ಚೆನ್ನೈ: ಸಿ ಎಸ್ ಕೆ ತಂಡಕ್ಕೆ ಐಪಿಎಲ್ 2026ರ ಪ್ಲೇಆಫ್ ಹಾದಿ ಕಠಿಣವಾಗುತ್ತಿರುವ ನಡುವೆಯೇ, ಅಭಿಮಾನಿಗಳ ಗಮನ ಈಗ ಸಂಪೂರ್ಣವಾಗಿ ಎಂಎಸ್ ಧೋನಿ ಅವರತ್ತ ನೆಟ್ಟಿದೆ. ಗಾಯದ ಕಾರಣದಿಂದ ಈ ಆವೃತ್ತಿಯಲ್ಲಿ ಇನ್ನೂ ಒಂದೂ ಪಂದ್ಯ ಆಡದ ಧೋನಿ ಯಾವಾಗ ಮೈದಾನಕ್ಕಿಳಿಯುತ್ತಾರೆ ಎಂಬ ಪ್ರಶ್ನೆ ಕೋಟ್ಯಂತರ ಅಭಿಮಾನಿಗಳನ್ನು ಕಾಡುತ್ತಿದೆ.

ಸಿಎಸ್ಕೆ ಇದುವರೆಗೆ ಲೀಗ್ ಹಂತದಲ್ಲಿ 11 ಪಂದ್ಯಗಳನ್ನು ಆಡಿದ್ದು, ಇನ್ನೂ ಮೂರು ಪಂದ್ಯಗಳು ಮಾತ್ರ ಬಾಕಿಯಿವೆ. ಈ ಮೂರು ಪಂದ್ಯಗಳನ್ನೂ ಗೆದ್ದರೂ ಪ್ಲೇಆಫ್ ಪ್ರವೇಶಕ್ಕಾಗಿ ಇತರೆ ತಂಡಗಳ ಫಲಿತಾಂಶದ ಮೇಲೂ ಅವಲಂಬಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.ಐಪಿಎಲ್ ಆರಂಭಕ್ಕೂ ಮುನ್ನವೇ ಧೋನಿ ಗಾಯಗೊಂಡಿದ್ದರಿಂದ ಆರಂಭಿಕ ಪಂದ್ಯಗಳಲ್ಲಿ ಅವರು ಆಡಲಾರರು ಎಂದು ಫ್ರಾಂಚೈಸಿ ತಿಳಿಸಿತ್ತು. ಆದರೆ ಲೀಗ್ ಹಂತ ಅಂತ್ಯದತ್ತ ಸಾಗುತ್ತಿದ್ದರೂ ಧೋನಿ ಕಣಕ್ಕಿಳಿಯುವ ಕುರಿತು ಸ್ಪಷ್ಟ ಮಾಹಿತಿ ಲಭ್ಯವಾಗಿರಲಿಲ್ಲ.

ಈ ನಡುವೆ ಅಭಿಮಾನಿಗಳಿಗೆ ಸಮಾಧಾನಕರ ಸುದ್ದಿಯೊಂದು ಸಿಕ್ಕಿದೆ. ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಮುಂದಿನ ಪಂದ್ಯಕ್ಕಾಗಿ ಸಿಎಸ್ಕೆ ತಂಡದೊಂದಿಗೆ ಧೋನಿ ಪ್ರಯಾಣ ಬೆಳೆಸಲಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.ಸಿಎಸ್ಕೆ ಸಿಇಒ ಕಾಶಿ ವಿಶ್ವನಾಥನ್ ಹೇಳಿಕೆಯನ್ನು ಉಲ್ಲೇಖಿಸಿ ಕ್ರಿಕ್ಬಜ್ ವರದಿ ಮಾಡಿದ್ದು, ಲಕ್ನೋಗೆ ತೆರಳುವ ಇಂಡಿಗೊ ವಿಮಾನದಲ್ಲಿ ಒಟ್ಟು 60 ಟಿಕೆಟ್ಗಳನ್ನು ಬುಕ್ ಮಾಡಲಾಗಿದ್ದು, ಅದರಲ್ಲಿ ಧೋನಿ ಹೆಸರೂ ಸೇರಿದೆ ಎಂದು ತಿಳಿಸಿದೆ. ಆದರೆ ಅವರು ಪಂದ್ಯದಲ್ಲಿ ಆಡಲಿದೆಯೇ ಎಂಬುದರ ಬಗ್ಗೆ ಇನ್ನೂ ಅಧಿಕೃತ ದೃಢೀಕರಣ ಬಂದಿಲ್ಲ.

ಒಂದು ವೇಳೆ ಲಕ್ನೋ ವಿರುದ್ಧದ ಪಂದ್ಯದಲ್ಲೂ ಧೋನಿ ಕಣಕ್ಕಿಳಿಯದಿದ್ದರೆ, ಮೇ 18ರಂದು ಸನ್ ರೈಸರ್ ಹೈದರಾಬಾದ್ ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ಅವರು ಆಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಈ ಪಂದ್ಯವು ಚೆನ್ನೈನ ಎಂ.ಎ. ಚಿದಂಬರಂ ಮೈದಾನದಲ್ಲಿ ಸಿಎಸ್ಕೆ ತಂಡದ ಕೊನೆಯ ಲೀಗ್ ಪಂದ್ಯವಾಗಿರುವುದರಿಂದ, ಧೋನಿ ತಮ್ಮ ತವರು ಅಭಿಮಾನಿಗಳ ಎದುರು ಅಂತಿಮ ಐಪಿಎಲ್ ಪಂದ್ಯ ಆಡಬಹುದು ಎಂಬ ಊಹಾಪೋಹಗಳು ಜೋರಾಗಿವೆ.ನಿವೃತ್ತಿಯ ಅಂಚಿನಲ್ಲಿರುವ ಧೋನಿ, ಚೆಪಾಕ್ ಮೈದಾನದಲ್ಲೇ ಐಪಿಎಲ್ಗೆ ವಿದಾಯ ಹೇಳುವರಾ ಎಂಬ ಕುತೂಹಲ ಇದೀಗ ಕ್ರಿಕೆಟ್ ಅಭಿಮಾನಿಗಳಲ್ಲಿ ಹೆಚ್ಚಿದೆ.







