ಕೇರಳ ಮೂಲದ ಪತ್ರಕರ್ತ ಸಿದ್ದೀಕ್ ಕಪ್ಪನ್ ಅವರನ್ನು ಬಿಡುಗಡೆ ಮಾಡಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ಮಾಡಿದ ಸುಪ್ರೀಂ ಕೋರ್ಟ್ ಉತ್ತರ ಪ್ರದೇಶ ಸರ್ಕಾರಕ್ಕೆ ಪ್ರತಿಕ್ರಿಯೆ ಕೇಳಿ ನೋಟಿಸ್ ನೀಡಿದೆ.
ದೇಶಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದ ಉತ್ತರಪ್ರದೇಶದ ಹಥ್ರಾಸ್ ಸಾಮೂಹಿಕ ಅತ್ಯಾಚಾರ ಪ್ರಕರಣವನ್ನು ವರದಿ ಮಾಡಲು ತೆರಳುತ್ತಿದ್ದ ವೇಳೆ ಯೋಗಿ ಆದಿತ್ಯನಾಥ್ ಸರ್ಕಾರ ಸಿದ್ದೀಕ್ ಕಪ್ಪನ್ ಹಾಗೂ ಸಂಗಡಿಗರನ್ನು ಬಂಧಿಸಿತ್ತು.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಕೇರಳ ಯೂನಿಯನ್ ಆಫ್ ವರ್ಕಿಂಗ್ ಜರ್ನಲಿಸ್ಟ್ಸ್(KUWJ) ಸಲ್ಲಿಸಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿದ್ದು, ಮನವಿಯಲ್ಲಿ ಸಿದ್ದೀಕ್ ಅವರ ಬಂಧನವನ್ನು ಪ್ರಶ್ನಿಸಿ, ಹಾಗೂ ಅವರನ್ನು ಬಿಡುಗಡೆ ಮಾಡುವಂತೆ ಕೋರಲಾಗಿತ್ತು.
KUWJ ಪರ ವಾದಿಸಿದ ಹಿರಿಯ ವಕೀಲ ಕಪಿಲ್ ಸಿಬಲ್ ʼಎಫ್ಐಆರ್ ನಲ್ಲಿ ಸಿದ್ದೀಕ್ ವಿರುದ್ಧ ಯಾವುದೇ ಅಪರಾಧವನ್ನು ಬಹಿರಂಗಪಡಿಸುವುದಿಲ್ಲ. ಅವರು ಅಕ್ಟೋಬರ್ 5 ರಿಂದ ಜೈಲಿನಲ್ಲಿದ್ದಾರೆ. ನಾವು ಪತ್ರಕರ್ತರನ್ನು ಭೇಟಿಯಾಗಲು ಅನುಮತಿ ಕೇಳಿ ಮ್ಯಾಜಿಸ್ಟ್ರೇಟ್ ಬಳಿ ಹೋದಾಗ ಅವರು ಜೈಲಿಗೆ ಹೋಗುʼ ಎಂದು ಹೇಳಿದ್ದಾರೆ.
ಪತ್ರಕರ್ತ ಸಿದ್ದೀಕ್ ಕಪ್ಪನ್ಗೆ ಮಧ್ಯಂತರ ಜಾಮೀನು ಕೋರಿ ಅರ್ಜಿ ಸಲ್ಲಿಸಲಾಗಿತ್ತು ಎಂದು ಸಿಬಲ್ ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದಾರೆ. ಆದರೆ, KUWJ ಪ್ರತಿನಿಧಿಗಳಿಗೆ ಜೈಲಿನಲ್ಲಿ ಕಪ್ಪನ್ ಅವರನ್ನು ಭೇಟಿಯಾಗಲು ಅವಕಾಶವಿಲ್ಲದ ಕಾರಣ, ಅವರ ಸಹಿಯನ್ನು ಪಡೆಯಲು KUWJ ಗೆ ಸಾಧ್ಯವಾಗಿರಲಿಲ್ಲ.
Also Read: ಇನ್ನೂ ಜೈಲಲ್ಲಿ ಕೊಳೆಯುತ್ತಿರುವ ಸಾಮಾಜಿಕ ಹೋರಾಟಗಾರರು: ಅರ್ನಬ್ಗಿರುವ ಅನುಕೂಲ ಇವರಿಗಿಲ್ಲ
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶ CJI SA ಬಾಬ್ಡೆ ನೇತೃತ್ವದ ತ್ರಿ ಸದಸ್ಯ ಪೀಠವು ಅರ್ಜಿ ವಿಚಾರಣೆಯನ್ನು ಸಲ್ಲಿಸಿದ್ದು, ಮುಂದಿನ ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿದೆ.
ಕಳೆದ ಶುಕ್ರವಾರ ಮಥುರಾ ನ್ಯಾಯಾಲಯವು ಸಿದ್ದೀಕ್ ಕಪ್ಪನ್ ಹಾಗೂ ಸಂಗಡಿಗರ ಜಾಮೀನು ಅರ್ಜಿಯನ್ನು ವಜಾಗೊಳಿಸಿ, ಜಾಮೀನು ನಿರಾಕರಿಸಿತ್ತು. ಸಾಮೂಹಿಕ ಅತ್ಯಾಚಾರ ನಂತರ ಮೃತಪಟ್ಟ ದಲಿತ ಮಹಿಳೆಯ ಕುಟುಂಬವನ್ನು ಭೇಟಿಯಾಗಲು ಹಥ್ರಾಸ್ ಹಳ್ಳಿಗೆ ತೆರಳುತ್ತಿದ್ದ ಸಿದ್ದೀಕ್ ಕಪ್ಪನ್ ಹಾಗೂ ಅವರೊಂದಿಗೆ ಬಂಧನಕ್ಕೊಳಗಾದ ಇನ್ನೂ ಮೂವರ ವ್ಯಕ್ತಿಗಳ ಮೇಲೆ ದೇಶದ್ರೋಹ ಮತ್ತು ಭಯೋತ್ಪಾದನೆ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ.