ಮಧ್ಯಮ ಕ್ರಮಾಂಕದಲ್ಲಿ ಸೂರ್ಯಕುಮಾರ್ ಸಿಡಿಸಿದ ಶತಕದ ಹೊರತಾಗಿಯೂ ಭಾರತ ತಂಡ 17 ರನ್ ಗಳಿಂದ ಇಂಗ್ಲೆಂಡ್ ಗೆ ಸೋಲುಂಡಿತು. ಇದರ ಹೊರತಾಗಿಯೂ ಭಾರತ ತಂಡ ಮೂರು ಪಂದ್ಯಗಳ ಟಿ-20 ಸರಣಿಯನ್ನು 2-1 ರಿಂದ ವಶಪಡಿಸಿಕೊಂಡಿತು.
ನಟ್ಟಿಂಗ್ ಹ್ಯಾಂನಲ್ಲಿ ಭಾನುವಾರ ನಡೆದ ಮೂರನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ತಂಡ 20 ಓವರ್ ಗಳಲ್ಲಿ 7 ವಿಕೆಟ್ ಗೆ 215 ರನ್ ಗಳಿಸಿತು. ಕಠಿಣ ಗುರಿ ಬೆಂಬತ್ತಿದ ಭಾರತ ತಂಡ 20 ಓವರ್ ಗಳಲ್ಲಿ 9 ವಿಕೆಟ್ ಗೆ 198 ರನ್ ಗಳಿಸಲಷ್ಟೇ ಶಕ್ತವಾಯಿತು.
ಕಠಿಣ ಗುರಿ ಬೆಂಬತ್ತಿದ ಭಾರತ ಆರಂಭಿಕ ಆಘಾತದಿಂದ ತತ್ತರಿಸಿದರೂ ಮಧ್ಯಮ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್ 55 ಎಸೆತಗಳಲ್ಲಿ 14 ಬೌಂಡರಿ ಮತ್ತು 6 ಸಿಕ್ಸರ್ ಒಳಗೊಂಡ 117 ರನ್ ಸಿಡಿಸಿ ಏಕಾಂಗಿ ಹೋರಾಟ ನಡೆಸಿದರೂ ಯಾವುದೇ ಪ್ರಯೋಜನವಾಗಲಿಲ್ಲ.
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಇಂಗ್ಲೆಂಡ್ ತಂಡ ಡೇವಿಡ್ ಮಲಾನ್ ಅರ್ಧಶತಕದ ನೆರವಿನಿಂದ ಬೃಹತ್ ಮೊತ್ತ ಕಲೆ ಹಾಕಿತು. ಜೇಸನ್ ರಾಯ್ (27), ಜೋಸ್ ಬಟ್ಲರ್ (18) ಮತ್ತು ಫಿಲ್ ಸಾಲ್ಟ್ (8) ಬೇಗನೇ ನಿರ್ಗಮಿಸಿದರು.
ನಂತರ ಜೊತೆಯಾದ ಡೇವಿಡ್ ಮಲಾನ್ ಮತ್ತು ಲಿಯಾಮ್ ಲಿವಿಂಗ್ ಸ್ಟೋನ್ ನಾಲ್ಕನೇ ವಿಕೆಟ್ ಗೆ 84 ರನ್ ಜೊತೆಯಾಟದ ಮೂಲಕ ತಂಡವನ್ನು ಆಧರಿಸಿದರು. ಮಲಾನ್ 39 ಎಸೆತಗಳಲ್ಲಿ 6 ಬೌಂಡರಿ ಮತ್ತು 5 ಸಿಕ್ಸರ್ ನೆರವಿನಿಂದ 77 ರನ್ ಸಿಡಿಸಿದರೆ, ಲಿವಿಂಗ್ ಸ್ಟೋನ್ 29 ಎಸೆತಗಳಲ್ಲಿ 4 ಸಿಕ್ಸರ್ ಒಳಗೊಂಡ 42 ರನ್ ಸಿಡಿಸಿದರು. ಭಾರತದ ಪರ ಉಮ್ರಾನ್ ಮಲಿಕ್ ಮತ್ತು ಹರ್ಷಲ್ ಪಟೇಲ್ ತಲಾ 2 ವಿಕೆಟ್ ಗಳಿಸಿದರು.