ಕೋವಿಡ್-19 ವಿರುದ್ಧದ ಹೋರಾಟಕ್ಕೆ ವಿಪ್ರೋ, ಅಜೀಂ ಪ್ರೇಮ್ ಜೀ ಫೌಂಡೇಶನ್ ಕೈ ಜೋಡಿಸಿದೆ. ವಿಪ್ರೋ ಲಿಮಿಟೆಡ್, ವಿಪ್ರೋ ಎಂಟರ್ಪ್ರೈಸಸ್ ಹಾಗೂ ಅಜೀಂ ಪ್ರೇಮ್ ಜೀ ಫೌಂಡೇಶನ್ ವತಿಯಿಂದ ಕೋವಿಡ್-19 ವಿರುದ್ಧದ ಹೋರಾಟಕ್ಕೆ 1,125 ಕೋಟಿ ರೂಪಾಯಿ ನೀಡುವುದಾಗಿ ಘೋಷಿಸಿದೆ. ಈ ಕುರಿತು ವಿಪ್ರೋ ಅಧ್ಯಕ್ಷ, ಅಜೀಂ ಪ್ರೇಮ್ ಜೀ ಪುತ್ರ ರಿಶಾದ್ ಪ್ರೇಮ್ ಜೀ ಅವರೇ ಖುದ್ದು ಟ್ವೀಟ್ ಮಾಡುವ ಮೂಲಕ ಘೋಷಿಸಿದ್ದಾರೆ.
ಟ್ವೀಟ್ ನಲ್ಲಿ ಪರಿಹಾರ ನಿಧಿಗೆ ಸಹಾಯ ಹಸ್ತ ಒದಗಿಸುವ ಕುರಿತು ಬರೆದಿರುವ ಅವರು, “ ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಬದುಕಿದ್ದು ಯಾವತ್ತೂ ನೆನಪಿಲ್ಲ. ಆದ್ದರಿಂದ ಕೋವಿಡ್-19 ವಿರುದ್ಧ ಹೋರಾಟಕ್ಕೆ ನಾವೆಲ್ಲ ಕೈ ಜೋಡಿಸೋಣ “ ಎಂದಿದ್ದಾರೆ.
ಇನ್ನು ಅವರು ಬಿಡುಗಡೆಗೊಳಿಸಿರುವ ಪ್ರಕಟಣೆಯಲ್ಲಿ 1,125 ಕೋಟಿ ರೂಪಾಯಿಯ ಮೂಲವನ್ನು ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ. ವಿಪ್ರೋ ಲಿಮಿಟೆಡ್ ನಿಂದ 100 ಕೋಟಿ ರೂಪಾಯಿ, ವಿಪ್ರೋ ಎಂಟರ್ಪ್ರೈಸಸ್ ನಿಂದ 25 ಕೋಟಿ ರೂಪಾಯಿ ಹಾಗೂ ಅಜೀಂ ಪ್ರೇಮ್ ಜೀ ಫೌಂಡೇಶನ್ ಅತೀ ಹೆಚ್ಚು ಅಂದರೆ 1,000 ಕೋಟಿ ನೀಡುವುದಾಗಿ ತಿಳಿಸಿದ್ದಾರೆ.
ಅಲ್ಲದೇ ಬಿಡುಗಡೆಗೊಳಿಸಿದ ಮೊತ್ತದಿಂದ ಕರೋನಾ ವಿರುದ್ಧದ ವೈದ್ಯಕೀಯ ಸೇವೆಗೆ ಹಾಗೂ ಮಾನವೀಯ ನೆರವು ನೀಡುವ ಉದ್ದೇಶ ಹೊಂದಿದ್ದೇವೆ. ಇಡೀ ದೇಶಾದ್ಯಂತ ಈ ರೋಗ ಪಸರಿಸಿರುವುದರಿಂದ ಸಮಾಜದ ಅಭಿವೃದ್ಧಿಗೂ ಇದು ಹಿನ್ನಡೆಯಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಆದ್ದರಿಂದ ಈ ಸಂದಿಗ್ಧ ಪರಿಸ್ಥಿತಿಯ ವಿರುದ್ಧದ ಕೆಲಸದ ಜೊತೆಗೆ ನ್ಯಾಯ, ಸಮಾನತೆ, ಮಾನವೀಯತೆ ಹಾಗೂ ಪರಿಸರ ಸಮತೋಲನದ ಕಡೆಗೂ ಗಮನಹರಿಸಬೇಕಾದ ಪಾಠವನ್ನು ಈ ಸಮಯದಲ್ಲಿ ಕಲಿಯಬೇಕಿದೆ ಅನ್ನೋದನ್ನು ವಿಪ್ರೋ ಬಲವಾಗಿ ನಂಬುತ್ತದೆ ಎಂದಿದ್ದಾರೆ.
ಇನ್ನು ಕಳೆದ ವಾರವಷ್ಟೇ ವಿಪ್ರೋ ಸಂಸ್ಥಾಪಕ ಅಜೀಂ ಪ್ರೇಮ್ ಜೀ ಅವರು ಅಜೀಂ ಪ್ರೇಮ್ ಜೀ ಫೌಂಡೇಶನ್ ಗೆ ಈ ಹಿಂದೆ ಘೋಷಿಸಿದ್ದ 52,700 ಕೋಟಿ ರೂಪಾಯಿಯನ್ನು ಕರೋನಾ ವಿರುದ್ಧ ಹೋರಾಟಕ್ಕೆ ನೀಡಲಾಗುತ್ತಿದೆ ಅಂತಾ ಕೆಲವು ಮಾಧ್ಯಮಗಳು ತಪ್ಪಾಗಿ ವರದಿ ಬಿತ್ತರಿಸಿದ್ದವು. ಆ ನಂತರ ವಿಪ್ರೋ ಸಂಸ್ಥೆ ಅದಕ್ಕೆ ಸ್ಪಷ್ಟನೆ ನೀಡಿತ್ತು. ಇದೀಗ ವಿಪ್ರೋ ಸಮೂಹ ಸಂಸ್ಥೆ ಹಾಗೂ ಅಜೀಂ ಪ್ರೇಮ್ ಜೀ ಫೌಂಡೇಶನ್ ಜೊತೆಯಾಗಿ 1125 ಕೋಟಿ ರೂಪಾಯಿಯನ್ನು ಕೋವಿಡ್-19 ವಿರುದ್ಧದ ಹೋರಾಟಕ್ಕೆ ವಿನಿಯೋಗಿಸಲು ನಿರ್ಧರಿಸಿದೆ.