ಮಧ್ಯಮ ಕ್ರಮಾಂಕದಲ್ಲಿ ಶುಭಮನ್ ಗಿಲ್ ಸಿಡಿಸಿದ ಚೊಚ್ಚಲ ಶತಕದ ನೆರವಿನಿಂದ ಭಾರತ ತಂಡ 13 ರನ್ ಗಳಿಂದ ಜಿಂಬಾಬ್ವೆ ತಂಡವನ್ನು ಬಗ್ಗುಬಡಿದು ಮೂರು ಪಂದ್ಯಗಳ ಏಕದಿನ ಸರಣಿಯನ್ನು 3-0ಯಿಂದ ಕ್ಲೀನ್ ಸ್ವೀಪ್ ಮಾಡಿದೆ.
ಹರಾರೆಯಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ತಂಡ 50 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 289 ರನ್ ಗಳಿಸಿತು. ಕಠಿಣ ಗುರಿ ಬೆಂಬತ್ತಿದ ಜಿಂಬಾಬ್ವೆ ತಂಡ 49 ಓವರ್ ಗಳಲ್ಲಿ
ಕಠಿಣ ಗುರಿ ಬೆಂಬತ್ತಿದ ಜಿಂಬಾಬ್ವೆ ಪರ ಸಿಕಂದರ್ ರಾಜಾ ಶತಕ ಬಾರಿಸಿ ಏಕಾಂಗಿ ಹೋರಾಟ ನಡೆಸಿ ತಂಡಕ್ಕೆ ವೀರೋಚಿತ ಸೋಲಿನ ಗೌರವ ತಂದುಕೊಟ್ಟರು. ಸಿಕಂದರ್ ರಾಜಾ 95 ಎಸೆತಗಳಲ್ಲಿ 9 ಬೌಂಡರಿ ಮತ್ತು 3 ಸಿಕ್ಸರ್ ಸೇರಿದ 115 ರನ್ ಗಳಿಸಿ ಔಟಾದರು.
ಬ್ರಾಡ್ ಇವಾನ್ಸ್ (28) ಜೊತೆ ೮ನೇ ವಿಕೆಟ್ ಗೆ 104 ರನ್ ಜೊತೆಯಾಟ ನಿಭಾಯಿಸಿದ ಸಿಕಂದರ್ ಗೆಲುವಿನ ಭರವಸೆ ಮೂಡಿಸಿದರು. ಆದರೆ ಶಾರ್ದೂಲ್ ಠಾಕೂರ್ ಎಸೆತದಲ್ಲಿ ಔಟಾಗುತ್ತಿದ್ದಂತೆ ಜಿಂಬಾಬ್ವೆ ಗೆಲುವಿನ ಆಸೆ ನುಚ್ಚುನೂರಾಯಿತು.
ಶುಭಮನ್ ಗಿಲ್ ಚೊಚ್ಚಲ ಶತಕ
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಭಾರತ ತಂಡ ಶುಭಮನ್ ಗಿಲ್ ಶತಕದ ನೆರವಿನಿಂದ ಬೃಹತ್ ಮೊತ್ತ ದಾಖಲಿಸಿತು. ಗಿಲ್ 97 ಎಸೆತಗಳಲ್ಲಿ 15 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡ 130 ರನ್ ಸಿಡಿಸಿದರು. ಈ ಮೂಲಕ ಗಿಲ್ ಶತಕದ ಬರ ನೀಗಿಸಿಕೊಂಡರು.
ಭಾರತ ತಂಡಕ್ಕೆ ನಾಯಕ ಕೆಎಲ್ ರಾಹುಲ್ ಮತ್ತು ಶಿಖರ್ ಧವನ್ ಮೊದಲ ವಿಕೆಟ್ ಗೆ ೬೩ ರನ್ ಜೊತೆಯಾಟದ ಮೂಲಕ ಉತ್ತಮ ಆರಂಭ ನೀಡಿದರು. ಧವನ್ (40) ಮತ್ತು ರಾಹುಲ್ (30) ನೆಲಕಚ್ಚಿ ಆಡುವ ಹಂತದಲ್ಲಿ ವಿಕೆಟ್ ಕೈ ಚೆಲ್ಲಿದರು.
ನಂತರ ಜೊತೆಯಾದ ಶುಭಮನ್ ಗಿಲ್ ಮತ್ತು ಇಶಾನ್ ಕಿಶನ್ ಮೂರನೇ ವಿಕೆಟ್ ಗೆ 140 ಜೊತೆಯಾಟದ ಮೂಲಕ ತಂಡವನ್ನು ಮುನ್ನಡೆಸಿದರು. ಕಿಶನ್ 61 ಎಸೆತಗಳಲ್ಲಿ 6 ಬೌಂಡರಿ ಸಹಿತ 50 ರನ್ ಸಿಡಿಸಿ ನಿರ್ಗಮಿಸಿದರು.