ಮಧ್ಯಪ್ರದೇಶದ ಪೆಂಚ್ ಹುಲಿ ಸಂರಕ್ಷಿತ ಪ್ರದೇಶದ ಲೆಜೆಂಡ್ರಿ ಹುಲಿ “ಕಾಲರ್‌ವಾಲಿ” ವಯೋಸಹಜ ಕಾರಣದಿಂದ ಶನಿವಾರ ಸಂಜೆ ಸಾವನ್ನಪ್ಪಿದೆ. 17 ವರ್ಷದ ಹುಲಿ ತನ್ನ ಜೀವಿತಾವಧಿಯಲ್ಲಿ 29 ಮರಿಗಳಿಗೆ ಜನ್ಮ ನೀಡಿ “ಸೂಪರ್ ಮಾಮ್” ಮಾರತರಂ ಎಂದೂ ಪ್ರಸಿದ್ಧಿಯಾಗಿತ್ತು. ಈ ಲೆಜೆಂಡ್ರಿ ಹೆಣ್ಣುಹುಲಿ ಮಧ್ಯಪ್ರದೇಶದ ಪೆಂಚ್ ಹುಲಿ ಸಂರಕ್ಷಿತ ಪ್ರದೇಶ (PTR) ದಲ್ಲಿ ವಾಸವಿತ್ತು.
ಅರಣ್ಯ ಇಲಾಖೆ ಈ ಸೂಪರ್ ಅಮ್ಮನಿಗೆ ಟಿ-15 ಎಂದು ಅಧಿಕೃತವಾದ ಹೆಸರು ನೀಡಿತ್ತು. ಆದರೂ ಸ್ಥಳೀಯರು ಅವಳನ್ನು ಪ್ರೀತಿಯಿಂದ ಕಾಲರ್ ವಾಲಿ ಎಂದು ಕರೆಯುತ್ತಿದ್ದರು. ಈ T-15 ಎಂದೂ ಕರೆಯಲ್ಪಡುವ ಹುಲಿಯು 2008 ಮತ್ತು 2018 ರ ನಡುವೆ ಅಂದರೆ ಹನ್ನೊಂದು ವರ್ಷಗಳ ಅವಧಿಯಲ್ಲಿ 29 ಮರಿಗಳಿಗೆ ಜನ್ಮ ನೀಡಿತ್ತು.
“ಹುಲಿಗೆ ವಯಸ್ಸಾದ ಕಾರಣ ಅಸ್ವಸ್ಥವಾಗಿತ್ತು. ಕಾಲರ್ ವಾಲಿ ಹುಲಿ ಕೊನೆಯದಾಗಿ ಜನವರಿ 14 ರಂದು ಭೂರಾ ದೇವ್ ನುಲ್ಲಾ ಬಳಿ ಮಲಗಿರುವಂತೆ ಕಾಣಿಸಿಕೊಂಡಿತ್ತು. ನಿರಂತರ ಪಶುವೈದ್ಯರ ನಿಗಾದಲ್ಲಿದ್ದ ಹುಲಿಗೆ ನಡೆಯಲು ಸಾಧ್ಯವಾಗುತ್ತಿರಲಿಲ್ಲ. ದುರಾದೃಷ್ಟವಶಾತ್ ಶನಿವಾರ ಸಂಜೆ 6.15ಕ್ಕೆ ಕೊನೆಯುಸಿರೆಳೆದಿದೆ ಎಂದು ಪೆಂಚ್ ಟೈಗರ್ ರಿಸರ್ವ್ ಕ್ಷೇತ್ರ ನಿರ್ದೇಶಕ ಅಲೋಕ್ ಮಿಶ್ರಾ ತಿಳಿಸಿದ್ದಾರೆ.
ಮರಣೋತ್ತರ ಪರೀಕ್ಷೆಯ ನಂತರ ಸಾವಿಗೆ ನಿಖರವಾದ ಕಾರಣ ತಿಳಿಯಲಿದೆ ಆದರೆ ಪ್ರಾಥಮಿಕವಾಗಿ ಇದು ವೃದ್ಧಾಪ್ಯದಿಂದ ಉಂಟಾದ ಸಾವು ಎಂದು ಅವರು ಹೇಳಿದ್ದಾರೆ.
ಹುಲಿ ಮರಿಯಾಗಿದ್ದಾಗಲೇ ಮಾರ್ಚ್ 2008 ರಲ್ಲಿ ಅರಣ್ಯ ಅಧಿಕಾರಿಗಳು ರೇಡಿಯೋ ಕಾಲರ್ ಅಳವಡಿಸಿದ್ದರು. ನಂತರ ರೇಡಿಯೋ ಕಾಲರ್ ತನ್ನ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿತು ಮತ್ತೆ ಜನವರಿ 2010ರಲ್ಲಿ ರೇಡಿಯೋ ಕಾಲರ್ ಅನ್ನು ಅಳವಡಿಸಲಾಗಿತ್ತು. ಹೀಗಾಗಿ ಹುಲಿಗೆ ಕಾಲರ್ ವಾಲಿ ಎಂದು ಹೆಸರು ಬಂತು. “ಕಾಲರ್ ವಾಲಿ” ಪ್ರವಾಸಿಗರಲ್ಲಿ ಅತ್ಯಂತ ಜನಪ್ರಿಯ ಹುಲಿಯಾಗಿತ್ತು. 2005ರಲ್ಲಿ ಚಾರ್ಜರ್ ಎಂದು ಕರೆಯಲ್ಪಡುವ ಬಡಿಮಾಡ ಮತ್ತು T 1 ಎಂದು ಜನಪ್ರಿಯವಾಗಿರುವ T 7 ಗೆ ಜನಿಸಿತು. 2008 ರಲ್ಲಿ ಡೆಹ್ರಾಡೂನ್‌ನ ತಜ್ಞರ ತಂಡವು ಕಾಲರ್ ವಾಲಿ ಮೇಲೆ ರೇಡಿಯೊ ಕಾಲರ್ ಅನ್ನು ಅಳವಡಿಸಿತ್ತು ಎಂದು ತಿಳಿಸಿದ್ದಾರೆ.

ಮುಂದುವರೆದು, ಮೇ 2008 ರಲ್ಲಿ ಕಾಲರ್ ವಾಲಿ ಮೂರು ಮರಿಗಳಿಗೆ ಜನ್ಮ ನೀಡಿದ್ದಾದರು ಅವು ಬದುಕಲು ಸಾಧ್ಯವಾಗಲಿಲ್ಲ. ಆದರೆ “ಅಕ್ಟೋಬರ್ 2010 ರಲ್ಲಿ, ಒಂದೇ ಬಾರಿಗೆ ಐದು ಮರಿಗಳಿಗೆ ಜನ್ಮ ನೀಡಿತ್ತು ಇದರ ಪರಿಣಾಮ ವನ್ಯಜೀವಿ ಪ್ರಿಯರಲ್ಲಿ ಜನಪ್ರಿಯತೆಯನ್ನು ಹೆಚ್ಚಿಸಿತು ಎಂದಿದ್ದಾರೆ.
“16 ವರ್ಷಗಳಿಗಿಂತ ಹೆಚ್ಚು ಕಾಲ ಕಾಡಿನಲ್ಲಿ ವಾಸಿಸುತ್ತಿದ್ದ ಕಾಲರ್ ವಾಲಿಯ ಬದುಕು ಐತಿಹಾಸಿಕ ದಾಖಲೆಯಾಗಿದೆ. ತನ್ನ ಹೆಣ್ಣು ಮರಿಯನ್ನು ಪನ್ನಾ ಹುಲಿ ಸಂರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಿದ್ದರಿಂದ ಆಕೆಯ ಪರಂಪರೆ ಪೆಂಚ್‌ಗೆ ಸೀಮಿತವಾಗಿಲ್ಲ ಬೇರೆ ಕಡೆಗೂ ವಿಸ್ತಾರಗೊಂಡಿದೆ ಎಂದು ಜಬಲ್ಪರದ ರಾಜ್ಯ ಅರಣ್ಯದ ವಿಜ್ಞಾನಿ ಅನಿರುದ್ಧ ಮಜುಂದಾರ್ ಹೇಳಿದರು.
ಜನವರಿ 14 ರಂದು ಹುಲಿ ಸಾವನಪ್ಪಿದ್ದು ಅದರ ಅಂತ್ಯಕ್ರಿಯೆಯಲ್ಲಿ ಹಲವಾರು ಸ್ಥಳೀಯರು ಭಾಗವಹಿಸಿದ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೆಲವರು ಹುಲಿಗೆ ಹಾಕಲು ಹೂಮಾಲೆಯೊಂದಿಗೆ ಬಂದಿದ್ದರೆ, ಇತರರು ಹುಲಿಯ ಅಂತಿಮ ನಮನ ಸಲ್ಲಿಸಲು ಕೈ ಮುಗಿದು ನಿಂತಿದ್ದಾರೆ. ಈ ಚಿತ್ರಗಳು ಸಹ ಛಾಯಾಗ್ರಾಹಕರೊಬ್ಬರು ಕ್ಲಿಕ್ಕಿಸಿದ್ದಾರೆ.
ಕಲಾರ್ ವಾಲಿ ಸಾವಿಗೆ ಅನೇಕ ರಾಜಕೀಯ ನಾಯಕರು, ಗಣ್ಯರು ಸಹ ಸಂತಾಪ ವ್ಯಕ್ತಪಡಿಸಿದ್ದಾರೆ.