ಕೋವಿಡ್ ಲಸಿಕೆಗಳ ಫಲಾನುಫಲಗಳ ಬಗ್ಗೆ ಅನುಮಾನ ಮೂಡಿರುವ ಬೆನ್ನಲ್ಲೇ ಆಶಾದಾಯಕ ಬೆಳವಣಿಗೆ ಎಂಬಂತೆ ಖಾಸಗಿ ಆಸ್ಪತ್ರೆಯೊಂದು ವರದಿಯೊಂದನ್ನು ಬಿಡುಗಡೆ ಮಾಡಿದೆ. ಲಸಿಕೆ ಪಡೆದ ತನ್ನ 95% ಸಿಬ್ಬಂದಿಗಳು ಸೋಂಕಿನಿಂದ ರಕ್ಷಣೆ ಪಡೆದಿದ್ದಾರೆ ಎಂಬ ಆಸ್ಪತ್ರೆಯ ವರದಿ, ಲಸಿಕೆಯ ಬಗೆಗಿನ ಗೊಂದಲವನ್ನು ತಕ್ಕಮಟ್ಟಿಗೆ ಕಡಿಮೆ ಮಾಡಿದೆ.

ದೇಶಾದ್ಯಂತ ಶಾಖೆಗಳನ್ನು ಹೊಂದಿರುವ ಪ್ರಮುಖ ಖಾಸಗಿ ಆಸ್ಪತ್ರೆಯಾದ ಅಪೊಲೊ ಆಸ್ಪತ್ರೆಯ 31,000 ಕ್ಕೂ ಹೆಚ್ಚು ಲಸಿಕೆ ಹಾಕಿದ ಆರೋಗ್ಯ ಕಾರ್ಯಕರ್ತರ ಕುರಿತು ಕೈಗೊಂಡ ಅಧ್ಯಯನವು ಮಹತ್ವದ ಮಾಹಿತಿಯನ್ನು ಹೊರಹಾಕಿದ್ದು ಲಸಿಕೆ ಪಡೆದುಕೊಂಡ ಸಿಬ್ಬಂದಿಗಳಿಗೆ ’95 ಪ್ರತಿಶತದಷ್ಟು’ ಸೋಂಕಿನ ವಿರುದ್ಧ ರಕ್ಷಣೆ ನೀಡಿದೆ ಎಂದು ಆಸ್ಪತ್ರೆಯ ಅಧಿಕಾರಿಗಳು ಬುಧವಾರ ಹೇಳಿದ್ದಾರೆ.
ಅಪೊಲೊ ಆಸ್ಪತ್ರೆಗಳ ಅಧ್ಯಯನವು ಜನವರಿ 16 ರಿಂದ ಮೇ 30 ರವರೆಗೆ ನಾಲ್ಕುವರೆ ತಿಂಗಳುಗಳಲ್ಲಿ ನಡೆಯಿತು ಮತ್ತು 31,621 ಆರೋಗ್ಯ ಕಾರ್ಯಕರ್ತರನ್ನು ಒಳಗೊಂಡಿತ್ತು,. ಹೆಚ್ಚಿನ ಸಿಬ್ಬಂದಿಗಳು ಕೋವಿಶೀಲ್ಡ್ ಅಥವಾ ಕೋವಾಕ್ಸಿನ್‌ನ ಎರಡೂ ಡೋಸ್‌ಗಳನ್ನು ಪಡೆದುಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕರೋನವೈರಸ್ ಸಾಂಕ್ರಾಮಿಕದ ಎರಡನೇ ಅಲೆಯು ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಹಲವಾರು ಜೀವಗಳನ್ನು ಬಲಿ ತೆಗೆದುಕೊಂಡಿತ್ತು. ಈ ಅವಧಿಯಲ್ಲಿ ಹಲವಾರು ವೈದ್ಯರು ಸಾವನ್ನಪ್ಪಿದ್ದರು ಮತ್ತು ವ್ಯಾಕ್ಸಿನ್ ನ ಡಬಲ್ ಡೋಸ್ ಪಡೆದ ಅನೇಕ ವೈದ್ಯರು ಸಹ ಈ ಅವಧಿಯಲ್ಲಿ ಸೋಂಕಿಗೆ ಒಳಗಾಗಿದ್ದರು.

ಕೋವಿಡ್ ವಿರುದ್ಧ ಮೆಗಾ ವ್ಯಾಕ್ಸಿನೇಷನ್ ಡ್ರೈವ್ ಅನ್ನು ಜನವರಿ 16 ರಂದು ಸರ್ಕಾರ ಪ್ರಾರಂಭಿಸಿತು ಮತ್ತು ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಾದ್ಯಂತದ ಆರೋಗ್ಯ ಕಾರ್ಯಕರ್ತರು ಮೊದಲು ವ್ಯಾಕ್ಸಿನ್ ಪಡೆದಿದ್ದರು.
ದೇಶದ 24 ನಗರಗಳಲ್ಲಿ ವ್ಯಾಪಿಸಿರುವ ಅಪೊಲೊದ 43 ಘಟಕಗಳ ಆರೋಗ್ಯ ಕಾರ್ಯಕರ್ತರ ಅಧ್ಯಯನವು ‘ವ್ಯಾಕ್ಸಿನೇಷನ್ ನಂತರದ ಸೋಂಕುಗಳ (ಪಿವಿಐ) ಮೌಲ್ಯಮಾಪನಗಳನ್ನು ಮಾಡುವ’ ಉದ್ದೇಶವನ್ನು ಹೊಂದಿತ್ತು ಎಂದು ಅಪೊಲೊ ಆಸ್ಪತ್ರೆಗಳ ಗುಂಪು ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಅಪೊಲೊ ಹಾಸ್ಪಿಟಲ್ಸ್ ಗ್ರೂಪ್‌ನ ಸಮೂಹ ವೈದ್ಯಕೀಯ ನಿರ್ದೇಶಕ ಮತ್ತು ಹಿರಿಯ ಮಕ್ಕಳ ಗ್ಯಾಸ್ಟ್ರೋ ಎಂಟರಾಲಜಿಸ್ಟ್ ಡಾ. ಅನುಪಮ್ ಸಿಬಲ್, “ಲಸಿಕೆ ಪಡೆದುಕೊಂಡಿರುವವರಿಗೆ ಶೇಕಡಾ 95 ಕ್ಕಿಂತ ಹೆಚ್ಚು ರಕ್ಷಣೆ ನೀಡಿವೆ ಮತ್ತು ವ್ಯಾಕ್ಸಿನೇಷನ್ ನಂತರದ ಸೋಂಕು (ಪಿವಿಐ) ಕೇವಲ 4.28% ಸಿಬ್ಬಂದಿಗಳಿಗೆ ಅಂದರೆ ಲಸಿಕೆ ಪಡೆದುಕೊಂಡ 31,621 ಸಿಬ್ಬಂದಿಗಳಲ್ಲಿ ಕೇವಲ1355 ಸಿಬ್ಬಂದಿಗಳಿಗೆ ಮಾತ್ರ ತಗುಲಿವೆ ಎಂದು ಅಧ್ಯಯನ ತೋರಿಸಿಕೊಟ್ಟಿದೆ” ಎಂದು ಹೇಳಿದ್ದಾರೆ.

“ಲಸಿಕೆ ಪಡೆದುಕೊಂಡ ನಂತರ ಕೇವಲ 90 ಪ್ರಕರಣಗಳು ಅಥವಾ ಶೇಕಡಾ 0.28 ರಷ್ಟು ಜನರು ಮಾತ್ರ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಸಂಶೋಧನೆಯು ತೋರಿಸಿದೆ, ಕೇವಲ ಮೂರು ಪ್ರಕರಣಗಳು ಅಥವಾ 0.009 ಶೇಕಡಾ ಪ್ರಕರಣಗಳಿಗೆ ಐಸಿಯು ಪ್ರವೇಶದ ಅಗತ್ಯ ಕಂಡುಬಂದಿದೆ”ಎಂದು ಅವರು ಹೇಳಿದ್ದಾರೆ. “ವ್ಯಾಕ್ಸಿನೇಷನ್ ನಂತರ COVID ಸೋಂಕಿನ ಸಂದರ್ಭದಲ್ಲಿ ಯಾವುದೇ ಸಾವುಗಳು ಸಂಭವಿಸಿಲ್ಲ” ಎಂಬುವುದು ಅಧ್ಯಯನದ ಪ್ರಮುಖ ಸಂಶೋಧನೆಯಾಗಿದೆ ಎಂದು ಆಸ್ಪತ್ರೆಯು ನೀಡಿದ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.
ಕೋವಿಶೀಲ್ಡ್ ಅನ್ನು 28,918 ಆರೋಗ್ಯ ಕಾರ್ಯಕರ್ತರಿಗೆ ( ಅವರಲ್ಲಿ 91.45 ಶೇಕಡಾ) ಮತ್ತು 2,703 (ಶೇಕಡಾ 8.55%) ಸಿಬ್ಬಂದಿ ಗಳಿಗೆ ಕೋವಾಕ್ಸಿನ್ ನೀಡಲಾಗಿತ್ತು. ಅದರಲ್ಲಿ 25,907 ಅಥವಾ 81.9 ರಷ್ಟು ಆರೋಗ್ಯ ಕಾರ್ಯಕರ್ತರಿಗೆ ಸಂಪೂರ್ಣವಾಗಿ ಲಸಿಕೆ ನೀಡಲಾಗಿದ್ದು, ಎರಡೂ ಪ್ರಮಾಣದ ಡೋಸ್‌ಗಳನ್ನು ಪಡೆದಿದ್ದರೆ, 5,714 ಅಥವಾ 18.1 ಶೇಕಡಾ ಜನರು ಮೊದಲ ಡೋಸನ್ನು ಮಾತ್ರ ಪಡೆದಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಅಧ್ಯಯನದಲ್ಲಿ ಆರೋಗ್ಯ ಕಾರ್ಯಕರ್ತರು, ವೈದ್ಯರು, ದಾದಿಯರು, ಅರೆವೈದ್ಯಕೀಯ ಸಿಬ್ಬಂದಿ ಮತ್ತು ಆಡಳಿತ ಸಿಬ್ಬಂದಿ ಸೇರಿದಂತೆ ಇತರರು ಸೇರಿದ್ದಾರೆ ಎಂದು ಆಸ್ಪತ್ರೆಯ ವಕ್ತಾರರು ತಿಳಿಸಿದ್ದಾರೆ.
“ಸಂಪೂರ್ಣ ಲಸಿಕೆ ಹಾಕಿದ ಕಾರ್ಯಕರ್ತರಲ್ಲಿ 1,061 ಕಾರ್ಯಕರ್ತರು ಅಥವಾ 4.09 ರಷ್ಟು ಜನರು ವ್ಯಾಕ್ಸಿನೇಷನ್ ನಂತರದ ಸೋಂಕು(PVI)ನ್ನು ವರದಿ ಮಾಡಿದ್ದಾರೆ ಮತ್ತು ಭಾಗಶಃ ಲಸಿಕೆ ಹಾಕಿಸಿಕೊಂಡ ಅಂದರೆ ಮೊದಲ ಡೋಸ್ ಪಡೆದ ಕಾರ್ಯಕರ್ತರಲ್ಲಿ 294 ಅಥವಾ 5.14 ರಷ್ಟು ಜನರು ಮತ್ತೆ ಕೋವಿಡ್ ಪಾಸಿಟಿವ್ ಆಗಿದ್ದಾರೆ” ಎಂದು ಸಿಬಲ್ ಹೇಳಿದ್ದಾರೆ.

ಅಧ್ಯಯನದ ಕುರಿತು ಪ್ರತಿಕ್ರಿಯಿಸಿದ ಅಪೊಲೊ ಹಾಸ್ಪಿಟಲ್ಸ್ ಗ್ರೂಪ್ ಸಂಸ್ಥಾಪಕ ಅಧ್ಯಕ್ಷ ಡಾ.ಪ್ರಥಾಪ್ ಸಿ ರೆಡ್ಡಿ “ಈ ಅಧ್ಯಯನವು COVID-19 ವಿರುದ್ಧದ ನಮ್ಮ ಮುಖ್ಯ ಅಸ್ತ್ರವು ಸಾಮೂಹಿಕ ವ್ಯಾಕ್ಸಿನೇಷನ್ ಒಂದೇ ಎಂಬ ಅಂಶವನ್ನು ಪುನರುಚ್ಚರಿಸುತ್ತದೆ. ಲಸಿಕೆಗಳು ಸುರಕ್ಷಿತ ಮಾತ್ರವಲ್ಲ, ಅವು ತೀವ್ರವಾದ ಕೋವಿಡ್ ಪರಿಣಾಮಗಳನ್ನು ತಡೆಯಲು ಸಹ ಸಹಾಯ ಮಾಡುತ್ತದೆ ಹಾಗೂ ಜೀವಗಳನ್ನು ಉಳಿಸಲು ಸಹಾಯ ಮಾಡುತ್ತದೆ” ಎಂದು ಹೇಳಿದ್ದಾರೆ.
ಭಾರತದಾದ್ಯಂತದ ಈ ದೊಡ್ಡ ಅಧ್ಯಯನದ ಫಲಿತಾಂಶಗಳು 18 ವರ್ಷಕ್ಕಿಂತ ಮೇಲ್ಪಟ್ಟ ನಾಗರಿಕರಿಗೆ ಲಸಿಕೆ ಹಾಕಿಸಿಕೊಳ್ಳಲು ಮತ್ತು ದೇಶ ಕೋವಿಡ್ -19 ಬಿಕ್ಕಟ್ಟಿನಿಂದ ಹೊರಬರಲು ಸಹಾಯ ಮಾಡಬಲ್ಲದು ಅವರು ಹೇಳಿದರು. “ದಿನಕ್ಕೆ 5 ಮಿಲಿಯನ್ ಭಾರತೀಯರಿಗೆ ಸತತವಾಗಿ ಲಸಿಕೆ ಹಾಕುವ ಉದ್ದೇಶವನ್ನು ದೇಶ ಹೊಂದಿರಬೇಕು” ಎಂದು ರೆಡ್ಡಿ ಪ್ರತಿಪಾದಿಸಿದರು.
“ವ್ಯಾಕ್ಸಿನೇಷನ್ ನಂತರದ ಪರಿಣಾಮಗಳು ಚಿಕ್ಕದಾಗಿದೆ ಮತ್ತು ವ್ಯಾಕ್ಸಿನೇಷನ್ ತೀವ್ರವಾದ ಸೋಂಕು, ಐಸಿಯು ಪ್ರವೇಶ ಮತ್ತು ಸಾವನ್ನು ತಡೆಯಲು ಸಹಾಯ ಮಾಡುತ್ತದೆ ಎಂಬುವುದು ಅಧ್ಯಯನದ ಮುಖ್ಯ ತೀರ್ಮಾನಗಳು” ಎಂದು ಅವರು ಹೇಳಿದರು.

COVID-19 ಲಸಿಕೆಗಳು ‘ಪರಿಣಾಮಕಾರಿ’ ಎಂಬ ಅಂಶವನ್ನು ಈ ಅಧ್ಯಯನವು ಒತ್ತಿಹೇಳುತ್ತದೆಯಾದರೂ, ಸಂಪೂರ್ಣ ಲಸಿಕೆ ಪಡೆದುಕೊಂಡ ಮೇಲೂ ಮಾಸ್ಕ್ ಧರಿಸುವುದು, ಕೈಗಳನ್ನು ಸ್ವಚ್ಛಗೊಳಿಸುವುದು, ದೈಹಿಕ ಅಂತರವನ್ನು ಕಾಪಾಡಿಕೊಳ್ಳುವುದು ಮತ್ತು ಜನಸಂದಣಿಯನ್ನು ತಪ್ಪಿಸುವುದು ಮುಂತಾದ COVID 19 ತಡೆಗಟ್ಟುವಲ್ಲಿನ ಸೂಕ್ತವಾದ ನಡವಳಿಕೆಗಳನ್ನು ಮುಂದುವರಿಸುವುದು ಮುಖ್ಯವಾಗಿದೆ ಎಂದು ಹೇಳಿದ್ದಾರೆ.
ಈ ಅಧ್ಯಯನವನ್ನು ಎರಡನೇ ಅಲೆಯಲ್ಲಿನ ಗರಿಷ್ಠ ಸೋಂಕುಗಳು ವರದಿಯಾಗುತ್ತಿದ್ದ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ನಡೆಸಲಾಗಿದ್ದು ಆ ಹೊತ್ತಲ್ಲಿ ಇಡೀ ದೇಶದಲ್ಲಿ ದಿನವೊಂದಕ್ಕೆ ಲಕ್ಷಾಂತರ ಪ್ರಕರಣಗಳು ದಾಖಲಾಗುತ್ತಿದ್ದವು ಮತ್ತು ಸಾವಿರಾರು ಸಾವು ಸಂಭವಿಸುತ್ತಿತ್ತು. ಆದರೆ ಇದೇ ಅವಧಿಯಲ್ಲಿ ಲಸಿಕೆ ಹಾಕಿಸಿಕೊಂಡ ಆರೋಗ್ಯ ಕಾರ್ಯಕರ್ತರು ಹೆಚ್ಚಿನ ತೊಂದರೆಗೆ ಒಳಗಾಗಿಲ್ಲ ಎನ್ನುವುದು ಸದ್ಯದ ಮಟ್ಟಿಗೆ ಒಂದು ಉತ್ತಮ ಬೆಳವಣಿಗೆ ಎನ್ನಬಹುದು.