ದೇಶದಾದ್ಯಂತ ಆಕ್ರೋಶಕ್ಕೆ ಒಳಗಾದ ಹಥ್ರಾಸ್ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ಆಡಳಿತರೂಢ ಬಿಜೆಪಿ ಪಕ್ಷದ ನಾಯಕರು ಬಹಿರಂಗವಾಗಿ ಅತ್ಯಾಚಾರ ಆರೋಪಿಗಳ ಪರವಹಿಸಿ ಮಾತನಾಡಿರುವುದು, ಸಭೆ ಸೇರಿ ಆರೋಪಿಗಳಿಗೆ ಬೆಂಬಲ ಸೂಚಿಸಿದ ಆಘಾತಕಾರಿ ಸುದ್ದಿಯ ಬೆನ್ನಿಗೆ ಇದೀಗ ಸಂತ್ರಸ್ತೆಯದ್ದೇ ತಪ್ಪೆಂದು ಬಿಂಬಿಸುತ್ತಿರುವುದು ಬೆಳಕಿಗೆ ಬಂದಿವೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಹಥ್ರಾಸ್ ಪ್ರಕರಣದ ಆರೋಪಿಗಳು ಮೇಲ್ವರ್ಗಕ್ಕೆ ಸೇರಿದವರಾದ್ದರಿಂದ ʼಸವರ್ಣ ಪರಿಷದ್ʼ ಬಹಿರಂಗವಾಗಿ ಆರೋಪಿಗಳ ಪರ ಬೆಂಬಲಕ್ಕೆ ನಿಂತಿತ್ತು. ಸಂತ್ರಸ್ತೆಯ ದೇಹವನ್ನು ಆಕೆಯ ಕುಟುಂಬಸ್ಥರಿಗೂ ನೀಡದೆ ಪೊಲೀಸರು ತರಾತುರಿಯಲ್ಲಿ ಅಂತ್ಯಕ್ರಿಯೆ ನಡೆಸಿದ್ದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿತ್ತು. ಮಾತ್ರವಲ್ಲದೆ, ಪೊಲೀಸರು ಹಾಗೂ ಆಡಳಿತ ಪ್ರಕರಣದಲ್ಲಿ ಹಸ್ತಕ್ಷೇಪ ನಡೆಸುತ್ತಿದ್ದಾರೆಂದು ಆಕ್ರೋಶ ವ್ಯಕ್ತವಾಯಿತು.
ಯೋಗಿ ಆಡಳಿತ ಆರೋಪಿಗಳ ರಕ್ಷಣೆಗೆ ನಿಂತಿದೆ ಎಂಬ ವದಂತಿಗಳು ಹಬ್ಬುತ್ತಿದ್ದಂತೆಯೇ ಬಿಜೆಪಿಯ ನಾಯಕರೊಬ್ಬರು ಸಭೆ ನಡೆಸಿ ಆರೋಪಿಗಳ ಪರ ವಹಿಸಿ ಮಾತನಾಡಿದ್ದರು.
Also Read: ಹಥ್ರಾಸ್: ಪತ್ರಕರ್ತ ಸೇರಿ ನಾಲ್ವರ ಮೇಲೆ UAPA, ದೇಶದ್ರೋಹ ಪ್ರಕರಣ ದಾಖಲು
ಇದಾದ ಬೆನ್ನಿಗೆ ಬಿಜೆಪಿ ಮಾಜಿ ಶಾಸಕ ರಾಜ್ವೀರ್‌ಸಿಂಗ್ ಪಹಲ್ವಾನ್ ಅವರ ಮನೆಯಲ್ಲಿ ಸಭೆ ನಡೆದಿದ್ದು ಸಭೆಯ ನಂತರ ಮಾತನಾಡಿರುವ ರಾಜ್ವೀರ್ ಅವರ ಮಗ ಮನ್ವೀರ್ ಸಿಂಗ್, ಈ ಪ್ರಕರಣದ ಕುರಿತಾಗಿ ಮೊದಲ ಪೊಲೀಸರಿಗೆ ದೂರು ನೀಡಿದವರ ವಿರುದ್ದ ಎಫ್‌ಐಆರ್ ದಾಖಲಿಸಬೇಕು ಎಂದು ಹೇಳಿದ್ದ.
ಅಷ್ಟೇ ಅಲ್ಲದೆ, ಅತ್ಯಾಚಾರಗಳನ್ನು ಆಡಳಿತದಿಂದ ನಿಯಂತ್ರಿಸಲು ಸಾಧ್ಯವಿಲ್ಲ. ಹೆಣ್ಣಿನ ಪೋಷಕರು ಉತ್ತಮ ಮೌಲ್ಯಗಳನ್ನು ಕಲಿಸುವುದರಿಂದ, ಮನೆಯಲ್ಲಿ ಸಂಸ್ಕಾರ ಕಲಿಸಿಕೊಡುವುದರಿಂದ, ಹೆಣ್ಣು ಮಕ್ಕಳು ಸಂಸ್ಕಾರವಂತರಾಗುವುದರಿಂದ ಅತ್ಯಾಚಾರ ಕಡಿಮೆಯಾಗುತ್ತದೆ ಎಂಬರ್ಥದಲ್ಲಿ ಬಿಜೆಪಿ ಶಾಸಕ ಸುರೇಂದ್ರ ಸಿಂಗ್ ಹೇಳಿಕೆ ನೀಡಿದ್ದನು.
ಅತ್ಯಾಚಾರಗಳಿಗೆ ಕಾರಣ ಮಹಿಳೆಯರೇ ಎಂದು ಪರೋಕ್ಷವಾಗಿ ಹೇಳಿಕೆ ನೀಡಿದ ಸುರೇಂದ್ರ ಸಿಂಗ್ ವಿರುದ್ಧ ಸಾಕಷ್ಟು ಆಕ್ರೋಶವೂ, ವಿರೋಧವೂ ವ್ಯಕ್ತವಾಗಿದೆ.
ಆದರೆ ಬಿಜೆಪಿ ನಾಯಕರಿಗೆ ಇನ್ನೂ ಬುದ್ದಿ ಬಂದಂತೆ ತೋರುವುದಿಲ್ಲ. ಕನಿಷ್ಟ ಲಜ್ಜೆಯೂ ಇಲ್ಲದೆ, ಅಮಾನವೀಯ ಹೇಳಿಕೆ ನೀಡಿ ಇನ್ನೊಬ್ಬ ಬಿಜೆಪಿ ನಾಯಕ ರಂಗಕ್ಕೆ ಇಳಿದಿದ್ದಾನೆ.
Also Read: ಉತ್ತರಪ್ರದೇಶದಲ್ಲಿ ಯೋಗಿ ಕಟ್ಟುತ್ತಿರುವ ‘ರಾಮರಾಜ್ಯ’ದ ಕರಾಳ ಇತಿಹಾಸ
ನವಾಬ್‌ಗಂಜ್ ನಗರ ಪಾಲಿಕೆ ಮಾಜಿ ಅಧ್ಯಕ್ಷ, ಬಿಜೆಪಿ ಮುಖಂಡ ರಂಜಿತ್ ಶ್ರೀವಾಸ್ತವ್ ವಿವಾದಾತ್ಮಕ ವಿಡಿಯೋ ಹೇಳಿಕೆ ಹೊರಬಿದ್ದಿದ್ದು, ವಿಡಿಯೋದಲ್ಲಿ ಅತ್ಯಾಚಾರ ನಡೆದಿರುವುದನ್ನು ಆತ ನಿರಾಕರಿಸಿದ್ದಾನೆ. ಅಷ್ಟೇ ಅಲ್ಲ, ಇಂತಹ ಹುಡುಗಿಯರು ಒಂಟಿಯಾಗಿ ಹೊಲಗಳಲ್ಲಿ ಏನು ಮಾಡುತ್ತಿರುತ್ತಾರೆ ಎಂದು ಪ್ರಶ್ನಿಸಿದ್ದಾನಡ. ಒಬ್ಬ ಹಿರಿಯ ನಾಗರಿಕನಾಗಿ, ಪ್ರಜ್ಞಾವಂತ ಮನುಷ್ಯನಾಗಿ ಘಟನೆಯನ್ನು ಖಂಡಿಸುವ ಬದಲು, ಸಂತ್ರಸ್ತೆ ಯಾರ ಜೊತೆಗೋ ಸಂಬಂಧ ಇರಿಸಿರಬೇಕು, ಹಾಗಾಗಿ ಗದ್ದೆಯಲ್ಲಿ ಭೇಟಿಯಾಗಲು ತನ್ನ ಗೆಳೆಯನನ್ನು ಕರೆದಿರಬೇಕು, ಹಾಗೂ ಆತನನ್ನು ಭೇಟಿಯಾಗಲು ಒಂಟಿಯಾಗಿ ಗದ್ದೆಗೆ ತೆರಳಿರುತ್ತಾಳೆ ಎಂದು ಈ ಮನುಷ್ಯ ವಿಡಿಯೋದಲ್ಲಿ ಹೇಳಿದ್ದಾನೆ.
67 ವರ್ಷದ ರಂಜಿತ್ ಶ್ರೀವಾಸ್ತವನ ಪುತ್ರನೂ ಬಿಜೆಪಿಯಲ್ಲಿದ್ದು, ಬಿಜೆಪಿ ಯುವ ಮೋರ್ಛಾದ ಸಕ್ರಿಯ ಸದಸ್ಯ.
ಶ್ರೀವಾಸ್ತವ್ ಪ್ರಕಾರ, ಆಕೆಯ ಸಾಯುವ ಮುನ್ನ ಹೇಳಿದ ಹೇಳಿಕೆಯನ್ನು ಮರಣ ಪೂರ್ವ ಹೇಳಿಕೆಯೆಂದು ಕರೆಯಬಾರದು. ಅದಕ್ಕೆ ಆತ ನೀಡುವ ಕಾರಣ ಮರಣ ಪೂರ್ವ ಹೇಳಿಕೆಯನ್ನು ಮ್ಯಾಜಿಸ್ಟ್ರೇಟ್ ಎದುರು ಹೇಳಬೇಕು. ಆಕೆ ಸಾಯುವ ಮೊದಲು ನೀಡಿದ ಹೇಳಿಕೆಗೆ ಮ್ಯಾಜಿಸ್ಟ್ರೇಟ್ ಸಾಕ್ಷಿಯಾಗಲಿಲ್ಲ ಹಾಗಾಗಿ ಆಕೆಯದ್ದು ಮರಣ ಪೂರ್ವ ಹೇಳಿಕೆ ಎಂದು ತೆಗೆದುಕೊಳ್ಳಬಾರದು ಎಂದು ಹೇಳಿದ್ದಾರೆ.
Also Read: CBI ತನಿಖೆ ನಡುವೆಯೇ ಹತ್ರಾಸ್ ಪ್ರಕರಣದ ದಿಕ್ಕು ತಪ್ಪಿಸಲೆತ್ನಿಸುತ್ತಿರುವ ಆದಿತ್ಯನಾಥ್, ಮತ್ತವರ ಪೊಲೀಸರು
ಮಾರಣಾಂತಿಕ ಗಾಯಗಳೊಂದಿಗೆ ಆಸ್ಪತ್ರೆಯಲ್ಲಿ ಜೀವಣ್ಮರಣ ಹೋರಾಟ ನಡೆಸುತ್ತಿದ್ದ ಯುವತಿ ಸಾಯುವ ಮೊದಲು ನೀಡಿದ್ದ ಹೇಳಿಕೆಯ ಆಧಾರದಲ್ಲೇ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿತ್ತು. ಹಾಗೂ ಆಕೆಯ ಹೇಳಿಕೆಯೇ ಈ ನಾಲ್ವರು ʼಠಾಕೂರುʼ ಹುಡುಗರ ವಿರುದ್ಧ ಇರುವ ಪ್ರಬಲ ಸಾಕ್ಷಿ. ಹಾಗಾಗಿಯೇ, ಬಿಜೆಪಿ ಮುಖಂಡ ಆಕೆಯ ಹೇಳಿಕೆಯ ಮಹತ್ವವನ್ನು ತಳ್ಳಿಹಾಕಲು ಪ್ರಯತ್ನಿಸುತ್ತಿದ್ದಾರೆ.
ಹಥ್ರಾಸ್ ಪ್ರಕರಣವನ್ನು ರಾಜಕೀಯಗೊಳಿಸಲಾಗುತ್ತಿದೆ ಎಂದು ಆರೋಪಿಸುತ್ತಿರುವ ಬಿಜೆಪಿಗರು, ಪ್ರಕರಣದ ಆರೋಪಿಗಳಿಗೆ, ಅದರಲ್ಲೂ ಸಂತ್ರಸ್ತೆಯ ಹೇಳಿಕೆ ಆಧಾರದ ಮೇಲೆ ವಶಕ್ಕೆ ಪಡೆದುಕೊಂಡ ಆರೋಪಿಗಳಿಗೆ ಕೇವಲ ಜಾತಿ ಕಾರಣಕ್ಕೆ ಬಹಿರಂಗ ಬೆಂಬಲ ನೀಡುತ್ತಿರುವ ತಮ್ಮ ನಾಯಕರ, ಸವರ್ಣ ಪರಿಷದ್ ನಂತಹ ಸಂಘಟನೆಗಳ ಕಾರ್ಯವಿಧಾನದ ವಿರುದ್ಧ ಸೊಲ್ಲೆತ್ತುವುದಿಲ್ಲ. ಅಷ್ಟಕ್ಕೂ ಕಥುವಾದ ಆಸಿಫಾಳ ಅತ್ಯಾಚಾರಿಗಳ ಪರವಾಗಿ ಮೆರವಣಿಗೆ ಹೊರಟ ಬಲಪಂಥೀಯ ಸಂಘಟಕರಿಂದ ಇಷ್ಟಾದರೂ ಸಮರ್ಥನೆ ಬಾರದಿದ್ದರೆ, ʼಅತ್ಯಾಚಾರವನ್ನು ಆಯುಧವಾಗಿ ನಂಬಿದʼ ತಮ್ಮ ಮಹೋನ್ನತ ನಾಯಕ ʼವೀರ್ ಸಾವರ್ಕರ್ʼಗೆ ಮಾಡುವ ಅತಿಘೋರ ಅವಮಾನವಾಗಿದ್ದೀತು.