ಕೇಂದ್ರ ಆರೋಗ್ಯ ಸಚಿವಾಲಯ ಗುರುವಾರ ಬಿಡುಗಡೆಗೊಳಿಸಿದ ಪ್ರಕಟಣೆ ಪ್ರಕಾರ ಕಳೆದ 24 ಗಂಟೆಗಳಲ್ಲಿ ದೇಶದಾದ್ಯಂತ 2,00,739 ಹೊಸ ಕರೋನಾ ಪ್ರಕರಣಗಳು ದಾಖಲಾಗಿದ್ದು, ಇದು ಈವರೆಗಿನ ದಾಖಲೆಯಾಗಿದೆ. 1,038 ಹೊಸ ಮರಣ ವರದಿಯಾಗಿದ್ದು, ಒಟ್ಟು 1,73,123 ಮಂದಿ ಕರೋನಾ ಸಂಬಂಧಿಸಿ ಮೃತಪಟ್ಟಿದ್ದಾರೆ.
ದೇಶದಲ್ಲಿ ಇದುವರೆಗೂ 1.41 ಕೋಟಿಗೂ ಅಧಿಕ ಮಂದಿ ಕರೋನಾ ಸೋಂಕಿಗೆ ತುತ್ತಾಗಿದ್ದಾರೆ. 1,24,29,564 ಮಂದಿ ಇದುವರೆಗೂ ಸೋಂಕಿನಿಂದ ಗುಣಮುಖರಾಗಿದ್ದಾರೆ.
ಮಹಾರಾಷ್ಟ್ರ ಒಂದರಲ್ಲೇ ಸರಿ ಸುಮಾರು 60,000 ಹೊಸ ಪ್ರಕರಣಗಳು ದಾಖಲಾಗಿದ್ದು, ದೆಹಲಿಯಲ್ಲಿ 17,000 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಕರ್ನಾಟಕದಲ್ಲಿ 11,265 ಹೊಸ ಪ್ರಕರಣಗಳು ದಾಖ ಲಾಗಿವೆ.
ಕರ್ನಾಟಕದಲ್ಲಿ 11,265 ಹೊಸ ಪ್ರಕರಣಗಳು ದಾಖಲು
ಕಳೆದ 24 ಗಂಟೆಗಳಲ್ಲಿ 11,265 ಹೊಸ ಪ್ರಕರಣಗಳೊಂದಿಗೆ ಕರ್ನಾಟಕವು ಈ ವರ್ಷ COVID-19 ಪ್ರಕರಣಗಳಲ್ಲಿ ಅತಿ ಹೆಚ್ಚು ಏಕದಿನ ಏರಿಕೆ ದಾಖಲಿಸಿದೆ, ಇದು ಒಟ್ಟಾರೆ ಪ್ರಕರಣಗಳ ಸಂಖ್ಯೆ 10.94 ಲಕ್ಷಕ್ಕೂ ಹೆಚ್ಚಾಗಿದೆ. ಈ ನಡುವೆ ರಾಜ್ಯದಲ್ಲಿ ಮತ್ತೆ ಲಾಕ್‌ಡೌನ್ ಹಾಕುವ ಕುರಿತು ಊಹಾಪೋಹಗಳು ಹರಿದಾಡಿದ್ದು, ಲಾಕ್ ಡೌನ್ ಮಾಡುವ ಸಾಧ್ಯತೆಯನ್ನು ರಾಜ್ಯ ಸರ್ಕಾರ ತಳ್ಳಿಹಾಕಿದೆ. ಬದಲಾಗಿ, ರಾಜಧಾನಿ ಬೆಂಗಳೂರು ಸೇರಿದಂತೆ ಏಳು ಜಿಲ್ಲಾ ಕೇಂದ್ರಗಳಲ್ಲಿ ಏಪ್ರಿಲ್ 20 ರವರೆಗೆ ರಾತ್ರಿ ಕರ್ಫ್ಯೂ ಆದೇಶಿಸಿದೆ.
ವಲಸೆ ಕಾರ್ಮಿಕರ ಆತಂಕ
ಕರೋನಾ ನಿಯಂತ್ರಣಕ್ಕೆ ಮಹಾರಾಷ್ಟ್ರ, ದೆಹಲಿ, ರಾಜಸ್ಥಾನ ಸೇರಿದಂತೆ ಹಲವು ರಾಜ್ಯಗಳು ಹಲವು ಹಂತದ ನಿರ್ಬಂಧ ವಿಧಿಸಲು ತೀರ್ಮಾನಿಸಿದ್ದು, ಇದು ದಿನಗೂಲಿ ಹಾಗೂ ವಲಸೆ ಕಾರ್ಮಿಕರಲ್ಲಿ ತೀವ್ರ ಆತಂಕ ಸೃಷ್ಟಿಸಿದೆ. ವರದಿಗಳ ಪ್ರಕಾರ, ಈ ರಾಜ್ಯಗಳಲ್ಲಿ ನೆಲೆಸಿರುವ ಕಾರ್ಮಿಕರು ತಂತಮ್ಮ ತಾಯ್ನಾಡಿಗೆ ಮರಳಲು ಈಗಾಗಲೇ ಸಾಕಷ್ಟು ತಯಾರಿ ಮಾಡಿಕೊಂಡಿದ್ದು, ರೈಲ್ವೇ ನಿಲ್ದಾಣ, ಬಸ್ ನಿಲ್ದಾಣಗಳಲ್ಲಿ ಜನಸಂದಣಿ ಹೆಚ್ಚಾಗಿದೆ.
ಔಷಧ ವಸ್ತುಗಳ ಕೊರತೆ
ಈ ನಡುವೆ, ದೇಶದಲ್ಲಿ ಕರೋನಾ ಲಸಿಕೆಗಳ ಅಭಾವ ಎದುರಾಗಿದ್ದು, ವಿದೇಶಗಳಲ್ಲಿ ಅನುಮೋದನೆ ಪಡೆದ ಕರೋನಾ ಲಸಿಕೆಗಳ ತುರ್ತುಬಳಕೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಅಲ್ಲದೆ, ಕರೋನಾ ಲಸಿಕೆಗಳ ಕೊರತೆ ನಡುವೆ, ಕರೋನಾ ಸೋಂಕಿತರ ಚಿಕಿತ್ಸೆಗೆ ಬಳಕೆಯಾಗುವ ರೆಮಿಡ್ಸ್‌ವಿರ್ ಔಷಧಗಳ ಕೊರತೆಯೂ ಎದುರಾಗಿದ್ದು, ಈ ಔಷಧಗಳ ರಫ್ತನ್ನು ಕೇಂದ್ರ ತಾತ್ಕಾಲಿಕ ತಡೆಹಿಡಿದಿದೆ.
ರಾಜಸ್ಥಾನದಲ್ಲಿ ನೈಟ್‌ಕರ್ಫ್ಯೂ
ರಾಜಸ್ಥಾನ ರಾಜ್ಯ ಸರ್ಕಾರ ರಾಜ್ಯಾದ್ಯಂತ ನೈಟ್ ಕರ್ಫ್ಯೂ ಹೇರಿದ್ದು, ಸಂಜೆ 6 ರಿಂದ ಬೆಳಗ್ಗೆ 5 ಗಂಟೆವರೆಗೆ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ. ರಾಜಧಾನಿ ಜೈಪುರಿನಲ್ಲಿ 1,325 ಹೊಸ ಪ್ರಕರಣ ಸೇರಿದಂತೆ, ರಾಜ್ಯಾದ್ಯಂತ ಒಟ್ಟು 6,200 ಪ್ರಕರಣಗಳು ದಾಖಲಾಗಿವೆ.
ಯಾವುದೇ ಕಾರಣಕ್ಕೂ ಕುಂಭಮೇಳ ಮೊಟಕುಗೊಳಿಸುವುದಿಲ್ಲ
ದೇಶಾದ್ಯಂತ ಕೋವಿಡ್ ಎರಡನೇ ಅಲೆ ವಿಪರೀತವಾಗಿದ್ದರೂ, ಕುಂಭಮೇಳದಲ್ಲಿ ಲಕ್ಷಾಂತರ ಜನ ಸೇರಿ ಧಾರ್ಮಿಕ ವಿಧಿ ಆಚರಣೆ ನಡೆಸುತ್ತಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಈ ನಡುವೆ ಕುಂಭಮೇಳವನ್ನು ಎರಡುವಾರಗಳ ಮುಂಚಿತವಾಗಿಯೇ ಸ್ಥಗಿತಗೊಳಿಸುವುದಾಗಿ ವರದಿಯಾಗಿದ್ದರೂ, ಅಧಿಕಾರಿಗಳು ಇವನ್ನು ತಳ್ಳಿ ಹಾಕಿದ್ದು, ನಿಗದಿತ ದಿನಾಂಕದವರೆಗೆ ಕುಂಭಮೇಳ ಮುಂದುವರೆಯುತ್ತದೆ ಎಂದು ತಿಳಿಸಿದ್ದಾರೆ.
ಬುಧವಾರದಂದು ಕುಂಭಮೇಳವನ್ನು ಅಂತ್ಯಗೊಳಿಸುವುದಾಗಿ ಮೂಲಗಳು ತಿಳಿಸಿವೆಯೆಂದು ಎನ್‌ಡಿಟಿವಿ ವರದಿ ಮಾಡಿತ್ತು.