ರಾಜ್ಯ ಸರ್ಕಾರ ಇತ್ತೀಚೆಗೆ ಜಾರಿಗೆ ತಂದ ಗೋಹತ್ಯಾ ನಿಷೇಧದ ಕಾನೂನಿನ ನಂತರ ರಾಜಧಾನಿಯ ಅತ್ಯಂತ ದೊಡ್ಡ ಗೋಮಾಂಸ ಮಾರುಕಟ್ಟೆ ಆಗಿರುವ ಶಿವಾಜಿನಗರದ ರಸೆಲ್ ಮಾರ್ಕೆಟ್ ಸ್ಥಬ್ಧಗೊಂಡಿದೆ. ಕಳೆದ ಮೂರು ತಿಂಗಳಲ್ಲಿ ಅತ್ಯಂತ ಹಳೆಯ ಮತ್ತು ದೊಡ್ಡ ಗೋಮಾಂಸ ಮಾರುಕಟ್ಟೆಯಲ್ಲಿ ಅಂಗಡಿಗಳ ಸಂಖ್ಯೆ 56 ರಿಂದ 18 ಕ್ಕೆ ಇಳಿದಿದೆ. ತಲೆಮಾರುಗಳಿಂದ ಗೋ ಮಾಂಸವನ್ನೇ ಮಾರಾಟ ಮಾಡಿ ಬದುಕು ಸಾಗಿಸುತಿದ್ದ ಕುಟುಂಬಗಳು ಇಂದು ತುತ್ತಿನ ಚೀಲ ತುಂಬಿಸಲು ಪರದಾಡುತ್ತಿವೆ. ಗೋ ಮಾಂಸದ ಮೇಲಿನ ಸಂಪೂರ್ಣ ನಿಷೇಧವು ಅವರ ಸಮಸ್ಯೆಗಳನ್ನು ಹೆಚ್ಚಿಸಿದೆ.
“ನನಗೆ ಗೋಮಾಂಸ ಮಾರಾಟವನ್ನು ಹೊರತುಪಡಿಸಿ ಬೇರೆ ಯಾವುದೇ ವ್ಯವಹಾರ ನನಗೆ ತಿಳಿದಿಲ್ಲ. ಹೊಸ ಕಾನೂನು ನಮ್ಮ ಜೀವನೋಪಾಯಕ್ಕೆ ಸುತ್ತಿಗೆಯ ಹೊಡೆತವಾಗಿದೆ” ಎಂದು 55 ವರ್ಷದ ಬಿಎಂ ನೂರುಲ್ಲಾ ಹೇಳುತ್ತಾರೆ. ಇಲ್ಲಿ ಗೋಮಾಂಸ ಮಾರುಕಟ್ಟೆ 89 ವರ್ಷಗಳ ಹಿಂದೆ ತೆರೆಯಲ್ಪಟ್ಟಿತು. ಆದರೆ ಮಾರುಕಟ್ಟೆಯ 200 ಕ್ಕೂ ಹೆಚ್ಚು ವರ್ಷಗಳ ಇತಿಹಾಸ ಹೊಂದಿದೆ. ಮೊದಲು ವ್ಯಾಪಾರಿಗಳ ಗುಂಪು ತೆರೆದ ಸ್ಥಳದಲ್ಲೆ ಮಾಂಸವನ್ನು ಮಾರಾಟ ಮಾಡುತ್ತಿತ್ತು ಮತ್ತು ಗೋಮಾಂಸದ ಬೇಡಿಕೆ ಹೆಚ್ಚಾಗುತ್ತಿದ್ದಂತೆ ,ಮಾರಾಟಗಾರರ ಸಂಖ್ಯೆಯೂ ಹೆಚ್ಚಾಯಿತು. ಬ್ರಿಟಿಷ್ ಅಧಿಕಾರಿಗಳು ನಿರ್ಮಿಸಿದ ಶಿವಾಜಿನಗರ ಬೀಫ್ ಮಾರುಕಟ್ಟೆಯನ್ನು 1932 ರ ಬೇಸಿಗೆಯಲ್ಲಿ ಉದ್ಘಾಟಿಸಲಾಯಿತು.

ಕೋವಿಡ್ -19 ಲಾಕ್ಡೌನ್ ನಂತರ ಮಾರಾಟ ಸಂಪೂರ್ಣ ಕುಸಿಯಿತು. ಇದೀಗ ಗೋ ಹತ್ಯಾ ನಿಷೇಧವು ನಮ್ಮನ್ನು ಮತ್ತೆ ಸಂಕಷ್ಟಕ್ಕೆ ನೂಕಿದೆ. ಮಾಂಸ ಸರಬರಾಜು ಕಡಿಮೆ ಆಗಿದೆ. ಎಮ್ಮೆ ಮಾಂಸವನ್ನು ತೆಗೆದುಕೊಳ್ಳುವವರು ಕಡಿಮೆ ಎಂದು ಅಂಗಡಿಯೊಂದರ ಮಾಲೀಕ ಅಬಿದ್ ಅಹ್ಮದ್ ಹೇಳಿದರು. ಮೊದಲೆಲ್ಲ ಒಂದು ಸ್ಟಾಲ್ ನಲ್ಲಿ ನಾಲ್ವರು ಕೆಲಸ ಮಾಡುತಿದ್ದರು. ಈಗ ಜನವೇ ಇಲ್ಲ. ಮಾರಾಟ ಕುಸಿಯುವುದರ ಜತೆಗೇ ವ್ಯಾಪಾರಿಗಳು ಹಸುವಿನ ಸಾಗಾಟದ ಬಗ್ಗೆಯೂ ಆತಂಕಿತರಾಗಿದ್ದಾರೆ. ನಾವು ಟ್ಯಾನರಿ ರಸ್ತೆಯ ಸಗಟು ಮಾರುಕಟ್ಟೆಯಿಂದ ಮಾಂಸವನ್ನು ನಗರದಾದ್ಯಂತದ ಅಂಗಡಿಗಳಿಗೆ ಸಾಗಿಸುವಾಗ ಪಶುವೈದ್ಯರು ನೀಡುವ ಬಿಬಿಎಂಪಿ ಪ್ರಮಾಣಪತ್ರವನ್ನು ಕೊಂಡೊಯ್ಯುತ್ತೇವೆ. ಗೋಮಾಂಸದ ಮೇಲೆ ನಿಷೇಧವಿರುವುದರಿಂದ ನಾವು ಈಗ ಎಮ್ಮೆ ಮಾಂಸವನ್ನು ಮಾತ್ರ ಸಾಗಿಸುತ್ತಿದ್ದರೂ ಸಹ ಹಲ್ಲೆ ನಡೆಯುವ ಸಂದರ್ಭ ಹೆಚ್ಚಾಗಿದೆ ಎಂದು ಸಾರಿಗೆದಾರ ಜುಬೇರ್ ಹೇಳಿದರು. ಗೋ ಹತ್ಯಾ ನಿಷೇದದಿಂದಾಗಿ ಶಿವಾಜಿನಗರದಲ್ಲಿ 2 ಸಾವಿರಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಕಳೆದುಕೊಂಡಿದ್ದಾರೆ. ಕೆಲವೆಡೆಗಳಲ್ಲಿ ಅಕ್ರಮ ಗೋಮಾಂಸ ವ್ಯಾಪಾರ ಹೆಚ್ಚಾಗಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.
ಇದು ಬೆಂಗಳೂರಿನ ಕಥೆ ಆಗಿದ್ದರೆ ರಾಜ್ಯದ ಪ್ರಸಿದ್ದ ಮೈಸೂರು ಚಾಮರಾಜ ಮೃಗಾಲಯದ್ದೇ ಇನ್ನೊಂದು ವ್ಯಥೆ. ಇಲ್ಲಿ ಮಾಂಸಾಹಾರಿ ಪ್ರಾಣಿಗಳು ಗೋಮಾಂಸ ಸರಬರಾಜು ಇಲ್ಲದೆ ಚಿಕನ್ ಮಾತ್ರ ಸೇವಿಸುತಿದ್ದು ತಮ್ಮ ಲವಲವಿಕೆಯನ್ನೇ ಕಳೆದುಕೊಂಡಿವೆ.
ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅದೀನದಲ್ಲಿರುವ ಎಲ್ಲಾ ಪ್ರಾಣಿಸಂಗ್ರಹಾಲಯಗಳು, ಮೈಸೂರು ಮೃಗಾಲಯ ಸೇರಿದಂತೆ ಎಲ್ಲೆಡೆಯೂ, ಜನವರಿ ಅಂತ್ಯದಿಂದ ಗೋ ಮಾಂಸದ ಬದಲಿಗೆ ಕೋಳಿ ಮಾಂಸವನ್ನು ನೀಡಲಾಗುತ್ತಿದೆ. ರಾಜ್ಯ ಸರ್ಕಾರವು ಗೋಮಾಂಸ ನಿಷೇಧವನ್ನು ಸುಗ್ರೀವಾಜ್ಞೆಯ ಮೂಲಕ ಜಾರಿಗೆ ತಂದಿರುವ ಕಾರಣ ಗೋಮಾಂಸದ ಬದಲಿಗೆ ಕೋಳಿ ಮಾಂಸವನ್ನು ನೀಡಲಾಗುತ್ತಿದೆ. ಕರ್ನಾಟಕವು ದೇಶದಲ್ಲಿಯೇ ಅತಿ ಹೆಚ್ಚು ಪ್ರಾಣಿ ಸಂಗ್ರಹಾಲಯಗಳನ್ನು ಹೊಂದಿದೆ. ಮೈಸೂರು ಮೃಗಾಲಯದಲ್ಲಿ ಚಿರತೆಗಳು, ಬಿಳಿ ಹುಲಿಗಳು, ಜಾಗ್ವಾರ್ಗಳು ಮತ್ತು ಒಂದು ಡಜನಿಗೂ ಹೆಚ್ಚು ರಾಯಲ್ ಬಂಗಾಳ ಹುಲಿಗಳು, ಎರಡು ಡಜನ್ ಚಿರತೆಗಳು ಮತ್ತು ತೋಳಗಳು ಮತ್ತು ನರಿಗಳು ಇವೆ.

ಈ ಹಿಂದೆ ಮೃಗಾಲಯವು ಮಾಂಸಾಹಾರಿ ಪ್ರಾಣಿಗಳಿಗೆ ಆಹಾರಕ್ಕಾಗಿ ದಿನಕ್ಕೆ 350 ಕೆಜಿ ಗೋಮಾಂಸವನ್ನು ಖರೀದಿಸುತಿತ್ತು. ಕೋಳಿ ಮಾಂಸಕ್ಕೆ ಬದಲಾದ ನಂತರ ಹುಲಿಗಳು ವಿಶ್ರಾಂತಿ ಪಡೆಯುವ ಅವಧಿಯನ್ನು ಹೆಚ್ಚಿಸಿಕೊಂಡಿವೆ ಎಂದು ಮೃಗಾಲಯದ ಮೂಲಗಳು ತಿಳಿಸಿವೆ. ಅಧಿಕಾರಿಗಳು ಗೋ ಮಾಸದ ಬದಲಿಗೆ ಕುರಿ ಮಾಂಸವನ್ನು ನೀಡಲು ಪ್ರಯತ್ನಿಸದರೂ ಅವು ತಿನ್ನಲಿಲ್ಲ ಎನ್ನಲಾಗಿದೆ. ನಂತರ ಬ್ಯಾಯ್ಲರ್ ಚಿಕನ್ ನ್ನು ನೀಡಲು ಆರಂಭಿಸಲಾಗಿದೆ. ಹೊಸ ಗೋ ವಧೆ ನಿಷೇಧ ಕಾನೂನಿನ ಪ್ರಕಾರ, ಎಮ್ಮೆ ಮಾಂಸವನ್ನು ಅನುಮತಿಸಲಾಗಿದೆ, ಆದರೆ ಇದು ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿಲ್ಲ. ಅಲ್ಲದೆ ನಾಟಿ ಕೋಳಿಯ ಬೆಲೆ ಹೆಚ್ಚಿರುವುದರಿಂದ, ಪ್ರಾಣಿ ಸಂಗ್ರಹಾಲಯಗಳು ಬ್ರಾಯ್ಲರ್ ಕೋಳಿ ಮಾಂಸದ ಮೇಲೆ ಹೆಚ್ಚು ಅವಲಂಬಿತವಾಗಿವೆ.
ರಣಹದ್ದುಗಳಂತಹ ಪಕ್ಷಿಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಮಾಂಸಾಹಾರಿ ಪ್ರಾಣಿಗಳು ಕಡಿಮೆ ಕ್ರಿಯಾಶೀಲವಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸ್ವಲ್ಪ ಮಟ್ಟಿಗೆ, ಚಿರತೆಗಳು ನಿಷ್ಕ್ರಿಯವಾಗಿಲ್ಲ. ಆದರೆ ಹುಲಿಗಳು ಮತ್ತು ಹೆಚ್ಚು ಓಡಾಡುವ ನರಿಗಳು ಮತ್ತು ಹೈನಾಗಳು ಸಹ ಕಡಿಮೆ ಚಟುವಟಿಕೆಯನ್ನು ತೋರಿಸುತ್ತಿವೆ ಎಂದು ಮೂಲಗಳು ತಿಳಿಸಿವೆ.
ಹುಲಿಗಳಿಗೆ ಗೋಮಾಂಸವನ್ನು ನೀಡುತಿದ್ದಾಗ 14 ಕೆಜಿ ಮಾಂಸದಲ್ಲಿ ಮೂರು ಕೆಜಿ ಮೂಳೆಗಳನ್ನು ತಿನ್ನದೆ ಉಳಿಸುತಿದ್ದವು. ಆದರೆ ಈಗ, 8 ಕೆಜಿ ಕೋಳಿ ಮಾಂಸ ನೀಡಿದಾಗ, ಅವು 2 ಕೆಜಿ ಮೂಳೆಗಳನ್ನು ಬಿಡುತ್ತಿವೆ. ಮಾಂಸಾಹಾರಿ ಪ್ರಾಣಿಗಳ ಮೇಲೆ ಕೋಳಿಮಾಂಸದ ದೀರ್ಘಕಾಲದ ಆಹಾರದ ಪರಿಣಾಮದ ಬಗ್ಗೆ ಮೃಗಾಲಯದ ಸಿಬ್ಬಂದಿ ಕಳವಳ ವ್ಯಕ್ತಪಡಿಸುತ್ತಾರೆ. ಕರ್ನಾಟಕ ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಪಿ.ರವಿ ಅವರು ಮಾತನಾಡಿ ಪ್ರಾಣಿ ಸಂಗ್ರಹಾಲಯಗಳಲ್ಲಿ ಗೋ ಮಾಂಸ ಸರಬರಾಜು ಮಾಡಲು ರಾಜ್ಯ ಸರ್ಕಾರದಿಂದ ಕಾನೂನಿನ ವಿನಾಯ್ತಿಗೆ ಕಾಯಲಾಗುತ್ತಿದೆ ಎಂದು ಹೇಳಿದ್ದಾರೆ. ಅದಾಗ್ಯೂ, ಪಶುಸಂಗೋಪನಾ ಸಚಿವ ಪ್ರಭು ಚೌಹಾನ್ ಅವರು ಈ ಕುರಿತು ಯಾವುದೇ ದೂರು ಬಂದಿಲ್ಲ, ಪ್ರಾಣಿ ಸಂಗ್ರಹಾಲಯಗಳಲ್ಲಿ ಆಹಾರದ ಕೊರತೆ ಕುರಿತು ಅಧಿಕಾರಿಗಳು ವಿವರ ನೀಡಿದರೆ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ.










