ಹಿರಿಯ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ (Ghulam Nabi Azad) ಅವರ ಸೋದರಳಿಯ ಮುಬಾಶಿರ್ ಆಜಾದ್ (Mubashir Azad) ಅವರು ಭಾನುವಾರ ಬಿಜೆಪಿಗೆ (BJP) ಸೇರ್ಪಡೆಗೊಂಡಿದ್ದಾರೆ. “ಪ್ರಧಾನಿ ನರೇಂದ್ರ ಮೋದಿಯವರ (Narendra Modi) ತಳಮಟ್ಟದ ಅಭಿವೃದ್ಧಿ ಕಾರ್ಯಗಳಿಂದ ಪ್ರಭಾವಿತರಾಗಿದ್ದೇನೆ” ಎಂದು ಹೇಳಿದ್ದಾರೆ.
ಗುಲಾಂ ನಬಿ ಆಜಾದ್ ಅವರ ಕಿರಿಯ ಸಹೋದರ ಲಿಯಾಕತ್ ಅಲಿ (Liaqat Ali) ಅವರ ಪುತ್ರ ಮುಬಾಶಿರ್ ಆಜಾದ್, ತಮ್ಮ ಚಿಕ್ಕಪ್ಪನಿಗೆ ಕಾಂಗ್ರೆಸ್ ನಾಯಕತ್ವದಿಂದ “ಅಗೌರವ” ಉಂಟಾಗಿದೆ, ಅದು ತನಗೆ ನೋವುಂಟು ಮಾಡಿದೆ ಹಾಗಾಗಿ ಪಕ್ಷದಿಂದ ದೂರವಾಗಲು ಕಾರಣವಾಯಿತು ಎಂದು ಹೇಳಿದ್ದಾರೆ. ಆದರೆ, ಬಿಜೆಪಿ ಸೇರುವ ಬಗ್ಗೆ ಚಿಕ್ಕಪ್ಪನ ಜತೆ ಚರ್ಚಿಸಿಲ್ಲ ಎಂದು ಹೇಳಿದ್ದಾರೆ.
ಮುಬಾಶಿರ್ ಆಜಾದ್ ಮತ್ತು ಅವರ ಬೆಂಬಲಿಗರನ್ನು ಜಮ್ಮು ಮತ್ತು ಕಾಶ್ಮೀರ ಬಿಜೆಪಿ ಅಧ್ಯಕ್ಷ ರವೀಂದರ್ ರೈನಾ ಮತ್ತು ಮಾಜಿ ಶಾಸಕ ದಲೀಪ್ ಸಿಂಗ್ ಪರಿಹಾರ್ ಸೇರಿದಂತೆ ಇತರ ಹಿರಿಯ ನಾಯಕರು ಪಕ್ಷಕ್ಕೆ ಸ್ವಾಗತಿಸಿದರು. ಮುಬಾಶಿರ್ ಆಜಾದ್ ಕೇಸರಿ ಪಕ್ಷಕ್ಕೆ ಸೇರ್ಪಡೆಯು “ದೊಡ್ಡ ತಿರುವು” ಎಂದು ರೈನಾ ಬಣ್ಣಿಸಲಾಗಿದೆ, ಇದು ಚೆನಾಬ್ ಕಣಿವೆ ಪ್ರದೇಶದ ದೋಡಾ, ಕಿಶ್ತ್ವಾರ್ ಮತ್ತು ರಾಂಬನ್ ಜಿಲ್ಲೆಗಳಿಂದ ಹೆಚ್ಚಿನ ಯುವ ಕಾರ್ಯಕರ್ತರನ್ನು ಪಕ್ಷಕ್ಕೆ ಸೇರಲು ದಾರಿ ಮಾಡಿಕೊಡುತ್ತದೆ ಎಂದು ಹೇಳಲಾಗಿದೆ.
ವಿರೋಧ ಪಕ್ಷಗಳ ರಾಜಕೀಯ ನಾಯಕರು, ಹಿಂದೂಗಳು, ಮುಸ್ಲಿಮರು, ಗುಜ್ಜರ್ಗಳು, ಬಕರ್ವಾಲ್ಗಳು ಮತ್ತು ಪಹಾರಿಗಳು ಸೇರಿದಂತೆ ಎಲ್ಲಾ ಸಮುದಾಯಗಳ ಸಾಮಾಜಿಕ ಕಾರ್ಯಕರ್ತರು ಸೇರ್ಪಡೆಗೊಳ್ಳುವುದರೊಂದಿಗೆ ಬಿಜೆಪಿ ವೇಗವಾಗಿ ಬೆಳೆಯುತ್ತಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಏಪ್ರಿಲ್ 2009 ರಲ್ಲಿ, ಆಜಾದ್ ಅವರ ಸಹೋದರ ಗುಲಾಂ ಅಲಿ ಕೂಡ ಬಿಜೆಪಿ ಸೇರಿದ್ದರು.