ರಾಜ್ಯದಲ್ಲಿ ಖಾಲಿ ಇರುವ 43 ಸಾವಿರ ಪೌರ ಕಾರ್ಮಿಕರ ಹುದ್ದೆಗಳ ನೇಮಕಕ್ಕೆ ಶೀಘ್ರ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಪೌರ ಕಾರ್ಮಿಕರ ದಿನಾಚರಣೆ ಅಂಗವಾಗಿ ಶುಕ್ರವಾರ ಬೆಳಿಗ್ಗೆ ಟ್ವೀಟ್ ಮಾಡಿರುವ ಅವರು, ಕರ್ನಾಟಕದಲ್ಲಿ ಶೀಘ್ರ ಪೌರ ಕಾರ್ಮಿಕರ ನೇಮಕಾತಿ ನಡೆಯಲಿದೆ. 43 ಸಾವಿರ ಕಾರ್ಮಿಕರ ನೇಮಕಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಶುಕ್ರವಾರ ಬೆಳಿಗ್ಗೆ ಕಾರ್ಮಿಕರೊಂದಿಗೆ ಉಪಾಹಾರ ಸೇವಿಸಿ ಮಾತನಾಡಿದ ಅವರು, ಪೌರ ಕಾರ್ಮಿಕರ ಪರಿಶ್ರಮಕ್ಕೆ ಫಲ ಸಿಗಲಿದೆ. ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಕಾರ್ಮಿಕರನ್ನು ಸೇವೆಗೆ ಸೇರಿಸಿಕೊಳ್ಳುತ್ತೇವೆ ಎಂದು ಭರವಸೆ ನೀಡಿದರು.
ಐಡಿಪಿ ಸಾಲಪ್ಪ ವರದಿ ಅನುಷ್ಠಾನಕ್ಕೆ ಸರ್ಕಾರ ಬದ್ಧವಾಗಿದೆ. ಸಚಿವ ಸಭೆಯಲ್ಲಿ 11 ಸಾವಿರ ಪೌರಕಾರ್ಮಿಕರ ಸೇವೆ ಕಾಯಮಾತಿಗೆ ತೀರ್ಮಾನಿಸಲಾಗಿದೆ. ಖಾಲಿ 43 ಸಾವಿರ ನೌಕರರ ಕಾಯಮಾತಿಯು ಬಾಕಿಯಿದೆ. ಈ ಬಗ್ಗೆ ಸರ್ಕಾರವು ಶೀಘ್ರ ಕ್ರಮ ತೆಗೆದುಕೊಳ್ಳಲಿದೆ ಎಂದು ಬೊಮ್ಮಾಯಿ ವಿವರಿಸಿದರು.