ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕಳೆದ 70 ದಿನಗಳಿಗಿಂತಲೂ ಹೆಚ್ಚು ದಿನಗಳಿಂದ ಅನ್ನದಾತರು ನಡೆಸುತ್ತಿರುವ ಪ್ರತಿಭಟನೆಯನ್ನು ಮಟ್ಟ ಹಾಕಲು ಕೇಂದ್ರ ಸರ್ಕಾರ ಹರ ಸಾಹಸ ಪಡುತ್ತಿದೆ. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಉಂಟಾಗುತ್ತಿರುವ ಮುಜುಗರ ತಪ್ಪಿಸಲು ಬಿಜೆಪಿ ಐಟಿ ಸೆಲ್ ತನ್ನೆಲ್ಲಾ ಪ್ರಯತ್ನವನ್ನೂ ಮಾಡುತ್ತಿದೆ. ಅದಾಗ್ಯೂ, ರೈತ ಹೋರಾಟದ ದಿಕ್ಕು ತಪ್ಪಿಸಲು ಕಿಂಚಿತ್ತೂ ಸಾಧ್ಯವಾಗಿಲ್ಲ, ಬದಲಾಗಿ, ರೈತ ಹೋರಾಟಕ್ಕೆ ಇನ್ನಷ್ಟು ಬಲ ಬರುತ್ತಿದೆ.
ಇದರ ನಡುವೆ, ಅಂತರಾಷ್ಟ್ರೀಯ ಪಾಪ್ ತಾರೆ ರಿಹಾನ್ನ, ದೆಹಲಿ ಭಾಗಗಳಲ್ಲಿ ಇಂಟರ್‌ನೆಟ್ ಸ್ಥಗಿತಗೊಳಿಸಿರುವ ಸಂಬಂಧ ಹಾಕಿದ ಟ್ವೀಟ್ ಒಂದು, ಅಂತರಾಷ್ಟ್ರೀಯ ಸಮುದಾಯದ ಗಮನವನ್ನು ʼಐತಿಹಾಸಿಕ ರೈತ ಹೋರಾಟʼದ ಕಡೆಗೆ ಸೆಳೆದಿದೆ. ಹಲವಾರು ʼವಿದೇಶಿʼ ಸೆಲೆಬ್ರಿಟಿಗಳು, ಹೋರಾಟಗಾರರು ಭಾರತದ ರೈತ ಹೋರಾಟಕ್ಕೆ ಬೆಂಬಲ ನೀಡಿದ್ದಾರೆ ಮತ್ತು ಇಂಟರ್‌ನೆಟ್ ಸ್ಥಗಿತದಂತಹ ಭಾರತ ಸರ್ಕಾರದ ಕ್ರಮವನ್ನು ಖಂಡಿಸಿದ್ದಾರೆ. ಇದು ಕೇಂದ್ರ ಸರ್ಕಾರಕ್ಕೆ ಇನ್ನಷ್ಟು ಇರುಸು-ಮುರಿಸು ತರಿಸಿದೆ.
ಪ್ರತಿಧ್ವನಿಗೆ ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಕೇಂದ್ರ ಸರ್ಕಾರಕ್ಕೆ ಮುಜುಗರ ಉಂಟಾಗುವಾಗೆಲ್ಲಾ ಅದನ್ನು ಸರಿದೂಗಿಸಲು ಬಿಜೆಪಿ ಐಟಿ ಸೆಲ್ ಒಂದು ಟ್ರೆಂಡ್ ತಯಾರಿಸುತ್ತಿತ್ತು. ಆದರೆ ಈ ಬಾರಿ ಅಂತರಾಷ್ಟ್ರೀಯ ಮಟ್ಟದ ʼಮುಜುಗರʼ ವಾದ್ದರಿಂದಲೋ ಏನೋ ನೇರವಾಗಿ ವಿದೇಶಾಂಗ ಸಚಿವಾಲಯವನ್ನೇ ಬಳಸಿ ಮುಜುಗರ ತಪ್ಪಿಸಲು ಪ್ರಯತ್ನಿಸಲಾಯಿತು. ವಿದೇಶಾಂಗ ಸಚಿವಾಲಯದ ಅಧಿಕೃತ ವಕ್ತಾರರೇ #IndiaTogether #IndiaAgainstPropaganda ಎಂಬ ಎರಡು ಹ್ಯಾಷ್‌ಟ್ಯಾಗ್ ಮೂಲಕ ಕೇಂದ್ರ ಸರ್ಕಾರದ ಅಂತರಾಷ್ಟ್ರೀಯ ಷಡ್ಯಂತ್ರ ಎಂಬಂತೆ ಚಿತ್ರಿಸಿದರು.
ಇದರ ಬೆನ್ನಲ್ಲೇ, ಅಮಿತ್ ಶಾ, ನಿರ್ಮಲಾ ಸೀತರಾಮನ್, ಜೈ ಶಂಕರ್, ಕಿರಣ್ ರಿಜಿಜು, ಹರಿದೀಪ್ ಸಿಂಗ್ ಪುರಿ ಮೊದಲಾದ ಬಿಜೆಪಿ ನಾಯಕರು ಈ ಟ್ರೆಂಡನ್ನು ಮುಂದುವರೆಸಿದರು. ಆದರೆ ಇಷ್ಟಕ್ಕೇ ನಿಲ್ಲದೆ, ವಿದೇಶಿ ತಾರೆಯರು ತಂದ ʼಮುಜುಗರʼವನ್ನು ಸರಿದೂಗಿಸಲು ʼದೇಶೀʼ ತಾರೆಯರ ಮೊರೆ ಹೋಯಿತೇ ಅನ್ನುವ ಸಂದೇಹ ಉದ್ಭವಿಸುವಂತೆ, ಪರೋಕ್ಷವಾಗಿ ಕೇಂದ್ರ ಸರ್ಕಾರವನ್ನು ಬೆಂಬಲಿಸುವ ರೀತಿಯಲ್ಲಿ ಬಾಲಿವುಡ್ ನಟ-ನಟಿಯರು, ಕ್ರೀಡಾಪಟುಗಳು ಬ್ಯಾಟಿಂಗ್ ಬೀಸಿದ್ದಾರೆ.
ಬಾಲಿವುಡ್ ಸೆಲೆಬ್ರಿಟಿಗಳಾದ ಅಕ್ಷಯ್ ಕುಮಾರ್, ಅಜಯ್ ದೇವಗನ್, ಕರನ್ ಜೋಹರ್, ಏಕ್ತಾ ಕಪೂರ್ ಕ್ರೀಡಾಪಟುಗಳಾದ ಸಚಿನ್ ತೆಂಡೂಲ್ಕರ್, ಅನಿಲ್ ಕುಂಬ್ಲೆ, ಸುರೇಶ್ ರೈನಾ, ಸೈನಾ ನೆಹ್ವಾಲ್, ಮನಿಕಾ ಭಾತ್ರ, ಶಿಖರ್ ಧವನ್, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮೊದಲಾದವರು ಸರ್ಕಾರ ಶುರು ಮಾಡಿದ ಹ್ಯಾಷ್ ಟ್ಯಾಗ್ ಟ್ರೆಂಡಿನಲ್ಲಿ ಭಾಗಿಯಾಗಿದ್ದಾರೆ.
ದೆಹಲಿಯಲ್ಲಿ ಇಷ್ಟು ದಿನಗಳಿಂದ ಪ್ರತಿಭಟನೆ ನಡೆಯುತ್ತಿದ್ದರೂ, ಪ್ರತಿಭಟನಾ ವೇಳೆಯಲ್ಲಿ 150 ಕ್ಕೂ ಹೆಚ್ಚು ರೈತರು ಮೃತಪಟ್ಟರೂ, ರೈತರನ್ನು ತಡೆಯಲು ಸರ್ಕಾರ ರಸ್ತೆ ಅಗೆದು, ಮೊಳೆ ಜಡಿದರೂ ತುಟಿ ಪಿಟಿಕೆನ್ನದ ಈ ʼಐಷರಾಮಿʼ ಮಂದಿಗೆ ಏಕಾಏಕಿ ದೇಶದ ಬಗ್ಗೆ ಕಾಳಜಿ ಬಂದಿರುವುದು ಆಶ್ಚರ್ಯ ತರಿಸಿದೆ. ರೈತ ಬೆಂಬಲಿಗರಲ್ಲಿ ಇದು ಆಕ್ರೋಶವನ್ನು ಹುಟ್ಟುಹಾಕಿದೆ.
ಅಷ್ಟಕ್ಕೂ ವಿದೇಶಿ ತಾರೆಯರು ಭಾರತದ ಸರ್ಕಾರದ ನಿರ್ಲಜ್ಜ ನಿರ್ಲಕ್ಷ್ಯವನ್ನು ಪ್ರಶ್ನಿಸಿದರೆ ಭಾರತದ ಆಂತರಿಕ ವಿಚಾರವೆನ್ನುವ ಈ ʼಐಷರಾಮಿ ಮಂದಿʼ, ನರೇಂದ್ರ ಮೋದಿ ಅಮೇರಿಕಾದ ಚುನಾವಣೆಯಲ್ಲಿ ʼಅಬ್ ಕಿ ಬಾರ್; ಟ್ರಂಪ್ ಸರ್ಕಾರ್ʼ ಎಂದು ಪ್ರಚಾರ ನಡೆಸಿದ್ದು ತಪ್ಪು ಎಂದು ಒಪ್ಪಿಕೊಂಡಾರೆ? ಅಷ್ಟು ಧೈರ್ಯ ಇವರ ಬೆನ್ನುಮೂಳೆಗಿದೆಯೇ?
ಒಂದು ಪ್ರಜಾಪ್ರಭುತ್ವ, ಸಾರ್ವಭೌಮ ದೇಶದ ಪ್ರಜೆಗಳ ಪ್ರತಿನಿಧಿಯಾದಂತಹ ವ್ಯಕ್ತಿಯೊಬ್ಬ ಇನ್ನೊಂದು ದೇಶದ ಆಂತರಿಕ ಚುನಾವಣೆಯಲ್ಲಿ ಯಾವುದೇ ಲಜ್ಜೆಯಿಲ್ಲದೆ, ಪ್ರಭಾವ ಬೀರುವುದು, ಅಭ್ಯರ್ಥಿ ಪರ ಪ್ರಚಾರ ನಡೆಸುವುದು ಆತ ಪ್ರತಿನಿಧಿಸುವ ದೇಶಕ್ಕಾದ ಅವಮಾನವಲ್ಲವೇ? ವಿದೇಶಿ ಹಸ್ತಕ್ಷೇಪವಲ್ಲವೇ..? ಈ ಸೆಲೆಬ್ರಿಟಿಗಳು ಅದರ ಕುರಿತು ಮಾತನಾಡಲು ಎಂದಾದರೂ ಧೈರ್ಯ ತೋರಿಯಾರೇ?
ಆರ್ಟಿಕಲ್ 370 ರದ್ದತಿ, ಕಾಶ್ಮೀರದ ಮೇಲೆ ಭಾರತ ಸರ್ಕಾರ ನಿರ್ಬಂಧ ಹೇರಿದಾಗ ಉಂಟಾದ ವಿಶ್ವದಾದ್ಯಂತ ಆಕ್ರೋಶವನ್ನು ತಣಿಸಲು ಭಾರತದ ಸರ್ಕಾರ ಇಂಗ್ಲೆಂಡಿನ ಬಲಪಂಥೀಯ ಸಂಸದರನ್ನು ಕಾಶ್ಮೀರಕ್ಕೆ ಕರೆಸಿ ʼಕಾಶ್ಮೀರದಲ್ಲಿ ಎಲ್ಲವೂ ಸರಿಯಾಗಿದೆʼ ಎಂಬ ಪ್ರಮಾಣಪತ್ರವನ್ನು ಜಗತ್ತಿನ ಮುಂದಿಡುತ್ತದೆ. ರಿಹಾನ್ನಳ ಒಂದು ಟ್ವೀಟ್ ಭಾರತದ ಆಂತರಿಕ ವಿಚಾರಗಳ ಮೇಲೆ ಹಸ್ತಕ್ಷೇಪವಾದರೆ, ಇಂಗ್ಲೆಂಡ್ ಸಂಸದರು ಕಾಶ್ಮೀರದಲ್ಲಿ ಮಾಡಿರುವುದು ಏನು? ಉತ್ತರ ಇವರು ನೀಡಿಯಾರೆ?
ಮಾಯನ್ಮಾರ್, ಅಮೆರಿಕಾದ ಕ್ಯಾಪಿಟಲ್ ಮೇಲೆ ನಡೆದ ದಾಳಿ ವೇಳೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮಾಡಿರುವುದು ಆ ದೇಶದ ಆಂತರಿಕ ವಿಷಯಗಳ ಮೇಲೆ ನಡೆಸಿದ ಹಸ್ತಕ್ಷೇಪವೆಂದು ಒಪ್ಪಲು ಘನ ಸರ್ಕಾರ ಅಥವಾ ಸರ್ಕಾರದ ಪರ ನಿಲ್ಲುವುದೇ ದೇಶಪ್ರೇಮವೆಂದು ಭಾವಿಸಿರುವ, ಸರ್ಕಾರದ ಪರ ಬಹಿರಂಗ ಬ್ಯಾಟಿಂಗ್ ಬೀಸುತ್ತಿರುವ ಕಾರ್ಪೊರೇಟ್ ಕಂಪೆನಿಗಳಿಗೆ ಮಾರಿಕೊಂಡಿರುವ ಈ ʼಸೆಲೆಬ್ರಿಟಿಗಳುʼ ಒಪ್ಪುತ್ತಾರೆಯೇ? ಅಥವಾ ಒಪ್ಪಬಹುದೇ?
ಮಾನವೀಯ ಕಳಕಳಿಯಿಂದ ಇನ್ನೊಂದು ದೇಶದೊಳಗೆ ನಡೆಯುತ್ತಿರುವ ಅನ್ಯಾಯವನ್ನು ಪ್ರಶ್ನಿಸುವ, ಅನ್ಯಾಯಕ್ಕೊಳಗಾದವರ ಜೊತೆಗೆ ನಿಲ್ಲುವುದು ʼದೇಶದ ಆಂತರಿಕ ವಿಚಾರದಲ್ಲಿ ನಡೆಸುವ ಹಸ್ತಕ್ಷೇಪʼ ಎಂದಾದರೆ, ಮಹಾತ್ಮ ಗಾಂಧಿ ದಕ್ಷಿಣ ಆಫ್ರಿಕಾದಲ್ಲಿ ಅನ್ಯಾಯದ ವಿರುದ್ಧ ಮಾಡಿರುವ ಹೋರಾಟವೂ ತಪ್ಪೇ ಆಗಬೇಕಲ್ಲವೇ.. ಆದರೆ ಹಾಗಾಗುವುದಿಲ್ಲ. ಮಾನವ ಹಕ್ಕುಗಳ ಉಲ್ಲಂಘನೆಯು ಯಾವುದೆ ದೇಶದ ಆಂತಕರಿಕ ವಿಚಾರವಾಗುವುದಿಲ್ಲ. ಈ ತತ್ವದ ಮೇಲೆಯೇ ವಿಶ್ವಸಂಸ್ಥೆ ಕಾರ್ಯ ನಿರ್ವಹಿಸುತ್ತದೆ. ವಿಶ್ವದಾದ್ಯಂತ ಮಾನವ ಹಕ್ಕು ಹೋರಾಟಗಾರರು ಯಾವುದೇ ದೇಶದಲ್ಲಿ ನಡೆಯುತ್ತಿರುವ ಸ್ವಾತಂತ್ರ್ಯ ಹರಣ, ದೌರ್ಜನ್ಯಗಳ ವಿರುದ್ಧ ಮಾತನಾಡುತ್ತರೆ.
ಅಷ್ಟಕ್ಕೂ, ಬೇರೊಂದು ದೇಶದ ಪೌರತ್ವ ಸಿಕ್ಕಾಗ ಆ ದೇಶದ ಪ್ರಜೆಯಾದ ಅಕ್ಷಯ್ ಕುಮಾರ್, ದೇಶದ ಜನರ ಆರೋಗ್ಯದ ಕಾಳಜಿ ವಹಿಸದೆ ಪಾನ್ ಮಸಾಲ ತಿನ್ನಿಸಹೊರಟಿರುವ ಅಜಯ್ ದೇವಗನ್, ಭಾರತದ ಅಂತರ್ಜಲವನ್ನು ಹೀರಿ ಲಾಭ ಮಾಡುತ್ತಿರುವ ವಿದೇಶಿ ಪೆಪ್ಸಿ ಕುಡಿಯುವಂತೆ ಪ್ರಚೋದಿಸುವ ಸಚಿನ್, ವಿರಾಟ್ ನಂತವರು ಭಾರತದ ಸಾರ್ವಭೌಮತ್ವಕ್ಕಾಗಿ ಒಗ್ಗಟ್ಟಾಗಿ ಎಂದು ಕರೆ ನೀಡುವುದು ಹಾಸ್ಯಾಸ್ಪದವೆನಿಸುತ್ತದೆ.
ದೇಶದ ಅನ್ನದಾತರು ಈ ಪರಿ ಹೋರಾಟ ನಡೆಸುತ್ತಿರುವಾಗಲೂ ಅದರ ಕಡೆಗೆ ಗಮನಹರಿಸದೆ, ಭಯಬಿದ್ದೋ, ಭಕುತಿಯಿಂದಲೋ ಸರ್ಕಾರದ ಪರವಾಗಿ ದನಿಯೆತ್ತುತ್ತಿರುವ ಈ ತಾರೆಯರರನ್ನು ಇತಿಹಾಸ ನೆನಪಿಡುತ್ತದೆ. ಮೀರ್ ಸಾದಿಕ್, ಪೂರ್ಣಯ್ಯರಂತವರನ್ನು ನೆನಪಲ್ಲಿಟ್ಟಂತೆ.
ಕೊನೆಯ ಮಾತು:
‘ಜಗತ್ತಿನ ಯಾವುದೇ ಮೂಲೆಯಲ್ಲಿ ನಡೆಯುವ ಅನ್ಯಾಯದ ವಿರುದ್ಧ ಮಾತನಾಡಿದರೂ ನೀನು ನನ್ನ ಸಂಗಾತಿ’ -ಅರ್ನೆಸ್ಟೋ ಚೆ ಗುವೇರಾ