ಭ್ರಷ್ಟಾಚಾರ ಆರೋಪದಡಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ವಿರುದ್ಧದ ತನಿಖೆಗೆ ಸುಪ್ರೀಂಕೋರ್ಟ್ ಮಧ್ಯಂತರ ತಡೆ ನೀಡಿದೆ.
ಕೊನದಾಸಪುರದಲ್ಲಿ ನಿರ್ಮಿಸಲಾದ ಬಿಡಿಎ ಫ್ಲಾಟ್ಗಳ ನಿರ್ಮಾಣದಲ್ಲಿ ನಡೆದಿದೆ ಎನ್ನಲಾದ ಅಕ್ರಮ ಪ್ರಕರಣದಲ್ಲಿ ಎಫ್ ಐಆರ್ ದಾಖಲಿಸುವಂತೆ ಲೋಕಾಯುಕ್ತ ಪೊಲೀಸರಿಗೆ ಹೈಕೋರ್ಟ್ ಸೂಚಿಸಿತ್ತು. ರಾಜ್ಯಪಾಲರ ಅನುಮತಿ ಇಲ್ಲದೇ ತನಿಖೆ ನಡೆಸುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಯಡಿಯೂರಪ್ಪ ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದರು.
ಬಿಎಸ್ ಯಡಿಯೂರಪ್ಪ ಜನಪ್ರತಿನಿಧಿ ಆಗಿರುವುದರಿಂದ ಅವರ ವಿರುದ್ಧದ ತನಿಖೆಗೆ ಮಧ್ಯಂತರ ತಡೆ ನೀಡಿ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ನೇತೃತ್ವದ ಪೀಠ ಶುಕ್ರವಾರ ಈ ಆದೇಶ ಹೊರಡಿಸಿದೆ.

ವಿಚಾರಣೆ ವೇಳೆ ಬಿ.ಎಸ್ ಯಡಿಯೂರಪ್ಪ ಪರ ವಾದ ಮಂಡಿಸಿದ ಹಿರಿಯ ಮುಕುಲ್ ರೊಹ್ಟಗಿ, ಜನಪ್ರತಿನಿಧಿಗಳ ವಿಷಯದಲ್ಲಿ ತನಿಖೆಗೆ ರಾಜ್ಯಪಾಲರ ಪೂರ್ವಾನುಮತಿ ಕಡ್ಡಾಯ, ಹೀಗಿದ್ದರು ಹೈಕೋರ್ಟ್ ತನಿಖೆಗೆ ಸೂಚಿಸಿದೆ ಎಂದು ವಾದಿಸಿದರು. ವಾದ ಆಲಿಸಿದ ಬಳಿಕ ಯಡಿಯೂರಪ್ಪ ವಿರುದ್ಧ ತನಿಖೆಗೆ ಪೀಠ ತಡೆ ನೀಡಿ, ಪ್ರತಿವಾದಿಗಳಿಗೆ ನಾಲ್ಕು ವಾರಗಳಲ್ಲಿ ಉತ್ತರಿಸುವಂತೆ ನೋಟಿಸ್ ಜಾರಿ ಮಾಡಿತು.
ಸಚಿವ ಎಸ್.ಟಿ. ಸೋಮಶೇಖರ್ (S.T. Somashekar) ಬಿಡಿಎ ಅಧ್ಯಕ್ಷ ಆಗಿದ್ದ ವೇಳೆ ಅಕ್ರಮ ನಡೆದಿದೆ. ಬಿಎಸ್ವೈ ಪುತ್ರ ಬಿ.ವೈ. ವಿಜಯೇಂದ್ರ ಸೇರಿ ಒಟ್ಟು ೯ ಮಂದಿ ಆರೋಪಿಗಳಾಗಿದ್ದಾರೆ. ಬಿಎಸ್ವೈ ಬಿಟ್ಟು ಉಳಿದವರ ವಿರುದ್ಧ ತನಿಖೆ ಮುಂದುವರಿಸಲು ಸುಪ್ರೀಂಕೋರ್ಟ್ ಸೂಚಿಸಿದೆ.
ಅಕ್ರಮಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಕಾರ್ಯಕರ್ತ ಟಿ.ಜೆ. ಅಬ್ರಹಾಂ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಖಾಸಗಿ ದೂರು ಸಲ್ಲಿಸಿದ್ದರು. ಬಳಿಕ ತನಿಖೆಗೆ ಸೂಚಿಸಲು ಹೈಕೋರ್ಟ್ಗೆ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ಬಳಿಕ ಹೈಕೋರ್ಟ್ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸುವಂತೆ ಸೂಚಿಸಿತ್ತು.