ಸೌದಿ ಇತ್ತೀಚೆಗೆ ಬಿಡುಗಡೆ ಮಾಡಿದ ನೋಟಿನಲ್ಲಿ ಭಾರತದ ಪ್ರಾದೇಶಿಕ ಗಡಿಗಳನ್ನು ತಪ್ಪಾಗಿ ಚಿತ್ರಿಸಲಾಗಿದೆ ಎಂದು ಭಾರತ ತನ್ನ “ಗಂಭೀರ ಕಳವಳವನ್ನು” ಸೌದಿ ಅರೇಬಿಯಾಕ್ಕೆ ತಿಳಿಸಿರುವುದಾಗಿ ವಿದೇಶಾಂಗ ಸಚಿವಾಲಯ ಹೇಳಿದೆ.
ಜಿ20 ಶೃಂಗಸಭೆಯಲ್ಲಿ ಸೌದಿ ಅಧ್ಯಕ್ಷತೆಯ ಸ್ಮರಣಾರ್ಥ, ಸೌದಿ ಅರೇಬಿಯಾ ಬಿಡುಗಡೆ ಮಾಡಿರುವ ನೋಟಿನಲ್ಲಿ ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ಅನ್ನು ಭಾರತದಿಂದ ಹೊರಗಿರುವಂತೆ ಮುದ್ರಿಸಿತ್ತು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಸೌದಿ ಅರೇಬಿಯಾದ ಅಧಿಕೃತ ನೋಟಿನಲ್ಲಿ ಭಾರತದ ಬಾಹ್ಯ ಪ್ರಾದೇಶಿಕ ಗಡಿಗಳನ್ನು ಸಂಪೂರ್ಣವಾಗಿ ತಪ್ಪಾಗಿ ನಿರೂಪಿಸಿದ್ದಕ್ಕಾಗಿ ನಾವು ನವದೆಹಲಿಯಲ್ಲಿರುವ ಮತ್ತು ರಿಯಾದ್ನಲ್ಲಿರುವ ರಾಯಭಾರಿಯ ಮೂಲಕ ಸೌದಿ ಅರೇಬಿಯಾಗೆ ತಿಳಿಸಿದ್ದೇವೆ ಮತ್ತು ಇದನ್ನು ಸರಿಪಡಿಸಲು ಸೌದಿ ಕಡೆಯಿಂದ ತುರ್ತು ಕ್ರಮ ತೆಗೆದುಕೊಳ್ಳುವಂತೆ ಕೇಳಿಕೊಂಡಿದ್ದೇವೆ ಎಂದು ಭಾರತದ ವಿದೇಶಾಂಗ ಸಚಿವಾಲಯ ತಿಳಿಸಿದೆ.
ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖಿನ ಸಂಪೂರ್ಣ ಕೇಂದ್ರಾಡಳಿತ ಪ್ರದೇಶಗಳು ಭಾರತದ ಅವಿಭಾಜ್ಯ ಅಂಗಗಳಾಗಿವೆ ಎಂದು ನಾನು ಪುನರುಚ್ಚರಿಸಲು ಬಯಸುತ್ತೇನೆ” ಎಂದು ವಿದೇಶಾಂಗ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ.
ಮಧ್ಯಪ್ರಾಚ್ಯದ ಶ್ರೀಮಂತ ರಾಷ್ಟ್ರವಾಗಿರುವ ಸೌದಿ ಅರೇಬಿಯಾ ಭಾರತದೊಂದಿಗೆ ಉತ್ತಮ ಬಾಂಧವ್ಯವನ್ನು ಮುಂದೆವರೆಸುತ್ತಾ ಬಂದಿದೆ. ಇದೀಗ, ನೋಟಿನಲ್ಲಿ ಭಾರತದ ತಪ್ಪಾದ ನಕಾಶೆಯನ್ನು ಸರಿಪಡಿಸುವ ಭಾರತದ ಆಗ್ರಹಕ್ಕೆ ಸೌದಿ ಹೇಗೆ ಪ್ರತಿಕ್ರಿಯಿಸುತ್ತದೆ ಎಂದು ಕಾದು ನೋಡಬೇಕು.










