545 PSI ಸಿವಿಲ್ ಹುದ್ದೆಗಳಿಗೆ ಈ ಕೂಡಲೇ ಆದೇಶ ಪ್ರತಿ ನೀಡಿ ಪ್ರಕ್ರಿಯೆ ಪೂರ್ಣಗೊಳಿಸಬೇಕೆಂದು ವ್ಯಕ್ತಿಯೊಬ್ಬರು ರಕ್ತದಿಂದ ಪತ್ರ ಬರೆದು ಗೃಹಸಚಿವ ಪರಮೇಶ್ವರ್ ರನ್ನ (Dr.G.parameshwar)ಆಗ್ರಹಿಸಿದ್ದಾರೆ.
ರಾಜ್ಯ ಸರ್ಕಾರಕ್ಕೆ ದೊಡ್ಡ ತಲೆನೋವಾಗಿರುವ, ಪೊಲೀಸ್ ಉದ್ಯೋಗಕ್ಕಾಗಿ ವರ್ಷಾನುಗಟ್ಟಲೇ ಓದಿದವರ ಶ್ರಮಕ್ಕೆ ತಣ್ಣೀರೆರಚಿದ್ದ 545 ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ (Sub inspector) ಹುದ್ದೆಗಳ ನೇಮಕಾತಿ ಸಂಬಂಧ, ಜನವರಿ ತಿಂಗಳಲ್ಲಿ ಹೈಕೋರ್ಟ್ (Highcourt) ಆದೇಶದಂತೆ ಮರು ಪರೀಕ್ಷೆಯನ್ನು ನಡೆಸಲಾಗಿತ್ತು. ಈ ಪರೀಕ್ಷೆ ನಡೆದು ಹಲವಾರು ತಿಂಗಳು ಕಳೆದಿವೆ. ಇನ್ನೂ ಸಹ ಅಂತಿಮ ಪಟ್ಟಿ ಅಥವಾ ತಾತ್ಕಾಲಿಕ ಪಟ್ಟಿಯೂ ಕೂಡ ಇಲಾಖೆ ಬಿಡುಗಡೆ ಮಾಡಿಲ್ಲ. ಈ ಹಿನ್ನೆಲೆಯಲ್ಲಿ ಈ ಪರೀಕ್ಷೆ ಬರೆದ ಅಭ್ಯರ್ಥಿಗಳು ಫಲಿತಾಂಶಕ್ಕಾಗಿ ಕಾದು ಕಾದು ಹೈರಾಣಾಗಿದ್ದಾರೆ.
545 ಪಿಎಸ್‌ಐ ಹುದ್ದೆಗಳಿಗೆ ನಡೆಸಿದ್ದ ಮರು ಪರೀಕ್ಷೆಯ ಅಂತಿಮ ಅಂಕಪಟ್ಟಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಕಳೆದ ಮಾರ್ಚ್ 28 ರಂದು ಬಿಡುಗಡೆ ಮಾಡಿತ್ತು. ಅಲ್ಲಿಂದ ಇಲ್ಲಿಯವರೆಗೆ ಕನಿಷ್ಠ ತಾತ್ಕಾಲಿಕ ಪಟ್ಟಿ ಬಿಡುಗಡೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಪಿಎಸ್‌ಐ ಫಲಿತಾಂಶ ಯಾವಾಗ ಎಂಬ ಪ್ರಶ್ನೆಗೆ ಉತ್ತರವಿಲ್ಲದಂತಾಗಿದೆ.