2020 ಈಗ ಇತಿಹಾಸ ಪುಟ ಸೇರಿದ ವರ್ಷವಾಗಿದೆ. ಕೋವಿಡ್ ಎಂಬ ಕಣ್ಣಿಗೆ ಕಾಣದ ಚಿಕ್ಕ ವೈರಸ್ ಮಾನವ ಪ್ರಪಂಚವನ್ನೇ ನಡುಗಿಸಿಬಿಟ್ಟಿತು. ಆಧುನಿಕ ಯುಗದಲ್ಲಿ ಮಾಹಿತಿ ತಂತ್ರಜ್ಞಾನ, ವಿಜ್ಞಾನ, ಡಿಜಿಟಲ್ ಕ್ಷೇತ್ರದಲ್ಲಿ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿದ್ದ ಮಾನವ ಪ್ರಪಂಚವನ್ನು ನಡುಗಿಸಿದ್ದು ಕರೋನಾ ಎಂಬ ಮಾಹಾಮಾರಿ. ವಿಶ್ವದ ಆರ್ಥಿಕತೆ ಸೇರಿದಂತೆ ಎಲ್ಲಾ ಕ್ಷೇತ್ರದಲ್ಲಿಯೂ ಗಣನೀಯ ಕುಂಟಿತವಾಯಿತು. ಮಾನವ ಪ್ರಪಂಚದ ಕಾರ್ಯವೈಖರಿಗಳನ್ನು ಒಂದೊಮ್ಮೆ ತಟಸ್ಥರನ್ನಾಗಿ ಮಾಡಿಬಿಟ್ಟಿತು. ಇದರ ಮಧ್ಯೆ ಸಾಕಷ್ಟು ಬೆಳವಣಿಗೆಗಳಾಗಿದ್ದು, ಭಾರತದ ಸರ್ವೋಚ್ಚ ನ್ಯಾಯಾಲಯ ಅನೇಕ ಐತಿಹಾಸಿ ತೀರ್ಪುಗಳನ್ನು ಪ್ರಕಟಿಸಿದೆ. ಅವುಗಳಲ್ಲಿ ಪ್ರಮುಖ ತೀರ್ಪುಗಳ ವಿವರ ಇಲ್ಲಿದೆ.
ನಿರ್ಭಯಾ ಅತ್ಯಾಚಾರಿಗಳಿಗೆ ಗಲ್ಲು:
ಡಿಸೆಂಬರ್ 16 2012ರಲ್ಲಿ ದೆಹಲಿ ಮೆಡಿಕಲ್ ವಿದ್ಯಾರ್ಥಿನಿ ನಿರ್ಭಯ ಸಾಮೂಹಿಕ ಅತ್ಯಾಚಾರ ಪ್ರಕರಣ ಇಡೀ ದೇಶವೇ ತಲೆತಗ್ಗಿಸುವಂತೆ ಮಾಡಿತ್ತು. ಅತ್ಯಾಚಾರಿಗಳನ್ನು ಗಲ್ಲಿಗೇರಿಸುವಂತೆ ದೇಶದಲ್ಲಿ ತೀವ್ರ ಸ್ವರೂಪದ ಪ್ರತಿಭಟನೆಗಳು ನಡೆದಿದ್ದವು. ಪ್ರಕರಣ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು.
ಸುದೀರ್ಘ ವಿಚಾರಣೆ ನಡೆಸಿದ ಕೋರ್ಟ್ ಘಟನೆ ನಡೆದು 7ವರ್ಷಗಳ ನಂತರ ಅಂದರೆ ಮಾರ್ಚ್ 20 2020 ರಂದು ಹಂತಕರಿಗೆ ಮರಣದಂಡನೆ ಶಿಕ್ಷೆ ನೀಡಲಾಯಿತು.
ಪಿತ್ರಾರ್ಜಿತ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೂ ಹಕ್ಕು:
ಆಗಸ್ಟ್ 11 2020 ರಲ್ಲಿ ಅರುಣ್ ಮಿಶ್ರಾ ನೇತೃತ್ವದ ನ್ಯಾಯಪೀಠವು ಹಿಂದೂ ಉತ್ತರಾಧಿಕಾರಿ ಕಾಯ್ದೆ ತಿದ್ದುಪಡಿ ಅಡಿ ಪಿತ್ರಾರ್ಜಿತ ಆಸ್ತಿಯಲ್ಲಿ ಗಂಡು ಮಕ್ಕಳಂತೆ ಹೆಣ್ಣು ಮಕ್ಕಳಿಗೂ ಹಕ್ಕಿದೆ ಎಂಬುದು ತೀರ್ಪಿನಲ್ಲಿ ಸ್ಪಷ್ಟವಾಗಿ ತಿಳಿಸಿದೆ. 2005 ಸೆಪ್ಟೆಂಬರ್ 9 ರ ಬಳಿಕ ಜನಿಸಿದ ಹೆಣ್ಣು ಮಕ್ಕಳಿಗೆ ಗಂಡು ಮಕ್ಕಳಂತೆ ಆಸ್ತಿಯಲ್ಲಿ ಸಮಾನ ಹಕ್ಕಿದೆ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟ ಪಡಿಸಿದೆ.
ಇದಕ್ಕೂ ಮೊದಲು ಜನಿಸಿದ ಹೆಣ್ಣು ಮಗುವಿನ ತಂದೆ ಈ ಕಾಯ್ದೆ ಜಾರಿಗೆ ಬಂದ ಬಳಿಕ ಮೃತಪಟ್ಟಿದ್ದರೆ, ಆ ಹೆಣ್ಣು ಮಕ್ಕಳೂ ಆಸ್ತಿಯಲ್ಲಿ ಪಾಲನ್ನು ಕೇಳಬಹುದು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಬಾಬ್ರಿ ಮಸೀದಿ ದ್ವಂಸ ಪ್ರಕರಣ:
ಬಾಬ್ರಿ ಮಸೀದಿ ದ್ವಂಸ ಪ್ರಕರಣ ಕುರಿತು 1992 ರಲ್ಲಿ ಪ್ರಕರಣ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. 28 ವರ್ಷಗಳ ಬಳಿಕ 2020 ರಲ್ಲಿ ಎಂ ಎಸ್ ಕೆ ಯಾದವ್ ನೇತೃತ್ವದ ಸುಪ್ರೀಂ ಕೋರ್ಟ್ ನ್ಯಾಯಪೀಠ ಐತಿಹಾಸಿಕ ತೀರ್ಪುನೀಡಿದೆ. ಈ ಸಂಬಂಧ ಬಿಜೆಪಿ ಹಿರಿಯ ನಾಯಕ ಎಲ್ ಕೆ ಅಡ್ವಾನಿ ಸೇರಿದಂತೆ 32 ಜನರ ಮೇಲಿದ್ದ ಆರೋಪ ಸಾಬೀತಾಗದೇ ಅವರು ನಿರಪರಾಧಿಗಳೆಂದು ಸುಪ್ರಿಂ ಘೋಷಿಸಿದೆ.
ರೈತರ ಪ್ರತಿಭಟನೆಗೆ ಸುಪ್ರಿಂ ಸಾಥ್ :
ಕೇಂದ್ರದಲ್ಲಿ ಕೃಷಿಕಾಯ್ದೆಗಳನ್ನು ವಿರೋಧಿಸಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಿರಂತರ ಪ್ರತಿಭಟನೆ ಮಾಡುತ್ತಿದ್ದು, ರೈತರ ಮುಷ್ಕರಕ್ಕೆ ರಸ್ತೆತಡೆ, ಕೆಲವು ಕಡೆ ಗಲಭೆ, ಸಾವುನೋವು, ಕೋವಿಡ್- 19 ಸಾಂಕ್ರಾಮಿಕ ರೋಗವನ್ನು ಗಮನಹರಿಸಿ ರೈತರ ಮುಷ್ಕರ ನಿಲ್ಲಿಸಬೇಕೆಂದು ಕಾನೂನು ವಿದ್ಯಾರ್ಥಿಯೊಬ್ಬರು ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ನ್ಯಾಯಯುತವಾದ ತೀರ್ಪು ನೀಡಿದೆ.
ಅನ್ಯಾಯದ ವಿರುದ್ಧ ಪ್ರತಿಭಟಿಸುವುದು ಸಂವಿಧಾನಬದ್ಧ ಹಕ್ಕು ಅದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ರೈತರು ಎಲ್ಲಿಯವರೆಗೆ ಶಾಂತಿಯುತವಾಗಿ ಪ್ರತಿಭಟನೆ ಮಾಡುತ್ತಾರೋ ಅಲ್ಲಿಯವರೆಗೆ ಪ್ರತಿಭಟಿಸುವ ಹಕ್ಕಿದೆ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಎಸ್ ಎ ಬೋಬ್ಡೆ ಡಿ17 ರಂದು ಮಹತ್ವದ ತೀರ್ಪು ನೀಡಿದ್ದಾರೆ.

ಉದ್ಯೋಗ ವಲಯಕ್ಕೆ ಸಂಬಂಧಿಸಿದ ಮಹತ್ವದ ತೀರ್ಪು :
ನ್ಯಾಯ ಮೂರ್ತಿ ಸಂಜಯ್ ಕೌಲ್ ನೇತೃತ್ವದ ನ್ಯಾಯ ಪೀಠ ನೌಕರರ ವಲಯದಲ್ಲಿ ವಿವಾದದಲ್ಲಿದ್ದ ಪ್ರಕರಣಕ್ಕೆ ಮಹತ್ವದ ತೀರ್ಪು ಹೊರಹಾಕಿದೆ. ಸಂಬಂಧಿಸಿದ ಕಂಪನಿ ಅಥವಾ ಸರ್ಕಾರಿ ಸಂಸ್ಥೆಯಿಂದ ಸಾಲ ಪಡೆದ ಉದ್ಯೋಗಿಯು ಹಣ ಮರುಪಾವತಿ ಮಾಡದೆ ಇದ್ದಲ್ಲಿ ಗ್ರ್ಯಾಚ್ಯುಟಿ ಹಣವನ್ನು ತಡೆಯ ಬಹುದು ಎಂದು ಸುಪ್ರಿಂ ತೀರ್ಪು ನೀಡಿದೆ.
ಕರೋನಾದಿಂದ ಸಾಮಾಜಿಕ ವ್ಯವಸ್ಥೆ ಅಲ್ಲೋಲ ಕಲ್ಲೋಲವಾಗಿದ್ದರೂ, ಕೆಲವೊಂದು ಮಹತ್ವದ ಪ್ರಕರಣಕ್ಕೆ ಸುಪ್ರೀಂ ಕೋರ್ಟ್‌ನ ಹಿರಿಯ ನ್ಯಾಯಾಧೀಶರ ನೇತೃತ್ವದ ತಂಡ ತೆರೆ ಎಳೆದಿದೆ. ಇದೀಗ ಕೇಂದ್ರ ಸರ್ಕಾರ ಜಾರಿಗೆ ತಂದ ಕೃಷಿಕಾನೂನು ತಿದ್ದುಪಡಿ, ಕೆಲವು ರಾಜ್ಯದಲ್ಲಿ ಭುಗಿಲೆದ್ದ ಲವ್ ಜಿಹಾದ್ ಪ್ರಕರಣಗಳು, ಗೋಹತ್ಯೆ ನಿಷೇಧ ಕಾನೂನುಗಳ ಜಾರಿ ವಿರೋಧಿಸಿ ಅರ್ಜಿ ಸುಪ್ರೀಂ ಕೋರ್ಟ್ ಮೆಟ್ಟಿಲೇರುವ ಸಾಧ್ಯತೆಯಿದೆ.