2023ರ ವಿಧಾನಸಭೆ ಚುನಾವಣೆಯನ್ನು ಗುರಿಯಲ್ಲಿಟ್ಟುಕೊಂಡು ರಾಜ್ಯದಲ್ಲಿ ತೃತೀಯ ಶಕ್ತಿಯಾಗಿ ಹೊರಹೊಮ್ಮಲು ಜೆಡಿಎಸ್ ಸರ್ವ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಪಕ್ಷದ ವರಿಷ್ಠ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಅವರು ಪಕ್ಕಾ ಕಾರ್ಯತಂತ್ರ ರೂಪಿಸುತ್ತಿದ್ದು, ‘ಮನೆ ಬಾಗಿಲಿಗೆ’ ಪಕ್ಷದ ಕಾರ್ಯಕರ್ತರನ್ನು ಬರಮಾಡಿಕೊಂಡು ಸಮಾಲೋಚನೆ ನಡೆಸಲು ಮುಂದಾಗಿದ್ದಾರೆ.
ಮುಂಬರುವ ಚುನಾವಣೆಯ ಪರವಾಗಿ ರಾಜ್ಯದ ಉದ್ದಗಲಕ್ಕೂ ಇರುವ ಕಾರ್ಯಕರ್ತರಿಗೆ, ಮುಖಂಡರಿಗೆ ಚೈತನ್ಯ ತುಂಬುವುದು ಸೇರಿದಂತೆ ಪಕ್ಷವನ್ನು ಬಲಿಷ್ಠಗೊಳಿಸಲು ಎಲ್ಲಾ ತಂತ್ರಗಳನ್ನು ಅವರು ರೂಪಿಸುತ್ತಿದ್ದಾರೆ. ತಳಮಟ್ಟದಿಂದ ಪಕ್ಷವನ್ನು ಬಲವಾಗಿ ಮೇಲೆತ್ತಲು ಅಗತ್ಯ ಇರುವ ಎಲ್ಲಾ ಕ್ರಮಗಳ ಜೊತೆಗೆ, ‘ತಮ್ಮ ಪರಿಕಲ್ಪನೆಯಲ್ಲಿ’ ಪಕ್ಷಕ್ಕೆ ಪುನಶ್ಚೇತನ ನೀಡಲು ಮಾಜಿ ಮುಖ್ಯಮಂತ್ರಿಗಳು ಕ್ರಮ ವಹಿಸುತ್ತಿದ್ದಾರೆ.
ಜಿಡಿಎಸ್ಅನ್ನು ಕಾಂಗ್ರೆಸ್ ಮತ್ತು ಬಿಜೆಪಿ ಎರಡು ರಾಷ್ಟ್ರೀಯ ಪಕ್ಷಗಳು ನಿರ್ಲಕ್ಷ್ಯ ಮಾಡಿವೆ. ಜೆಡಿಎಸ್ ಕನ್ನಡಿಗರ ಏಕೈಕ ಆಯ್ಕೆಯಾಗಿದ್ದು, ಮುಂದಿನ ಚುನಾವಣೆಯಲ್ಲಿ ಪಕ್ಷದ ಮುಂದಿರುವ ಆಯ್ಕೆಗಳು ಹಾಗೂ ಸವಾಲುಗಳು, ಅವುಗಳ ಪರಿಹಾರದ ಬಗ್ಗೆಯೂ ಅವರು ಚರ್ಚೆ ನಡೆಸಿ ಸೂಚನೆಗಳನ್ನು ನೀಡಲಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ರಾಜ್ಯದ ಹಿತಾಸಕ್ತಿಗಳ ಪ್ರಶ್ನೆ ಬಂದಾಗ ರಾಷ್ಟ್ರೀಯ ಪಕ್ಷಗಳು ಇಬ್ಬಗೆಯ ನೀತಿ ತಾಳಿವೆ. ಜೆಡಿಎಸ್ ಮಾತ್ರ ಕನ್ನಡಿಗರಿಗೆ ಮಿಡಿಯುವ ಪಕ್ಷವಾಗಿದ್ದು, ಅದನ್ನು ಜನರಿಗೆ ಸಮರ್ಥವಾಗಿ ಮುಟ್ಟಿಸುವುದು ಸೇರಿ, ರಾಷ್ಟ್ರೀಯ ಪಕ್ಷಗಳು ಒಡ್ಡುವ ಸವಾಲುಗಳ ಬಗ್ಗೆ ಕೂಡ ಕುಮಾರಸ್ವಾಮಿ ಅವರು ವಿವರವಾಗಿ ಚರ್ಚೆ ಮಾಡಲಿದ್ದಾರೆ.
ಈ ಬಗ್ಗೆ ಮಾಧ್ಯಮಗಳ ಜತೆ ಮಾತನಾಡಿದ ಹೆಚ್.ಡಿ.ಕುಮಾರಸ್ವಾಮಿ ಅವರು; “ಸದ್ಯಕ್ಕೆ ಕನ್ನಡಿಗರ ಕಷ್ಟ ಎಂದು ಬಂದಾಗ ಪ್ರತಿಯೊಂದು ವಿಷಯಕ್ಕೂ ದೆಹಲಿಯತ್ತ ನೋಡುವ ದುಸ್ಥಿತಿ ಇದೆ. ಕಾಂಗ್ರೆಸ್ ಮತ್ತು ಬಿಜೆಪಿ ದಿಲ್ಲಿ ಸಂಸ್ಕೃತಿಯಿಂದ ರಾಜ್ಯದ ಹಿತವನ್ನು ನಿರಂತರವಾಗಿ ಬಲಿಗೊಡುತ್ತ ಬಂದಿದೆ. ಇದಕ್ಕೆ ಕಡಿವಾಣ ಹಾಕುವ ಅಗತ್ಯ ಇದೆ. 2023ರ ಚುನಾವಣೆಯಲ್ಲಿ ಕನ್ನಡಿಗರೆಲ್ಲಾ ಒಂದಾಗಿ ಪರಿಹಾರ ಕಂಡುಕೊಳ್ಳಬೇಕಾಗಿದೆ” ಎಂದು ಹೇಳಿದ್ದಾರೆ.
“ರಾಷ್ಟ್ರೀಯ ಪಕ್ಷಗಳು ಎಷ್ಟೇ ಪ್ರಯತ್ನ ಮಾಡಿದರು ಜೆಡಿಎಸ್ ಪಕ್ಷವನ್ನು ಮುಗಿಸಲು ಸಾಧ್ಯವಾಗಿಲ್ಲ. ತುಳಿದಷ್ಟು ಅಷ್ಟೇ ಬಲವಾಗಿ ಪುಟಿದೆದ್ದು ಬರುವುದು ನಮ್ಮ ಪಕ್ಷ. ಸಮರ್ಪಣಾ ಮನೋಭಾವದ ಕಾರ್ಯಕರ್ತರಿಂದ ಇದು ಸಾಧ್ಯವಾಗಿದೆ” ಎಂದು ಅವರು ಹೇಳಿದ್ದಾರೆ.