ಮಾನ ಮರ್ಯಾದೆ ಇಲ್ವಾ ಈ ಜನಪ್ರತಿನಿಧಿಗಳಿಗೆ ಸಿಎಂ ಮಾತಿಗೂ ಬೆಲೆ ಕೊಡಲ್ಲ ಇವರು. ಕಾಮಗಾರಿ ಮುಗಿದ 22 ಸಾವಿರ ಕೋಟಿ ರೂ. ಬಿಲ್ ಬಾಕಿ ಇನ್ನೂ ಇದೆ ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಗುಡುಗಿದ್ದಾರೆ.
ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದು ವರ್ಷ 2 ತಿಂಗಳಿಂದ ಹೋರಾಟ ಮಾಡುತ್ತಿದ್ದೇವೆ. ಬಿಲ್ ಕ್ಲಿಯರ್ ಮಾಡಿ ಅಂತ. ಸಿಎಂ ಮಾತಿಗೂ ಬೆಲೆ ಇಲ್ಲದಂತಾಗಿದೆ. 22 ಸಾವಿರ ಕೋಟಿ ಬಿಲ್ ಪೆಂಡಿಂಗ್ ಇದೆ. ಕೆಲವರದು 3 ವರ್ಷಗಳಿಂದ ಬಾಕಿ ಇದೆ ಎಂದರು.
ನನ್ನ ಜೀವನದಲ್ಲಿ ನೋಡಿದ ಅತ್ಯಂತ ಭ್ರಷ್ಟ ಸರ್ಕಾರ ಇದಾಗಿದೆ. ಇದರಲ್ಲಿ ಬೊಮ್ಮಾಯಿ ಸೇರಿದಂತೆ ಎಲ್ಲರೂ ಇದ್ದಾರೆ. ಭ್ರಷ್ಟಾಚಾರದಲ್ಲಿ ಯಾರಿಗೂ ರ್ಯಾಂಕಿಂಗ್ ಕೊಡೋಕೆ ಆಗಲ್ಲ. ಎಲ್ಲರೂ ಒಬ್ಬರಿಗಿಂತ ಒಬ್ಬರು ದೊಡ್ಡವರಿದ್ದಾರೆ ಎಂದು ಅವರು ಗಂಭೀರ ಆರೋಪ ಮಾಡಿದರು.

ರಾಜ್ಯದಲ್ಲಿನ ಭ್ರಷ್ಟಾಚಾರ ಹಾಗೂ ಬಿಲ್ ಪಾವತಿ ಮಾಡದೇ ಸತಾಯಿಸುತ್ತಿರುವುದರ ವಿರುದ್ಧ ಪ್ರಧಾನಿ ನರೇಂದ್ರ ಮೋದಿಗೆ ಮತ್ತೊಂದು ಪತ್ರ ಬರೆಯಲು ಮುಂದಾಗಿದ್ದೇವೆ ಎಂದು ಕೆಂಪಣ್ಣ ತಿಳಿಸಿದರು.
ಸ್ವಾತಂತ್ರ್ಯ ದಿನಾಚರಣೆ ವೇಳೆ ಮೋದಿ ಅವರು ಭ್ರಷ್ಟಾಚಾರದ ಬಗ್ಗೆ ಪ್ರಸ್ತಾಪ ಮಾಡಿದ್ದರು. ದೇಶಕ್ಕೆ ಭ್ರಷ್ಟಾಚಾರ ದೊಡ್ಡ ಮಾರಕ, ಶತ್ರು ಎಂದಿದ್ದರು. ಮೋದಿ ಮಾತನ್ನು ಉಲ್ಲೇಖಿಸಿ ಅಭಿನಂದನೆ ಪತ್ರ ಬರೆಯಲು ಮುಂದಾಗಿದ್ದೇವೆ. ಜೊತೆಗೆ ಒಂದೂವರೆ ವರ್ಷವಾದರೂ ಗುತ್ತಿಗೆದಾರರು ನೀಡಿರುವ ದೂರಿಗೆ ಯಾವ ಕ್ರಮಕೈಗೊಂಡಿದ್ದೀರಿ ಎಂಬುದನ್ನೂ ಪ್ರಶ್ನಿಸುತ್ತೇವೆ ಎಂದು ಅವರು ಹೇಳಿದರು.
ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಎಲ್ಲಾ ಮಾಹಿತಿ ಕೊಟ್ಟಿದ್ದೇವೆ. ಸದನದಲ್ಲಿ ನಮ್ಮ ಸಮಸ್ಯೆ ಪ್ರಸ್ತಾಪಿಸುತ್ತೇನೆ ಎಂದು ಅವರು ಭರವಸೆ ನೀಡಿದ್ದಾರೆ. ಆದರೆ ನಾನು ಯಾವುದೇ ದಾಖಲೆಗಳನ್ನ ಸಿದ್ದರಾಮಯ್ಯಗೆ ಕೊಟ್ಟಿಲ್ಲ. ನ್ಯಾಯಾಂಗ ತನಿಖೆ ಮಾಡಿದರೆ ಮಾತ್ರ ದಾಖಲೆ ಕೊಡುತ್ತೇವೆ. ದಾಖಲೆಯನ್ನು ನಾನು ಬಹಿರಂಗ ಪಡಿಸಿದರೆ ಗುತ್ತಿಗೆದಾರರಿಗೆ ತೊಂದರೆ ಆಗುತ್ತದೆ ಎಂಬ ಭಯ ಇದೆ ಎಂದು ಅವರು ವಿವರಿಸಿದರು.