ಟಿವಿ ಮಾಧ್ಯಮಗಳಿಂದ ‘ರಾಜಹುಲಿ’ ಎಂದೇ ಬಿರುದಾಂಕಿತರಾಗಿರುವ, ಮುಖ್ಯವಾಹಿನಿ ಮಾಧ್ಯಮಗಳಿಂದ ‘ಛಲದಂಕ ಮಲ್ಲ’ನೆಂದೇ ಕರೆಸಿಕೊಂಡಿರುವ ಮುಖ್ಯಮಂತ್ರಿ ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅವರಿಗೆ ರಾಜ್ಯದಿಂದ ರಾಜ್ಯಸಭೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ವಿಷಯದಲ್ಲಿ ಬಿಜೆಪಿ ಹೈಕಮಾಂಡ್ ಮುಟ್ಟಿ ನೋಡಿಕೊಳ್ಳುವಂತಹ ಏಟು ನೀಡಿದೆ. ಈಗ ವಿಧಾನ ಪರಿಷತ್ ಚುನಾವಣೆಗೆ ಹುರಿಯಾಳುಗಳನ್ನು ಆಯ್ಕೆ ಮಾಡುವ ಸರದಿ. ಈ ವಿಷಯದಲ್ಲೂ ಯಡಿಯೂರಪ್ಪಗೆ ಮುಖಭಂಗವಾಗುವುದು ಶತಸಿದ್ದ ಎನ್ನುತ್ತವೆ ಬಿಜೆಪಿಯ ಹೈಕಮಾಂಡ್ ಮೂಲಗಳು.
ಹೆಸರಿಗೆ ಮಾತ್ರ ಹೈಕಮಾಂಡ್, ಎಲ್ಲವೂ ಬಿಜೆಪಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಮಹಿಮೆ ಎಂಬುದೀಗ ಬಹಿರಂಗಗೊಂಡಿರುವ ಗುಟ್ಟು. ಆದರವರು ಅಡಿಗಡಿಗೆ ಯಡಿಯೂರಪ್ಪ ಅವರನ್ನು ಕಾಡುತ್ತಿರುವುದೇಕೆ ಎಂಬುದು ಕುತೂಹಲಕಾರಿ ಸಂಗತಿ. ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಯಾದರೂ ರಾಜ್ಯದ ಬೆಳವಣಿಗೆಗಳ ಬಗ್ಗೆ ಯಾಕಿಷ್ಟೊಂದು ಆಸಕ್ತಿ, ಕಾಳಜಿ ಎಂಬುದು ಇನ್ನೊಂದು ರೀತಿಯ ಕುತೂಹಲ.
Also Read: ರಾಜ್ಯಸಭಾ ಚುನಾವಣೆ: ಮುಖ್ಯಮಂತ್ರಿಗೆ ಮತ್ತೊಮ್ಮೆ ಮುಖಭಂಗ..?
ಈ ಸಂತೋಷ್ ರಾಜ್ಯ ಬಿಜೆಪಿಯಲ್ಲಿ ಮುಖ್ಯ ಪಾತ್ರಧಾರಿಯಾಗಿದ್ದೇ ಯಡಿಯೂರಪ್ಪ ಅನುಪಸ್ಥಿತಿಯಲ್ಲಿ. ಅಂದರೆ ಯಡಿಯೂರಪ್ಪ ಬಿಜೆಪಿಗೆ ವಿಚ್ಛೇದನ ನೀಡಿ ಕೆಜೆಪಿ ಕಟ್ಟಿದ ಬಳಿಕ. ಯಡಿಯೂರಪ್ಪ ಇಲ್ಲದೆಯೂ 2013ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 40 ಸ್ಥಾನಗಳನ್ನು ಗೆದ್ದಿತ್ತು. ಇದು ಅಲ್ಲಿಯವರೆಗೆ ಯಡಿಯೂರಪ್ಪ ಅವರೇ ನೀರು ಗೊಬ್ಬರ ಹಾಕಿ ಬೆಳೆಸಿದ್ದ ಬೇರುಗಳಿಂದ ಫಲವೇ ಆದರೂ ಶ್ರೇಯ ಮಾತ್ರ ಸಂತೋಷ್ ಪಾಲಾಯಿತು. ಆಗಿನಿಂದಲೂ ಅವರಿಗೆ ‘ಯಡಿಯೂರಪ್ಪ ಹೊರತುಪಡಿಸಿದ ಬಿಜೆಪಿ’ ಕಟ್ಟಬೇಕೆಂಬ ಹಠ ಹುಟ್ಟಿಕೊಂಡಿತು. ಅದೇ ಕಾರಣಕ್ಕೆ ಯಡಿಯೂರಪ್ಪ ಮರಳಿ ಬಿಜೆಪಿಗೆ ಬಂದ ಮೇಲೂ, ಮತ್ತೆ ಮುಖ್ಯಮಂತ್ರಿ ಆದ ಮೇಲೂ ಅವರ ಕೈ ಮೇಲಾಗದಂತೆ ಸದಾ ನಿಗಾ ಇಟ್ಟಿದ್ದಾರೆ. ಪೂರಕವಾದ ತಂತ್ರ ರೂಪಿಸುತ್ತಿದ್ದಾರೆ.
ಮೊದಲೆಲ್ಲಾ ಬಿ.ಎಲ್. ಸಂತೋಷ್ ಮುಖ್ಯಮಂತ್ರಿ ಕುರ್ಚಿಯ ಕನಸು ಕಾಣುತ್ತಿದ್ದರು. ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಆದಮೇಲೆ ತಮ್ಮ ಕನಸನ್ನು ತಾವೇ ಕೊಂದುಹಾಕಿದ್ದಾರೆ. ಬದಲಿಗೆ ತಮ್ಮ ಶಿಷ್ಯನೊಬ್ಬನನ್ನು ಸಿಎಂ ಕುರ್ಚಿಯ ಮೇಲೆ ಕೂರಿಸುವ ಹಂಬಲ ಹೊಂದಿದ್ದಾರೆ ಎನ್ನುತ್ತಾರೆ ಅವರ ಸಮೀಪವರ್ತಿಗಳು. ಸಂತೋಷ್ ಅವರ ಈ ಹಂಬಲಕ್ಕೆ ಸಹಜವಾಗಿ ಯಡಿಯೂರಪ್ಪ ತಡೆಗೋಡೆಯಾಗಿದ್ದಾರೆ. ಅದೇ ಕಾರಣಕ್ಕೆ ಕ್ರಮೇಣವಾಗಿ ಪಕ್ಷದಲ್ಲಿ ಯಡಿಯೂರಪ್ಪ ಅವರ ಪ್ರಭಾವ, ಹಿಡಿತಗಳನ್ನು ಕ್ಷೀಣಗೊಳಿಸುವ ಕೆಲಸವಾಗುತ್ತಿದೆ.
Also Read: ರಾಜ್ಯಸಭೆ ಚುನಾವಣೆ: ಕರ್ನಾಟಕದಿಂದ ಅವಿರೋಧ ಆಯ್ಕೆ?
ಈ ತಂತ್ರದ ಭಾಗವಾಗಿಯೇ ‘ರಾಜ್ಯ ಬಿಜೆಪಿಯಲ್ಲಿ ಯಡಿಯೂರಪ್ಪ ಅವರಿಗೆ ಕಿಮ್ಮತ್ತಿಲ್ಲ’ ಎಂಬ ಸಂದೇಶ ನೀಡಬೇಕೆಂದೇ ರಾಜ್ಯ ಕೋರ್ ಕಮಿಟಿ ಕಳಿಸಿದ್ದ ಅಭ್ಯರ್ಥಿಗಳ ಪಟ್ಟಿಯನ್ನು ಕಸದ ಬುಟ್ಟಿಗೆ ಎಸೆದು ತನ್ನದೇ ಹುರಿಯಾಳುಗಳ ಹೆಸರನ್ನು ಕಳಿಸಿದೆ. ಯಾವ ಆಯಾಮದಲ್ಲೂ ವಿರೋಧ ಬರಬಾರದೆಂದು ‘ಕಾರ್ಯಕರ್ತರಿಗೆ ಮಣೆ’ ಎಂಬ ಮಜಬೂತಾದ ನಾಟಕ ಮಾಡಲಾಗಿದೆ. ಇದು ವಿಧಾನ ಪರಿಷತ್ ಚುನಾವಣೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ವಿಷಯದಲ್ಲೂ ಮುಂದುವರೆಯಲಿದೆ.
ಏಕೆಂದರೆ ರಾಜ್ಯಸಭೆಗೆ ರಮೇಶ್ ಕತ್ತಿ ಕಳಿಸಿ ಬೆಳಗಾವಿ ಬೇಗುದಿಯಿಂದ ಪಾರಾಗಬಹುದೆಂದು, ತಮ್ಮ ಪುತ್ರ ವಿಜಯೇಂದ್ರನ ಬಿಸಿನೆಸ್ ಪಾಟ್ನರ್ ಪ್ರಕಾಶ್ ಶೆಟ್ಟಿ ಕಳಿಸಿ ಕುಟುಂಬದ ಒತ್ತಡ ನೀಗಿಸಿಕೊಳ್ಳಬಹುದೆಂದು ಅಂದಾಜು ಮಾಡಿದ್ದ ಯಡಿಯೂರಪ್ಪಗೆ ಮುಖಭಂಗವಾಗಿದೆ. ಇದಕ್ಕಿಂತ ಹೆಚ್ಚು ಒತ್ತಡ ಇರುವುದು ವಿಧಾನ ಪರಿಷತ್ ಚುನಾವಣೆಯಲ್ಲಿ. ಏಕೆಂದರೆ ಯಡಿಯೂರಪ್ಪ ಇವತ್ತು ಮುಖ್ಯಮಂತ್ರಿ ಆಗಲು ಕಾರಣಕರ್ತರಾದ ಎಚ್. ವಿಶ್ವನಾಥ್, ಎಂ.ಟಿ.ಬಿ. ನಾಗರಾಜ್ ಮತ್ತು ಆರ್. ಶಂಕರ್ ಅವರನ್ನು ಪರಿಷತ್ ಗೆ ಕಳಿಸಬೇಕಾದ, ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕಾದ ಒತ್ತಡದಲ್ಲಿದ್ದಾರೆ ಯಡಿಯೂರಪ್ಪ.
ವಿಧಾನಸಭೆಯಿಂದ ಮತ್ತು ನಾಮನಿರ್ದೇಶನದ ಮೂಲಕ ಬಿಜೆಪಿ 9 ಜನರಿಗೆ ಅವಕಾಶ ಕಲ್ಪಿಸಬಹುದು. ಈ 9ರ ಪೈಕಿ ಎಚ್. ವಿಶ್ವನಾಥ್, ಎಂ.ಟಿ.ಬಿ. ನಾಗರಾಜ್ ಮತ್ತು ಆರ್. ಶಂಕರ್ ಜೊತೆಗೆ ರಾಜ್ಯಸಭಾ ಟಿಕೆಟ್ ವಂಚಿತ ರಮೇಶ್ ಕತ್ತಿಯನ್ನು ಪರಿಷತ್ ಗೆ ಕಳುಹಿಸಬೇಕು ಎನ್ನುವುದು ಯಡಿಯೂರಪ್ಪ ಲೆಕ್ಕಾಚಾರವಾಗಿದೆ. ಆದರೆ ‘ಪ್ರತಿಧ್ವನಿ‘ಗೆ ಲಭ್ಯವಾಗಿರುವ ಖಚಿತ ಮಾಹಿತಿಗಳ ಪ್ರಕಾರ ಯಡಿಯೂರಪ್ಪ ಹೇಳಿದ ಒಂದಿಬ್ಬರಿಗೆ ಅವಕಾಶ ಸಿಕ್ಕರೆ ಅದೇ ದೊಡ್ಡದು. ಉಳಿದಂತೆ ಯಡಿಯೂರಪ್ಪ ಅವರಿಗೆ ಮತ್ತೊಂದು ಸುತ್ತಿನ ಮುಖಭಂಗ ಕಟ್ಟಿಟ್ಟ ಬುತ್ತಿ ಎನ್ನಲಾಗುತ್ತಿದೆ. ಹೀಗೆ ಯಡಿಯೂರಪ್ಪ ಅವರನ್ನು ಹಂತಹಂತವಾಗಿ ನಗಣ್ಯ ಮಾಡಿ ಮುಂದೊಂದು ದಿನ ‘ನಾಯಕತ್ವ ಬದಲಾವಣೆ’ಗೂ ಮುನ್ನುಡಿ ಬರೆಯಬಹುದು ಎಂಬ ಮಾಹಿತಿಯೂ ಸಿಕ್ಕಿದೆ.