ಕರ್ನಾಟಕದ ಸಾರಿಗೆ ಸಂಸ್ಥೆಗಳ ನೌಕರರಿಗೆ ವೇತನ ನೀಡಲು ಇಲಾಖೆಯಲ್ಲಿ ಹಣದ ಕೊರತೆಯಿದೆ ಎಂದು ಹೇಳಿಕೆ ನೀಡಿ ಟೀಕೆಗೆ ಗುರಿಯಾಗಿದ್ದ ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಅವರು, ಈಗ ಸಿಎಂ ಯಡಿಯೂರಪ್ಪನವರಿಗೆ ಮನವಿ ಸಲ್ಲಿಸಿದ್ದಾರೆ.
ಸೋಮವಾರ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಭೇಟಿಯಾಗಿದ್ದ ಸಾರಿಗೆ ಸಚಿವ ಹಾಗೂ ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಅವರು, ಸಿಬ್ಬಂದಿಗಳ 3 ತಿಂಗಳ ವೇತನದ ಮೊತ್ತ 634.50 ಕೋಟಿ ರೂ ಗಳನ್ನು ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದಾರೆ. ತಮ್ಮ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿ ವೇತನ ಪಾವತಿಗೆ ಕ್ರಮಕೈಗೊಂಡ ಮುಖ್ಯಮಂತ್ರಿಯವರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ, ಎಂದು ನಂತರ ಟ್ವೀಟ್ ಮಾಡಿದ್ದಾರೆ.
ಇಂದು ಮುಖ್ಯಮಂತ್ರಿ ಶ್ರೀ @BSYBJP ಅವರನ್ನು ಬೆಂಗಳೂರಿನಲ್ಲಿ ಭೇಟಿಯಾಗಿ ಸಾರಿಗೆ ಸಂಸ್ಥೆಗಳ ಸಿಬ್ಬಂದಿಯ 3 ತಿಂಗಳುಗಳ ವೇತನಗಳ ಮೊತ್ತ 634ಕೋಟಿ 50ಲಕ್ಷ ರೂ ಗಳನ್ನು ಬಿಡುಗಡೆ ಮಾಡುವಂತೆ ಮನವಿ ಮಾಡಲಾಯಿತು
ತಮ್ಮ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿ ವೇತನ ಪಾವತಿಗೆ ಕ್ರಮಕೈಗೊಂಡ ಮುಖ್ಯಮಂತ್ರಿಯವರ ಕ್ರಮಕ್ಕೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ pic.twitter.com/GuzreJnGVB
— Laxman Sangappa Savadi | ಲಕ್ಷ್ಮಣ್ ಸಂಗಪ್ಪ ಸವದಿ (@LaxmanSavadi) November 16, 2020
ವೇತನ ನೀಡಲು ಇಲಾಖೆಯ ಬಳಿ ಹಣವಿಲ್ಲ ಎಂದು ಕಳೆದ ವಾರ ಸವದಿ ಅವರು ಹೇಳಿದ್ದರು. “ಸಾರಿಗೆ ಬಸ್‌ಗಳಲ್ಲಿ ಸಂಚರಿಸಲು ನಿರೀಕ್ಷಿಸಿದಷ್ಟು ಪ್ರಯಾಣಿಕರು ಬರುತ್ತಿಲ್ಲ. ಇದರಿಂದಾಗಿ, ಈಗ ಸಿಗುತ್ತಿರುವ ವರಮಾನವು ಬಸ್‌ಗಳ ಇಂಧನಕ್ಕೆ ಮಾತ್ರವೇ ಸಾಕಾಗುತ್ತಿದೆ. ಹೀಗಾಗಿ ವೇತನ ಕೊಡಲು ಇಲಾಖೆ ಬಳಿ ಹಣವಿಲ್ಲ. ಆದ್ದರಿಂದ ನೌಕರರಿಗೆ ಸಂಬಳ ಬಿಡುಗಡೆ ಆಗುವುದರಲ್ಲಿ ಸಮಸ್ಯೆ ಆಗುತ್ತಿದೆ’ ಎಂದು ಅವರು ಹೇಳಿಕೆ ನೀಡಿದ್ದರು.
ಈ ಹೇಳಿಕೆಗೆ ರಾಜ್ಯಾದ್ಯಂತ ವಿರೋಧ ಉಂಟಾದ ಹಿನ್ನೆಲೆಯಲ್ಲಿ ಇಂದು ಮುಖ್ಯಮಂತ್ರಿಗಳನ್ನು ಭೇಟಿಯಾಗಿದ್ದಾರೆ.






