ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ಅವರು ತಮ್ಮ ಚೊಚ್ಚಲ ಬಜೆಟ್ ಮಂಡಿಸಿದ್ದಾರೆ.
ರಾಜಧಾನಿ ಬೆಂಗಳೂರು ಸೇರಿದಂತೆ ನಗರಾಭಿವೃದ್ಧಿ, ಮೂಲಸೌಕರ್ಯ, ಕೃಷಿ, ಮಹಿಳಾ ಸಬಲೀಕರಣ, ಶಿಕ್ಷಣ ಮತ್ತು ಆರೋಗ್ಯ ವಲಯಕ್ಕೆ ಸಾಕಷ್ಟು ಅನುದಾನ ನೀಡಲಾಗಿದೆ ಎಂಬುದು ಬಜೆಟ್ ಪರ ಇರುವವರು ನೀಡುತ್ತಿರುವ ಸಮರ್ಥನೆಯಾದರೆ, ಕೋವಿಡ್ ಸಂಕಷ್ಟ ಮತ್ತು ಲಾಕ್ ಡೌನ್ (Lock down) ನಡುವೆ ಸಂತ್ರಸ್ತರಾಗಿರುವ, ನಷ್ಟಕ್ಕೀಡಾಗಿರುವ ಉದ್ಯಮ, ವ್ಯವಹಾರ ಮತ್ತು ಕೃಷಿ ವಲಯದ ಸಮಸ್ಯೆಗಳಿಗೆ ಬಜೆಟ್ ನಲ್ಲಿ ಯಾವ ರಿಯಾಯ್ತಿ ಅಥವಾ ಬೆಂಬಲವನ್ನು ಘೋಷಿಸಿಲ್ಲ ಎಂಬುದು ಬಜೆಟ್ ಬಗ್ಗೆ ಕೇಳಿಬರುತ್ತಿರುವ ಅಸಮಾಧಾನ.
ಬಜೆಟ್ ದಿಕ್ಸೂಚಿಯಾಗಬೇಕಾದ ಕರ್ನಾಟಕ ಆರ್ಥಿಕ ಸಮೀಕ್ಷೆಯ ಎಚ್ಚರಿಕೆಯ ಹೊರತಾಗಿಯೂ ಬಜೆಟ್ ನಲ್ಲಿ ಉದ್ಯಮ ಮತ್ತು ಉದ್ಯೋಗ ಸೃಷ್ಟಿಯ ಕಡೆ ಹೆಚ್ಚಿನ ಆದ್ಯತೆ ನೀಡಲಾಗಿಲ್ಲ. ಕೋವಿಡ್ ಸಂದರ್ಭದಲ್ಲಿ ರಾಜ್ಯವು ಶೇ.7.2ರಷ್ಟು ಅಭಿವೃದ್ಧಿ ದರ ಕಾಯ್ದುಕೊಂಡಿದ್ದರೂ, ಸೇವಾ ಮತ್ತು ಕೃಷಿ ವಲಯಕ್ಕೆ ಹೋಲಿಸಿದರೆ ರಾಜ್ಯದ ಕೈಗಾರಿಕಾ ವಲಯದ ಪ್ರಗತಿ ಈ ಅವಧಿಯಲ್ಲಿ ಭಾರೀ ಹಿನ್ನಡೆ ಕಂಡಿದೆ. ಅದರ ಪರಿಣಾಮವಾಗಿ ಉದ್ಯೋಗ ಬೆಳವಣಿಗೆ ದರ ಕೂಡ ಕುಸಿತ ಕಂಡಿದೆ ಎಂದು ಆರ್ಥಿಕ ಸಮೀಕ್ಷೆ ಹೇಳಿದೆ. ರಾಜ್ಯದ ಏರುತ್ತಿರುವ ಸಾರ್ವಜನಿಕ ಸಾಲ ಮತ್ತು ಕುಸಿಯುತ್ತಿರುವ ರಾಜಸ್ವದ ಹಿನ್ನೆಲೆಯಲ್ಲಿ ಆರ್ಥಿಕ ಸಮೀಕ್ಷೆಯ ಈ ಎಚ್ಚರಿಕೆ ಗಮನಾರ್ಹ.
ಆ ಹಿನ್ನೆಲೆಯಲ್ಲಿ ಕೋವಿಡ್ (Covid) ಸಂಕಷ್ಟದಿಂದ ಕಳೆಗುಂದಿರುವ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು, ಉದ್ಯಮ ಮತ್ತು ಸ್ವ ಉದ್ಯೋಗ ಚಟುವಟಿಕೆಗಳಿಗೆ ಸರ್ಕಾರ ಈ ಬಜೆಟ್ ಮೂಲಕ ಬೆಂಬಲ ನೀಡಲಿದೆ. ಆ ಮೂಲಕ ರಾಜ್ಯದ ಪ್ರಗತಿಯ ಗತಿಯನ್ನು ಮತ್ತೆ ಸರಿದಾರಿಗೆ ತರಲಿದೆ ಎಂಬ ನಿರೀಕ್ಷೆಗಳಿದ್ದವು. ಹಾಗೇ ಕೃಷಿ ಮತ್ತು ಸೇವಾ ವಲಯದ ಪ್ರಗತಿಯನ್ನು ಕಾಯ್ದುಕೊಳ್ಳಲು ರಚನಾತ್ಮಕ ಯೋಜನೆಗಳು ಮತ್ತು ದೂರದೃಷ್ಟಿಯ ಕಾರ್ಯಕ್ರಮಗಳನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಘೋಷಿಸಬಹುದು ಎಂಬ ನಿರೀಕ್ಷೆಗಳೂ ಇದ್ದವು.
ಆದರೆ, ತಮ್ಮ ಚೊಚ್ಚಲ ಬಜೆಟ್ ನಲ್ಲಿ ಅವರು ಅಂತಹ ಹೊಸ ಕ್ರಮಗಳನ್ನಾಗಲೀ, ದೂರದೃಷ್ಟಿಯ ಯೋಜನೆಗಳನ್ನಾಗಲೀ ಘೋಷಿಸುವ ಬದಲಾಗಿ, ಸಮೀಪಿಸುತ್ತಿರುವ ಪಂಚಾಯತ್ ಚುನಾವಣೆಗಳು ( Panchayath Election) ಮತ್ತು ವಿಧಾನಸಭಾ ಚುನಾವಣೆಗಳಿಗೆ ತಾಲೀಮು ನಡೆಸುವತ್ತಲೇ ಹೆಚ್ಚಿನ ಗಮನ ಹರಿಸಿದಂತೆ ಕೆಲವು ಹಳೆಯ ಮತ್ತು ಈಗಾಗಲೇ ಜಾರಿಯಲ್ಲಿರುವ ಯೋಜನೆ- ಕಾರ್ಯಕ್ರಮಗಳನ್ನೇ ಹೊಸ ಬಾಟಲಿಯಲ್ಲಿ ಹಳೆಯ ಸರಕನ್ನೇ ತುಂಬಿ ಬ್ರಾಂಡಿಂಗ್ ಬದಲಾಯಿಸಿ ಜನಪ್ರಿಯ ಮತ್ತು ಹಿತಾನುಭವದ ಕಾರ್ಯಕ್ರಮಗಳ ಹೆಸರು ನೀಡಿದ್ದಾರೆ! ಸಹಜವಾಗಿಯೇ ಇದು ಯಾವ ವಲಯವನ್ನೂ ಸಂತೃಪ್ತಗೊಳಿಸಿದ ಸೂಚನೆಗಳಿಲ್ಲ. ಉದ್ಯಮ, ಕೃಷಿ, ಸೇವಾ ಸೇರಿದಂತೆ ಎಲ್ಲಾ ವಲಯಗಳಿಂದಲೂ ಈ ಬಜೆಟ್ ಗೆ ನಿರೀಕ್ಷೆಯಂತೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಬೆಂಗಳೂರು ಮಹಾನಗರ ಅಭಿವೃದ್ಧಿಯ ವಿವಿಧ ಯೋಜನೆಗಳನ್ನು ಘೋಷಿಸಲಾಗಿದ್ದರೂ, ಮೆಟ್ರೋ ಮೂರನೇ ಹಂತ ಸೇರಿದಂತೆ ಅವುಗಳಲ್ಲಿ ಹಲವು ಈಗಾಗಲೇ ಜಾರಿಯಲ್ಲಿರುವ ಕೇಂದ್ರದ ಯೋಜನೆಗಳೇ ಎಂಬುದು ಗಮನಾರ್ಹ. ಅಮೃತ್ ನಗರೋತ್ಥಾನ ಯೋಜನೆಯಡಿ ಬೆಂಗಳೂರು ಅಭಿವೃದ್ಧಿಗೆ 6 ಸಾವಿರ ಕೋಟಿ ರೂ ಸೇರಿದಂತೆ ಒಟ್ಟು 8,409 ಕೋಟಿ ರೂ. ಅನುದಾನ ಘೋಷಿಸಲಾಗಿದೆ. ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯ ಹಿನ್ನೆಲೆಯಲ್ಲಿ ನೋಡಿದರೂ ಈ ಯಾವ ಯೋಜನೆಗಳೂ ಬೆಂಗಳೂರಿನ ಸಂಚಾರ ದಟ್ಟಣೆ, ವಾಯು ಮಾಲಿನ್ಯದಂತಹ ನೈಜ ಸಮಸ್ಯೆಗಳಿಂದ ಕಿಂಚಿತ್ತೂ ಬಿಡುಗಡೆ ನೀಡಲಾರವು ಎಂಬುದು ದಿಟ. ಆದರೆ, ಎತ್ತಿನಹೊಳೆ ಮತ್ತು ಮೇಕೆದಾಟು ಯೋಜನೆಗಳಿಗೆ ಅನುದಾನ ನೀಡಲಾಗಿದೆ. ಎತ್ತಿನಹೊಳೆಯ 1.7 ಟಿಎಂಸಿ ನೀರು ಬಳಕೆಗೆ ಪೂರಕವಾಗಿ ಟಿ ಜಿ ಹಳ್ಳಿ ಜಲಾಶಯದ ಕಾಮಗಾರಿಗೆ 312 ಕೋಟಿ ರೂ. ನೀಡಲಾಗಿದ್ದು, ಯೋಜನೆ 2022-23ಕ್ಕೆ ಪೂರ್ಣಗೊಳ್ಳಲಿದೆ ಎಂದು ಘೋಷಿಸಲಾಗಿದೆ. ಹಾಗೇ ಮೇಕೆದಾಟು ಯೋಜನೆಗೆ 1000 ಕೋಟಿ ರೂ. ಅನುದಾನ ನೀಡುವುದಾಗಿ ಹೇಳಲಾಗಿದೆ.
ಹಾಗೇ ಕೃಷಿ ಮತ್ತು ಪೂರಕ ಚಟುವಟಿಕೆಗಳಿಗೆ 33,700 ಕೋಟಿ ರೂ. ಅಂದಾಜು ಅನುದಾನ ಘೋಷಿಸಲಾಗಿದ್ದು, ಬಡ್ಡಿ ರಿಯಾಯ್ತಿ ಸಾಲ ಯೋಜನೆಯಡಿ 33 ಲಕ್ಷ ರೈತರಿಗೆ ಒಟ್ಟು ಸುಮಾರು 24 ಸಾವಿರ ಕೋಟಿ ರೂ.ಸಾಲ ನೀಡಿಕೆ ಮತ್ತು ನೂತನ ರೈತ ಶಕ್ತಿ ಯೋಜನೆಯಡಿ ಕೃಷಿ ಯಾಂತ್ರೀಕರಣಕ್ಕೆ ಪೂರಕವಾಗಿ ಡೀಸೆಲ್ ಖರೀದಿಗೆ ಸಹಾಯಧನ ನೀಡಲು 600 ಕೋಟಿ ರೂ. ಅನುದಾನ ನೀಡುವುದು ಪ್ರಮುಖ ಯೋಜನೆಗಳು. ಮಿನಿ ಟ್ರ್ಯಾಕ್ಟರ್ ಖರೀದಿ ಸಬ್ಸಿಡಿ ವಿಸ್ತರಣೆ, ದ್ರಾಕ್ಷಿ ಸಂಸ್ಕರಣೆ ಮತ್ತು ಸಾಗಣೆಗೆ ಪೂರಕವಾಗಿ ಶಿಥೀಲೀಕರಣ ಘಟಕ ಮತ್ತು ವಾಹನ ವ್ಯವಸ್ಥೆಗೆ 35 ಕೋಟಿ ಅನುದಾನ ಪ್ರಮುಖ ಘೋಷಣೆಗಳು. ಆದರೆ, ನಿಜವಾಗಿಯೂ ಕೃಷಿ ಉತ್ಪನ್ನ ಬೆಲೆ ಸ್ಥಿರತೆಗೆ ಬೇಕಾದ ಕೃಷಿ ಬೆಲೆ ಆಯೋಗದ ಶಿಫಾರಸುಗಳ ವಿಷಯದಲ್ಲಾಗಲೀ, ಎಪಿಎಂಸಿ ವ್ಯವಸ್ಥೆಯ ಖಾಸಗೀಕರಣದ ಪ್ರಯತ್ನಗಳಿಂದ ಹಿಂದೆ ಸರಿಯುವ ವಿಷಯದಲ್ಲಾಗಲೀ ಮುಖ್ಯಮಂತ್ರಿಗಳು ಯಾವುದೇ ಕ್ರಮ ಪ್ರಕಟಿಸಿಲ್ಲ. ಹಾಗಾಗಿ ಇದು ರೈತ ಮುಖಂಡ ಕುರಬೂರು ಶಾಂತ ಕುಮಾರ್ ಹೇಳಿದಂತೆ, ರೈತರ ತುಟಿಗೆ ತುಪ್ಪ ಸವರುವ ಪ್ರಯತ್ನವಷ್ಟೇ!
ರಾಜ್ಯ ಹೆದ್ದಾರಿ ಮತ್ತು ರೈಲು ಮಾರ್ಗಗಳ ಅಭಿವೃದ್ಧಿ ಮತ್ತು ವಿಮಾನ ನಿಲ್ದಾಣಗಳ ನಿರ್ಮಾಣಕ್ಕೆ ವಿಶೇಷ ಅನುದಾನ ಘೋಷಿಸಲಾಗಿದೆ ಎಂಬುದು ಬಜೆಟ್ ನ ಮತ್ತೊಂದು ವಿಶೇಷ. ಸುಮಾರು 2,275 ಕಿ.ಮೀ ರಾಜ್ಯ ಹೆದ್ದಾರಿ ಅಭಿವೃದ್ಧಿಗೆ 3,500 ಕೋಟಿ ರೂ., ಡಾಂಬರೀಕರಣಕ್ಕೆ 440 ಕೋಟಿ ರೂ., ಗದಗ- ಯಲವಿಗೆ ಮತ್ತು ಧಾರವಾಡ-ಕಿತ್ತೂರು-ಬೆಳಗಾವಿ ರೈಲು ಮಾರ್ಗ ನಿರ್ಮಾಣಕ್ಕೆ ತಲಾ 640 ಮತ್ತು 927 ಕೋಟಿ ರೂ., ರಾಷ್ಟ್ರೀಯ ಹೆದ್ದಾರಿಗಳ ಅಂಚಿನ ನದಿ ಮತ್ತು ಕೆರೆ ಹೂಳೆತ್ತಲು ಹೆದ್ದಾರಿ ಪ್ರಾಧಿಕಾರದ ಸಹಯೋಗದಲ್ಲಿ ಹೊಸ ಯೋಜನೆ ಘೋಷಣೆ, ರಾಯಚೂರಿನಲ್ಲಿ 186 ಕೋಟಿ ರೂ., ವೆಚ್ಚದಲ್ಲಿ ಗ್ರೀನ್ ಫೀಲ್ಡ್ ವಿಮಾನ ನಿಲ್ದಾಣ ನಿರ್ಮಾಣ ಹಾಗೂ ದಾವಣಗೆರೆ ಮತ್ತು ಕೊಪ್ಪಳದಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಕಾರ್ಯಸಾಧ್ಯತಾ ವರದಿ ತಯಾರಿ,.. ಇವು ಬಜೆಟ್ ನಲ್ಲಿ ಘೋಷಿಸಲಾಗಿರುವ ಪ್ರಮುಖ ಮೂಲಸೌಕರ್ಯ ಯೋಜನೆಗಳು. ಆದರೆ, ಈ ಮೂಲಸೌಕರ್ಯ ಯೋಜನೆಗಳಲ್ಲಿ ನಿಜವಾಗಿಯೂ ಆದ್ಯತೆಯಾಗಬೇಕಿದ್ದ ನೆರೆ ಮತ್ತು ಪ್ರವಾಹ ತಡೆಯ ಮೂಲಕ ಸಾರ್ವಜನಿಕ ಆಸ್ತಿಪಾಸ್ತಿ ರಕ್ಷಣೆಯ ಯೋಜನೆಗಳಾಗಲೀ, ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿಯ ಕಾರ್ಯಕ್ರಮಗಳಾಗಲೀ ಸ್ಥಾನ ಪಡೆದಿಲ್ಲ ಎಂಬುದು ಗಮನಾರ್ಹ.
ಇನ್ನು ಆರೋಗ್ಯ ವಲಯಕ್ಕೆ ಕೆಲವು ಹೊಸ ಯೋಜನೆಗಳನ್ನು ಘೋಷಿಸಲಾಗಿದ್ದು, ಆ ಪೈಕಿ ಬೆಂಗಳೂರು ಮಹಾನಗರ ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ದೆಹಲಿಯ ಮೊಹಲ್ಲಾ ಕ್ಲಿನಿಕ್ ಮಾದರಿಯಲ್ಲಿ ಒಟ್ಟು 438 ನಮ್ಮ ಕ್ಲಿನಿಕ್ ಆರಂಭಿಸುವುದು ಪ್ರಮುಖವಾದುದು. ಹಾಗೇ ಮಹಿಳಾ ಆರೋಗ್ಯ ಸಲಹೆಗಾಗಿ 300 ಮಹಿಳಾ ಸ್ವಾಸ್ಥ್ಯ ಕೇಂದ್ರಗಳನ್ನು ಆರಂಭಿಸುವ ಘೋಷಣೆಯನ್ನೂ ಮಾಡಲಾಗಿದೆ. ಹಾಗೇ ಹುಬ್ಬಳ್ಳಿಯಲ್ಲಿ 250 ಕೋಟಿ ರೂ. ವೆಚ್ಚದಲ್ಲಿ ಜಯದೇವ ಹೃದ್ರೋಹ ಸಂಸ್ಥೆಯ ಸಹಯೋಗದಲ್ಲಿ ಪ್ರಾದೇಶಿಕ ಹೃದ್ರೋಹ ಕೇಂದ್ರ, ಬೆಳಗಾವಿಯಲ್ಲಿ ಕಿದ್ವಾಯಿ ಪ್ರಾದೇಶಿಕ ಕ್ಯಾನ್ಸರ್ ಕೇಂದ್ರ ಸ್ಥಾಪನೆಯ ಘೋಷಣೆಯನ್ನೂ ಮಾಡಲಾಗಿದೆ. ಆದರೆ, ಕರೋನಾ ಸಾಂಕ್ರಾಮಿಕದಲ್ಲಿ ಸಾವಿರಾರು ಜನರ ಸಾವುನೋವಿನ ಬಳಿಕವೂ ರಾಜ್ಯದ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಉನ್ನತೀಕರಣ ಮತ್ತು ಅಲ್ಲಿನ ಸಿಬ್ಬಂದಿ ಮತ್ತು ಸೌಲಭ್ಯ ಕೊರತೆ ಸರಿಪಡಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ಯಾವ ಕ್ರಮವನ್ನೂ ಘೋಷಿಸಿಲ್ಲ ಎಂಬುದು ಗಮನಾರ್ಹ.
ಕೃಷಿ, ಉದ್ಯಮ, ಆರೋಗ್ಯ, ಶಿಕ್ಷಣದಂತಹ ವಿಷಯಗಳಲ್ಲಿ ತೋರದ ಆಸಕ್ತಿಯನ್ನು ಬೊಮ್ಮಾಯಿಯವರು ಧಾರ್ಮಿಕ ಪ್ರವಾಸೋದ್ಯಮದ ವಿಷಯದಲ್ಲಿ ತೋರಿರುವುದು ಗಮನಾರ್ಹ. ಆ ದೃಷ್ಟಿಯಲ್ಲಿ ನಿಜವಾಗಿಯೂ ಈ ಬಜೆಟ್ ಹೊಸದನ್ನು ನೀಡಿದೆ ಎಂದಾದರೆ ಅದು ಧಾರ್ಮಿಕ ಪ್ರವಾಸೋದ್ಯಮದ ವಿಷಯದಲ್ಲಿ ಮಾತ್ರ ಎನ್ನಬಹುದು. ಧರ್ಮಸ್ಥಳ, ಕೊಲ್ಲೂರು, ಕುಕ್ಕೆ ಸೇರಿದಂತೆ ರಾಜ್ಯದ ಮತ್ತು ಹೊರರಾಜ್ಯದ ದೇವಾಲಯಗಳಿಗೆ ಪ್ಯಾಕೇಜ್ ಟ್ರಿಪ್, ಕಾಶಿ ಯಾತ್ರಾರ್ಥಿಗಳಿಗೆ ತಲಾ 5000 ಸಹಾಯಧನ, ಪುಣ್ಯ ಕ್ಷೇತ್ರಗಳಿಗೆ ಉಚಿತ ಪ್ರವಾಸ, ವಿವಿಧ ದೇವಾಲಯ ಮತ್ತು ಮಠಮಾನ್ಯಗಳ ಪ್ರವಾಸೀ ಸರ್ಕೀಟ್ ಮುಂತಾದ ಯೋಜನೆಗಳನ್ನು ಪ್ರಕಟಿಸಲಾಗಿದೆ. ಜೊತೆಗೆ ಚಾಮುಂಡಿ ಬೆಟ್ಟ, ದತ್ತಪೀಠ, ಅಂಜನಾದ್ರಿ ಬೆಟ್ಟ, ನಂದಿ ಬೆಟ್ಟ, ಯಾಣ ಮತ್ತು ಜೋಗದಲ್ಲಿ ರೋಪ್ ವೇ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ನೂರಾರು ಕೋಟಿ ಸುಮಾರು 500 ಕೋಟಿ ರೂ.ನಷ್ಟು ಭಾರೀ ಮೊತ್ತವನ್ನು ಘೋಷಿಸಲಾಗಿದೆ. ಈ ಪೈಕಿ ಜೋಗ ಅಭಿವೃದ್ಧಿಯ 116 ಕೋಟಿ ಅನುದಾನ ಆರು ತಿಂಗಳ ಹಿಂದೆಯೇ ಘೋಷಿತವಾದ ಯೋಜನೆ ಎಂಬುದು ಗಮನಾರ್ಹ.
ಆದರೆ, ಒಂದು ಕಡೆ ಗ್ರೀನ್ ಬಜೆಟ್, ಪರಿಸರ ಪರ ಬಜೆಟ್ ಮಾತುಗಳನ್ನೂ ಆಡುತ್ತಾ, ಶರಾವತಿ, ಮುಳ್ಳಯ್ಯಗಿರಿ, ನಂದಿಬೆಟ್ಟದಂತಹ ಪರಿಸರ ಸೂಕ್ಷ್ಮ ಪ್ರದೇಶಗಳಲ್ಲಿ ರೋಪ್ ವೇನಂತಹ ಪರಿಸರ ಮಾರಕ ಯೋಜನೆಗಳನ್ನು ಘೋಷಿಸುವ ವೈರುಧ್ಯಕ್ಕೆ ಕಾರಣವೇನು ಎಂಬುದು ಪ್ರಶ್ನಾರ್ಹ.
ಒಟ್ಟಾರೆ, ಕರೋನಾ ಮತ್ತು ಜಿಎಸ್ ಟಿ ದಾಳಿಯಿಂದ ಹೈರಾಣಾಗಿರುವ ರಾಜ್ಯದ ಬಡವರು, ಕೂಲಿ ಕಾರ್ಮಿಕರು, ಶ್ರಮಿಕರು, ಸಣ್ಣ ವ್ಯಾಪಾರಿಗಳು, ಉದ್ಯಮಿಗಳು, ಗೃಹ ಕೈಗಾರಿಕೆ ನಡೆಸುವವರು ಮುಂತಾದ ನಿಜವಾಗಿಯೂ ಸಂಕಷ್ಟದಲ್ಲಿರುವ ವರ್ಗದವರನ್ನು ಈ ಬಜೆಟ್ ಬಹುತೇಕ ಮರೆತಿದೆ. ಕೃಷಿಕರು, ಉದ್ಯೋಗ ಸೃಷ್ಟಿಯ ಉದ್ದಿಮೆ ಮತ್ತು ಸೇವಾ ವಲಯಗಳಿಗೂ ಹೆಚ್ಚಿನ ಕೊಡುಗೆಗಳೇನು ಇಲ್ಲ. ಆದರೆ, ಅವರೆಲ್ಲರಿಗೂ ತುಟಿಗೆ ತುಪ್ಪ ಸವರುವ ನಿಟ್ಟಿನಲ್ಲಿ ನಾಜೂಕಾಗಿ ಬಜೆಟ್ ಘೋಷಣೆಗಳನ್ನು ನಿರ್ವಹಿಸಲಾಗಿದೆ ಮತ್ತು ನಿಜಕ್ಕೂ ಈ ಬಜೆಟ್ ಫಲಾನುಭವಿಗಳು ಯಾರು ಎಂಬುದು ಒಗಟಾಗಿಯೇ ಉಳಿದಿದೆ ಎಂಬುದು ವಿಶೇಷ.
ಈ ನಡುವೆ ಮುಖ್ಯಮಂತ್ರಿ ಬೊಮ್ಮಾಯಿ ಅವರು ಒಟ್ಟು 2.65 ಲಕ್ಷ ಕೋಟಿ ಬಜೆಟ್ ಮಂಡಿಸಿದ್ದಾರೆ. ಸುಮಾರು 2.04 ಲಕ್ಷ ಕೋಟಿ ರಾಜಸ್ವ ವೆಚ್ಚದ ಅಂದಾಜು ಮಾಡಲಾಗಿದ್ದು, 1.89 ಲಕ್ಷ ಕೋಟಿ ರಾಜಸ್ವ ಸಂಗ್ರಹದ ಅಂದಾಜು ಮಾಡಲಾಗಿದೆ. ಹಾಗಾಗಿ ಈ ಬಾರಿಯೂ ರಾಜಸ್ವ ಕೊರತೆಯ ಬಜೆಟ್ ಮಂಡಿಸಲಾಗಿದೆ. ಅಂದಾಜು 14.5 ಸಾವಿರ ಕೋಟಿ ರಾಜಸ್ವ ಕೊರತೆ ಇದ್ದರೆ, ವಿತ್ತೀಯ ಕೊರತೆ 61.5 ಸಾವಿರ ಕೋಟಿಗೆ ಏರಿದೆ. ವಿತ್ತೀಯ ಕೊರತೆ ನೀಗಿಸಲು ಮತ್ತೆ ಈ ಬಾರಿ ಸುಮಾರು 72 ಸಾವಿರ ಕೋಟಿ ಸಾಲ ಎತ್ತಲು ಹಣಕಾಸು ಖಾತೆ ಹೊಂದಿರುವ ಸಿಎಂ ನಿರ್ಧರಿಸಿದ್ದು, ಆ ಮೂಲಕ ರಾಜ್ಯದ ಒಟ್ಟು ಸಾಲದ ಮೊತ್ತ 5.18 ಲಕ್ಷ ಕೋಟಿಗೆ ಏರಿಕೆಯಾಗಲಿದೆ! ಬಿಜೆಪಿ ಅಧಿಕಾರಕ್ಕೆ ಬಂದ ಕಳೆದ ಮೂರು ವರ್ಷದಲ್ಲೇ ರಾಜ್ಯದ ಸಾಲದ ಪ್ರಮಾಣ ದುಪ್ಪಟ್ಟಾಗಿದೆ ಎಂಬುದು ಮತ್ತೊಂದು ವಿಶೇಷ! ಹಾಗಾಗಿ ಇದೀಗ ರಾಜ್ಯದ ಬಜೆಟ್ ಗಾತ್ರದ ದುಪ್ಪಟ್ಟು ಸಾಲ ಸಾರ್ವಜನಿಕರ ಹೆಗಲೇರಲಿದೆ!