ಈ ಲೇಖನದ ಆಡಿಯೋ ಆವೃತ್ತಿ ಇಲ್ಲಿದೆ. ಕ್ಲಿಕ್ ಮಾಡಿ ಕೇಳಿ
ರಾಜ್ಯ ಕಾಂಗ್ರೆಸ್ ನಲ್ಲಿ ಹಿರಿಯ ನಾಯಕರ ಅಸಹಾಕಾರ, ಉಪ ಚುನಾವಣೆಯಲ್ಲಿ ಹೀನಾಯ ಸೋಲಿನಿಂದ ಬೇಸತ್ತು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸ್ಥಾನಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಿ ನಿರಾಳರಾಗಿದ್ದಾರೆ. ಆ ರಾಜೀನಾಮೆ ಅಂಗೀಕರಿಸಬೇಕು ಎಂದು ಕೆಲವು ಹಿರಿಯ ನಾಯಕರು ಹೈಕಮಾಂಡ್ ಮೇಲೆ ಒತ್ತಡ ಹೇರಲಾರಂಭಿಸಿದರೆ, ಇನ್ನೊಂದೆಡೆ ಹೇಗಾದರೂ ಮಾಡಿ ಸಿದ್ದರಾಮಯ್ಯ ಅವರನ್ನು ಉಳಿಸಿಕೊಳ್ಳಬೇಕು ಎಂದು ಹಿಂದೆ ಆ ಹಿರಿಯ ನಾಯಕರ ಜತೆಗೆ ನಿಂತಿದ್ದ ಪಕ್ಷದ ಹಲವು ಮುಖಂಡರು ಪ್ರಯತ್ನಿಸುತ್ತಿದ್ದಾರೆ.
ಇದು ರಾಜ್ಯ ಕಾಂಗ್ರೆಸ್ ನಲ್ಲಿ ಗೊಂದಲವನ್ನು ಇನ್ನಷ್ಟು ಹೆಚ್ಚುವಂತೆ ಮಾಡಿದೆ. ಇದುವರೆಗೆ ಸಿದ್ದರಾಮಯ್ಯ ವಿರುದ್ಧ ಲಾಬಿ ನಡೆಸಲು ತಮ್ಮೊಂದಿಗೇ ನಿಂತಿದ್ದ ಕೆಲವು ಮುಖಂಡರು ಈಗ ಸಿದ್ದರಾಮಯ್ಯ ಪರ ಬ್ಯಾಟಿಂಗ್ ಮಾಡುತ್ತಿರುವುದು ಹಿರಿಯ ಮುಖಂಡರಿಗೆ ನುಂಗಲಾರದ ಬಿಸಿ ತುಪ್ಪವಾಗುತ್ತಿದೆ. ಹೀಗಾಗಿ ಸಿದ್ದರಾಮಯ್ಯ ಬೇಕಿದ್ದರೆ ಮುಂದುವರಿಯಲಿ. ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ದಿನೇಶ್ ಗುಂಡೂರಾವ್ ಬದಲು ಬೇರೆಯವರಿಗೆ ನೀಡಬೇಕು ಎಂಬ ವಾದವನ್ನು ಮುಂದಿಡುತ್ತಿದ್ದಾರೆ.
ಇಷ್ಟಕ್ಕೆಲ್ಲಾ ಕಾರಣ ಸಿದ್ದರಾಮಯ್ಯ ಅವರಿಗೆ ಇರುವ ಶಾಸಕರ ಬೆಂಬಲ. ಉಪ ಚುನಾವಣೆಯ ಹೀನಾಯ ಸೋಲಿನ ಹೊಣೆ ಹೊತ್ತು ಸಿದ್ದರಾಮಯ್ಯ ಮತ್ತು ದಿನೇಶ್ ಗುಂಡೂರಾವ್ ಅವರು ಒಂದೇ ದಿನ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದರು. ಆದರೆ, ಪಕ್ಷದಲ್ಲಿ ರಾಜೀನಾಮೆ ಹಿಂಪಡೆಯುವಂತೆ ಸಿದ್ದರಾಮಯ್ಯ ಮೇಲೆ ಒತ್ತಡ ಬಿತ್ತಾದರೂ ದಿನೇಶ್ ಗುಂಡೂರಾವ್ ಅವರ ವಿಚಾರದ ಬಗ್ಗೆ ಅಲ್ಲೊಂದು, ಇಲ್ಲೊಂದು ಮಾತು ಬಿಟ್ಟರೆ ಬಹುತೇಕರು ತಲೆಕೆಡಿಸಿಕೊಂಡಿರಲಿಲ್ಲ. ಏಕೆಂದರೆ, ಪ್ರಸ್ತುತ ಕಾಂಗ್ರೆಸ್ ಅಧಿಕೃತ ವಿರೋಧ ಪಕ್ಷವಾಗಿರುವುದರಿಂದ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕಿಂತ ಮಹತ್ವದ ಸ್ಥಾನ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸ್ಥಾನವಾಗಿದೆ.

ಸಂಕಷ್ಟದ ಸಮಯದಲ್ಲಿ ಜವಾಬ್ದಾರಿ ವಹಿಸಿಕೊಳ್ಳಲು ಹಿಂದೇಟು
ಲೋಕಸಭೆ ಚುನಾವಣೆ ಮತ್ತು ವಿಧಾನಸಭೆ ಉಪ ಚುನಾವಣೆಗಳ ಹೀನಾಯ ಸೋಲಿನಿಂದ ರಾಜ್ಯದಲ್ಲಿ ಕಾಂಗ್ರೆಸ್ ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿದೆ. ಮೈತ್ರಿ ಸರ್ಕಾರ ಉರುಳಿದ್ದರಿಂದ ಆಡಳಿತಾರೂಢ ಬಿಜೆಪಿಯನ್ನು ಎದುರಿಸುವುದರ ಜತೆಗೆ ಹಿಂದೆ ಮಿತ್ರಪಕ್ಷವಾಗಿದ್ದ ಜೆಡಿಎಸ್ ಪಕ್ಷವನ್ನೂ ಎದುರಿಸಬೇಕಾಗುತ್ತದೆ. ವಿಧಾನಸಭೆಯ ಒಳಗೆ ಮತ್ತು ಹೊರಗೆ ಎರಡೂ ಕಡೆ ಈ ಕೆಲಸ ಮಾಡಬೇಕಾಗುತ್ತದೆ. ಸಂಕಷ್ಟದ ಪರಿಸ್ಥಿತಿಯಲ್ಲಿ ಈ ಕೆಲಸ ಮಾಡಿ ಯಶಸ್ಸು ಗಳಿಸುವುದು ಕಷ್ಟಸಾಧ್ಯ.
ಪ್ರಸ್ತುತ ಶಾಸಕಾಂಗ ಪಕ್ಷದ ನಾಯಕರೇ ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕ ಸ್ಥಾನದ ಜವಾಬ್ದಾರಿಯನ್ನೂ ಹೊಂದಿದ್ದಾರೆ. ಬಿಜೆಪಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಬೇಕಾದರೆ ಸಿದ್ದರಾಮಯ್ಯ ಅವರು ಈ ಸ್ಥಾನದಲ್ಲಿ ಮುಂದುವರಿಯುವ ಅವಶ್ಯಕತೆ ಇದೆ ಎಂಬುದು ಇದುವರೆಗೆ ಅವರೊಂದಿಗೆ ವಿಧಾನಸಭೆಯಲ್ಲಿ ಕುಳಿತಿದ್ದ ಶಾಸಕರಿಗೆ ಗೊತ್ತಿದೆ. ಈ ಕಾರಣಕ್ಕಾಗಿಯೇ ಅವರು ಸಿದ್ದರಾಮಯ್ಯ ಅವರ ಬೆನ್ನಿಗೆ ನಿಂತಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಉರುಳಿಸಲು ಸಿದ್ದರಾಮಯ್ಯ ಅವರಿಗೆ ಆಪ್ತರಾಗಿದ್ದ ಕಾಂಗ್ರೆಸ್ ಶಾಸಕರೇ ಕಾರಣ. ಹೀಗಾಗಿ ಸಿದ್ದರಾಮಯ್ಯ ಅವರಿಗೆ ನೀಡಿರುವ ಸ್ಥಾನಮಾನ ಹಿಂಪಡೆಯಬೇಕು ಎಂಬುದು ಅವರ ವಿರೋಧಿ ಬಣದ ವಾದ. ಆದರೆ, ರಾಜ್ಯ ಕಾಂಗ್ರೆಸ್ ನಲ್ಲಿ ಹಿರಿಯ ನಾಯಕರು ಮತ್ತು ಸಿದ್ದರಾಮಯ್ಯ ಎಂಬ ಪ್ರತ್ಯೇಕ ಬಣ ಇದೆಯಾದರೂ ಶಾಸನಸಭೆಯಲ್ಲಿ ಸಿದ್ದರಾಮಯ್ಯ ಅವರ ಗುಂಪಿನ ಬಲ ಹೆಚ್ಚಾಗಿದೆ. ಪ್ರಸ್ತುತ ವಿಧಾನಸಭೆಯ 68 ಕಾಂಗ್ರೆಸ್ ಶಾಸಕರ ಪೈಕಿ 40ಕ್ಕೂ ಹೆಚ್ಚು ಶಾಸಕರು ಇತರರಿಗಿಂತ ಸಿದ್ದರಾಮಯ್ಯ ಅವರೇ ಶಾಸಕಾಂಗ ಪಕ್ಷದ ನಾಯಕ ಮತ್ತು ಪ್ರತಿಪಕ್ಷ ನಾಯಕರಾಗಿ ಮುಂದುವರಿಯಬೇಕು ಎಂದು ಬಯಸುತ್ತಿದ್ದಾರೆ. ಸಿದ್ದರಾಮಯ್ಯ ರಾಜೀನಾಮೆ ಬಳಿಕ ಶಾಸಕಾಂಗ ಪಕ್ಷದ ನಾಯಕ ಸ್ಥಾನಕ್ಕೆ ಪ್ರಯತ್ನಿಸುತ್ತಿರುವವರಿಗೆ ಈ ವಿಚಾರವೇ ಸಮಸ್ಯೆ ತಂದೊಡ್ಡಿದೆ.
ಇದಷ್ಟೇ ಅಲ್ಲ, ಶಾಸಕಾಂಗ ಪಕ್ಷದ ನಾಯಕ ಸ್ಥಾನಕ್ಕೆ ಸಿದ್ದರಾಮಯ್ಯ ಅವರನ್ನು ಹೊರತುಪಡಿಸಿದರೆ ಕೇಳಿಬರುವ ಹೆಸರು ಡಿ.ಕೆ.ಶಿವಕುಮಾರ್ ಮತ್ತು ಡಾ.ಜಿ.ಪರಮೇಶ್ವರ್. ಈ ಪೈಕಿ ಶಿವಕುಮಾರ್ ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದಲ್ಲಿ ಪ್ರಕರಣ ಎದುರಿಸುತ್ತಿದ್ದರೆ, ಪರಮೇಶ್ವರ್ ಅವರ ವಿರುದ್ಧ ವೈದ್ಯಕೀಯ ಕಾಲೇಜು ಸೀಟು ಹಂಚಿಕೆಗೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದೆ. ಇವರಿಬ್ಬರು ಪ್ರಕರಣ ಎದುರಿಸುತ್ತಿರುವಾಗ ಸರ್ಕಾರದ ವಿರುದ್ಧ ಗಟ್ಟಿ ದನಿಯಲ್ಲಿ ಆರೋಪಗಳನ್ನು ಮಾಡಲು ತೊಂದರೆಯಾಗಬಹುದು ಎಂಬ ಆತಂಕ ಕಾಂಗ್ರೆಸ್ ಪಕ್ಷವನ್ನು ಕಾಡುತ್ತಿದೆ.

ಉಳಿದಂತೆ ಎಚ್.ಕೆ.ಪಾಟೀಲ್, ಆರ್.ವಿ.ದೇಶಪಾಂಡೆ ಅವರ ಹೆಸರು ಕೇಳಿಬರುತ್ತಿದೆಯಾದರೂ ಅವರ ಬದಲು ನನಗೆ ಕೊಡಿ ಎಂದು ಎಂ.ಬಿ.ಪಾಟೀಲ್ ಲಾಬಿ ನಡೆಸಬಹುದು. ಈ ಪೈಕಿ ಯಾರೇ ಶಾಸಕಾಂಗ ಪಕ್ಷದ ನಾಯಕನಾದರೂ ಶಾಸಕರನ್ನು ಒಟ್ಟಾಗಿ ಇಟ್ಟುಕೊಳ್ಳುವುದು ಕಷ್ಟವಾಗಬಹುದು. ಜತೆಗೆ ಇವರೆಲ್ಲರೂ ಸಂಕಷ್ಟ ಬಂದಾಗ ಹೊಂದಾಣಿಕೆ ಮಾಡಿಕೊಳ್ಳಬಹುದು ಎಂಬ ಅನುಮಾನವೂ ಪಕ್ಷದ ಇತರೆ ನಾಯಕರು ಮತ್ತು ಶಾಸಕರನ್ನು ಕಾಡುತ್ತಿದೆ. ಹೀಗಾಗಿ ಸಂಕಷ್ಟದ ಪರಿಸ್ಥಿತಿಯಲ್ಲಿ ಶಾಸಕಾಂಗ ಪಕ್ಷದ ನಾಯಕ ಸ್ಥಾನವನ್ನು ಮನಪೂರ್ವಕವಾಗಿ ಒಪ್ಪಿಕೊಳ್ಳಲು ಯಾರೂ ಮುಂದೆ ಬರುತ್ತಿಲ್ಲ ಎಂಬ ಪರಿಸ್ಥಿತಿ ಕಾಣಿಸುತ್ತಿದೆ.
ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಸಮಸ್ಯೆ ಇಲ್ಲ
ಆದರೆ, ದಿನೇಶ್ ಗುಂಡೂರಾವ್ ರಾಜೀನಾಮೆಯಿಂದ ಕೆಪಿಸಿಸಿ ಅಧ್ಯಕ್ಷ ಸ್ಥಾನ ತೆರವಾದರೆ ಅದನ್ನು ಪಡೆಯಲು ಯಾವುದೇ ಸಮಸ್ಯೆ ಇಲ್ಲ. ಏಕೆಂದರೆ, ಸದ್ಯ ಯಾವುದೇ ಚುನಾವಣೆ ಇಲ್ಲ. ಇದರಿಂದಾಗಿ ಶಾಸಕಾಂಗ ಪಕ್ಷದ ನಾಯಕರಾಗಲು ಯಾರೆಲ್ಲಾ ಆಸೆ ಪಟ್ಟುಕೊಂಡಿದ್ದರೋ ಅವರೆಲ್ಲರೂ ಕೆಪಿಸಿಸಿ ಅಧ್ಯಕ್ಷ ಸ್ಥಾನವೇ ಸರಿ ಎಂಬ ನಿರ್ಧಾರಕ್ಕೆ ಬಂದಿದ್ದಾರೆ. ಈ ಕಾರಣಕ್ಕಾಗಿಯೇ ಅವರು ಶಾಸಕಾಂಗ ಪಕ್ಷದ ನಾಯಕ ಸ್ಥಾನದಲ್ಲಿ ಸಿದ್ದರಾಮಯ್ಯ ಅವರೇ ಮುಂದುವರಿಯಲಿ ಎಂದು ಹೇಳುತ್ತಿದ್ದಾರೆ.
ಮುಂದಿನ ಸಾರ್ವತ್ರಿಕ ಚುನಾವಣೆಗೆ ಸಾಕಷ್ಟು ಸಮಯಾವಕಾಶವಿದೆ. ಅಷ್ಟರಲ್ಲಿ ಕೆಪಿಸಿಸಿ ಅಧ್ಯಕ್ಷ ಸ್ಥಾನದಲ್ಲಿ ಭದ್ರವಾಗಿ ಚುನಾವಣೆ ಬಂದಾಗ ಪಕ್ಷವನ್ನು ಮುನ್ನಡೆಸಿಕೊಂಡು ಹೋಗುವುದು ಕಷ್ಟವೇನೂ ಆಗುವುದಿಲ್ಲ. ಏಕೆಂದರೆ, ಶಾಸಕರ ಉಸ್ತುವಾರಿಯನ್ನು ಶಾಸಕಾಂಗ ಪಕ್ಷದ ನಾಯಕರು ನೋಡಿಕೊಳ್ಳುತ್ತಾರೆ. ಶಾಸಕಾಂಗ ಪಕ್ಷದ ನಾಯಕರೊಂದಿಗೆ ಸ್ವಲ್ಪ ಮಟ್ಟಿನ ಹೊಂದಾಣಿಕೆ ಮಾಡಿಕೊಂಡು ಪಕ್ಷದ ವಿವಿಧ ಘಟಕಗಳನ್ನು ಸುಧಾರಿಸಿಕೊಂಡು ಹೋಗುವುದಷ್ಟೇ ಕೆಪಿಸಿಸಿ ಅಧ್ಯಕ್ಷರ ಕೆಲಸವಾಗಿರುತ್ತದೆ. ಇದು ಕೂಡ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಲು ಕಾರಣ.