ಕರೋನಾ ಹಿನ್ನೆಲೆಯಲ್ಲಿ ಕಳೆದ ವರ್ಷ ಲಾಕ್‌ಡೌನ್ ಹೇರಿದ್ದರೂ, ವಾಹನಗಳ ಓಡಾಟದಲ್ಲಿ ಗಣನೀಯ ಇಳಿಕೆ ಕಂಡುಬಂದಿದ್ದರೂ ಈ ವೇಳೆಗಳಲ್ಲಿ ರಸ್ತೆ ಅಪಘಾತಗಳಲ್ಲಿ ಸುಮಾರು 1.20 ಲಕ್ಷ ಜನರು ಮೃತಪಟ್ಟಿರುವುದಾಗಿ ವರದಿಯಾಗಿದೆ.
2020 ರಲ್ಲಿ ದೇಶಾದ್ಯಂತ ಪ್ರತಿದಿನ ಸರಾಸರಿ 328 ಜನರು ಜೀವ ಕಳೆದುಕೊಂಡಿದ್ದಾರೆ ಎಂದು ಸರ್ಕಾರದ ಅಧಿಕೃತ ಮಾಹಿತಿ ತಿಳಿಸಿದೆ.
ರಸ್ತೆ ಅಪಘಾತಗಳಿಗೆ ಸಂಬಂಧಿಸಿದ ನಿರ್ಲಕ್ಷ್ಯದಿಂದಾಗಿ ಮೂರು ವರ್ಷಗಳಲ್ಲಿ ಸುಮಾರು 3.92 ಲಕ್ಷ ಮಂದಿ ಸಾವನ್ನಪ್ಪಿದ್ದಾರೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ತನ್ನ ವಾರ್ಷಿಕ ” ಕ್ರೈಮ್ ಇಂಡಿಯಾ ” ವರದಿಯಲ್ಲಿ ಬಹಿರಂಗಪಡಿಸಿದೆ. 2020ರಲ್ಲಿ 1.20 ಲಕ್ಷ ಸಾವುಗಳು ದಾಖಲಾಗಿದ್ದರೆ, 2019ರಲ್ಲಿ 1.36 ಲಕ್ಷ ಮತ್ತು 2018ರಲ್ಲಿ 1.35 ಲಕ್ಷ ಸಾವುಗಳು ಸಂಭವಿಸಿವೆ ಎಂದು ಅಂಕಿಅಂಶಗಳು ಹೇಳಿವೆ.
2018 ರಿಂದ ದೇಶದಲ್ಲಿ 1.35 ಲಕ್ಷ “ಹಿಟ್ ಅಂಡ್ ರನ್” ಪ್ರಕರಣಗಳು ದಾಖಲಾಗಿವೆ ಎಂದು ಕೇಂದ್ರ ಗೃಹ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎನ್‌ಸಿಆರ್‌ಬಿಯ ವರದಿ ಹೇಳಿದೆ. 2020ರಲ್ಲಿ 41,196 “ಹಿಟ್ ಅಂಡ್ ರನ್” ಪ್ರಕರಣಗಳಾಗಿದ್ದರೆ, 2019 ರಲ್ಲಿ 47,504 ಮತ್ತು 2018 ರಲ್ಲಿ 47,028 ಪ್ರಕರಣಗಳು ವರದಿಯಾಗಿವೆ. ಕಳೆದ ವರ್ಷದಲ್ಲಿ ಪ್ರತಿದಿನ ಸರಾಸರಿ 112 “ಹಿಟ್ ಅಂಡ್ ರನ್” ಪ್ರಕರಣಗಳು ದೇಶಾದ್ಯಂತ ವರದಿಯಾಗಿವೆ.
2020ರಲ್ಲಿ ದೇಶದಾದ್ಯಂತ ರೈಲು ಅಪಘಾತಗಳಿಗೆ ಸಂಬಂಧಿಸಿದಂತೆ 52 ಸಾವುಗಳು ದಾಖಲಾಗಿದ್ದು, 2019 ರಲ್ಲಿ 55 ಮತ್ತು 2018 ರಲ್ಲಿ 35 ಪ್ರಕರಣಗಳು ವರದಿಯಾಗಿವೆ.
2020 ರಲ್ಲಿ ದೇಶದಲ್ಲಿ “ವೈದ್ಯಕೀಯ ನಿರ್ಲಕ್ಷ್ಯದಿಂದ 133 ಸಾವುಗಳ ಪ್ರಕರಣಗಳು ದಾಖಲಾಗಿವೆ. 2019 ರಲ್ಲಿ 201 ಮತ್ತು 2018 ರಲ್ಲಿ 218 ಪ್ರಕರಣಗಳು ದಾಖಲಾಗಿವೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ಡೇಟಾ ಹೇಳಿದೆ.
2020 ರಲ್ಲಿ “ನಾಗರಿಕ ಸಂಸ್ಥೆಗಳ ನಿರ್ಲಕ್ಷ್ಯದಿಂದ” 51 ಸಾವುಗಳು ಸಂಭವಿಸಿದ್ದರೆ, 2019 ರಲ್ಲಿ 147 ಮತ್ತು 2018 ರಲ್ಲಿ 40 ಪ್ರಕರಣಗಳು ವರದಿಯಾಗಿವೆ. ಇತರ ನಿರ್ಲಕ್ಷ್ಯದಿಂದ ಸಾವುಗಳು 2019 ರಲ್ಲಿ 7,912 ಮತ್ತು 2018 ರಲ್ಲಿ 8,687 ರಷ್ಟಿದ್ದ 2020 ರಲ್ಲಿ 6,367 ಪ್ರಕರಣಗಳು ವರದಿಯಾಗಿವೆ.