
ಕತ್ತು ಹಿಸುಕಿ ಐದು ವರ್ಷದ ಬಾಲಕಿಯನ್ನ ಕೊಲೆ ಮಾಡಿರುವ ಘಟನೆ ಹುಬ್ಬಳ್ಳಿಯ ಅಶೋಕ್ ನಗರದಲ್ಲಿ ನಡೆದಿದೆ. ಬಿಹಾರ ಮೂಲದ ಯುವಕನಿಂದ ಕೊಲೆ ಆರೋಪ ಕೇಳಿ ಬಂದಿದೆ. ಅತ್ಯಾಚಾರ ಮಾಡಿ ಕೊಲೆ ಮಾಡಿದ್ನಾ..? ಎಂಬ ಅನುಮಾನ ಶುರುವಾಗಿದ್ದು, ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಸದ್ಯ ಬಾಲಕಿಯನ್ನ ವ್ಯಕ್ತಿ ಕರೆದೊಯ್ದಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಬಾಲಕಿ ಕೊಲೆ ಪ್ರಕರಣ ಸಂಬಂಧ ಪೋಷಕರು ಹಾಗೂ ಸಾರ್ವಜನಿಕರು ಹುಬ್ಬಳ್ಳಿಯ ಅಶೋಕ ನಗರ ಪೊಲೀಸ್ ಠಾಣೆ ಮುಂದೆ ಕುಳಿತು ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಠಾಣೆಗೆ ಪೊಲೀಸ್ ಆಯುಕ್ತ ಎನ್ ಶಶಿಕುಮಾರ್ ಆಗಮಿಸಿ, ಘಟನೆ ಬಗ್ಗೆ ಪೊಲೀಸರಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಬಳಿಕ ಪ್ರತಿಭಟನಾಕಾರರನ್ನ ಮನವೊಲಿಸಲು ಯತ್ನಿಸಿದ್ದಾರೆ. ಈ ವೇಳೆ ಪೊಲೀಸರ ಜೊತೆ ವಾಗ್ವಾದ ನಡೆದಿದ್ದು, ನ್ಯಾಯ ಸಿಗುವವರೆಗೂ ಹೋರಾಟ ನಿಲ್ಲಲ್ಲ ಎಂದು ಧರಣಿ ಮುಂದುವರಿಸಿದ್ದಾರೆ. ಠಾಣೆ ಎದುರಲ್ಲೇ ಟೈರ್ಗೆ ಬೆಂಕಿ ಹಚ್ಚಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪೊಲೀಸ್ ಠಾಣೆ ಮುಂದೆ ಸಾರ್ವಜನಿಕರು, ಪೋಷಕರು ಪ್ರತಿಭಟನೆ ಮುಂದುವರಿಸಿದ್ದು, ಈ ವೇಳೆ ಮಾತನಾಡಿದ ಬಾಲಕಿ ಕುಟುಂಬಸ್ಥರು ಆರೋಪಿಗೆ ಗಲ್ಲು ಶಿಕ್ಷೆ ಆಗಬೇಕೆಂದು ಆಗ್ರಹಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಬಿಹಾರದವರು ಹೆಚ್ಚಾಗಿದ್ದು, ಗಾಂಜಾ ತಂದು ಮಾರಾಟ ಮಾಡ್ತಿದ್ದಾರೆ. ಇಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.. ಕೂಡಲೇ ಆರೋಪಿಯನ್ನ ಎನ್ಕೌಂಟರ್ ಮಾಡ್ಬೇಕು ಎಂದು ಜನರು ಆಗ್ರಹಿಸಿದ್ದಾರೆ.

ಹುಬ್ಬಳ್ಳಿಯಲ್ಲಿ 5 ವರ್ಷದ ಬಾಲಕಿ ಮೇಲಿನ ಕೊಲೆ ಪ್ರಕರಣ ಸಂಬಂಧ ಪೊಲೀಸ್ ಆಯುಕ್ತ ಎನ್ ಶಶಿಕುಮಾರ್ ಪ್ರತಿಕ್ರಿಯೆ ನೀಡಿದ್ದು, ಕೊಪ್ಪಳ ಮೂಲದ ಕುಟುಂಬ ಪೇಂಟಿಂಗ್ ಕೆಲಸ ಮಾಡುತ್ತಿತ್ತು. ತಾಯಿ ಮನೆಕೆಲಸ ಮಾಡ್ತಿದ್ದರಿಂದ ಮಗುವನ್ನು ಕರೆದುಕೊಂಡು ಹೋಗಿದ್ರು. ಮಗುವನ್ನು ಯುವಕನೋರ್ವ ಎತ್ತಿಕೊಂಡು ಹೋಗಿದ್ದಾನೆ. ಪಾಳು ಬಿದ್ದ ಕೋಣೆಯಲ್ಲಿ ಮಗುವಿನ ಶವ ಪತ್ತೆಯಾಗಿದೆ. ರೇಪ್ ಬಗ್ಗೆ ಇನ್ನು ಮಾಹಿತಿ ಇಲ್ಲ. ವೈದ್ಯಕೀಯ ತಪಾಸಣೆ ನಂತರ ಅತ್ಯಾಚಾರ ಬಗ್ಗೆ ಗೊತ್ತಾಗಲಿದೆ. ಆರೋಪಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ.