ರಾಜ್ಯಸಭಾ ಚುನಾವಣೆಗೆ ಕರ್ನಾಟಕದಿಂದ ಬಿಜೆಪಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ವಿಚಾರದಲ್ಲಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹಾಗೂ ರಾಜ್ಯ ಘಟಕದ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ನೇತೃತ್ವದ ಕೋರ್ ಕಮಿಟಿ ಶಿಫಾರಸು ಮಾಡಿದ ಹೆಸರುಗಳನ್ನು ತಿರಸ್ಕರಿಸಿ, ತಮ್ಮ ಆಯ್ಕೆಯನ್ನು ಅಧಿಕೃತಗೊಳಿಸುವ ಮೂಲಕ ಬಿಜೆಪಿಯ ಕೇಂದ್ರೀಯ ನಾಯಕತ್ವವು ರಾಜ್ಯ ನಾಯಕತ್ವಕ್ಕೆ ಭಾರಿ ಹೊಡೆತ ನೀಡಿದೆ.
ಸಾರ್ವಜನಿಕವಾಗಿ ಸಾಮಾನ್ಯ ಕಾರ್ಯಕರ್ತರಿಗೆ ಆದ್ಯತೆ ನೀಡುವ ಮೂಲಕ ಬಿಜೆಪಿ ಇತರೆ ಪಕ್ಷಗಳಿಗಿಂತ ಭಿನ್ನ ಎನ್ನುವ ಸಿದ್ಧಾಂತವನ್ನು ವ್ಯವಸ್ಥಿತವಾಗಿ ಹರಿಯಬಿಡಲಾಗಿದೆ. ಆಯ್ಕೆಯಾದ ಇಬ್ಬರು ಅಭ್ಯರ್ಥಿಗಳ ಪೈಕಿ ಸವಿತಾ ಸಮಾಜದ ರಾಯಚೂರು ಮೂಲದ ಅಶೋಕ್ ಗಸ್ತಿ ಅವರು ಬಿಜೆಪಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ ಎಲ್ ಸಂತೋಷ್ ಅವರ ಕಾರ್ಯತಂತ್ರದ ಭಾಗವಾಗಿ ಸದ್ಯ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ ಎಸ್ ಈಶ್ವರಪ್ಪ ನೇತೃತ್ವದಲ್ಲಿ ಹಿಂದೆ ಯಡಿಯೂರಪ್ಪ ಅವರನ್ನು ಕಟ್ಟಿಹಾಕಲು ಸೃಷ್ಟಿಸಲಾಗಿದ್ದ ರಾಯಣ್ಣ ಬ್ರಿಗೇಡ್ ಭಾಗವಾಗಿದ್ದವರು. ಮತ್ತೊಬ್ಬ ಅಭ್ಯರ್ಥಿ, ಬೆಳಗಾವಿ ಮೂಲದ ಈರಣ್ಣ ಕಡಾಡಿ ಅವರು ಜಲ ಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಅವರ ಬಿಜೆಪಿ ಸೇರ್ಪಡೆಯನ್ನು ತೀವ್ರವಾಗಿ ವಿರೋಧಿಸಿದ್ದವರು ಎನ್ನಲಾಗಿದೆ.
ಕೇಂದ್ರೀಯ ನಾಯಕತ್ವವು ರಾಜ್ಯಸಭೆಗೆ ಹೊಸ ಹೆಸರುಗಳನ್ನು ಸೂಚಿಸುವ ಮೂಲಕ ಮುಖ್ಯಮಂತ್ರಿಯಾದ ಮಾತ್ರಕ್ಕೆ ಯಡಿಯೂರಪ್ಪ ಅವರ ಆಯ್ಕೆ ಅಂತಿಮವಲ್ಲ ಎಂಬ ಸ್ಪಷ್ಟ ಸಂದೇಶ ರವಾನಿಸಿದೆ. “ಹಗೆಯುವರ ಮುಂದೆ ಎಡವಿದ ಹಾಗೆ” ಎಂಬಂತೆ ಹೈಕಮಾಂಡ್ ಅವಗಣನೆಗೆ ಯಡಿಯೂರಪ್ಪ ತುತ್ತಾಗಿದ್ದಾರೆ ಎಂದು ಕುಹಕವಾಡುವ ವಿರೋಧ ಪಕ್ಷಗಳ ಆರೋಪಕ್ಕೆ ಪೂರಕವಾದ ಮತ್ತೊಂದು ಅಸ್ತ್ರವನ್ನು ಬಿಜೆಪಿಯು ರಾಜಕೀಯ ಎದುರಾಳಿಗಳಿಗೆ ರವಾನಿಸಿದೆ. ಇದು ಯಡಿಯೂರಪ್ಪ ಅವರ ಬಲವನ್ನು ನೈತಿಕವಾಗಿ ಕುಂದಿಸುವ ಯತ್ನವೇ ಆಗಿದೆ. ದಕ್ಷಿಣ ಭಾರತದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವಲ್ಲಿ ಅವಿರತ ಶ್ರಮಿಸಿರುವ ಯಡಿಯೂರಪ್ಪ ಅವರನ್ನು ಅವಮಾನಿಸುವ ಕೆಲಸವನ್ನು ಬಿಜೆಪಿಯೊಳಗಿನ ಬಿಎಸ್ವೈ ವಿರೋಧಿ ಬಣ ಇಂದೇನು ಹೊಸದಾಗಿ ಮಾಡುತ್ತಿಲ್ಲ ಎಂಬುದಕ್ಕೆ ಇತ್ತೀಚಿನ ಹಲವು ಬೆಳವಣಿಗೆಗಳು ಸಾಕ್ಷಿಯಾಗಿವೆ.
2018ರ ವಿಧಾನಸಭೆ ಚುನಾವಣೆಗೂ ಮುನ್ನ ಬಿಜೆಪಿಯ ಕೋರ್ ಕಮಿಟಿಯಿಂದ ಯಡಿಯೂರಪ್ಪ ಅವರ ಆಪ್ತ ವಲಯದಲ್ಲಿ ಬಹುಮುಖ್ಯ ಸ್ಥಾನ ಹೊಂದಿರುವ ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಅವರನ್ನು ಹೊರಗಿಡುವಲ್ಲಿ ಬಿಎಸ್ವೈ ವಿರೋಧಿ ಬಣ ಯಶಸ್ವಿಯಾಗಿತ್ತು. ಬಿಜೆಪಿಯ ರಾಜ್ಯ ಘಟಕದಲ್ಲಿ ವಿವಿಧ ನೇಮಕ ಹಾಗೂ ಪ್ರಮುಖ ತೀರ್ಮಾನಗಳಲ್ಲಿ ಪಕ್ಷದ ಹಿತಾಸಕ್ತಿಯನ್ನು ಬದಿಗಿಟ್ಟು ವೈಯಕ್ತಿಕ ಹಿತಾಸಕ್ತಿಗಳಿಗೆ ಆದ್ಯತೆ ನೀಡಲಾಗುತ್ತಿದೆ. ಪಕ್ಷದ ಶಿಸ್ತು ಹಾಗೂ ತಮ್ಮ ಸ್ಥಾನದ ವ್ಯಾಪ್ತಿ ಮೀರಿ ಶೋಭಾ ಕರಂದ್ಲಾಜೆ ನಡೆದುಕೊಳ್ಳುತ್ತಿದ್ದಾರೆ. ಯಡಿಯೂರಪ್ಪನವರ ಮೇಲೆ ಪ್ರಭಾವ ಬೀರುವ ಮೂಲಕ ಅಂಕೆ ಮೀರುತ್ತಿದ್ದಾರೆ ಎಂದು ದೂರಿ ಬಿಎಸ್‌ವೈ ವಿರೋಧಿ ಬಣವು ಶೋಭಾ ಅವರನ್ನು ಕೋರ್ ಕಮಿಟಿಯಿಂದ ಕಿತ್ತೊಗೆಯುವಲ್ಲಿ ಸಫಲವಾಗಿತ್ತು.
ಇದು ಬಿಎಸ್ವೈಗೆ ನೀಡಿದ ಮೊದಲ ಪ್ರಮುಖ ಹೊಡೆತವಾಗಿತ್ತು. ಆ ಬಳಿಕ 2018ರ ವಿಧಾನಸಭಾ ಚುನಾವಣೆಯುಲ್ಲಿ ಬೆಂಗಳೂರಿನ ಯಶವಂತಪುರ ಕ್ಷೇತ್ರದಿಂದ ಸ್ಪರ್ಧಿಸಲು ಶೋಭಾ ಕರಂದ್ಲಾಜೆ ತೀವ್ರ ಆಸಕ್ತಿ ಹೊಂದಿದ್ದರು. ಆದರೆ, ಈ ಯತ್ನವನ್ನು ವಿಫಲಗೊಳಿಸುವ ಮೂಲಕ ಬಿಎಸ್ವೈ ಸಂಭಾವ್ಯ ಉತ್ತರಾಧಿಕಾರಿ ಎಂದೇ ಬಿಂಬಿತವಾಗಿರುವ ಬಿಜೆಪಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ ಎಲ್ ಸಂತೋಷ್ ಅವರು ಕರ್ನಾಟಕದ ಮಟ್ಟಿಗೆ ಹಿಂದೆ ಬಿಜೆಪಿಯ ಪ್ರಶ್ನಾತೀತ ನಾಯಕ ಯಡಿಯೂರಪ್ಪ ಅವರಿಗೆ ಮತ್ತೊಂದು ಆಘಾತ ನೀಡಿದ್ದರು.

ರಾಜ್ಯ ಬಿಜೆಪಿಯಲ್ಲಿ ಯಡಿಯೂರಪ್ಪ ಹಾಗೂ ಅವರ ಬಣಕ್ಕೆ ತಡೆಯೊಡ್ಡಲು ಕೆ ಎಸ್ ಈಶ್ವರಪ್ಪ ಅವರ ನೇತೃತ್ವದಲ್ಲಿ ರಾಯಣ್ಣ ಬ್ರಿಗೇಡ್ ಆರಂಭಿಸಿದ್ದರ ಹಿಂದಿನ ಸೂತ್ರದಾರ ಇದೇ ಸಂತೋಷ್ ಎನ್ನುವ ಆರೋಪವನ್ನು ಬಿಎಸ್ವೈ ಆಪ್ತರು ಮಾಡುತ್ತಾರೆ. ಇದೆಲ್ಲಕ್ಕೂ ಮಿಗಿಲಾಗಿ 2018ರ ವಿಧಾನಸಭಾ ಚುನಾವಣೆಯಲ್ಲಿ ವರುಣಾ ವಿಧಾನಸಭಾ ಕ್ಷೇತ್ರದಿಂದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಡಾ. ಯತೀಂದ್ರ ವಿರುದ್ಧ ಕಣಕ್ಕಿಳಿಯಲು ಬಿಎಸ್ ವೈ ದ್ವಿತೀಯ ಪುತ್ರ ಬಿ ವೈ ವಿಜಯೇಂದ್ರ ಎಲ್ಲಾ ಥರದ ಸಿದ್ಧತೆ ಮಾಡಿಕೊಂಡಿದ್ದರು. ವಿಜಯೇಂದ್ರರನ್ನು ಉತ್ತರಾಧಿಕಾರಿಯಾಗಿಸಲು ಪ್ರಯತ್ನಿಸುತ್ತಿರುವ ಬಿಎಸ್ವೈ ಅವರಿಂದಲೇ ವಿಜಯೇಂದ್ರ ಸ್ಪರ್ಧಿಸುವುದಿಲ್ಲ ಎನ್ನುವ ಹೇಳಿಕೆ ಕೊಡಿಸುವಲ್ಲಿ ಸಂತೋಷ್ ಪಾತ್ರ ಮಹತ್ತರವಾಗಿತ್ತು. ಕುಟುಂಬ ರಾಜಕಾರಣದ ದಾಳ ಉರುಳಿಸಿದ್ದ ಸಂತೋಷ್ ಅವರು ಮುಂದಿನ ದಿನಗಳಲ್ಲಿ ಪಕ್ಷವು ವಿಜಯೇಂದ್ರ ಕೈಗೆ ಸಿಗುವುದನ್ನು ತಪ್ಪಿಸಲು ಪ್ರಮುಖವಾದ ತಂತ್ರ ಹೆಣೆದು ಬಿಎಸ್ವೈ ಕುಟುಂಬದ ಕನಸು ನುಚ್ಚು ನೂರು ಮಾಡಿದರು ಎನ್ನಲಾಗಿತ್ತು.
2019ರ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರಕ್ಕೆ ಕರ್ನಾಟಕದಲ್ಲಿ ಬಿಜೆಪಿ ಕಟ್ಟಾಳುಗಳಲ್ಲಿ ಒಬ್ಬರಾದ ದಿವಂಗತ ಅನಂತ್ ಕುಮಾರ್ ಅವರ ಪತ್ನಿ ತೇಜಸ್ವಿನಿ ಅನಂತ್ ಕುಮಾರ್ ಅವರ ಬದಲಿಗೆ ಯುವಕ ತೇಜಸ್ವಿ ಸೂರ್ಯ ಹೆಸರನ್ನು ರಾತ್ರೋರಾತ್ರಿ ಅಂತಿಮಗೊಳಿಸಿದ್ದ ಸಂತೋಷ್ ಅವರು ಹೈಕಮಾಂಡ್ ಮೂಲಕ ಯಡಿಯೂರಪ್ಪ ಅವರನ್ನು ಸ್ತಂಭನಗೊಳ್ಳುವಂತೆ ಮಾಡಿದ್ದರು.
ಒಂದೇ ಕಲ್ಲಿಗೆ ಪಕ್ಷದ ಹಲವರನ್ನು ಸಂತೋಷ್ ದಂಗುಗೊಳಿಸಿದ್ದರು. ಯಡಿಯೂರಪ್ಪ, ಅವರ ಅಪ್ತ ಗೋವಿಂದರಾಜ ನಗರ ಶಾಸಕ ವಿ ಸೋಮಣ್ಣ ಹಾಗೂ ಅನಂತ್ ಕುಮಾರ್ ಬೆಂಬಲಿಗ, ಪದ್ಮನಾಭನಗರ ಶಾಸಕ ಹಾಗೂ ಬಿಜೆಪಿಯ ಒಕ್ಕಲಿಗ ಸಮುದಾಯದ ಪ್ರಮುಖ ನಾಯಕ ಎನಿಸಿದ್ದ ಆರ್ ಅಶೋಕ್ ಅವರನ್ನು ನಿಶಸ್ತ್ರಗೊಳಿಸಿದ್ದರು ಸಂತೋಷ್. ಈ ಎಲ್ಲಾ ನಾಯಕರು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ವಿಧಾನಸಭಾ ಕ್ಷೇತ್ರಗಳ ಸದಸ್ಯರು. “ವಂಶವಾಹಿ (ಡಿಎನ್ ಎ) ಆಧಾರದಲ್ಲಿ ಟಿಕೆಟ್ ನೀಡುವ ಪದ್ದತಿ ಬಿಜೆಪಿಯಲ್ಲಿ ಇಲ್ಲ” ಎನ್ನುವ ಮೂಲಕ ತೇಜಸ್ವಿನಿ ಅವರ ಪತಿಯ ಅಗಲಿಕೆಯ ನೋವನ್ನು ಹೆಚ್ಚಿಸಿದ್ದರು. ವಾಸ್ತವದಲ್ಲಿ ಬಿಜೆಪಿ ಬಸವನಗುಡಿ ಶಾಸಕ ರವಿಸುಬ್ರಹ್ಮಣ್ಯ ಅವರ ಸಹೋದರನ ಪುತ್ರ ತೇಜಸ್ವಿ ಸೂರ್ಯ ಎಂಬ ಸತ್ಯವನ್ನು ತೇಜಸ್ವಿನಿ ಅವರು ಸಾರ್ವಜನಿಕವಾಗಿ ಸಾರಲಿಲ್ಲ. ಈ ಮೂಲಕ ಪಕ್ಷ ನಿಷ್ಠೆ ಮೆರೆಯುವ ಕೆಲಸವನ್ನು ತೇಜಸ್ವಿನಿ ಮಾಡಿದ್ದರು.
ಇಲ್ಲಿಯೂ ಯಡಿಯೂರಪ್ಪ ಹಾಗೂ ಸ್ಥಳೀಯ ನಾಯಕತ್ವವನ್ನು ಸಂತೋಷ್ ಸಾರಾಸಗಟವಾಗಿ ತಳ್ಳಿಹಾಕಿದ್ದರು. ಬಿಜೆಪಿ ನಾಯಕ ಅಮಿತ್ ಶಾ ಕರೆತಂದು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಪ್ರಚಾರ ನಡೆಸುವ ಮೂಲಕ ಸಂತೋಷ್ ತಮ್ಮ ಬಲ ಸಾಬೀತುಪಡಿಸಿದ್ದರು. ಅನಂತ್ ಕುಮಾರ್ ಅವರು ಬದುಕಿರುವವರೆಗೂ ತಮ್ಮ ಬೆಳವಣಿಗೆಗೆ ಅಡ್ಡಿಯಾಗಿದ್ದರು ಎಂದು ಸಂತೋಷ್ ನಂಬಿದ್ದರಿಂದಲೇ ತೇಜಸ್ವಿನಿ ಅವರಿಗೆ ಸಕ್ರಿಯ ರಾಜಕಾರಣದಲ್ಲಿ ತೊಡಗಿಸಿಕೊಳ್ಳುವುದು ಕಷ್ಟವಾಯಿತು ಎನ್ನುವ ಮಾತುಗಳನ್ನು ಬಿಜೆಪಿಗರೇ ಹೇಳುತ್ತಾರೆ.
ವರ್ಷದ ಹಿಂದೆ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರವನ್ನು ಉರುಳಿಸಿ ಬಿಜೆಪಿ ಸರ್ಕಾರ ಸ್ಥಾಪಿಸಿದ ಯಡಿಯೂರಪ್ಪನವರಿಗೆ ಸಂಪುಟದ ಸದಸ್ಯರನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವನ್ನು ಬಿಜೆಪಿ ನೀಡಿರಲಿಲ್ಲ. ಇದರ ಹಿಂದೆ ಸಂತೋಷ್ ಕೈವಾಡ ಎದ್ದು ಕಾಣುತ್ತಿತ್ತು ಎನ್ನುವುದು ಬಿಎಸ್ವೈ ಬೆಂಬಲಿಗರ ಮನದಾಳದ ನುಡಿ. ಲಕ್ಷ್ಮಣ ಸವದಿ, ಗೋವಿಂದ ಕಾರಜೋಳ ಹಾಗೂ ಅಶ್ವಥ್ ನಾರಾಯಣ ಅವರನ್ನು ಉಪಮುಖ್ಯಮಂತ್ರಿ ಮಾಡುವುದು ಸಹ ಸಂತೋಷ್ ತಂತ್ರಗಾರಿಕೆ. ಬೆಳಗಾವಿ ರಾಜಕಾರಣವನ್ನು ನಿಯಂತ್ರಿಸಲು ಚುನಾವಣೆಯಲ್ಲಿ ಸೋತ, ಲಿಂಗಾಯತ ಸಮುದಾಯದ ಲಕ್ಷ್ಮಣ ಸವದಿ, ದಲಿತ ಸಮುದಾಯದ ಪ್ರಭಾವಿಯಲ್ಲದ ಗೋವಿಂದ ಕಾರಜೋಳ ಹಾಗೂ ಬೆಂಗಳೂರು ರಾಜಕಾರಣ ಹಾಗೂ ಒಕ್ಕಲಿಗ ಸಮುದಾಯದಲ್ಲಿ ಪ್ರಭಾವ ಸೃಷ್ಟಿಸಿಕೊಳ್ಳಲು ಯತ್ನಿಸುತ್ತಿದ್ದ ಆರ್ ಅಶೋಕ್ ಅವರನ್ನು ನಿಯಂತ್ರಿಸಲು ಅಶ್ವಥ್ ನಾರಾಯಣ ಅವರನ್ನು ಮುನ್ನಲೆಗೆ ತರುವುದರೊಂದಿಗೆ ಸರ್ಕಾರವನ್ನು ತನ್ನ ತೆಕ್ಕೆಗೆ ಪಡೆಯುವಲ್ಲಿ ಸಂತೋಷ್ ಯಶಸ್ವಿಯಾಗಿದ್ದರು. ಈ ಬಳಿಕ ಪಕ್ಷವನ್ನು ತನ್ನ ಕಪಿಮುಷ್ಟಿಯಲ್ಲಿಟ್ಟುಕೊಳ್ಳುವ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಸಂಸದ, ಸಂಘ ಪರಿವಾರದ ತೆಕ್ಕೆಯಲ್ಲಿ ಬೆಳೆದ ಶಿಷ್ಯ, ನಳೀನ್ ಕುಮಾರ್ ಕಟೀಲ್ ಅವರನ್ನು ಬಿಜೆಪಿ ರಾಜ್ಯ ಘಟಕದ ಮುಖ್ಯಸ್ಥರನ್ನಾಗಿ ಮಾಡುವ ಮೂಲಕ ಪಕ್ಷವನ್ನು ಸಂತೋಷ್ ತಮ್ಮ ಹಿಡಿತಕ್ಕೆ ಪಡೆದಿದ್ದಾರೆ.
ಇದರ ಬೆನ್ನಲ್ಲೆ ಬಿಎಸ್ವೈ ವಿರೋಧಿಗಳಾದ ಬಿಜೆಪಿ ಉಪಾಧ್ಯಕ್ಷರಾಗಿ ನೇಮಕವಾಗಿರುವ ನಿರ್ಮಲ್ ಕುಮಾರ್ ಸುರಾನಾ ಹಾಗೂ ಭಾನುಪ್ರಕಾಶ್ ಅವರನ್ನು ಮರಳಿ ಬಿಜೆಪಿ ತಂದು ಅವರಿಗೆ ಸ್ಥಾನಮಾನ ಕಲ್ಪಿಸುವ ಮೂಲಕ ಯಡಿಯೂರಪ್ಪ ಅವರಿಗೆ ಸಂತೋಷ್ ಟಕ್ಕರ್ ನೀಡಿದ್ದರು. ಕಳೆದ ವರ್ಷ ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಜಲಪ್ರಳಯವಾದಾಗ “ಕೇಂದ್ರ ಸರ್ಕಾರವು ಅನುದಾನ ಬಿಡುಗಡೆ ಮಾಡುವುದನ್ನು ತಡೆಯುವ ಮೂಲಕ ಯಡಿಯೂರಪ್ಪ ಅವರಿಗೆ ಅಪಖ್ಯಾತಿ ಉಂಟು ಮಾಡುವ ಕೆಲಸವನ್ನು ಬಿಜೆಪಿಯಲ್ಲಿನ ವಿರೋಧಿಗಳು ಮಾಡುತ್ತಿದ್ದಾರೆ” ಎಂದು ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಪರೋಕ್ಷವಾಗಿ ಬಿ ಎಲ್ ಸಂತೋಷ್ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದರು. ಇದಕ್ಕಾಗಿ ಅವರಿಗೆ ಷೋಕಾಸ್ ನೋಟಿಸ್ ಜಾರಿಗೊಳಿಸಲಾಗಿತ್ತು ಎಂಬುದನ್ನು ಇಲ್ಲಿ ನೆನೆಯಬಹುದಾಗಿದೆ.
“ಈರಣ್ಣ ಕಡಾಡಿ ಹಾಗೂ ಅಶೋಕ್ ಗಸ್ತಿ ಆಯ್ಕೆಯಲ್ಲಿ ಸಂತೋಷ್ ಅವರ ಪಾತ್ರವಿದೆ. ಅವರು ನಮ್ಮ ನಾಯಕರಾಗಿದ್ದು, ಯಡಿಯೂರಪ್ಪನವರೂ ಸಂತೋಷ್ ಅವರನ್ನು ಒಪ್ಪಿಕೊಂಡಿದ್ದಾರೆ” ಎನ್ನುವ ಮಾತನ್ನು ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ ಟಿ ರವಿ ಹೇಳಿದ್ದನ್ನು ಸೂಕ್ಷ್ಮವಾಗಿ ಗಮನಿಸಿದರೆ ಸಂತೋಷ್ ಅವರ ಪ್ರಭಾವ ಅರ್ಥವಾಗುತ್ತದೆ. ಕಳೆದ ವಿಧಾನಸಭಾ ಚುನವಾಣೆ ಹಾಗೂ ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿಗಳ ಆಯ್ಕೆ ಹಾಗೂ ಪಕ್ಷದ ವ್ಯವಹಾರಗಳನ್ನು ಸಂತೋಷ್ ಅವರು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ನಿಯಂತ್ರಿಸುತ್ತಲೇ ಬಂದಿದ್ದಾರೆ.
ಕಡಾಡಿ, ಗಸ್ತಿ ಅವರ ವಿಚಾರದಲ್ಲಿ ಒಂದು ಹೆಜ್ಜೆ ಮುಂದೆ ಇಟ್ಟು ರಾಜ್ಯ ಬಿಜೆಪಿ ನಾಯಕತ್ವ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬ ವಿಚಾರವನ್ನು ಬಹಿರಂಗವಾಗಿ ಸಾರಿದ್ದಾರೆ. ಪಕ್ಷದಲ್ಲಿ ಶಿಸ್ತು, ಸಂಯಮದ ಗಿಳಿಪಾಠ ಮಾಡುವ ಬಿಜೆಪಿಯು ತಾನೇ ಸೃಷ್ಟಿಸಿದ ಚೌಕಟ್ಟನ್ನು ಮುರಿಯುವುದರೊಂದಿಗೆ ಆಂತರಿಕ ಪ್ರಜಾಪ್ರಭುತ್ವಕ್ಕೆ ಮರಣ ಶಾಸನ ಬರೆದಿದೆ. ಕರ್ನಾಟಕದಲ್ಲಿ ಬಿಜೆಪಿ ಕಟ್ಟಿ ಬೆಳೆಸುವಲ್ಲಿ ಪ್ರಮುಖರಾಗಿದ್ದ ಬಿ.ಶಿವಪ್ಪನವರನ್ನು ಯಡಿಯೂರಪ್ಪನವರು ಹಂತ ಹಂತವಾಗಿ ಬದಿಗೆ ಸರಿಸಿದ ಮಾದರಿಯಲ್ಲಿಯೇ ಸಂತೋಷ್ ಅವರು ಯಡಿಯೂರಪ್ಪನವರ ರಾಜಕೀಯ ಬದುಕನ್ನು ಕೊನೆಗಾಣಿಸುತ್ತಿದ್ದಾರೆ ಎಂಬ ರಾಜಕೀಯ ವಿಶ್ಲೇಷಕರ ಮಾತಿನಲ್ಲಿ ಸತ್ಯ ಅಡಗಿದೆ.