ಕೋವಿಡ್-19 ರೋಗ ಹರಡುವಿಕೆಯನ್ನು ತಡೆಗಟ್ಟಲು ಯಾವುದೇ ಹೊಸ ಮಾರ್ಗ ಕಂಡು ಹಿಡಿಯದಿದ್ದರೆ ಭಾರತದಲ್ಲಿ ಸೋಂಕಿಗೆ ತುತ್ತಾದವರ ಸಂಖ್ಯೆ 13ಲಕ್ಷ ತಲುಪಬಹುದೆಂದು ಮಾಧ್ಯಮಗಳು ತನ್ನ ಇತ್ತೀಚೆಗಿನ ವರದಿಯ ಆಧಾರದಲ್ಲಿ ಪ್ರತಿಪಾದಿಸಿವೆ.
ಕೋವಿಡ್-19 ರೋಗವು ಸಾಂಕ್ರಾಮಿಕ ರೋಗ ತಜ್ಞರ ಕೆಲಸಗಳ ಪ್ರಾಮುಖ್ಯತೆಯನ್ನು ಅರ್ಥ ಮಾಡಿಸಿದೆ. ಸಾಂಕ್ರಾಮಿಕ ರೋಗ ಶಾಸ್ತ್ರಜ್ಞರು ಯಾರು ರೋಗಕ್ಕೆ ಹೇಗೆ ತುತ್ತಾಗಿದ್ದಾರೆ, ಯಾವಾಗ ಮತ್ತು ಎಲ್ಲಿಂದ ಸೋಂಕನ್ನು ಪಡೆದಿದ್ದಾರೆ, ರೋಗದ ಗುಣ ಲಕ್ಷಣಗಳು ಯಾವುವು ಎಂಬ ಕುರಿತು ಪತ್ತೆ ಹಚ್ಚುತ್ತಾರೆ.ಶಾಸ್ತ್ರಜ್ಞರು ರೋಗದ ಕಾರಣಗಳನ್ನು ಹುಡುಕಿ ಸಾಂಕ್ರಾಮಿಕ ಹಾಗೂ ಸಾಂಕ್ರಾಮಿಕವಲ್ಲದ ರೋಗದ ಬಗ್ಗೆ ಪತ್ತೆ ಹಚ್ಚುತ್ತಾರೆ. ಏಕಾಏಕಿ ಹರಡಲು ಶುರುವಾದ ಪ್ರದೇಶದಿಂದ ಕೆಲಸ ಪ್ರಾರಂಭಿಸಿ ರೋಗಕ್ಕೆ ತುತ್ತಾದವರ ಆರೋಗ್ಯ ವಿವರಗಳನ್ನು ಪಡೆದು ಅವರೊಂದಿಗೆ ಸಂಪರ್ಕಹೊಂದಿದವರನ್ನು ವಿವರಗಳನ್ನು ಪಡೆಯುವ ಮೂಲಕ ಅಪಾಯದಲ್ಲಿರುವವರನ್ನು ಪತ್ತೆ ಹಚ್ಚುತ್ತಾರೆ. ಇಂತಹ ಅಂದಾಜಿನ ಮೂಲಕವೇ ಚೀನಾದ ವುಹಾನ್‌ನಲ್ಲಿ ಈ ಸೋಂಕು ಹರಡಲು ತೊಡಗಿರುವ ಬಗ್ಗೆ ಮಧುಮೇಹದಂತಹ ರೋಗದಿಂದ ಬಳಲುತ್ತಿರುವವರಿಗೆ ಇದು ಬಹಳ ಅಪಾಯಕಾರಿಯಾಗಲಿದೆ ಎಂದು ತಿಳಿದುಬಂದಿರುವುದು.
ಸಾಂಕ್ರಾಮಿಕ ರೋಗ ಶಾಸ್ತ್ರಜ್ಞರು ರೋಗ ಹರಡವುದನ್ನು ಹೇಗೆ ನಿಯಂತ್ರಿಸಬಹುದೆಂದು ಸಲಹೆ ನೀಡುತ್ತಾರೆ. ಲಾಕ್‌ಡೌನ್‌ನಿಂದ ರೋಗ ನಿಯಂತ್ರಿಸಬಹುದೆಂದು ಸಾಂಕ್ರಾಮಿಕ ರೋಗ ಶಾಸ್ತ್ರಜ್ಞರ ಅಂಕಿ ಅಂಶದ ಪ್ರಕಾರ ತಿಳಿದುಬಂದಿದೆ. ಕರೋನಾ ಸೋಂಕು ಹರಡಲು ಪ್ರಾರಂಭವಾದರಿಂದ ಅಂಕಿ ಅಂಶಗಳು ನಮ್ಮ ಮುಖ್ಯವಾಹಿನಿಯ ಚರ್ಚೆಯ ಭಾಗವಾಗಿಯೇ ಹೋಗಿದೆ. ಅಂಕಿಅಂಶಗಳನ್ನು ಪಡೆಯಲಾಗದಿದ್ದರೆ ನಮಗೆ ರೋಗವನ್ನು ನಿಯಂತ್ರಿಸಲು ಸಾಧ್ಯವಾಗುವುದಿಲ್ಲ. ಮುಖ್ಯವಾಗಿ ಈ ಅಂಕಿ ಅಂಶಗಳು ಮೂರು ವಿಷಯದ ಬಗ್ಗೆ ಗಮನಹರಿಸುತ್ತದೆ.
ಮೊದಲನೆಯದಾಗಿ ಇದು ರೋಗ ಮತ್ತು ರೋಗ ಪೀಡಿತರ ಬಗ್ಗೆ ವಿವರಿಸುತ್ತದೆ. ಎಲ್ಲಿ ಈ ಜನರು ವಾಸಿಸುತ್ತಿದ್ದಾರೆ, ಯಾವ ವಯಸ್ಸಿನ ಅಥವಾ ಯಾವ ಲಿಂಗದ ಜನರಲ್ಲಿ ಹೆಚ್ಚು ಪರಿಣಾಮ ಬೀರುತ್ತದೆ. ಎರಡನೆಯದಾಗಿ ಜನಸಂಖ್ಯಾ ಶಾಸ್ತ್ರದೊಂದಿಗೆ ಸಮೀಕರಿಸಿ ಎಲ್ಲಿ ಬೇಗ ಹರಡುತ್ತದೆ, ಮೂರನೆಯದಾಗಿ ರೋಗದ ಸಾಮಾನ್ಯ ಸಂಬಂಧಗಳನ್ನು ಗುರುತಿಸುತ್ತಾರೆ.
ಸಾರ್ವಜನಿಕ ಆರೋಗ್ಯ ಬಿಕ್ಕಟ್ಟಿನ ಸನ್ನಿವೇಶ ಕಡಿಮೆಯಾದಾಗಲೂ ಸಾರ್ವಜನಿಕ ಆರೋಗ್ಯದ ಅಂಕಿ ಅಂಶ ದೇಶಕ್ಕೆ ಅಗತ್ಯವಾಗಿರುತ್ತದೆ. ಹೃದಯ ಸಂಬಂಧಿ ಕಾಯಿಲೆ, ಕ್ಷಯರೋಗದಂತಹ ಕಾಯಿಲೆಗಳ ಪರಿಶೋಧನೆಗೆ ಈ ಅಂಕಿ ಅಂಶ ಸಹಕಾರಿಯಾಗಿರುತ್ತೆ.ಹೃದಯರಕ್ತನಾಳದ ಕಾಯಿಲೆಯ ಲಕ್ಷಣಗಳು ರೋಗ ಪ್ರಕಟವಾಗುವುದಕ್ಕಿಂತ ಮುಂಚೆಯೇ ಗೋಚರಿಸುವುದರಿಂದ ಸಾಂಕ್ರಾಮಿಕ ರೋಗಶಾಸ್ತ್ರಜ್ಞರಿಗೆ ಅಪಾಯದಲ್ಲಿರುವ ಜನರು ತೋರಿಸುವ ಸಾಮಾನ್ಯ ಲಕ್ಷಣಗಳು ಯಾವುವು? ಅವರು ಧೂಮಪಾನ ಮಾಡುತ್ತಾರೆಯೇ? ಯಾವ ನಿರ್ದಿಷ್ಟ ಲಿಂಗ ಅಥವಾ ಯಾವ ಸಾಮಾಜಿಕ, ಆರ್ಥಿಕ ಗುಂಪು ಹೆಚ್ಚು ಅಪಾಯದಲ್ಲಿದೆ? ಅವರೆಲ್ಲಿ ವಾಸಿಸುತ್ತಾರೇ? ಅವರ ಆಹಾರ ಪದ್ಧತಿ ಏನು? ಮುಂತಾದವುಗಳನ್ನ ಅರಿಯಲು ಸಹಾಯ ಮಾಡುತ್ತದೆ.
ಕರೋನಾ ವೈರಸ್ ಸಾಂಕ್ರಾಮಿಕ ರೋಗದಿಂದ ಹೊರಬರಲು ಒಂದು ಪ್ರಮುಖ ಮಾರ್ಗವೆಂದರೆ ಭಾರತದ ಆರೋಗ್ಯ ವ್ಯವಸ್ಥೆಯಲ್ಲಿ ಹೆಚ್ಚಿನ ಹೂಡಿಕೆಯಾಗಬೇಕು. ನಮ್ಮಲ್ಲಿ ಸಾರ್ವಜನಿಕ ಆರೋಗ್ಯ ಮಾಹಿತಿಯಿದ್ದರೆ, ಸಾಂಕ್ರಾಮಿಕ ರೋಗಶಾಸ್ತ್ರಜ್ಞರು ಮೂಲ ಕಾರಣಗಳನ್ನು ಅರ್ಥಮಾಡಿಕೊಳ್ಳಲು ಮತ್ತು ರೋಗ ತಡೆಗಟ್ಟುವಿಕೆಗೆ ಪರಿಹಾರ ಸೂಚಿಸಲು ಸಹಕರಿಸಬಹುದು. ಭಾರತವು ತನ್ನ ಒಟ್ಟಾರೆ ರೋಗದ ಹೊರೆಯನ್ನು ಅರ್ಥಮಾಡಿಕೊಳ್ಳಲು ಮತ್ತು ಸುಧಾರಿಸಲು ಅಂಕಿ ಅಂಶಗಳು ಅನುವು ಮಾಡಿಕೊಡುತ್ತದೆ.
ಮುಂಬರುವ ವರ್ಷಗಳಲ್ಲಿ ಜನಸಂಖ್ಯೆಯನ್ನು ಮತ್ತು ವೈವಿಧ್ಯಮಯ ಪ್ರಾದೇಶಿಕ ವಿಭಿನ್ನತೆಗಳನ್ನು ಗಮನದಲ್ಲಿಟ್ಟುಕೊಂಡು ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದಲ್ಲಿ ಸಾರ್ವಜನಿಕ ಆರೋಗ್ಯ ದತ್ತಾಂಶವನ್ನು ಸಂಗ್ರಹಿಸಲು ಭಾರತವು ಪ್ರಮಾಣೀಕೃತ ಮತ್ತು ಸುಸಂಘಟಿತ ವ್ಯವಸ್ಥೆಗಳಲ್ಲಿ ಹೂಡಿಕೆ ಮಾಡಬೇಕಾಗುತ್ತದೆ.
ಭಾರತದಲ್ಲಿ ಮುಖ್ಯವಾಗಿ ಮಾಹಿತಿ ಕೊರತೆಯಿರುವುದರಿಂದ ಅನೇಕ ಸಾವಿಗೆ ನಿಜವಾದ ಕಾರಣಗಳು ಇನ್ನೂ ಗೊತ್ತಿಲ್ಲ. ಭಾರತವನ್ನು ಕೇಂದ್ರೀಕರಿಸಿದ 2016 ರ ಗ್ಲೋಬಲ್ ಬರ್ಡನ್ ಆಫ್ ಡಿಸೀಸ್ ಸಂಶೋಧನೆಯಲ್ಲಿ, ಸಂಶೋಧಕರು 2016 ರಲ್ಲಿ ಭಾರತದಲ್ಲಿ ಸಂಭವಿಸಿದ ಒಟ್ಟು ಸಾವುಗಳಲ್ಲಿ ಮೂರನೇ ಎರಡರಷ್ಟು ಅಕಾಲಿಕ ಸಾವು ಸಂಭವಿಸಿದ್ದು ಮೂರನೇ ಒಂದು ಭಾಗದಷ್ಟು ಮಾತ್ರ ಅಂಗವೈಕಲ್ಯದಿಂದ ಉಂಟಾದ ಸಾವು ಎಂದು ಕಂಡುಹಿಡಿದಿದ್ದಾರೆ. ಆದರೆ ದುರದೃಷ್ಟವಶಾತ್, ಈ ಪ್ರಮಾಣದ ಅಕಾಲಿಕ ಮರಣಗಳಿಗೆ ಕಾರಣವೇನು ಎಂಬುದರ ಕುರಿತು ನಮ್ಮಲ್ಲಿ ಸರಿಯಾದ ಮಾಹಿತಿಯಿಲ್ಲ.ಅಕಾಲಿಕ ಸಾವನ್ನು ತಡೆಯಲು ಇದುವರೆಗೆ ನಾವು ಯಾವುದೇ ಕ್ರಮ ತೆಗೆದುಕೊಂಡಿಲ್ಲ.

ಮುಖ್ಯವಾಗಿ ಭಾರತದ ವ್ಯಾಪಕ ಆರೋಗ್ಯ ಅಸಮಾನತೆಗಳನ್ನು ಕಡಿಮೆ ಮಾಡಲು ಅಂಕಿಅಂಶ ಸಹ ಅವಶ್ಯಕವಾಗಿದೆ. ಭಾರತದಲ್ಲಿ ಹೆಚ್ಚಿರುವ ಶಿಶು ಮರಣದ ಪ್ರಮಾಣವು ಕಳೆದ ದಶಕದ ಅತಿದೊಡ್ಡ ಸಾರ್ವಜನಿಕ ಆರೋಗ್ಯ ಯಶಸ್ಸುಗಳಲ್ಲಿ ಹಿಂದುಳಿಯಲು ಪ್ರಮುಖ ಕೊಡುಗೆ ನೀಡಿತು. ಈ ಪ್ರಮಾಣದ ಶಿಶು ಮರಣಗಳಿಗೆ ದತ್ತಾಂಶದ ಕೊರತೆಯೇ ಕಾರಣವಾಗಿದೆ. ದೊಡ್ಡ ಜನಸಂಖ್ಯೆ ಹೊಂದಿರುವ ಭಾರತದಲ್ಲಿ ಜನರ ಆರೋಗ್ಯವನ್ನು ರಕ್ಷಿಸಲು ಸುಧಾರಿತ ದತ್ತಾಂಶ ಅತ್ಯಗತ್ಯ.
ಈ ಹಿಂದೆ ನಾವು ಇದರಿಂದ ಪೋಲಿಯೊದಿಂದ ಯಶಸ್ವಿಯಾಗಿ ಎದುರಿಸಿದ್ದೇವೆ. ಒಂದು ಕಾಲದಲ್ಲಿ ಭಾರತದಲ್ಲಿ ದೃಢವಾಗಿ ನೆಲೆಗೊಂಡಿದ್ದ ಈ ರೋಗವನ್ನು ನಿರ್ಮೂಲನೆ ಮಾಡಿದ್ದೇವೆ. ಕೇಂದ್ರ, ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಸರ್ಕಾರವು ಉಪಕ್ರಮದ ಹೊಣೆಗಾರಿಕೆಯನ್ನು ಪಡೆದುಕೊಂಡದ್ದರಿಂದ ಸಾಧ್ಯವಾಗಿಸಿತು. ಇದು ರೋಗದ ಮೇಲೆ ಕಣ್ಗಾವಲು ವ್ಯವಸ್ಥೆಯನ್ನು ಸ್ಥಾಪಿಸಿ ಉತ್ತಮ ಗುಣಮಟ್ಟದ ಡೇಟಾವನ್ನು ಸಂಗ್ರಹಿಸಿತು. ಹೆಚ್ಚಿನ ಪರಿಶ್ರಮ ಮತ್ತು ಸಾಕಷ್ಟು ಕಾರ್ಯಯೋಜನೆಯಿಂದ ಅಂಚಿನಲ್ಲಿರುವ ಸಮುದಾಯಗಳನ್ನು ತಲುಪಲು ಸರ್ಕಾರಕ್ಕೆ ಸಾಧ್ಯವಾಯಿತು. ಆದ್ದರಿಂದ ದತ್ತಾಂಶ ಸಂಗ್ರಹಣೆ ಅಸಾಧ್ಯವಾದ ಕೆಲಸವೇನಲ್ಲ.
ಸಂಕ್ಷಿಪ್ತವಾಗಿ ಹೇಳುವುದಾದರೆ, ಸಾಂಕ್ರಾಮಿಕ ರೋಗದ ದತ್ತಾಂಶವು ದೇಶವು ಎದುರಿಸುತ್ತಿರುವ ದೊಡ್ಡ ಆರೋಗ್ಯ ಸಮಸ್ಯೆಗಳನ್ನು ಕಡಿಮೆ ಮಾಡಲು ಅವಶ್ಯಕವಾಗಿದೆ. ಆರೋಗ್ಯ ದಾಖಲೆಗಳ ಈ ಕೇಂದ್ರೀಕೃತ ಮತ್ತು ರಾಜ್ಯ ಭಂಡಾರವನ್ನು ಅಭಿವೃದ್ಧಿಪಡಿಸುವುದು ಒಂದು ಮಹತ್ವದ ಕಾರ್ಯ. ಆದರೆ ಬೇರೆ ಯಾವುದೇ ಅಡ್ಡದಾರಿಯಿರುವುದಿಲ್ಲ. ಸೂಕ್ತವಾದ ಸಾರ್ವಜನಿಕ ಆರೋಗ್ಯ ದತ್ತಾಂಶ ವ್ಯವಸ್ಥೆಯನ್ನು ಹೊಂದಿದ್ದರೆ ರೋಗಿಗಳಾಗುವ ಜನರ ಸಂಖ್ಯೆಯನ್ನು ಗಣನೀಯವಾಗಿ ಕಡಿಮೆ ಮಾಡಬಹುದು. ಮುಂದಿನ ದಿನಗಳಲ್ಲಿ ಸಾಂಕ್ರಾಮಿಕದ ಪರಿಣಾಮವನ್ನು ಕಡಿಮೆ ಮಾಡುವಲ್ಲಿ ಇದು ಮೂಲಾಧಾರವಾಗಲಿದೆ.