ಕರೋನಾ ಎಂಬ ಮಹಾಮಾರಿಯ ಹೊಡೆತಕ್ಕೆ ಸಿಲುಕಿರುವ ಭೂಮಂಡಲದಲ್ಲಿ 9 ಲಕ್ಷ ಜನರಿಗೆ ಸೋಂಕು ತಗುಲಿದೆ. ಭಾರತದಲ್ಲಿ ಸೋಂಕಿತರ ಸಂಖ್ಯೆ 2 ಸಾವಿರ ಗಡಿಯತ್ತ ಓಡುತ್ತಿದೆ. ಪ್ರಪಂಚದಾದ್ಯಂತ ಸಾವಿನ ಸಂಖ್ಯೆ ಅರ್ಧ ಶತಕ ದಾಖಲಿಸುವತ್ತ ಮುನ್ನುಗ್ಗುತ್ತಿದೆ. ಕೇವಲ ಅಮೆರಿಕದಲ್ಲಿ ಸೋಂಕಿತರ ಸಂಖ್ಯೆ ಎರಡು ಲಕ್ಷದ ಕಡೆಗೆ ಸಾಗುತ್ತಿದ್ದರೆ, ಇಟೆಲಿಯಲ್ಲಿ ಸಾವಿನ ಸಂಖ್ಯೆ ಬರೋಬ್ಬರಿ ಹನ್ನೆರಡೂವರೆ ಸಾವಿರ ಆಗಿದೆ. ಇಡೀ ವಿಶ್ವವೇ ಸಂಕಷ್ಟಕ್ಕೆ ಸಿಲುಕಿದ್ದರೂ ಮಾನವೀಯ ನೆಲೆಯಲ್ಲಿ ಉಳ್ಳವರು ಹಸಿದವರ ಹೊಟ್ಟೆ ತುಂಬಿಸಲು ನೆರವು ನೀಡುತ್ತಿದ್ದಾರೆ. ದೇಶದ ಜನಸಂಖ್ಯೆಯಲ್ಲಿ ಶೇಕಡ 25 ರಿಂದ 30 ರಷ್ಟು ಜನರು ವಸತಿರಹಿತ, ಭಿಕ್ಷುಕರು, ನಿರ್ಗತಿಕರು ಇದ್ದು ನೂರಾರು NGO ಗಳು ನೆರವಿನ ಮಹಾಪೂರವನ್ನೇ ಹರಿಸಿದ್ದಾರೆ. ಇದು ಎಲ್ಲಾ ಕೆಲಸಗಳು ಮಾನವೀಯ ನೆಲಗಟ್ಟಿನ ಕಾಯಕವಾಗಿದೆ. ಆದರೆ ಸರ್ಕಾರಕ್ಕೆ ಮಾನವೀಯತೆ ಇದೆಯಾ ಎನ್ನುವ ಅನುಮಾನ ಮೂಡುವಂತೆ ಮಾಡಿದೆ.
ಭಾರತದಲ್ಲಿ ಕರೋನಾ ವೈರಸ್ ನ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆ ಆಗುತ್ತಲೇ ಇದೆ. ಕಳೆದ 24 ಗಂಟೆ ಅವಧಿಯಲ್ಲಿ 242 ಜನರಲ್ಲಿ ಸೋಂಕು ಪತ್ತೆಯಾಗಿದೆ. ಕರೋನಾ ಸೋಂಕು ತೀವ್ರವಾಗುತ್ತಿದೆ. ಸರ್ಕಾರ ಮಾತ್ರ ವೈದ್ಯರು, ವೈದ್ಯಕೀಯ ಸಿಬ್ಬಂದಿ (ನರ್ಸ್) ದೇವರ ಸಮಾನ ಎಂದು ಭಾಷಣದಲ್ಲಿ ಹೇಳುತ್ತಲೇ ಇದೆ. ಆದರೆ ಇಂದು ಬರೋಬ್ಬರಿ 24 ಸಾವಿರ ವೈದ್ಯಕೀಯ ಸಿಬ್ಬಂದಿಗೆ ರಜೆ ನೀಡಿ ಆದೇಶ ಹೊರಡಿಸಿದೆ. ಸಹಾಯಕ ವೈದ್ಯಕೀಯ ಸಿಬ್ಬಂದಿಗೆ 1 ದಿನ ರಜೆ ಕೊಡಲಾಗಿದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಖಚಿತಪಡಿಸಿದ್ದಾರೆ. 1 ದಿನ ರಜೆ ಕೊಡದಿದ್ದರೆ ಬೇರೆ ದಾರಿ ಇರಲಿಲ್ಲ. ರಜೆ, ಸಂಬಳ ವಿಚಾರದಲ್ಲಿ ತಾಂತ್ರಿಕ ಸಮಸ್ಯೆ ಆಗುತ್ತದೆ. ಆದರೆ ಇಂಥ ಸಂದರ್ಭದಲ್ಲಿ ನಿಯಮ ನೋಡ್ಕೊಂಡು ಇರಕ್ಕಾಗಲ್ಲ. ಸಮಸ್ಯೆಯಾಗದ ರೀತಿ ಗೊಂದಲ ನಿವಾರಿಸ್ತೀವಿ ಎಂದಿದ್ದರು. ಆದರೆ ಇಂದು 24 ಸಾವಿರ ವೈದ್ಯಕೀಯ ಸಿಬ್ಬಂದಿಗೆ ರಜೆ ಘೋಷಣೆ ಮಾಡಿದ್ದರೂ ಕೆಲಸಕ್ಕೆ ಕರೆಸಿಕೊಳ್ಳಲಾಗಿದೆ.

ರಾಷ್ಟ್ರೀಯ ಆರೋಗ್ಯ ಯೋಜನೆ (NATIONAL HEALTH MISSION) ಅಡಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ವೈದ್ಯಕೀಯ ಸಿಬ್ಬಂದಿಗೆ ಇಂದು ಅಧಿಕೃತವಾಗಿ ರಜೆ ಕೊಡಲಾಗಿದೆ. ನಾಳೆಯಿಂದ ಹೊಸದಾಗಿ ಕೆಲಸಕ್ಕೆ ಸೇರಿಸಿಕೊಳ್ಳುವ ಉದ್ದೇಶದಿಂದ ಇಂದು ಅಧಿಕೃತ ರಜೆ ಘೋಷಣೆ ಮಾಡಲಾಗಿದೆ. ಆದರೆ ಎಲ್ಲ ಸಿಬ್ಬಂದಿಗಳು ಕಪ್ಪುಪಟ್ಟಿ ಧರಿಸಿ ಕೆಲಸಕ್ಕೆ ಹಾಜರಾಗಿದ್ದಾರೆ. ರಾಷ್ಟ್ರೀಯ ಆರೋಗ್ಯ ಅಭಿಯಾನದ ನೌಕರರ ಕೆಲಸ ತೃಪ್ತಿಕರವಾಗಿದಲ್ಲಿ ಮಾತ್ರ ಮುಂದುವರಿಸುವ ಬಗ್ಗೆ ತಿಳಿಸಿದ್ದಾರೆ. ಆದರೂ ಸರಕಾರದ ಆದೇಶ ಪಾಲನೆ ಜೊತೆಗೆ ಸಾರ್ವಜನಿಕರಿಗೆ ಸೇವೆ ನೀಡಲು ಗುತ್ತಿಗೆ ನೌಕರರು ಹಾಜರಾಗಿದ್ದಾರೆ. ಕರೋನಾ ವೈರಸ್
ಸೋಂಕಿನಿಂದ ಇಡೀ ಕರ್ನಾಟಕ ಕತ್ತಲ ಕೂಪಕ್ಕೆ ತಳ್ಳುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರ ಹಿತದಷ್ಟಿಯಿಂದ ಮತ್ತು ಈ ಕೊರೊನಾ ವೈರಸ್ ತಡೆಗಟ್ಟುವ ಜವಾಬ್ದಾರಿ ಪ್ರತಿಯೊಬ್ಬರ ಮೇಲೆ ಇದೆ ಎನ್ನುವ ಕಾರಣಕ್ಕೆ ಅಧಿಕೃತವಾಗಿ ಕೆಲಸದಲ್ಲಿ ಇಲ್ಲದಿದ್ದರೂ ಕರ್ತವ್ಯಕ್ಕೆ ಹಾಜರಾಗಿದ್ದಾರೆ.
ರಾಷ್ಟ್ರೀಯ ಆರೋಗ್ಯ ಯೋಜನೆಯ ಅಡಿ ಕೆಲಸ ಮಾಡುವ ಈ ನೌಕರರು ಸರ್ಕಾರಿ ನೌಕರರಂತೆಯೇ ಕೆಲಸ ಮಾಡುತ್ತಿದ್ದಾರೆ. ಆದರೆ ಕಾಯಂ ಸರ್ಕಾರಿ ನೌಕರರಲ್ಲ. ಯಾರು ಒಂದು ಸಾವಿರ ದಿನಗಳ ಕಾಲ ಒಂದು ಸಂಸ್ಥೆಯಲ್ಲಿ ಕೆಲಸ ಮಾಡುತ್ತಾರೋ ಆ ನೌಕರನನ್ನು ಕಾಯಂ ಮಾಡಿಕೊಳ್ಳಬೇಕು ಎನ್ನುವುದು ಸುಪ್ರೀಂಕೋರ್ಟ್ ಆದೇಶ. ಈಗಾಗಲೇ 24 ಸಾವಿರ ಆರೋಗ್ಯ ಸಿಬ್ಬಂದಿ 999 ದಿನಗಳ ಕಾಲ ರಾಷ್ಟ್ರೀಯ ಆರೋಗ್ಯ ಅಭಿಯಾನದ ಅಡಿ ಸೇವೆ ಸಲ್ಲಿಸಿದ್ದಾರೆ. ಇವತ್ತು ಒಂದು ದಿನ ಕೆಲಸ ಮಾಡಿದ್ದರೆ ಕಾಯಂ ನೌಕರರಾಗಲು ಅರ್ಹರಾಗಿ ಬಿಡುತ್ತಿದ್ದರು. ಅದೇ ಕಾರಣದಿಂದ ಸರ್ಕಾರ ನಿನ್ನೆಗೆ ಅವರ ಸೇವಾ ಅವಧಿಯನ್ನು ಮುಕ್ತಾಯ ಮಾಡಿದೆ. ಆದರೆ ಕರೋನಾ ಸೋಂಕಿನ ವಿರುದ್ಧ ಹೋರಾಡುತ್ತಿರುವ ಸರ್ಕಾರಕ್ಕೆ ಬೆಂಬಲವಾಗಿ ನಿಂತಿರುವುದು ಇದೇ ಆರೋಗ್ಯ ಸಿಬ್ಬಂದಿ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.

ಒಂದು ವೇಳೆ ಇಂದು ಎಲ್ಲರಿಗೂ ಸಾಮೂಹಿಕ ರಜೆ ಕೊಟ್ಟಿದ್ದರೂ ಕೆಲಸಕ್ಕೆ ಹಾಜರಾಗುವಂತೆ ಮಾಡಲಾಗಿದೆ. ಇಂದು ಕೆಲಸಕ್ಕೆ ಬಾರದಿದ್ದರೆ, ನಾಳೆಯಿಂದ ಹೊಸದಾಗಿ ಕೆಲಸಕ್ಕೆ ನೇಮಕಾತಿ ಮಾಡಿಕೊಳ್ಳುವುದಿಲ್ಲ ಎಂದು ಆಂತರಿಕವಾಗಿ ಬೆದರಿಸುವ ಮೂಲಕ ಎಲ್ಲಾ ನೌಕರರು ಕೆಲಸಕ್ಕೆ ಬರುವಂತೆ ಮಾಡಲಾಗಿದೆ ಎನ್ನಲಾಗಿದೆ. ಆದರೆ, ಈಗ ಪ್ರತಿಭಟನೆ ಮಾಡುವ ಸಮಯ ಅಲ್ಲದ್ದರಿಂದ ಎಲ್ಲರೂ ಕಪ್ಪು ಪಟ್ಟಿ ಧರಿಸಿ ಮಾನವೀಯತೆಯಿಂದ ಕೆಲಸಕ್ಕೆ ಬಂದಿದ್ದೇವೆ ಎಂದಿದ್ದಾರೆ. ಆದರೂ ಸರ್ಕಾರದ ದಬ್ಬಾಳಿಕೆಯನ್ನು ಕಪ್ಪು ಪಟ್ಟಿಯ ಮೂಲಕ ಹೊರ ಹಾಕಿದ್ದಾರೆ ಎನ್ನಲಾಗುತ್ತಿದೆ. ಸರ್ಕಾರ ರಜೆ ನೀಡಿದ್ದರೂ ಸಹ ವೇತನ ಇಲ್ಲದೆ NHM ಗುತ್ತಿಗೆ ನೌಕರರು ಕರ್ತವ್ಯ ನಿರ್ವಹಣೆ ಮಾಡುತ್ತಿದ್ದು, ಯಾವುದೇ ಮುಷ್ಕರ ಅಥವಾ ಪ್ರತಿಭಟನೆ ಮಾಡದೆ ಇರಲು ನೌಕರರು ತೀರ್ಮಾನಿಸಿದ್ದಾರೆ.












