ಸರ್ಕಾರದ ನಿರ್ವಹಣೆಗೆ 90,000 ಕೋಟಿ ಸಾಲ ಮಾಡಲು ಹೊರಟಿರುವ ಯಡಿಯೂರಪ್ಪ ಸರ್ಕಾರವನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
ಪ್ರವಾಹ ಪೀಡಿತ ರೈತರಿಗೆ ಪರಿಹಾರ ನೀಡಲು ದುಡ್ಡಿಲ್ಲ, ಕರೊನಾ ಚಿಕಿತ್ಸೆಗೆ ದುಡ್ಡಿಲ್ಲ, ಬೊಕ್ಕಸ ಖಾಲಿಯಾಗಿದೆ ಎಂದು ರಾಜ್ಯ ಸರ್ಕಾರ 90,000 ಕೋಟಿ ರೂಪಾಯಿ ಸಾಲ ಮಾಡಲು ಹೊರಟಿದೆ. ಹಾಗಿದ್ದರೆ ದುಡ್ಡೆಲ್ಲಿ ಹೋಯಿತು? ಮುಖ್ಯಮಂತ್ರಿಗಳು ಮತ್ತು ಸಚಿವರ ಜೇಬಿಗೆ ಹೋಯಿತಾ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಕಳೆದ ವರ್ಷ ಸರ್ಕಾರ ನಡೆಸಿದ್ದ ಸಮೀಕ್ಷೆಯಂತೆ ನೆರೆಯಿಂದಾಗಿ ಹಾನಿಗೀಡಾದ ಮನೆಗಳು 2,24,000, ಪರಿಹಾರ ನೀಡಿರುವುದು ಮಾತ್ರ 1,24,000 ಮನೆಗಳಿಗೆ ಎಂದು ಕೇಂದ್ರಕ್ಕೆ ವರದಿ ಕಳುಹಿಸಲಾಗಿದೆ. ಇನ್ನು ಈ ವರ್ಷದ ಮಳೆಗೆ ಹಾನಿಗೀಡಾಗಿರುವ ಮನೆಗಳಿಗೆ ಸರ್ಕಾರ ಪರಿಹಾರ ನೀಡುವುದು ಯಾವಾಗ ಎಂದು ಪ್ರಶ್ನೆ ಹಾಕಿದ್ದಾರೆ.
ಕಳೆದ ವರ್ಷದ ಬೆಳೆ-ಮನೆ ಕಳೆದುಕೊಂಡವರಿಗೆ ಇನ್ನೂ ಸರಿಯಾಗಿ ಪರಿಹಾರ ಕೊಟ್ಟಿಲ್ಲ, ಈ ವರ್ಷ ಸಮೀಕ್ಷೆಯನ್ನೇ ಮಾಡಿಲ್ಲ. ಮುಖ್ಯಮಂತ್ರಿಗಳು, ಸಚಿವರು ಚುನಾವಣಾ ಪ್ರಚಾರದಲ್ಲಿ ತಲ್ಲೀನರಾಗಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲೆಯ ಅಧಿಕಾರಿಗಳು ಮನೆಯಲ್ಲಿ ಹಾಯಾಗಿದ್ದಾರೆ, ಸಂತ್ರಸ್ತರು ಬೀದಿಯಲ್ಲಿದ್ದಾರೆ ಎಂದು ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Also Read: ಉತ್ತರ ಕರ್ನಾಟಕ ನೆರೆ: ಕೇಂದ್ರದ ಭೇಟಿಗೆ ಸರ್ವಪಕ್ಷ ನಿಯೋಗ ರೂಪಿಸಲು ಸಿದ್ದರಾಮಯ್ಯ ಆಗ್ರಹ
ಕಳೆದ ವರ್ಷದ ಅತಿವೃಷ್ಟಿ ಹಾನಿಗೆ ರಾಜ್ಯ ಸರ್ಕಾರ ಕೇಂದ್ರದಿಂದ ಪರಿಹಾರ ಕೇಳಿದ್ದು ರೂ.35,000 ಕೋಟಿ, ಅವರು ನೀಡಿದ್ದು ರೂ.1654 ಕೋಟಿ. ಈ ಬಾರಿ ರಾಜ್ಯ ಸರ್ಕಾರ ಈ ವರೆಗೆ ಕೇಳಿದ್ದು ರೂ.4000 ಕೋಟಿ. ಕೇಂದ್ರದಿಂದ ಸಮರ್ಪಕ ಪರಿಹಾರ ಕೇಳಲೂ ನಿಮಗೆ ಭಯನಾ? ಆಗಸ್ಟ್ನಿಂದ ಮೂರು ತಿಂಗಳು ಸುರಿದ ಮಳೆಯಿಂದಾಗಿ 23 ಜಿಲ್ಲೆಗಳ 130 ತಾಲ್ಲೂಕುಗಳು ಬಾಧಿತವಾಗಿವೆ. ಕಳೆದ ವರ್ಷ ಹತ್ತು ಲಕ್ಷ ಹೆಕ್ಟೇರ್ ಕೃಷಿಭೂಮಿ ಹಾನಿಗೀಡಾಗಿದ್ದರೆ, ಈ ವರ್ಷ 11 ಲಕ್ಷ ಹೆಕ್ಟೇರ್ ಭೂಮಿಯಲ್ಲಿ ರೈತರು ಬೆಳೆ ಕಳೆದುಕೊಂಡಿದ್ದಾರೆ. ಈ ದುಪ್ಪಟ್ಟು ನಷ್ಟದಿಂದ ರೈತರು ನೆಲಹಿಡಿದಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
Also Read: ಜಿಎಸ್ಟಿ ಪಾಲು ಕೊಡದಿದ್ದರೆ ಹೋರಾಟ: ಕೇಂದ್ರದ ವಿರುದ್ಧ ತಿರುಗಿಬಿದ್ದ ರಾಜ್ಯಗಳು!
ನೆರೆ ಪರಿಹಾರ, ಜಿಎಸ್ಟಿ ಪಾಲು ತರಲು ತರಲು ಬಿಜೆಪಿ ಸರ್ಕಾರಕ್ಕೆ ಸಾಧ್ಯವಾಗದಿದ್ದರೆ, ನರೇಂದ್ರ ಮೋದಿಯವರಲ್ಲಿ ಪ್ರಶ್ನಿಸಲು ಸಾಧ್ಯವಾಗದಿದ್ದರೆ ಸರ್ವ ಪಕ್ಷ ನಿಯೋಗ ರಚಿಸಿ ನಮ್ಮನ್ನು ಕರೆದುಕೊಂಡು ಹೋಗಿ ಎಂದು ಸಿದ್ದರಾಮಯ್ಯ ಈ ಹಿಂದೆ ಆಗ್ರಹಿಸಿದ್ದರು.