ನಮ್ಮ ಹೆಮ್ಮೆಯ ಭಾರತೀಯ ಸೇನೆಯು ಸಾವಿರಾರು ಧೈರ್ಯಶಾಲಿ ವೀರರ ನೆಲೆವೀಡಾಗಿದೆ. ಧೈರ್ಯ ಸಾಹಸಕ್ಕೆ ಹೆಸರಾದ ಅಸಾಮಾನ್ಯ ವೀರರು ಸೇನೆಯನ್ನು ಮುನ್ನಡೆಸಿದ್ದು ಅವರ ಅಪ್ರತಿಮ ಸೇವೆಯನ್ನು ದೇಶವು ಇಂದಿಗೂ ಕೃತಜ್ಞತೆಯಿಂದ ಸ್ಮರಿಸಿಕೊಳ್ಳುತ್ತಿದೆ. ಇಂತಹ ಅಸಾಮಾನ್ಯರಲ್ಲಿ ಒಬ್ಬರಾದ ಕರ್ನಲ್ ನರೇಂದ್ರ ಬುಲ್ ಕುಮಾರ್ ಅವರು ಗುರುವಾರ ನವದೆಹಲಿಯ ಸೈನ್ಯದ ಸಂಶೋಧನೆ ಮತ್ತು ರೆಫರಲ್ ( ಆರ್ ಅಂಡ್ ಆರ್ ) ಆಸ್ಪತ್ರೆಯಲ್ಲಿ ಕೊನೆಯುಸಿರು ಎಳೆದಿದ್ದಾರೆ. 84 ವರ್ಷ ವಯಸ್ಸಿನ ಕುಮಾರ್ ಅವರು ವಯೋಸಹಜ ಖಾಯಿಲೆಗಳಿಂದ ಬಳಲುತಿದ್ದರು.
ಸಿಯಾಚಿನ್ ಹೀರೋ ಎಂದೇ ಸೇನೆಯಲ್ಲಿ ಗುರುತಿಸಲ್ಪಡುವ ಕರ್ನಲ್ ನರೇಂದ್ರ ಅವರು ಸಿಯಾಚಿನ್ ಹಿಮನದಿಯ ಕಾರ್ಯತಂತ್ರದ ಮಹತ್ವದ ಬಗ್ಗೆ ಭಾರತದ ಮಿಲಿಟರಿ ನಾಯಕತ್ವಕ್ಕೆ ಮನವರಿಕೆ ಮಾಡಿಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಪಾಕಿಸ್ತಾನದ ಅತಿಕ್ರಮಣದಿಂದ ಸಿಯಾಚಿನ್ ನದಿ ಮತ್ತು ಹಿಮ ಪರ್ವತವನ್ನು ಪಡೆದುಕೊಳ್ಳಲು 1984 ರಲ್ಲಿ ಭಾರತೀಯ ಸೇನೆಯು ಆಪರೇಷನ್ ಮೇಘಡೂತ್ ಅನ್ನು ಪ್ರಾರಂಬಿಸಿ ಇಡೀ ಪರ್ವತ ಶ್ರೇಣಿಯನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿ ಆಯಿತು. ಒಂದು ವೇಳೆ ನರೇಂದ್ರ ಕುಮಾರ್ ಅವರು ಸಿಯಾಚಿನ್ ಮಹತ್ವವನ್ನು ಸೇನೆಯ ಉನ್ನತಾಧಿಕಾರಿಗಳಿಗೆ ಮನವರಿಕೆ ಮಾಡಿಕೊಡದಿದ್ದರೆ ಸೇನೆಯು ಕಾರ್ಯಾಚರಣೆಯನ್ನೂ ನಡೆಸುತ್ತಿರಲಿಲ್ಲ ಮತ್ತು ಸಿಯಾಚಿನ್ ನ ಸುಮಾರು 10,000 ಚದರ ಕಿ.ಮೀ ಪ್ರದೇಶವವು ಇಂದು ಪಾಕಿಸ್ಥಾನದ ವಶದಲ್ಲಿರುತಿತ್ತು.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಕರ್ನಲ್ ಕುಮಾರ್ ಅವರು ಭಾರತೀಯ ಸೇನೆಯ ಗುಲ್ಮಾರ್ಗ್ ನಲ್ಲಿರುವ ಹೈ ಆಲ್ಟಿಟ್ಯೂಡ್ ವಾರ್ ಫೇರ್ ಸ್ಕೂಲ್ ನಲ್ಲಿ ಕಮಾಂಡಿಂಗ್ ಆಫೀಸರ್ ಆಗಿದ್ದಾಗ ಅಲ್ಲಿ ಸೇನೆಯ ಇನ್ಫಾಂಟ್ರಿ ದಳದ ಮಾಜಿ ಡಿಜಿ ಮತ್ತು ಲೆಫ್ಟಿನೆಂಟ್ ಜನರಲ್ ಸಂಜಯ್ ಕುಲಕರ್ಣಿ ಅವರು ತರಬೇತಿ ಪಡೆದಿದ್ದರು. ಇವರು ಆಪರೇಷನ್ ಮೇಘದೂತ್ ಕಾರ್ಯಾಚರಣೆಯಲ್ಲೂ ಪಾಲ್ಗೊಂಡಿದ್ದರು. ಕುಮಾರ್ ಅವರ ಕುರಿತು ಪ್ರತಿಕ್ರಿಯಿಸಿದ ಸಂಜಯ್ ಅವರು ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯಲ್ಲಿ ತನ್ನ ಹಿರಿಯ ಅಧಿಕಾರಿಯಾಗಿದ್ದ ಸುನಿತ್ ಫ್ರಾನ್ಸಿಸ್ ರೊಡ್ರಿಗಸ್ ಅವರೊಂದಿಗೆ ಪಂದ್ಯದಲ್ಲಿ ಗೆಲುವು ಸಾಧಿಸಿದರು. ನಂತರ ಅವರಿಗೆ ‘ಬುಲ್’ ಎಂಬ ಅಡ್ಡಹೆಸರು ಬಂದಿತು. ರೊಡ್ರಿಗಸ್ ಅವರು ನಂತರ ಸೇನಾ ಮುಖ್ಯಸ್ಥರಾದರು. ಆದರೆ, ಕುಮಾರ್ ಅವರಿಗೆ ಬುಲ್ ಹೆಸರು ಖಾಯಂ ಆಯಿತು. ಕುಮಾರ್ ಅಪ್ರತಿಮ ಧೈರ್ಯಶಾಲಿಯೂ ಆಗಿದ್ದು ಉತ್ತಮ ಪರ್ವತಾರೋಹಿಯೂ ಆಗಿದ್ದರು ಎಂದು ಸ್ಮರಿಸಿದರು.
ಜರ್ಮನ್ ಸಂಶೋಧಕರೊಬ್ಬರು ಉತ್ತರ ಕಾಶ್ಮೀರದ ಅಮೇರಿಕನ್ ನಕ್ಷೆಯನ್ನು ತೋರಿಸಿದ ನಂತರ ಕರ್ನಲ್ ಕುಮಾರ್ ಅವರ ಸಿಯಾಚಿನ್ ಮಿಷನ್ ಪ್ರಾರಂಭವಾಯಿತು. ನಕ್ಷೆಯಲ್ಲಿ ನಿಗದಿತ ಗಡಿಗಿಂತ ಒಳಭಾಗಕ್ಕೆ ಭಾರತದ ಗಡಿಯನ್ನು ಗುರುತಿಸಲಾಗಿತ್ತು. ಸಿಯಾಚಿನ್ ಸೇರಿದಂತೆ ಪೂರ್ವ ಕರಕೋರಂನ ಒಂದು ದೊಡ್ಡ ಭಾಗವನ್ನು ಪಾಕಿಸ್ತಾನಕ್ಕೆ ಕಾರ್ಟೊಗ್ರಾಫಿಕ್ ಮೂಲಕ ಬಿಟ್ಟುಕೊಟ್ಟಿದ್ದನ್ನು ಮನಗಂಡ ಕರ್ನಲ್ ಕುಮಾರ್, ನಕ್ಷೆಯನ್ನು 1978 ರಲ್ಲಿ ನೇರವಾಗಿ ಅಂದಿನ ಡೈರೆಕ್ಟರ್ ಜನರಲ್ ಆಫ್ ಮಿಲಿಟರಿ ಆಪರೇಷನ್ಸ್ ಅವರಿಗೆ ಕಳಿಸಿದರು. ಈ ಕುರಿತು ಮುಂದುವರಿಯಲು ಅನುಮತಿಯನ್ನೂ ಕೋರಿದರು. ಕರ್ನಲ್ ಕುಮಾರ್ ಮತ್ತು ಅವರ ತಂಡವು ಏಳು ಪರ್ವತ ಶ್ರೇಣಿಗಳಾದ – ಪಿರ್ ಪಂಜಾಲ್ ಶ್ರೇಣಿ, ಹಿಮಾಲಯ, ಜನ್ಸ್ಕರ್, ಲಡಾಖ್, ಸಾಲ್ಟೋರೊ, ಕರಕೋರಂ ಮತ್ತು ಅಗಿಲ್ ಪರ್ವಶ್ರೇಣಿಯನ್ನು ದಾಟಿ ಸಿಯಾಚಿನ್ ಅನ್ನು ಆಕ್ರಮಿಸಿಕೊಳ್ಳುವ ಪಾಕಿಸ್ತಾನದ ದುರುದ್ದೇಶದ ಬಗ್ಗೆ ಗುಪ್ತಚರ ಮಾಹಿತಿ ಸಂಗ್ರಹಿಸಿದರು.
1978 ರಲ್ಲಿ ಕುಮಾರ್ ಅವರ ಪ್ರಸ್ತಾವನೆಯ ನಂತರ ಭಾರತೀಯ ಸೇನೆಯು , 1982, ’83 ಮತ್ತು ’84 ರಲ್ಲಿ 2-3 ತಿಂಗಳವರೆಗೆ ಸಿಯಾಚಿನ್ ಹಿಮನದಿಯ ಸುತ್ತ ದೀರ್ಘ ಕಾಲದ ಗಸ್ತು ತಿರುಗಲು ಪ್ರಾರಂಭಿಸಿತು. 1984 ರ ಮೇ ತಿಂಗಳ ಒಂದನೇ ತಾರೀಖೀನಂದು ಪಾಕಿಸ್ಥಾನವು ಸಿಯಾಚಿನ್ ವಶಪಡಿಸಿಕೊಳ್ಳಲು ಕಾರ್ಯಾಚರಣೆ ನಡೆಸಲು ಯೋಜನೆ ಹಾಕಿಕೊಂಡಿತು. ಆದರೆ ಭಾರತವು ಏಪ್ರಿಲ್ 13, 1984 ರಂದು ಆಪರೇಷನ್ ಮೇಘದೂತ್ ಅನ್ನು ಪ್ರಾರಂಭಿಸುವ ಮೂಲಕ ಪಾಕಿಸ್ಥಾನದ ದಾಳಿಯನ್ನು ಅತ್ಯಂತ ಯಶಸ್ವಿಯಾಗಿ ಹಿಮ್ಮೆಟ್ಟಿಸಿತು. ಕರ್ನಲ್ ಕುಮಾರ್ ಅವರು ಈ ಮೇಘದೂತ್ ಕಾರ್ಯಾಚರಣೆಯಲ್ಲಿ ತೋರಿದ ಅಪೂರ್ವ ಬುದ್ದಿಮತ್ತೆ ಮತ್ತು ಸಾಹಸಕ್ಕಾಗಿ ಸಿಯಾಚಿನ್ ನ ಸೇನಾ ನೆಲೆಯೊಂದಕ್ಕೆ ಕುಮಾರ್ ಬೇಸ್ ಎಂದು ಹೆಸರಿಡಲಾಗಿದೆ. ಸೇನೆಯಲ್ಲಿ ಈ ರೀತಿ ಹೆಸರಿಡುವುದು ಹುತಾತ್ಮರಿಗೆ ಮಾತ್ರ ಆದರೂ ಕುಮಾರ್ ಅವರಿಗೆ ಈ ಗೌರವ ಬದುಕಿದ್ದಾಗಲೇ ಸಿಕ್ಕಿದೆ.
1933 ರಲ್ಲಿ ರಾವಲ್ಪಿಂಡಿಯಲ್ಲಿ ಜನಿಸಿದ ಕುಮಾರ್ 1950 ರಲ್ಲಿ ಸೈನ್ಯವನ್ನು ಸೇರಿದರು. ಅವರನ್ನು 1954 ರ ಜೂನ್ನಲ್ಲಿ ಕುಮಾನ್ ರೈಫಲ್ಸ್ನಲ್ಲಿ ನಿಯೋಜಿಸಲಾಯಿತು. ಕರ್ನಲ್ ಕುಮಾರ್ ಡಾರ್ಜಿಲಿಂಗ್ನಲ್ಲಿ ಹಿಮಾಲಯನ್ ಪರ್ವತಾರೋಹಣ ಸಂಸ್ಥೆಯ ನಿರ್ದೇಶಕರಾದ ಟೆನ್ಜಿಂಗ್ ನಾರ್ಗೆ ಅವರನ್ನು ಭೇಟಿಯಾದ ನಂತರ ಅವರು ಪರ್ವತಾರೋಹಣದ ಬಗ್ಗೆ ಆಸಕ್ತಿ ಬೆಳೆಸಿಕೊಂಡು ಪರ್ವತಾರೋಹಿ ಆದರು. ಅವರು 1961 ರಲ್ಲಿ ಫ್ರಾಸ್ಟ್ ಬೈಟ್ ನಿಂದಾಗಿ ತಮ್ಮ ಕಾಲಿನ ನಾಳ್ಕು ಬೆರಳುಗಳ್ನು ಕಳೆದುಕೊಂಡರು. 1964 ರಲ್ಲಿ ನಂದಾದೇವಿ ಪರ್ವತ ಏರಿ , 1965 ರಲ್ಲಿ ಮೌಂಟ್ ಎವರೆಸ್ಟ್ ಏರಿದರು. ಇದಲ್ಲದೆ ಇವರು 20 ಕ್ಕೂ ಹೆಚ್ಚು ಬಾರಿ ಎವರೆಸ್ಟ್ ಪರ್ವತದ ಆಕ್ಸಿಜನ್ ಕಡಿಮೆ ಇರುವ ಪ್ರದೇಶವನ್ನೂ ಏರಿದ್ದಾರೆ. ಅವರ ಪದಕಗಳ ಪಟ್ಟಿ ಕೂಡ ಉದ್ದವಾಗಿದೆ. 1965 ರಲ್ಲಿ ಕರ್ನಲ್ ಕುಮಾರ್ ಅವರಿಗೆ ಪದ್ಮಶ್ರೀ ಮತ್ತು ನಂತರ ಎವರೆಸ್ಟ್ ಆರೋಹಣಕ್ಕಾಗಿ ಅರ್ಜುನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕುಮಾರ್ ಈ ಮೂರು ಸೇವೆಗಳಲ್ಲಿ ಪರಮ್ ವಿಶಿಷ್ಠ ಸೇವಾ ಪದಕ (ಪಿವಿಎಸ್ಎಂ) ಪಡೆದಿದ್ದು ದೇಶದಲ್ಲಿ ಈವರೆಗೆ ಈ ರೀತಿಯ ಗೌರವ ಪಡೆದ ಏಕೈಕ ಕರ್ನಲ್ ದರ್ಜೆಯ ಅಧಿಕಾರಿ ಆಗಿದ್ದಾರೆ. ಈ ಪದಕವನ್ನು ಸಾಮಾನ್ಯವಾಗಿ ಜನರಲ್ಗಳಿಗೆ ನೀಡಲಾಗುತ್ತದೆ. ಭಾರತ ಸರ್ಕಾರವು ಅವರಿಗೆ ಕೀರ್ತಿ ಚಕ್ರ ಮತ್ತು ಅತಿ ವಿಶೀಷ್ಠ ಸೇವಾ ಪದಕವನ್ನೂ ನೀಡಿ ಗೌರವಿಸಿದೆ. ತಂದೆಯಂತೆ ಅವರ ಮಕ್ಕಳೂ ಪ್ರಶಸ್ತಿ ವಿಜೇತರಾಗಿದ್ದು 1988 ರಲ್ಲಿ ಆಲ್ಪೈನ್ ಸ್ಕೀಯಿಂಗ್ನಲ್ಲಿ ಭಾಗವಹಿಸಿದ್ದ ಭಾರತದ ಮೊದಲ ಮಹಿಳಾ ಚಳಿಗಾಲದ ಒಲಿಂಪಿಯನ್ ಕುಮಾರ್ ಅವರ ಪುತ್ರಿ ಶೈಲಾಜಾ ಕುಮಾರ್ ಅವರಾಗಿದ್ದಾರೆ.ಅವರ ಪುತ್ರ ಅಕ್ಷಯ್ ಅವರು ಸಾಹಸೀ ಪರ್ವತಾರೋಹಣ ಪ್ರವಾಸೀ ಸಂಸ್ಥೆಯೊಂದನ್ನು ನಡೆಸುತಿದ್ದು 2020 ರ ಸೆಪ್ಟೆಂಬರ್ನಲ್ಲಿ ದೆಹಲಿಯಲ್ಲಿ ಹೃದಯ ಸ್ತಂಭನದಿಂದ ನಿಧನರಾದರು. ಕುಮಾರ್ ಅವರು ಅಂದಿನಿಂದ ದುಃಖಿತರಾಗಿದ್ದರು ಎಂದು ಅವರ ಕುಟುಂಬ ಮೂಲಗಳು ತಿಳಿಸಿವೆ. ಕುಮಾರ್ ಮತ್ತೆ ಹುಟ್ಟಿ ಬರಲಿ ಎಂದು ಆಶಿಸೋಣ.