ಚೆನ್ನೈ: ಖ್ಯಾತ ನಟಿ ಜಯಪ್ರದಾ ಅವರಿಗೆ ಕೆಳ ಹಂತದ ನ್ಯಾಯಾಲಯ ವಿಧಿಸಿದ್ದ 6 ತಿಂಗಳ ಜೈಲು ಶಿಕ್ಷೆಯನ್ನು ಮದ್ರಾಸ್ ಹೈಕೋರ್ಟ್ ಖಚಿತಪಡಿಸಿತು.15 ದಿನದಲ್ಲಿ ಎಗ್ಮೋರ್ ಕೋರ್ಟ್‌ಗೆ ಶರಣಾಗುವಂತೆ ಹಾಗೂ 20 ಲಕ್ಷ ರೂ. ಠೇವಣಿ ಇಡುವಂತೆ ಸೂಚಿಸಿದೆ.

ಕನ್ನಡ, ತೆಲುಗು ಹಾಗೂ ತಮಿಳು ಸೇರಿದಂತೆ ವಿವಿಧ ಭಾಷೆಗಳ ಸಿನಿಮಾಗಳಲ್ಲಿ ಅಭಿನಯಿಸಿರುವ ಜಯಪ್ರದಾ, ಸಂಸತ್ತಿನ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ. ಚೆನ್ನೈನಲ್ಲಿ ರಾಮಕುಮಾರ್, ರಾಜ್ಬಾಬು ಎಂಬವರೊಂದಿಗೆ ಸೇರಿ ಚಿತ್ರಮಂದಿರವನ್ನು ನಡೆಸುತ್ತಿರುವ ಇವರು, ಕಾರ್ಮಿಕರಿಂದ ಸಂಗ್ರಹಿಸಿದ ಇಎಸ್ಐ ಹಣವನ್ನು ರಾಜ್ಯ ವಿಮಾ ನಿಗಮಕ್ಕೆ ಪಾವತಿಸದ ಆರೋಪ ಎದುರಿಸುತ್ತಿದ್ದಾರೆ.
ಇಎಸ್ಐ ಕಂಪನಿ ಕಡೆಯಿಂದ ಇಗ್ಮೋರ್ ಕೋರ್ಟ್ನಲ್ಲಿ ಐದು ಪ್ರಕರಣಗಳು ದಾಖಲಾಗಿವೆ. ಆಗಸ್ಟ್ 10ರಂದು ಜಯಪ್ರದಾ ಸೇರಿದಂತೆ ಮೂವರಿಗೆ ಜಾಮೀನುರಹಿತ 6 ತಿಂಗಳ ಜೈಲು ಶಿಕ್ಷೆ ಹಾಗೂ 5 ಸಾವಿರ ರೂ. ದಂಡವನ್ನು ಕೋರ್ಟ್ ವಿಧಿಸಿತ್ತು. ಈ ಆದೇಶ ಪ್ರಶ್ನಿಸಿ ಜಯಪ್ರದಾ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು.






