ದಿವಂಗತ ನಟ ರೆಬಲ್ ಸ್ಟಾರ್ ಅಂಬರೀಶ್ ರಾಜಕಾರಣ ಮತ್ತು ಚಿತ್ರರಂಗದಲ್ಲೂ ಹೆಸರು ಮಾಡಿದವರು. ಎರಡು ಕ್ಷೇತ್ರಗಳಲ್ಲೂ ತೊಡಗಿಸಿಕೊಂಡು ಜನ ಸೇವೆ ಮಾಡಿದವರು. ಮೂರು ಬಾರಿ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಯಲ್ಲಿ ನಿಂತು ಗೆದ್ದಿದ್ದ ಅಂಬರೀಶ್ ಮಂಡ್ಯಕ್ಕೆ ವಿಶೇಷ ಕೊಡುಗೆ ನೀಡಿದ್ದಾರೆ. ಇವರ ಬಳಿ ಪತ್ನಿ ಸುಮಲತಾ ಅಂಬರೀಶ್ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದು ಸಂಸದೆಯಾಗಿ ಜನ ಸೇವೆ ಮಾಡುತ್ತಿದ್ದಾರೆ. ಈಗ ಜೂನಿಯರ್ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಸರದಿ.
ಹೌದು, ಈ ಹಿಂದೆಯೇ ಜನ ಬಯಸಿದರೆ ನನ್ನ ತಂದೆಯವರ ತವರು ಕ್ಷೇತ್ರವಾದ ಮದ್ದೂರಿನಿಂದಲೇ ವಿಧಾನಸಭೆಗೆ ಸ್ಪರ್ಧಿಸುವೆ ಎಂದು ಹೇಳಿದ್ದ ಅಭಿಷೇಕ್ ಅಂಬರೀಶ್ ಈಗ ಮಂಡ್ಯದಲ್ಲಿ ಮನೆ ಕಟ್ಟಿಸುತ್ತಿದ್ದಾರೆ. 2019ರ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಜಿಲ್ಲೆಯ ಜನರಿಗೆ ಮಾತು ಕೊಟ್ಟಂತೆ ಸಂಸದೆ ಸುಮಲತಾ ಅಂಬರೀಶ್ ಸ್ವತಃ ಮನೆ ನಿರ್ಮಾಣಕ್ಕೆ ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆಯಾದರೂ ಇದರ ಹಿಂದಿನ ಉದ್ದೇಶವೇ ಬೇರೆ.
ಸದ್ಯ ಸುಮಲತಾ ಸ್ವತಃ ನಿವಾಸ ನಿರ್ಮಿಸುವುದರ ಹಿಂದೆ ಪುತ್ರ ಅಭಿಷೇಕ್ ರಾಜಕೀಯ ಭವಿಷ್ಯದ ಚಿಂತನೆ ದೂರದೃಷ್ಟಿ ಇದೆ ಎಂಬ ಮಾತುಗಳು ಕೇಳಿ ಬಂದಿವೆ. 2023ರ ವಿಧಾನಸಭೆ ಚುನಾವಣೆಯಲ್ಲಿ ಅಖಾಡಕ್ಕೆ ಇಳಿಯುವ ಮೂಲಕ ಅಭಿಷೇಕ್ ಅಂಬರೀಶ್, ರಾಜಕೀಯದಲ್ಲಿ ನೆಲೆ ಕಂಡುಕೊಳ್ಳುತ್ತಾರೆ. ಹಾಗಾಗಿ ಈಗ ಸ್ವಂತ ಮನೆ ನಿರ್ಮಾಣ ಮಾಡಲಾಗುತ್ತಿದೆ ಎಂದು ಮಂಡ್ಯ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಮುಂದಿನ ವಿಧಾನಸಭಾ ಚುನಾವಣೆಗೆ ಇನ್ನೂ 20 ತಿಂಗಳು ಬಾಕಿ ಇರುವಾಗಲೇ ಸುಮಲತಾ ಮಂಡ್ಯ-ಮದ್ದೂರು ನಡುವಿನ ಹನಕೆರೆ ಗ್ರಾಮದಲ್ಲಿ ಸ್ವಂತ ಮನೆ ನಿರ್ಮಾಣ ಮಾಡಲು ಮುಂದಾಗಿದ್ದಾರೆ. ತನ್ನ ಪುತ್ರನನ್ನು ಮುಂದಿನ ಚುನಾವಣೆಯಲ್ಲಿ ನಿಲ್ಲಿಸುವಂತೆ ಒತ್ತಾಯಿಸಿದ್ದ ತಮ್ಮ ಆಪ್ತ ಹನಕೆರೆ ಶಶಿ ಎಂಬುವರಿಂದ ಸ್ಥಳ ಖರೀದಿ ಮಾಡಿ ಅರ್ಧ ಎಕರೆ ಜಾಗದಲ್ಲಿ ಮನೆ ನಿರ್ಮಾಣ ಮಾಡುತ್ತಿದ್ದಾರೆ. ಈಗಾಗಲೇ ಗುದ್ದಲಿ ಪೂಜೆ ನೆರವೇರಿಸಲಾಗಿದೆ. ಮುಂದಿನ 6-7 ತಿಂಗಳಲ್ಲಿ ಮನೆ ನಿರ್ಮಾಣ ಕಾರ್ಯ ಪೂರ್ಣಗೊಳ್ಳುವ ಸಾಧ್ಯತೆ ಇದೆ.
ಅಂದಹಾಗೇ, ಸುಮಲತಾ ನಿವಾಸ ಗುದ್ದಲಿ ಪೂಜೆ ಬೆನ್ನಲ್ಲೇ ರಾಜಕೀಯ ವಲಯದಲ್ಲಿ ಶುರುವಾಗಿರುವ ಚರ್ಚೆಗೆ ಅಭಿಷೇಕ್ ಅವರು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಮದ್ದೂರು ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಾರೆ ಎಂಬ ಚರ್ಚೆ ಜೋರಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅಭಿಷೇಕ್, ಮಂಡ್ಯದಲ್ಲಿ ಮನೆ ಮಾಡೇ ಮಾಡ್ತೀವಿ ಅಂತಾ ಅಮ್ಮ ಮಾತು ಕೊಟ್ಟಿದ್ರು, ಹಾಗಾಗಿ ಮಾಡಿದ್ದೇವೆ ಎಂದಿದ್ದಾರೆ.
ಮುಂದುವರಿದ ಅವರು, ಎರಡು ವರ್ಷ ಬಾಡಿಗೆ ಮನೆಯಲ್ಲಿದ್ವೀ. ಈಗ ಶಶಿಯವರಿಂದ ಜಾಗ ತೆಗೆದುಕೊಂಡಿದ್ದೀವಿ. ಸರಳವಾಗಿ ಮನೆ ಮಾಡ್ತಿದ್ದೀವಿ. ಮದ್ದೂರು ಕ್ಷೇತ್ರದ ಚುನಾವಣೆಗೆ ಸ್ಪರ್ಧೆ ಮಾಡೋ ವಿಚಾರವಾಗಿ ಈಗಾಗಲೇ ಸ್ಪಷ್ಟನೆ ನೀಡಿದ್ದೀನಿ. ಅಭಿಮಾನಿಗಳಿಗೆ ನಾವು ಜೊತೆಯಲ್ಲಿರಬೇಕು, ಬೆಳೆಯಬೇಕು ಎಂಬ ಆಸೆ. ಇಲ್ಲಿಯವರೆಗು ಬೆಳಸಿದ್ದಾರೆ, ಮುಂದಕ್ಕೂ ಬೆಳೆಸುತ್ತಾರೆ. ಚುನಾವಣೆಗೆ ಸ್ಪರ್ಧೆ ಮಾಡೋದು ನಮ್ಮ ಇಚ್ಛೆಯಲ್ಲ, ಅದು ಜನರ ಇಚ್ಛೆ. ಮುಂದಕ್ಕೆ ಎಲ್ಲವೂ ನಿಮಗೆ ಗೊತ್ತಾಗುತ್ತೆ ಎಂದು ಪರೋಕ್ಷವಾಗಿ ಚುನಾವಣೆಗೆ ನಿಲ್ಲುವುದಾಗಿ ಹೇಳಿದರು.
ಇದೇ ವಿಚಾರಕ್ಕೆ ಮಾತಾಡಿದ ಸುಮಲತಾ ಅಂಬರೀಶ್, ಈಗ ಅಭಿಷೇಕ್ ನಿಮಾಗಳಲ್ಲಿ ನಟಿಸುತ್ತಿದ್ದಾರೆ. ಸಿನಿಮಾ ಕಡೆ ಹೆಚ್ಚು ಗಮನಕೊಟ್ಟಿದ್ದಾರೆ. ವಿಧಾನಸಭಾ ಚುನಾವಣೆಗೆ ಇನ್ನೂ 20 ತಿಂಗಳು ಇದೆ. ಆಗ ನೋಡೋಣ ಏನಾಗಲಿದೆ ಅಂತಾ. ಅಭಿಮಾನಿಗಳಿಂದ ಒತ್ತಾಯ ಬಂದರೆ ನೋಡೋಣ. ಸದ್ಯಕ್ಕಂತೂ ಸಿನಿಮಾಗಳ ಕಡೆ ಗಮನಹರಿಸಿದ್ದಾರೆ ಎಂದರು.
ಈ ಹಿಂದೆಯೇ ಅಭಿಷೇಕ್, ಜನ ಬಯಸಿದರಷ್ಟೇ ರಾಜಕಾರಣಕ್ಕೆ ಬರುತ್ತೇನೆಯೇ ಹೊರತು ವೈಯಕ್ತಿಕವಾಗಿ ರಾಜಕಾರಣಕ್ಕೆ ಬರಲು ಯಾವುದೇ ಮನಸ್ಸಿಲ್ಲ. ಒಂದು ವೇಳೆ ರಾಜಕೀಯ ಪ್ರವೇಶಿಸಿದರೆ ಅದು ತಂದೆ ಅಂಬರೀಷ್ ತವರು ಕ್ಷೇತ್ರವಾದ ಮದ್ದೂರಿನಿಂದಲೇ ಎಂದು ತಿಳಿಸಿದ್ದರು.
ಇನ್ನು, ನನ್ನ ತಂದೆಯ ಅಭಿಮಾನಿಗಳು, ಬೆಂಬಲಿಗರು ನಾನು ಚುನಾವಣೆಗೆ ನಿಲ್ಲಬೇಕು ಎಂದು ಬಯಸಿದ್ದಾರೆ. ಹೀಗಾಗಿ ರಾಜಕಾರಣಕ್ಕೆ ಪದಾರ್ಪಣೆ ಮಾಡುವ ನಿರ್ಧಾರಕ್ಕೆ ಬಂದಿದ್ದೇನೆ. ಮುಂದಿನ ಚುನಾವಣೆಯಲ್ಲಿ ನಿಲ್ಲಬೇಕು ಎಂದು ಯೋಚನೆ ಮಾಡಿ ತೀರ್ಮಾನ ತೆಗೆದುಕೊಂಡಿದ್ದೇನೆ. ನನ್ನ ತಾಯಿ ಸುಮಲತಾ ಅಂಬರೀಷ್ ಈಗಾಗಲೇ ರಾಜಕಾರಣದಲ್ಲಿದ್ದು ಸಂಸದೆಯಾಗಿ ಮಂಡ್ಯದಲ್ಲಿ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಜನರೂ ಸಹ ಅವರ ಕೆಲಸ ಮೆಚ್ಚಿಕೊಂಡಿದ್ದಾರೆ. ನಾನು ಅದೇ ದಾರಿಯಲ್ಲೇ ನಡೆಯುತ್ತೇನೆ ಎಂದು ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದಾರೆ ಅಭಿಷೇಕ್.
ಅಭಿಷೇಕ್ ಅಂಬರೀಶ್ ರಾಜಕೀಯ ಪ್ರವೇಶ ಮಾಡಿದರೆ ಯಾವ ಪಕ್ಷದಿಂದ ಚುನಾವಣೆಗೆ ನಿಲ್ಲುತ್ತಾರೆ ಎಂದು ಕಾದು ನೋಡಬೇಕು. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಅಭಿಷೇಕ್ ಸ್ಪರ್ಧಿಸುವ ಸಾಧ್ಯತೆ ಇದೆ. ಈಗಾಗಲೇ ಬಿಜೆಪಿಗೆ ಯಾವುದೇ ಕಾರಣಕ್ಕೂ ಹೋಗುವುದಿಲ್ಲ ಎಂಬ ಮಾತುಗಳು ಕೇಳಿ ಬಂದಿವೆ. ಹೀಗಾದಲ್ಲಿ ಮಾಜಿ ಸಿಎಂ ಪುತ್ರ ನಿಖಿಲ್ ಕುಮಾರಸ್ವಾಮಿಗೆ ಟಫ್ ಫೈಟ್ ನೀಡುವ ಸಾಧ್ಯತೆ ಇದೆ. ಮಂಡ್ಯದಲ್ಲಿ ಕುಮಾರಸ್ವಾಮಿ ಫ್ಯಾಮಿಲಿ ವರ್ಸಸ್ ಅಂಬರೀಶ್ ಕುಟುಂಬ ಎಂಬಾತಾಗಿದೆ.