ರಾಜ್ಯ ರಾಜಕೀಯದಲ್ಲಿ ಮುಂದಿನ ವಿಧಾನಸಭಾ ಚುನಾವಣೆಯದ್ದೇ ಜೋರು ಚರ್ಚೆ. ಅದರಲ್ಲೂ ಮುಂದೆ ಯಾವುದೇ ಪಕ್ಷ ಗೆದ್ದು ಅಧಿಕಾರಕ್ಕೆ ಬಂದರೂ ದಲಿತರನ್ನು ಸಿಎಂ ಮಾಡಲಿದ್ದಾರಾ? ಎಂಬ ಚರ್ಚೆಯಂತೂ ನಡೆಯುತ್ತಲೇ ಇದೆ. ಈಗಲೂ ಕಾಂಗ್ರೆಸ್ನಲ್ಲಿ ಮುಂದಿನ ಸಿಎಂ ಸಿದ್ದರಾಮಯ್ಯ ಅಥವಾ ಡಿ.ಕೆ ಶಿವಕುಮಾರ್ ಎಂದು ಹೇಳುತ್ತಿದ್ದಾರೆಯೇ ಹೊರತು ಇಲ್ಲಿಯೂ ಯಾವೊಬ್ಬ ದಲಿತ ನಾಯಕರ ಹೆಸರೂ ಕೇಳಿ ಬರುತ್ತಿಲ್ಲ. ಇದಕ್ಕೆ ಕಾರಣ ಹಲವು ವರ್ಷಗಳಿಂದಲೂ ದಲಿತ ಮುಖ್ಯಮಂತ್ರಿಯ ಕನಸು ಮರೀಚಿಕೆಯಾಗಿಯೇ ಉಳಿದಿರುವುದು. ದಲಿತ ಸಿಎಂ ಕೂಗು ಕೇಳಿ ಬಂದ ಕೂಡಲೇ ಪ್ರಬಲ ಸಮುದಾಯದವರು ಅದನ್ನು ದಮನ ಮಾಡುವುದು. ಈ ಹಿಂದೆ ಎಷ್ಟೋ ಬಾರಿ ಕಾಂಗ್ರೆಸ್ನಲ್ಲಿ ದಲಿತರಿಗೆ ಸಿಎಂ ಸ್ಥಾನ ನೀಡುವ ಅವಕಾಶಗಳಿದ್ದರೂ ಸೋ ಕಾಲ್ಡ್ ಸೆಕ್ಯೂಲರ್ ಪಾರ್ಟಿ ನಾಯಕರೇ ಇದಕ್ಕೆ ತಣ್ಣೀರು ಎರಚಿದ್ರು.
ಹೌದು, ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಎಷ್ಟೋ ಬಾರಿ ದಲಿತರಿಗೆ ಸಿಎಂ ಆಗುವ ಅವಕಾಶಗಳಿದ್ದವು. ಉದಾಹರಣೆಗೆ 2008ರಲ್ಲಿ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ವಿಧಾನಸಭಾ ಚುನಾವಣೆ ಎದುರಿಸಿದ್ದದ್ದು. ಆಗ ಕಾಂಗ್ರೆಸ್ಗೆ ಬಹುಮತ ಸಿಗಲಿಲ್ಲವಾದರೂ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದಿತ್ತು. ಈ ಸಂದರ್ಭದಲ್ಲಿ ಹೈಕಮಾಂಡ್ ಮನಸ್ಸು ಮಾಡಿದ್ರೆ ಮಲ್ಲಿಕಾರ್ಜುನ ಖರ್ಗೆ ಸಿಎಂ ಆಗಬಹುದಿತ್ತು. ಇನ್ನು, 2013ರಲ್ಲಿ ಕಾಂಗ್ರೆಸ್ಗೆ ಬಹುಮತ ಸಿಕ್ಕರೂ ಅಂದಿನ ಕೆಪಿಸಿಸಿ ಅಧ್ಯಕ್ಷರಾಗಿದ್ದ ದಲಿತ ನಾಯಕ ಡಾ. ಜಿ ಪರಮೇಶ್ವರ್ ಅವರನ್ನು ಬೇಕಂತಲೇ ವಿಧಾನಸಭಾ ಚುನಾವಣೆಯಲ್ಲಿ ಸೋಲಿಸಿ ಸಿಎಂ ಸ್ಥಾನ ತಪ್ಪಿಸಲಾಯ್ತು. ಬೇಕಿದ್ದರೆ ಎಂಎಲ್ಸಿ ಮಾಡಿ ಸಿಎಂ ಮಾಡಬಹುದಿತ್ತು, ಆದರೆ ಸೋತ ಕಾರಣ ದಲಿತ ಸಿಎಂ ಧ್ವನಿ ಆಡಗಿ ಹೋಯ್ತು.
ಯಾವುದೇ ಸಂದರ್ಭದಲ್ಲಾದ್ರೂ ಬೇರೆ ಸಮುದಾಯದಿಂದ ಸಿಎಂ ಕೂಗು ಕೇಳಿ ಬಂದರೆ ಅವರ ಬೆನ್ನಿಗೆ ನಿಲ್ಲೋದು ದಲಿತರು. ಆದರೆ, ದಲಿತ ಸಿಎಂ ಕೂಗು ಕೇಳಿ ಬಂದಾಗ ಯಾವ ಸಮುದಾಯದ ನಾಯಕರು ಇವರ ಬೆನ್ನಿಗೆ ನಿಲ್ಲೋದಿಲ್ಲ. ರಾಜ್ಯ ಆಳುವ ಸಾಮರ್ಥ್ಯ ಇದ್ದರೂ ದಲಿತ ಎಂಬ ಕಾರಣಕ್ಕೆ ಅವಕಾಶ ಸಿಗುತ್ತಿಲ್ಲ. ಸಾಮರ್ಥ್ಯ ಹೊಂದಿದ್ದರೂ, ಕಾನೂನು ಅರಿವಿದ್ದರೂ ದಲಿತರಿಗೆ ಸಿಎಂ ಸ್ಥಾನ ನೀಡೋಕೆ ಯಾವ ಪಕ್ಷಕ್ಕೂ ಇಷ್ಟ ಇಲ್ಲ. ಹೀಗಿದ್ದರೂ ಮತ್ತೊಮ್ಮೆ ದಲಿತ ಸಿಎಂ ಕೂಗು ಕೇಳಿ ಬರುತ್ತಿದೆ.
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲೋಕೆ ಬೇಕಾದ ವಾತಾವರಣ ನಿರ್ಮಾಣವಾಗಿದೆ. ಅತಿಯಾದ ಆತ್ಮ ವಿಶ್ವಾಸದಿಂದ ಇರುವ ಕಾಂಗ್ರೆಸ್ಗೆ ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್ ನಡುವಿನ ಒಳ ಜಗಳವೇ ಮುಳ್ಳಾಗಬಹುದು. ಈಗಲೂ ಮುಂದಿನ ಸಿಎಂ ಯಾರು ಎಂಬುದೇ ಚರ್ಚೆ, ಈ ವೇಳೆ ಸ್ವಾಭಾವಿಕವಾಗಿ ಕಾಂಗ್ರೆಸ್ನಲ್ಲಿ ಕೇಳಿ ಬರುವುದು ಸಿದ್ದರಾಮಯ್ಯನವರ ಹೆಸರು. ಇವರು ಉತ್ತಮ ಆಡಳಿತ ನೀಡಿದ್ದರಿಂದ ಸಿದ್ದರಾಮಯ್ಯ ಹೆಸರು ಕೇಳಿ ಬರೋದು ಸಹಜ.

ಇನ್ನೊಂದೆಡೆ ಕಾಂಗ್ರೆಸ್ ಶಿಸ್ತಿನ ಸಿಪಾಯಿ ಎಂದೇ ಕರೆಯಲಾಗುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೆಸರು ಕೂಡ ಸಿಎಂ ಸ್ಥಾನಕ್ಕೆ ಕೇಳಿ ಬರುತ್ತಿದೆ. ಇದಕ್ಕೆ ಕಾರಣ ಇವರು ಒಕ್ಕಲಿಗ ಸಮುದಾಯ ಎಂಬುದು. ವಿದ್ಯಾರ್ಥಿ ದೆಸೆಯಿಂದಲೇ ಕಾಂಗ್ರೆಸ್ನಲ್ಲಿ ಗುರುತಿಸಿಕೊಂಡು ಬೆಳೆದು ಬಂದ ಇವರು ಸಿಎಂ ಗಾದಿಗೆ ಪೈಪೋಟಿ ನೀಡುತ್ತಿರೋದು ನಿಜ. ಮಂಡ್ಯ, ರಾಮನಗರ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಒಕ್ಕಲಿಗ ಮತ ‘ಕೈ’ ಹಿಡಿದರೆ ಡಿಕೆಶಿ ಮುಂದಿನ ಸಿಎಂ ಆಗಬಹುದು ಎನ್ನಬಹುದು. ಎಸ್. ಎಂ ಕೃಷ್ಣ ಬಳಿಕ ಕಾಂಗ್ರೆಸ್ನಲ್ಲಿ ಯಾರಿಗಾದರೂ ಒಕ್ಕಲಿಗರಿಗೆ ಸಿಎಂ ಸ್ಥಾನಕ್ಕೆ ಸಿಕ್ಕರೆ ಅದು ಡಿಕೆಶಿಗೆ ಮಾತ್ರ.
ಇನ್ನೊಂದೆಡೆ ಕಾಂಗ್ರೆಸ್ನಲ್ಲಿ ಸಿಎಂ ಸ್ಥಾನದ ಮೇಲೆ ಲಿಂಗಾಯತ ಸಮುದಾಯದ ನಾಯಕರು ಹದ್ದಿನ ಕಣ್ಣಿಟ್ಟಿದ್ದಾರೆ. ವೀರೇಂದ್ರ ಪಾಟೀಲ್ ನಂತರ ಲಿಂಗಾಯತ ಸಮುದಾಯದ ಯಾರು ಕಾಂಗ್ರೆಸ್ನಲ್ಲಿ ಈವರೆಗೂ ಸಿಎಂ ಆಗಿಲ್ಲ. ಒಂದು ವೇಳೆ ಅಂತಹ ಸಂದರ್ಭ ಬಂದರೆ ಶಾಮನೂರು ಶಿವಶಂಕರಪ್ಪ, ಎಚ್. ಕೆ. ಪಾಟೀಲ್, ಎಂ. ಬಿ. ಪಾಟೀಲ್ ಹಲವರ ಹೆಸರು ಮುಂಚೂಣಿಯಲ್ಲಿದೆ.
ಹೀಗಿರುವಾಗಲೇ ದಲಿತ ಸಿಎಂ ರೇಸ್ನಲ್ಲಿ ಮತ್ತೆ ಮಲ್ಲಿಕಾರ್ಜುನ ಖರ್ಗೆ, ಜಿ. ಪರಮೇಶ್ವರ್ ಮತ್ತು ಮುನಿಯಪ್ಪ ಹೆಸರು ಕೇಳಿ ಬರ್ತಿದೆ. ಈ ಬಾರಿಯಾದರೂ ಡಿ.ಕೆ ಶಿವಕುಮಾರ್, ಸಿದ್ದರಾಮಯ್ಯ ಹೊರತುಪಡಿಸಿ ದಲಿತ ಸಿಎಂಗೆ ಹೈಕಮಾಂಡ್ ಮಣೆ ಹಾಕಲಿದೆಯಾ? ನೋಡಬೇಕು.

