದ್ದರು. ಗಡಿದಾಟಲು ಕಾಯುತ್ತಾ ಭಾರತೀಯರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಅಂತಹ ದೊಡ್ಡ ಗುಂಪನ್ನು ಗಡಿ ದಾಟಲು ನಿರಾಕರಿಸಿರುವುದಕ್ಕೆ ತರ್ಕಬದ್ಧ ಕಾರಣಗಳೇ ಇರಲಿಲ್ಲ” ಎಂದು ಅವರು ಹೇಳಿದ್ದಾರೆ.
ಆಹಾರ, ವಸತಿ, ನೀರು, ರೆಸ್ಟ್ ರೂಮ್ ಕೊನೆಗೆ ಗಡಿ ದಾಟಲು ಕೂಡಾ ನಮಗೆ ನಿಷೇಧಿಸಲಾಯಿತು. ಆಫ್ರಿಕನ್ ವಿದ್ಯಾರ್ಥಿಗಳು ಕೂಡಾ ಇಂತಹದ್ದೇ ಪರಿಸ್ಥಿತಿ ಎದುರಿಸಿದ್ದರೂ, ಅವರನ್ನು ಗಡಿ ದಾಟಲು ಅನುವು ಮಾಡಿಕೊಡಲಾಗಿತ್ತು, ಖಾರ್ಕೀವ್ ನಗರದಲ್ಲಿ ರೈಲು, ಬಸ್ ಸಾರಿಗೆ ಹತ್ತಲು ನಮ್ಮ ವಿದ್ಯಾರ್ಥಿಗಳಿಗೆ ಅವಕಾಶ ಕೊಟ್ಟಿರಲಿಲ್ಲ, ಯುರೋಪಿಯನ್ ವಿದ್ಯಾರ್ಥಿಗಳನ್ನು ಮಾತ್ರ ಏರಲು ಅವಕಾಶ ನೀಡಿದರು ಎಂದು ಶಿವಂ ಹೇಳಿದ್ದಾರೆ.
ಅನಿಮೇಶ್, ಹಿಮಾನಿ, ಪರಾಸ್ ಹಾಗೂ ಶಿವಂ ಕೊನೆಗೂ ಫೆ. 28 ರಂದು ಗಡಿ ದಾಟಿದ್ದಾರೆ. ಅಲ್ಲಿಂದ ಬುಕಾರೆಸ್ಟ್ ತಲುಪಿ ಮಾರ್ಚ್ 2 ರಂದು ದೆಹಲಿಗೆ ತಲುಪಿದ್ದಾರೆ.
ತಮ್ಮ ಮಾತನ್ನು ಕೊನೆಗೊಳಿಸುತ್ತಾ, ನಾನು ಹಸಿವೆಯಿಂದ ಬಳಲಿ, ಚಳಿಯಲ್ಲಿ ಮುದುಟಿ, ರಟ್ಟಿನ ಮೇಲೆ ಮಲಗಿ ದೇಹ ಬಳಲಿದೆ. ಆದರೆ, ದೇಹ ಚೇತರಿಸಬಹುದು, ಜನಾಂಗೀಯ ತಾರತಮ್ಯ ಎದುರಿಸಿದ ಯಾತನೆ ಮನಸ್ಸಿನಿಂದ ಮಾಯಲಾರದು ಎಂದು ಶಿವಂ ಹೇಳಿದ್ದಾರೆ.