ಮುಂದಿನ ವರ್ಷ ಏಪ್ರಿಲ್-ಮೇ ತಿಂಗಳಲ್ಲಿ ನಡೆಯುವಂತಹ ಪಶ್ಚಿನ ಬಂಗಾಳ ಚುನಾವಣೆ ಬಿಜೆಪಿಗೆ ನಿಜಕ್ಕೂ ಪ್ರತಿಷ್ಠೆಯ ಪ್ರಶ್ನೆ. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಎರಡನೇ ಅವಧಿಗೆ ಅಧಿಕಾರಕ್ಕೇರಿದ ನಂತರ ಎದುರಾಗುವ ಹೈ ವೋಲ್ಟೇಜ್ ಚುನಾವಣೆ ಇದಾಗಿದೆ.
ಬಿಜೆಪಿ 2014ರಲ್ಲಿ ಅಧಿಕಾರಕ್ಕೇರಬೇಕಾದರೆ ಅದು ಮೊತ್ತಮೊದಲು ಗೆಲ್ಲಬೇಕಾಗಿದ್ದು ಉತ್ತರಪ್ರದೇಶದ ಜನರ ಜನಮಾನಸವನ್ನು. ಅಲ್ಲಿನ ಜನರು ಬಿಜೆಪಿಗೆ ಸಾಥ್ ನೀಡಿದರೆ ಉಳಿದೆಲ್ಲವೂ ಸಾಧ್ಯ ಎನ್ನುವಂತೆ, ರಾಮ ಮಂದಿರ, ಹಿಂದುತ್ವವೆಂಬ ಅಸ್ತ್ರದಿಂದ ಉತ್ತರ ಪ್ರದೇಶದ ಅತೀ ಹೆಚ್ಚು ಸೀಟುಗಳನ್ನು ಕಬಳಿಸಿತು. ಈಗ, ಅದೇ ರೀತಿ ಪ್ರತಿಷ್ಠೆಯಿಂದ ಗೆಲ್ಲಲು ಹೊರಟಿರುವ ಇನ್ನೊಂದು ರಾಜ್ಯ ಪಶ್ಚಿಮ ಬಂಗಾಳ. ಎಲ್ಲಾ ಕಡೆಯಿಂದ ಸುತ್ತಿ ಬಳಸಿ ಕೊನೆಗೆ ಪಶ್ಚಿನ ಬಂಗಾಳವನ್ನು ಇನ್ನೊಂದು ಉತ್ತರ ಪ್ರದೇಶದಂತೆ ನೋಡುತ್ತಿದೆ ಭಾರತೀಯ ಜನತಾ ಪಕ್ಷ.
ಭಾರೀ ಚರ್ಚೆಗೆ ಮತ್ತು ಪರ ವಿರೋಧ ಚರ್ಚೆಗಳಿಗೆ ಕಾರಣವಾಗಿದ್ದ ಎನ್‌ಆರ್‌ಸಿಯ ಅನುಷ್ಟಾನದ ಮೂಲ ಗುರಿ ಪಶ್ಚಿಮ ಬಂಗಾಳ. ಅಲ್ಲಿನ ಮುಸ್ಲಿಮರನ್ನು ಬಾಂಗ್ಲಾದೇಶಿಗಳೆಂದು ನಿರೂಪಿಸಲು ಸಂಪೂರ್ಣ ದೇಶವನ್ನೇ ಅಸಹನೆಯ ತುತ್ತ ತುದಿಯಲ್ಲಿ ನಿಲ್ಲಿಸಿದ್ದರು, ಚಾಣಕ್ಯ ಅಮಿತ್ ಶಾ ಹಾಗೂ ನರೇಂದ್ರ ಮೋದಿ. ಗಡಿ ರಾಜ್ಯಗಳಲ್ಲಿ ಎನ್‌ಆರ್‌ಸಿಯನ್ನು ಮಾಡುತ್ತೇವೆಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಮೋದಿಯವರ ಎರಡನೇ ಅವಧಿಯ ಮೊದಲ ಸಂಸತ್ ಅಧಿವೇಷನದಲ್ಲಿ ಹೇಳಿದ್ದು, ಈ ವಾದಕ್ಕೆ ಪುಷ್ಟಿ ನೀಡುತ್ತದೆ.
ಯಾಕೆ ಪಶ್ಚಿಮ ಬಂಗಾಳ ಚುನಾವಣೆ ಅತೀ ಮುಖ್ಯ?
ಪ.ಬಂ.ದಲ್ಲಿನ 27% ಜನರು ಮುಸ್ಲಿಮರು ಮತ್ತು ಪೂರ್ವ ಭಾರತದಲ್ಲಿನ ಹಿಂದಿಯೇತರ ರಾಜ್ಯಗಳಲ್ಲಿ ಅತೀ ಪ್ರಮುಖವಾದುದು ಮತ್ತು ಅತೀ ದೊಡ್ಡ ಮೆಟ್ರೊಪಾಲಿಟನ್ ನಗರ ಹೊಂದಿರುವ ರಾಜ್ಯ. ಇಂತಹ ರಾಜ್ಯ ತಮ್ಮ ಸುಪರ್ದಿಯಲ್ಲಿದೆ ಎಂದರೆ ಯಾರಿಗೆ ತಾನೇ ಜಂಭ ಇರಲ್ಲ ಹೇಳಿ. ತನ್ನ ಸುತ್ತಮುತ್ತಲಿನ ಸಣ್ಣ ರಾಜ್ಯಗಳ ಮೇಲೆ ಪ್ರಭಾವ ಬೀರುವ ಎಲ್ಲಾ ಅರ್ಹತೆಯನ್ನು ಪ.ಬಂ. ರಾಜಕಾರಣ ಹೊಂದಿದೆ.
ಈವರೆಗೆ ಪ.ಬಂ.ದಲ್ಲಿ ತಮ್ಮ ವಿಜಯ ಪತಾಕೆ ಹಾರಿಸಲು ಸಾಧ್ಯವಾಗದೇ ಇರುವ ಬಿಜೆಪಿ, ಒಂದು ವೇಳೆ 2021ರಲ್ಲಿ ಗೆದ್ದು ಬೀಗಿದರೆ, ನಂತರ ಬಿಜೆಪಿಯ ಅಶ್ವಮೇಧ ಯಾಗದ ಕುದುರೆ 2024ರ ಲೋಕಸಭಾ ಚುನಾವಣೆಯನ್ನೂ ಧೂಳೀಪಟ ಮಾಡಿಬಿಡುತ್ತದೆ ಎಂಬುದು ಚುನಾವಣಾ ವಿಶ್ಲೇಷಕರ ಅಭಿಮತ.
ಹೊಸ ಸೆಮಿಫೈನಲ್?
ಸಾಮಾನ್ಯವಾಗಿ ಉತ್ತರ ಪ್ರದೇಶ ಚುನಾವಣೆಯು ಲೋಕಸಭಾ ಅವಧಿಯ ಮಧ್ಯಂತರದಲ್ಲಿ ಬರುತ್ತದೆ. ಹಾಗಾಗಿ ಅದನ್ನು ಸೆಮಿಫೈನಲ್ ಮ್ಯಾಚ್ ಎಂದು ಸಂಭೋದಿಸುವುದು ಇದೆ. ಆದರೆ, ಈಗ ಪಶ್ಚಿಮ ಬಂಗಾಳ ಚುನಾವಣೆಯನ್ನು ಪ್ರತಿಷ್ಠೆಯ ಕಣವೆಂದು ಬಿಜೆಪಿಯು ತೆಗೆದುಕೊಂಡಿರುವುದರಿಂದ ಇದೇ ಚುನಾವಣೆ ಬಿಜೆಪಿಗೆ ಸೆಮಿಫೈನಲ್ ಆಗಲಿದೆಯೇ ಎಂದು ಅನಿಸುತ್ತಿದೆ.
ಇಷ್ಟವರೆಗೆ, ಉತ್ತರ ಪ್ರದೇಶದ ಚುನಾವಣೆಯ ಫಲಿತಾಂಶ ಕೇಂದ್ರ ಸರ್ಕಾರದ ಸಾಧನೆ ವೈಫಲ್ಯಗಳನ್ನು ಎತ್ತಿಹಿಡಿಯುತ್ತಿದ್ದವು. ಈ ಬಾರಿ ಪಶ್ಚಿಮ ಬಂಗಾಳ ಚುನಾವಣೆ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ನಿರಂಕುಶ ನಿರ್ಧಾರಗಳು ಜನಪರವೇ ಜನ ವಿರೋಧಿಯೇ ಎಂದು ಸಾಬೀತು ಮಾಡಲಿದೆ.
ಕಳೆದ ಬಾರಿ ಉತ್ತರ ಪ್ರದೇಶದಲ್ಲಿ ವಿಜಯ ಪತಾಕೆ ಹಾರಿಸಿದ ಬಿಜೆಪಿಗೆ, ಇನ್ನೆಲ್ಲೂ ಅಡೆತಡೆಗಳು ಇಲ್ಲ ಎಂಬುದು ಸ್ಪಷ್ಟವಾಗಿತ್ತು. ಆ ನಂತರ ನಡೆದ ಬಾಲಾಕೋಟ್ ವಾಯು ದಾಳಿಯಂತು ಭಾರತದಲ್ಲಿ ಸಾರ್ವತ್ರಿಕ ಚುನಾವಣೆಯ ಅವಶ್ಯಕತೆಯೇ ಇಲ್ಲದೆ ಬಿಜೆಪಿ ಗೆಲ್ಲಲಿದೆ ಎಂಬುದನ್ನು ಸಾಬೀತು ಮಾಡಿತು.
ಉತ್ತರ ಪ್ರದೇಶದ ಗೆಲುವು ಬಿಜೆಪಿಯಲ್ಲಿ ಸ್ಥೈರ್ಯವನ್ನು ತುಂಬುವುದಕ್ಕಿಂತ ವಿರೋಧ ಪಕ್ಷಗಳಲ್ಲಿನ ಆತ್ಮಸ್ಥೈರ್ಯವನ್ನು ಉಡುಗಿಸುವ ಕೆಲಸ ಮಾಡಿತ್ತು. ಒಂದು ವೇಳೆ ಪಶ್ಚಿಮ ಬಂಗಾಳದ ಚುನಾವಣೆಯಲ್ಲಿ ಬಿಜೆಪಿಯು ಜಯಭೇರಿಯನ್ನು ಸಾಧಿಸಿದರೆ, ಮತ್ತೆ ವಿರೋಧ ಪಕ್ಷಗಳು ತಮ್ಮ ಕಾರ್ಯಕರ್ತರಲ್ಲಿ ಹುಮ್ಮಸ್ಸು ತುಂಬುವ ಕಾರ್ಯ ಮಾಡಬೇಕಾಗಿ ಬರಬಹುದು. ಇಲ್ಲವಾದರೆ, ಮುಂಬರುವ ದಿನಗಳಲ್ಲಿನ ಚುನಾವಣೆಗಳು ಸಲೀಸಾಗಿ ಬಿಜೆಪಿಯ ತೆಕ್ಕೆಗೆ ಬೀಳುವುದರಲ್ಲಿ ಅನುಮಾನವಿಲ್ಲ.